ಸ್ನೇಹಿತರೊಬ್ಬರಿಗೆ ಹೊಟ್ಟೆನೋವು - ಎದೆಯುರಿ. ಐದಾರು ವೈದ್ಯರನ್ನು ಕಂಡು ಆ ಮಾತ್ರೆ ಈ ಔಷಧಿ ತೆಗೆದುಕೊಂಡರೂ ಅದಾವುದರಿಂದಲೂ ವಾಸಿಯಾಗಿರಲಿಲ್ಲ. ತಿಂಗಳು ಕಳೆದ ಮೇಲೆ ಒಂದು ನರ್ಸಿಂಗ್ ಹೋಂನ ವೈದ್ಯರೊಬ್ಬರನ್ನು ಕಂಡರು. ರೋಗ ಲಕ್ಷಣಗಳನ್ನು ಕೇಳಿದ ವೈದ್ಯರು ಎಂಡೋಸ್ಕೋಪಿ ಮಾಡಬೇಕೆಂದರು.

ಗಂಟಲಿನ ಮೂಲಕ ಪೈಪ್ ಕ್ಯಾಮರಾ ತೂರಿಸಿ ನಡೆಸುವ ಈ ಪರೀಕ್ಷೆ ಭಯಾನಕವೆಂದು ಗೆಳೆಯರು ಹೆದರಿಬಿಟ್ಟರು. ಆಗ ಆ ವೈದ್ಯರು- `ನೋವು ಆಗುವುದಿಲ್ಲ. ನಾಳೆ ಬನ್ನಿರಿ~ ಎಂದು ಸಮಾಧಾನ ಮಾಡಿ ಕಳಿಸಿದರು.

ಮರುದಿನ ಅನೆಸ್ತೇಶಿಯಾ ಕೊಟ್ಟು ಎಂಡೋಸ್ಕೋಪಿ ಮಾಡಿದರು. ಸ್ನೇಹಿತರಿಗೆ ಹೊಟ್ಟೆಯಲ್ಲಿ ಅಲ್ಸರ್ ಆಗಿದ್ದು ಪತ್ತೆಯಾಯಿತು. ತಕ್ಷಣವೇ ಆ ವೈದ್ಯರು ಔಷಧೋಪಚಾರ ಆರಂಭಿಸಿದರು. ಎರಡು ವಾರ ಕಳೆಯುವುದರೊಳಗೇ ಸ್ನೇಹಿತ ಸಂಪೂರ್ಣ ಗುಣಮುಖನಾದ.

ಪೂರ್ತಿ ಆರಾಮಾದ ಸ್ನೇಹಿತ, ವೈದ್ಯರಿಗೆ ಥ್ಯಾಂಕ್ಸ್ ಹೇಳಬೇಕೆಂದು ಆಸ್ಪತ್ರೆಗೆ ಹೋದ. ಧನ್ಯವಾದ ಹೇಳಿ ಡಾಕ್ಟರರ ಕೈಗೆ ಫೇಡೆಯ ಡಬ್ಬಿ ಕೊಟ್ಟಾಗ ವೈದ್ಯರ ಕಣ್ಣಂಚಲ್ಲಿ ನೀರು! `ಡಾಕ್ಟರೆ, ನಿಮ್ಮ ಕಣ್ಣಲ್ಲಿ ನೀರು?~- ಎಂದು ಆತ ಕೇಳಿದ್ದಕ್ಕೆ ಅವರ ಉತ್ತರ ಕುತೂಹಲಕಾರಿಯಾಗಿತ್ತು.

`ನಾನು ವೈದ್ಯಕೀಯ ವೃತ್ತಿ ಆರಂಭಿಸಿ ಇಪ್ಪತ್ತು ವರ್ಷವಾಯ್ತು. ಅದೆಷ್ಟೋ ರೋಗಿಗಳಿಗೆ ಔಷಧಿ ಕೊಟ್ಟಿದ್ದೇನೆ. ಅವರಲ್ಲಿ ಗುಣವಾಗಿ ಹೋದವರು ಬಹಳ ಜನ. ಆದರೆ, ನಿಮ್ಮ ಚಿಕಿತ್ಸೆಯಿಂದ ನಾನು ಆರಾಮಾದೆ, ಇದಕ್ಕಾಗಿ ನಿಮಗೆ ಧನ್ಯವಾದ ಎಂದು ಇಷ್ಟು ದಿನಗಳಲ್ಲಿ ಯಾರೊಬ್ಬರೂ ಹೇಳಿದ್ದಿಲ್ಲ.

ಆದರೆ ನೀವು ಧನ್ಯವಾದ ಹೇಳಿದಿರಿ ಮಾತ್ರವಲ್ಲ; ಸಿಹಿಯನ್ನೂ ಸಹ ತಂದಿದ್ದೀರಿ.ಇದಕ್ಕಾಗಿ ನಾನು ನಿಮಗೆ ಚಿರಋಣಿ~- ಎಂದು ಅತ್ಯಂತ ವಿನೀತರಾಗಿ ಹೇಳಿದರು. ಒಂದು ಭಾವನಾತ್ಮಕ ಸಂದರ್ಭ ಅದು. ವೃತ್ತಿಗಾಗಿ ಪಡೆದ ಶುಲ್ಕಕ್ಕಿಂತ ಹೆಚ್ಚಾಗಿ ಮಾನವೀಯ ಸ್ಪಂದನವೇ ಪ್ರಧಾನವಾದ ಈ ಘಟನೆ ರೋಗಿ ಮತ್ತು ವೈದ್ಯರ ನಡುವೆ ಎಂಥ ಸಂಬಂಧವಿರಬೇಕೆಂಬುದನ್ನು ಸಾರುತ್ತದೆ.

ವೈದ್ಯರನ್ನೇ ದೇವರೆಂದು ನಂಬಿ ಅವರ ಹತ್ತಿರ ಚಿಕಿತ್ಸೆಗಾಗಿ ಹೋಗುವ ರೋಗಿ ಅವರಿಂದ ತಾನು ಗುಣ ಹೊಂದುವೆನೆಂಬ ನಂಬಿಕೆಯಿಂದ ಹೇಗೆ ಹೋಗುತ್ತಾನೋ, ಹಾಗೆಯೇ ವೈದ್ಯ ಕೂಡಾ ತಾನು ಪರೀಕ್ಷಿಸುವ ರೋಗಿ ತನ್ನ ಚಿಕಿತ್ಸೆಯಿಂದ ಪೂರ್ಣ ಗುಣ ಹೊಂದಲೆಂಬ ಆಶಯ ಹೊಂದಿರುತ್ತಾನೆ.

ಹಾಗೆ ನೋಡಿದರೆ ಪ್ರತಿಯೊಬ್ಬ ರೋಗಿಯೂ ವೈದ್ಯರಿಗೆ ಒಂದು ಹೊಸ ಸವಾಲು. `ರೋಗಿಯೆಂದರೆ ವೈದ್ಯರ ಪಠ್ಯಪುಸ್ತಕ ಇದ್ದಹಾಗೆ~ ಎಂದು ಡಾ. ನಾಗಲೋಟಿಮಠ ಅವರು ಹೇಳುತ್ತ್ದ್ದಿದರು. ರೋಗಿಯೆಂಬ ಈ ಪಠ್ಯಪುಸ್ತಕವನ್ನು ವೈದ್ಯ ಎಷ್ಟು ತನ್ಮಯತೆಯಿಂದ, ಆಸ್ಥೆಯಿಂದ ಓದುತ್ತಾನೋ, ಅರಿಯುತ್ತಾನೋ ಅದರ ಮೇಲಿಂದ ಆತನ ಶುಶ್ರೂಷೆ ಫಲಕಾರಿಯಾಗುತ್ತದೆ.

ಧನದಾಹಿ ವೈದ್ಯರು ಇರಬಹುದಾದರೂ, ವೈದ್ಯಲೋಕದ ಸಂಶೋಧನೆಯಲ್ಲಿ ಹಾಗೂ ಮಾನವೀಯ ಸಂಬಂಧಗಳಲ್ಲಿ ಹೆಚ್ಚು ಗಮನವಿರುವ ಅಸಂಖ್ಯ ವೈದ್ಯರು ನಮ್ಮಲ್ಲಿದ್ದಾರೆ. ಅಂಥವರಿಗೆ ಈ ವೃತ್ತಿ ಒಂದು ಪೂಜೆ, ಆರಾಧನೆ. ಹಣ ಗೌಣ. ಹಾಗೆಂದರೆ ಅವರು ಹಣಕ್ಕಾಗಿ ವೃತ್ತಿ ಮಾಡುವುದೇ ಇಲ್ಲವೆಂದಲ್ಲ.

ಅದು ಆ ವೃತ್ತಿಯ ಅನಿವಾರ್ಯ ಭಾಗ. ಲಕ್ಷ ಲಕ್ಷ ಹಣ ಸುರಿದು ವೈದ್ಯಕೀಯ ಶಿಕ್ಷಣ ಪಡೆಯುವವರು ಹಣವನ್ನು ತಿರಸ್ಕರಿಸಲು ಸಾಧ್ಯವಿಲ್ಲ. ಇದೆಲ್ಲವನ್ನೂ ಒಳಗೊಂಡ ಹಾಗೆ ವೈದ್ಯವೃತ್ತಿಗೂ ಒಂದು ಗಟ್ಟಿಯಾದ ನೀತಿಸಂಹಿತೆ ಇದೆ. ಈ ನೀತಿಸಂಹಿತೆ ಉಪನಿಷತ್ತುಗಳ ಕಾಲದಿಂದಲೂ ಇದೆ.

ಚರಕ ಸಂಹಿತೆಯಲ್ಲಿ ವೈದ್ಯ ಪದವೀಧರರಿಗೆ ಮಾತ್ರ ಬೋಧಿಸುತ್ತಿದ್ದ ಒಂದು ಮಹತ್ವದ ಸ್ನಾತಕೋಪದೇಶವಿದೆ. ಅದು ಯಾವ ಕಾಲದ ವೈದ್ಯರಿಗಾದರೂ ಮಾರ್ಗದರ್ಶನ ಮಾಡುವ ನೀತಿಸಂಹಿತೆಯಾಗಿದೆ-

ಗುರುವಿನ ಅಪ್ಪಣೆ ಪಡೆದು ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸುವಾಗ ಗುರುವಿಗೆ ಗೌರವಧನವನ್ನು ಅರ್ಪಿಸಬೇಕು. ಇಹಲೋಕದಲ್ಲಿ ಧರ್ಮ ಮತ್ತು ಅರ್ಥಸಿದ್ಧಿಗಾಗಿ, ಪರಲೋಕದಲ್ಲಿ ಸ್ವರ್ಗಪ್ರಾಪ್ತಿಗಾಗಿ, ಎಲ್ಲರ ಸುಖಕ್ಕಾಗಿ ನೀನು ದುಡಿಯಬೇಕು. ಪ್ರತಿದಿನವೂ ಎದ್ದಾಗ, ಕುಳಿತಾಗ ಸರ್ವಾತ್ಮಗಳಿಂದ ರೋಗಿಗಳ ಆರೋಗ್ಯಭಾಗ್ಯಕ್ಕಾಗಿ ಪ್ರಯತ್ನ ಮಾಡಬೇಕು.

ನಿನ್ನ ಪ್ರಾಣ ಹೋಗುವಂತಿದ್ದರೂ ರೋಗಿಗಳಿಗೆ ಎಂದೂ ದ್ರೋಹ ಬಗೆಯಬೇಡ. ಮನಸ್ಸಿನಲ್ಲಿ ಕೂಡಾ ಪರಸ್ತ್ರೀ, ಪರಧನಕ್ಕಾಗಿ ಆಸೆ ಪಡಬೇಡ. ನಿನ್ನ ವೇಷ-ಭೂಷಣ ನಿರಾಡಂಬರವಾಗಿರಲಿ. ಹೆಂಡ ಕುಡಿಯಬಾರದು, ಪಾಪಕೃತ್ಯ ಮಾಡಬಾರದು: ಮಾಡುವವರಿಗೆ ಸಹಾಯ ಮಾಡಬಾರದು. ನಿನ್ನ ಮಾತು ಸರಳ, ಸಂಕ್ಷಿಪ್ತ, ಸತ್ಯವಾಗಿರಲಿ.

ಯಾವುದೇ ದೇಶ ಕಾಲ ಪರಿಸರಗಳಲ್ಲೂ ನೀನು ಸಂಪಾದಿಸಿದ ಜ್ಞಾನದಂತೆ ನಡೆ. ಸದಾ ಪ್ರಯತ್ನಶೀಲನಾಗಿರು. ನಿನ್ನ ಶಸ್ತ್ರಗಳ ಬಗೆಗೆ ಕಾಳಜಿಯಿರಲಿ. ಯಾರ ರೋಗ ಗುಣವಾಗಲು ಸಾಧ್ಯವಿಲ್ಲವೋ ಅವರಿಗೆ, ಸಾಯುವ ಸ್ಥಿತಿಯಲ್ಲಿರುವವರಿಗೆ ಮತ್ತು ಗಂಡನ ಅಥವಾ ಪಾಲಕರ ಅನುಮತಿಯಿಲ್ಲದೇ ಹೆಣ್ಣುಮಕ್ಕಳಿಗೆ ಔಷಧಿಯನ್ನು ಕೊಡಬೇಡ.

ಅದೇ ರೀತಿ ಗಂಡ ಅಥವಾ ಪಾಲಕರ ಅನುಮತಿಯಿಲ್ಲದೇ ಹೆಣ್ಣುಮಕ್ಕಳು ಕೊಡುವ ಹಣವನ್ನು ಸ್ವೀಕರಿಸಬೇಡ. ರೋಗಿಯಿರುವ ಕೋಣೆಯನ್ನು ಪ್ರವೇಶಿಸಿದಾಗ ಅವನ ಮಾತು, ಚಲನವಲನ, ಅವನಿಗೆ ಕೊಡಬೇಕಾದ ಔಷಧಿಗಳ ಕಡೆಗೇ ನಿನ್ನ ಗಮನವಿರಲಿ. ಆಗ ಬುದ್ಧಿ ಮತ್ತು ಇಂದ್ರಿಯಗಳನ್ನು ಬೇರೆ ವಿಷಯಗಳಲ್ಲಿ ತೊಡಗಿಸಬಾರದು.

ರೋಗಿಯ ಮತ್ತು ಅವನ ಕುಟುಂಬದ ವಿಷಯಗಳನ್ನು ಗೌಪ್ಯವಾಗಿಡಬೇಕು. ಅಪಾಯ ಸಂಭವಿಸಬಹುದಾದ ಪ್ರಸಂಗಗಳಲ್ಲಿ ರೋಗಿಗಾಗಲಿ ಅಥವಾ ಅವನ ಸಂಬಂಧಿಕರಿಗಾಗಲಿ ನಿನಗೆ ಖಾತ್ರಿಯಾಗುವವರೆಗೆ ರೋಗಿಯ ಮರಣ ಸೂಚನೆಯನ್ನು ಕೊಡಬಾರದು.

ವಿದ್ಯೆಯಲ್ಲಿ ನೀನು ಎಷ್ಟೇ ಪಾರಂಗತನಾಗಿದ್ದರೂ ನಿನ್ನ ಜ್ಞಾನದ ಬಗೆಗೆ ಹೆಮ್ಮೆ ಪಡಬೇಡ. ನಿಜವಾಗಿ ಹೇಳಬೇಕೆಂದರೆ ವೈದ್ಯಕೀಯದಲ್ಲಿ (ಆಯುರ್ವೇದದಲ್ಲಿ) ಯಾರೂ ಪೂರ್ಣ ಪಾರಂಗತರಾಗುವುದಿಲ್ಲ. ಆದ್ದರಿಂದ ನೀನು ಪ್ರಮತ್ತನಾಗದೇ ಹೆಚ್ಚಿನ ಜ್ಞಾನಸಂಪಾದನೆಗಾಗಿ ಪ್ರಯತ್ನ ಮಾಡುತ್ತಲೇ ಇರು.

ಬುದ್ಧಿವಂತನಾದವನು ಎಲ್ಲಾ ಕಡೆಗಳಿಂದಲೂ ಜ್ಞಾನಸಂಪಾದನೆ ಮಾಡುತ್ತಾನೆ. ಅವನು ತನ್ನ ಶತ್ರುವಿನಿಂದಲೂ ಕಲಿಯಬೇಕಾದುದಿದೆ. ಹಾಗೆ ಮಾಡುವುದರಿಂದ ಅದು ಬುದ್ಧಿವಂತನ ಕೀರ್ತಿಯನ್ನೂ, ಜ್ಞಾನವನ್ನೂ ಹೆಚ್ಚಿಸುತ್ತದೆ.

ಈ ಸ್ನಾತಕೋಪದೇಶವು ವೈದ್ಯಕೀಯ ವೃತ್ತಿಯಲ್ಲಿರುವವರು ಅನುಸರಿಸಬೇಕಾದ ನೈತಿಕ ಮಾರ್ಗವನ್ನೂ, ಪಾಲಿಸಬೇಕಾದ ನೈತಿಕ ಕ್ರಿಯೆಗಳನ್ನೂ ಏಕಕಾಲಕ್ಕೆ ನಿರ್ದೇಶಿಸುತ್ತದೆ. ಈ ವೃತ್ತಿಸಂಹಿತೆ ವರ್ತಮಾನಕ್ಕೂ ನಿತ್ಯ ಹೊಸದೆಂಬಂತೆ ಅನ್ವಯಿಸುತ್ತದೆ.

ವೈದ್ಯ, ರೋಗಿ ಮತ್ತು ಸಂಬಂಧಿಕರ ಪರಸ್ಪರ ಸಂಬಂಧದ ಬಗೆಗೆ ವಿಚಾರ ಮಾಡುವಾಗ ಒಂದು ಘಟನೆ ನೆನಪಾಗುತ್ತದೆ. ಇದು ನಡೆದದ್ದು 2010ರ ಏಪ್ರಿಲ್ 2ರಂದು, ರಾತ್ರಿ 8.30ಕ್ಕೆ. ಸ್ಥಳ, ಧಾರವಾಡದ ತಾವರಗೇರಿ ನರ್ಸಿಂಗ್ ಹೋಂ. ವೈದ್ಯರು, ಹೆಸರಾಂತ ಪ್ರಸೂತಿ ತಜ್ಞ ಡಾ. ಸಂಜೀವ ಕುಲಕರ್ಣಿ.

ಪೇಶಂಟ್ ನನ್ನ ಅಣ್ಣನ ಮಗಳಾದ ವಿಜಯಾ. ನಾವೆಲ್ಲ ಅವಳ ಸಂಬಂಧಿಕರು- ನಾಲ್ಕು ಜನ.ವಿಜಯಾ ತುಂಬು ಗರ್ಭಿಣಿ. ಅವಳ ಹೆರಿಗೆ ಒಂದಿಷ್ಟು ತ್ರಾಸದಾಯಕವಾಗಿತ್ತು. ಏಪ್ರಿಲ್ 1ರಂದು ಅವಳನ್ನು ನರ್ಸಿಂಗ್ ಹೋಂಗೆ ದಾಖಲಿಸಲಾಯಿತು. `ಸಹಜ ಹೆರಿಗೆಗೆ ಸ್ವಲ್ಪ ತೊಂದರೆ ಇದೆ, ಅದರೂ ಇಂಜೆಕ್ಷನ್ ಕೊಟ್ಟು ಕಾಯೋಣ. ನಾಳೆ ಸಂಜೆ ಎಂಟು ಗಂಟೆಯ ಒಳಗಾಗಿ ಆದರೆ ಸರಿ, ಇಲ್ಲವಾದರೆ ಸಿಝೇರಿಯನ್ ಅನಿವಾರ್ಯ~ ಎಂದು ವೈದ್ಯರು ಹೇಳಿದರು.

ಸಮಯ ಕಳೆದಂತೆ ನಮಗೆಲ್ಲ ಆತಂಕ-ಕುತೂಹಲ ಹೆಚ್ಚಾಗತೊಡಗಿದವು. ಸಹಜ ಹೆರಿಗೆ ಸಾಧ್ಯವಿಲ್ಲವೆಂದೇ ಅನ್ನಿಸತೊಡಗಿತು. ರಾತ್ರಿ 8.30ಕ್ಕೆ ಡಾ. ಸಂಜೀವ ಕುಲಕರ್ಣಿಯವರು ಬಂದು, `ಇನ್ನು ನಾವು ಕಾಯುವಂತಿಲ್ಲ. ಅನಿವಾರ್ಯವಾಗಿ ಸಿಝೇರಿಯನ್ ಮಾಡಲೇಬೇಕು.

ಇಲ್ಲವಾದರೆ ಕೂಸಿಗೆ ತೊಂದರೆಯಾಗುತ್ತದೆ, ಏನಂತೀರಿ?~ ಎಂದರು. ಒಬ್ಬ ವೈದ್ಯ, ರೋಗಿ ಹಾಗೂ ರೋಗಿಯ ಸಂಬಂಧಿಕರಿಗೆ ಹೇಳಲೇಬೇಕಾದ ಮಾತು ಅದಾಗಿತ್ತು. ಡಾ. ಸಂಜಯ ಕುಲಕರ್ಣಿ ಕೇವಲ ವೈದ್ಯರು ಮಾತ್ರವಲ್ಲ, ಅವರು ಕೃಷಿಕ, ನಿಸರ್ಗಪ್ರೇಮಿ, ಪರಿಸರವಾದಿ, ಕವಿ-ಲೇಖಕ ಕೂಡ.

ಹಣಕ್ಕಾಗಿ ಅವರು ವೈದ್ಯವೃತ್ತಿಯನ್ನು ಮಾಡಿದವರಲ್ಲ. ಧಾರವಾಡದ ಸಾಮಾಜಿಕ-ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡವರು. ಅವರ ಮಾತನ್ನು ಕೇಳಿದ ನಾವು, `ಡಾಕ್ಟರರೆ, ನೀವು ಹೇಗೆ ನಿರ್ಧರಿಸುತ್ತೀರೋ ಹಾಗೆಯೇ ಆಗಲಿ~ ಎಂದೆವು.

ಡಾ. ಸಂಜೀವ ಕುಲಕರ್ಣಿಯವರು ನನ್ನನ್ನು ವೈಯಕ್ತಿಕವಾಗಿ ಹತ್ತಿರ ಕರೆದು, `ಸಾದರ ಅವರೆ, ನಾನು ಈ ಆಪರೇಶನ್ ಮಾಡುವಾಗ ನೀವು ನನ್ನ ಜೊತೆಗೆ ಆಪರೇಶನ್ ಥೇಟರ್ ಒಳಗೆ ಇರಬೇಕು~ ಎಂದರು. `ಏಕೆ ಸರ್?~ ಎಂದೆ ಆಶ್ಚರ್ಯದಿಂದ. ಅದಕ್ಕವರು, `ನೋಡಿ, ಸಿಝೇರಿಯನ್ ಅಂದರೆ ಏನು? ಅದನ್ನು ಮಾಡುವ ರೀತಿ ಹೇಗೆ? ಏನೆಲ್ಲ ಎಚ್ಚರಿಕೆ ತೆಗೆದುಕೊಳ್ಳಬೇಕು? ಎಂಬುದೆಲ್ಲವನ್ನು ನೀವೂ ತಿಳಿಯಬೇಕೆಂಬುದು ನನ್ನ ಬಯಕೆ~ ಎಂದರು.

ನಾನು ಹಿಂಜರಿಯುವುದನ್ನು ಗಮನಿಸಿದ ಅವರು, `ನೀವೇನೂ ಚಿಂತೆ ಮಾಡಬೇಕಿಲ್ಲ. ನಾನು ಆಪರೇಶನ್ ಮಾಡುವುದನ್ನು ನೀವು ಪಕ್ಕದಲ್ಲೇ ನಿಂತು ಗಮನಿಸುತ್ತಿರಿ. ಪಕ್ಕದಲ್ಲೇ ಒಂದು ಕುರ್ಚಿ ಹಾಕಿಸಿರುತ್ತೇನೆ. ಹೊಟ್ಟೆ ಕೊಯ್ಯುವುದು ಮತ್ತು ರಕ್ತ ಬರುವುದನ್ನು ಕಂಡು ಭಯವಾದರೆ ಕಣ್ಣು ಮುಚ್ಚಿಕೊಂಡು ಕುರ್ಚಿಯಲ್ಲಿ ಕೂತುಬಿಡಿ~ ಎಂದು ಧೈರ್ಯ ತುಂಬಿದರು. ಅವರ ಮಾತುಗಳನ್ನು ಕೇಳಿ ನನಗೂ ಕುತೂಹಲ ಹುಟ್ಟಿತು. ಒಪ್ಪಿಕೊಂಡೆ.

ಮುಂದೆ ಹತ್ತೇ ನಿಮಿಷದಲ್ಲಿ ಎಲ್ಲ ತಯಾರಾಯ್ತು. ವಿಜಯಾಳನ್ನು ಆಪರೇಶನ್ ಹಾಸಿಗೆಯ ಮೇಲೆ ಮಲಗಿಸಲಾಯ್ತು. ಅನೆಸ್ತೇಶಿಯನ್ ಬಂದು ತಮ್ಮ ಕೆಲಸ ಮಾಡಿದರು. ಡಾ. ಸಂಜೀವ ಕುಲಕರ್ಣಿಯವರು ತಮ್ಮ ಗ್ಲೌಸ್-ಗೌನುಗಳನ್ನು ಹಾಕಿಕೊಂಡು ಬಂದರು. ನನ್ನನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡರು.

ಹೊಟ್ಟೆಯ ಮೇಲೆ ಔಷಧಿಯುಕ್ತ ಲಿಕ್ವಿಡ್ ಒಂದನ್ನು ಸವರಿದ ಅವರು ಅತ್ಯಂತ ಸೂಕ್ಷ್ಮವಾದ ಹಾಗೂ ಹರಿತವಾದ ಚಾಕುವಿನಿಂದ (ಅದರ ವೈದ್ಯಕೀಯ ಹೆಸರು ನನಗೆ ಗೊತ್ತಿಲ್ಲ) ಒಂದೇ ಕ್ಷಣದಲ್ಲಿ ಗೆರೆ ಎಳೆದರು. ಹಾಗೆ ಎಳೆದ ಜಾಗೆಯಲ್ಲಿ ಹೊಟ್ಟೆ ಕತ್ತರಿಸಲ್ಪಟ್ಟಿತು. ರಕ್ತ ಬಳಬಳನೇ ಹರಿಯತೊಡಗಿತು. ನರ್ಸ್ ಒಬ್ಬರು ರಕ್ತವನ್ನು ಹತ್ತಿಯಿಂದ ಒರೆಸುತ್ತಿದ್ದರು. ಮತ್ತೊಂದು ಸೂಕ್ಷ್ಮ ಸಲಕರಣೆಯಿಂದ ಇನ್ನೂ ಒಳಗಿನ ಭಾಗವನ್ನು ಕೊಯ್ದು ಬಿಡಿಸಲಾಯ್ತು.

ಬಹುಶಃ ಅದು ಗರ್ಭಕೋಶವಿರಬೇಕು. ಕೊಯ್ದ ಆ ಭಾಗದಲ್ಲಿ ಡಾ. ಸಂಜೀವ ಕುಲಕರ್ಣಿ ಅವರು ತಮ್ಮ ಎರಡೂ ಕೈಗಳನ್ನು ಆಚೆ ಒಂದು, ಈಚೆ ಒಂದರಂತೆ ಒಳಸೇರಿಸಿದವರೇ ಮುದ್ದಾದ ಕೂಸನ್ನು ಎತ್ತಿ ಹಿಡಿದರು. ಅದರ ಮೈಮೇಲೆ ಒಂದು ಕವಚವಿದ್ದಂತಿತ್ತು.

ಅದನ್ನು ಸರಿಸಿ, ಆಯಾಳ ಕೈಗೆ ಕೂಸನ್ನು ಕೊಟ್ಟ ಅವರು ತಾಯಿ ಮತ್ತು ಮಗುವಿನ ಸಂಬಂಧವನ್ನು ಬೆಸೆದಿದ್ದ ಹೊಕ್ಕುಳ ಬಳ್ಳಿಯನ್ನು ಕತ್ತರಿಯಿಂದ ಕತ್ತರಿಸಿದರು. ಕೂಸಿನ ಮೈಮೇಲಿದ್ದ ರಕ್ತ-ಮಾಂಸಗಳನ್ನು ಸ್ವಚ್ಛಗೊಳಿಸಿದ ಆಯಾ ಹಾಗೇ ಅದನ್ನು ಕೈಯಲ್ಲಿ ಹಿಡಿದುಕೊಂಡೇ ನನಗೆ ಇನ್ನೂ ಹತ್ತಿರದಿಂದ ತೋರಿಸಿದರು. ನಾನು ಸೋಜಿಗದಿಂದ ಎಲ್ಲವನ್ನೂ ನೋಡುತ್ತಲೇ ಇದ್ದೆ.

ಮುಂದಿನ ಹತ್ತು ನಿಮಿಷದಲ್ಲಿ ವೈದ್ಯರು ಗರ್ಭಕೋಶದಲ್ಲಿದ್ದ ರಕ್ತ-ಮಾಂಸಗಳನ್ನು ಹೊರಗೆ ತೆಗೆದು ಶುಚಿಮಾಡಿ ಒಳಗಿನ ಎಲ್ಲ ಭಾಗಗಳನ್ನು ಮೊದಲಿನಂತೆ ಕೂಡಿಸಿ ಹೊಲಿದುಬಿಟ್ಟರು. ರಕ್ತ ಬರುತ್ತಲೇ ಇತ್ತು. ಸಹಾಯಕರು ಅದನ್ನು ಒರೆಸುತ್ತಲೇ ಇದ್ದರು. ನಾನು ಕುತೂಹಲದಿಂದ ನೋಡುತ್ತಲೇ ಇದ್ದೆ. 15-20 ನಿಮಿಷದಲ್ಲಿ ಎಲ್ಲ ಕ್ರಿಯೆ ಮುಗಿದು ಹೋಗಿತ್ತು.

ಡಾ. ಸಂಜೀವ ಕುಲಕರ್ಣಿಯವರು ಒಂದು ಜೀವಿಯ ಕೃತಕ ಹುಟ್ಟು ಹೇಗೆ ಸಾಧ್ಯವೆಂಬುದನ್ನು ನನಗೆ ಪ್ರಾತ್ಯಕ್ಷಿಕೆಯ ಮೂಲಕ ತೋರಿಸಿಕೊಟ್ಟಿದ್ದರು.
ಶಸ್ತ್ರಚಿಕಿತ್ಸೆ ಮುಗಿಸಿ ಕೈತೊಳೆದುಕೊಂಡು ಹೊರಬಂದ ವೈದ್ಯರು `ಹೇಗಿತ್ತು ಸಿಝೇರಿಯನ್?~ ಎಂದರು. `ಸರ್, ನೀವು ನಿಜಕ್ಕೂ ದೇವರು.

ಒಂದು ಜೀವಿಯ ಹುಟ್ಟನ್ನು ಚಕಾಚಕ್ ಮಾಡಿಸಿ ತೋರಿಸಿದಿರಿ! ಇದಕ್ಕೆ ಪರಿಣತಿ ಮಾತ್ರವಲ್ಲ, ಒಂದು ಬಗೆಯ ಧೈರ್ಯ, ಏಕಚಿತ್ತತೆ, ಸಮಯಪ್ರಜ್ಞೆ ಎಲ್ಲವೂ ಅಗತ್ಯ. ವೈದ್ಯ ಎಂದರೆ ದೇವರೆಂಬುದು ಈಗ ನನಗೆ ಖಚಿತವಾಯ್ತು~ ಎಂದೆ. ಅವರ ಕೈ ಹಿಡಿದು ಕೃತಜ್ಞತೆ ಸೂಚಿಸಿದೆ. ಅವರ ಮುಖದಲ್ಲಿ ಧನ್ಯತಾಭಾವನೆ ಮೂಡಿತ್ತು.

ವಿವಿಧ ಬಗೆಯ ರೋಗಗಳಿಂದ ಬಳಲುವವರನ್ನು ತಮ್ಮ ವಿದ್ಯೆಯ ಮೂಲಕ ಗುಣಪಡಿಸುವುದು ಹಾಗೂ ಹೊಸ ಜೀವಿಯೊಂದು ಕೃತಕವಾಗಿ ಜನಿಸುವಂತೆ ಮಾಡುವುದು ನಿಜಕ್ಕೂ ಅದ್ಭುತ ಕೆಲಸವಷ್ಟೇ ಅಲ್ಲ; ಅದು ವಿಶಿಷ್ಟ ಪರಿಣತಿಯನ್ನು ಬಯಸುವಂತಹದ್ದು.

ಎಲ್ಲರಲ್ಲೂ ಇರಲಾರದ ಈ ವಿಶಿಷ್ಟ ಪರಿಣತಿಯನ್ನು ಹೊಂದಿದ ವೈದ್ಯರು ದೇವರಲ್ಲದೇ ಮತ್ತೇನು?ಈ ಜಗತ್ತು ಸುಂದರವಾಗಿದೆ ಎಂದರೆ ಅದರಲ್ಲಿ ವೈದ್ಯರ ಪಾತ್ರವೂ ದೊಡ್ಡದಿದೆ ಅಲ್ಲವೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.