ಮಂಗಳವಾರ, ಮೇ 18, 2021
22 °C

ಆಹಾ ಅದಿತಿ ಅದ್ಹೇಗೆ ಬಳುಕುತ್ತೀ?

ಡಿ.ಎಂ.ಕುರ್ಕೆ ಪ್ರಶಾಂತ Updated:

ಅಕ್ಷರ ಗಾತ್ರ : | |

ಆಹಾ ಅದಿತಿ ಅದ್ಹೇಗೆ ಬಳುಕುತ್ತೀ?

ದೇಹದ ಆರೋಗ್ಯದ ವಿಷಯದಲ್ಲಿ ತುಸುವಾದರೂ ರಾಜಿ ಮಾಡಿಕೊಳ್ಳದೇ ಇರುವವರು ನಟಿ ಅದಿತಿ ರಾವ್. ಅವರ ಆಹಾರದ ಮೆನುವಿನಲ್ಲಿ ಸಾಲು ಸಾಲು ಹೆಸರುಗಳಿದ್ದರೂ, ಮನಸ್ಸು ಬಯಸುವ ಆಹಾರಕ್ಕಿಂತ ದೇಹಕ್ಕೆ ಒಗ್ಗುವ ಆಹಾರಕ್ಕೆ ಅವರು ಹೆಚ್ಚಾಗಿ ಬಾಯಿ ತೆರೆಯುತ್ತಾರೆ.ಅದಿತಿ ಅವರ ಪಾತ್ರ ಪರಿಚಯ ಕಿರುತೆರೆ, ಹಿರಿತೆರೆಗೆ ಈಗಾಗಲೇ ಆಗಿದೆ. ಕಿರುತೆರೆ ಪ್ರವೇಶಕ್ಕೂ ಮುನ್ನವೇ ಅವರು ಅದ್ವಿತೀಯವಾಗಿ ಸೌಂದರ್ಯ ಸಿರಿ ಕಾಯ್ದುಕೊಂಡವರು. ಆ ಕಾರಣದಿಂದಲೇ ಪಾತ್ರಗಳನ್ನು ಮೊಗೆದವರು. `ನಾನು ಅದಿತಿ ರಾವ್' ಧಾರಾವಾಹಿಯಲ್ಲಿ ಬಳುಕುವ ಲತೆಯಂತೆ ಕಂಡವರು `ಎಲ್ಲರಂತಲ್ಲ ನಮ್ಮ ರಾಜಿ'ಯಲ್ಲಿ ಹಳ್ಳಿಯ ಹೆಂಗಳೆಯರ ಚೆಲುವಿನ ರೂಪು ಪಡೆದವರು. ಇಂತಿಪ್ಪ `ರೂಪವತಿ ರಾಜಿ'ಗೆ ಫಾಸ್ಟ್‌ಫುಡ್, ತುಪ್ಪದ ಮೇಲೆ ಅತಿಯಾಸೆ. ಫಾಸ್ಟ್ ಫುಡ್ ಘಮಲು ಮೂಗನ್ನು ಸೋಕಿ ಜಿಹ್ವೆ ಅತ್ತಲಿಂದ ಇತ್ತ ಹೊರಳಿದ ಕ್ಷಣ ಮನಸ್ಸಿಗೆ ಅಂಕುಶವಿಟ್ಟು ಸಮಾಧಾನ ಪಡಿಸಿಕೊಳ್ಳುವ ಕಲೆ ಕರಗತ.ದೇಹಾರೋಗ್ಯದ ಮೇಲೆ ಅಪಾರ ಕಾಳಜಿಯುಳ್ಳ ಅದಿತಿ, ದೇಹಭಾಷೆ ಸ್ವಲ್ಪವೂ ಕರ್ಕಶವಾಗದಂತೆ ಜತನದಿಂದ ಕಾಪಾಡಿಕೊಂಡವರು. ಕಿರುತೆರೆಯಲ್ಲಿ ತೊರೆಯಾಗಿ ಹರಿಯುತ್ತಿದ್ದವರನ್ನು ಚಿತ್ರರಂಗದ ಮುನ್ನೆಲೆಗೆ ಸೇರಿಸಿದ್ದು ಅವರ ದೇಹಸಿರಿಯೇ. ಮುಂಜಾನೆಯ ಇಬ್ಬನಿಯ ತಂಪು ಹವೆಯಲ್ಲಿ 20 ನಿಮಿಷಗಳ ಕಾಲ ಜಾಗಿಂಗ್‌ನಲ್ಲಿ ಜಿಗಿದು, ಒಂದು ಗಂಟೆ ಜಿಮ್‌ನಲ್ಲಿ ದೇಹ ದಂಡಿಸುತ್ತಾರೆ. ಏರೋಬಿಕ್ಸ್, ಸೈಕ್ಲಿಂಗ್ ಸೇರಿದಂತೆ ನಾನಾ ಕಸರತ್ತುಗಳಿಗೂ ದೇಹ ಬಾಗಿಸುತ್ತಾರೆ.ಹೆಸರು, ಕಡಲೆಯಂತಹ ಮೊಳಕೆ ಕಾಳುಗಳ ಮೇಲೆ ಅದಿತಿಗೆ ವಿಪರೀತ ಮೋಹ. ಜಿಮ್‌ನಲ್ಲಿ ದೇಹ ದಂಡಿಸಿ ಬಂದು ಮೊಳಕೆ ಕಾಳುಗಳನ್ನು  ಮೆಲ್ಲುವುದೆಂದರೆ ಪಾತ್ರಕ್ಕೆ ಪರಕಾಯ ಪ್ರವೇಶ ಮಾಡಿದಷ್ಟೇ ಸಂತಸ.ಹಸಿವಾಗದಿದ್ದರೂ ಹಸಿ ತರಕಾರಿಗಳನ್ನು ಆಸ್ವಾದಿಸಿ ಆರೋಗ್ಯ ಪಡೆಯುವ ಉತ್ಕಟ ಆಸೆ. ತರಕಾರಿಗಳನ್ನು ಮೊಗೆ ಮೊಗೆದು ತಿಂದಾಗಲೇ ಸಂತೃಪ್ತಿ ಎನ್ನುವಂತೆ, ಪ್ರತಿ ಬಾರಿಯ ಆಹಾರ ಸೇವನೆ ವೇಳೆ ತರಕಾರಿ ಕಡ್ಡಾಯ. `ಅತಿಯಾದ ಆಹಾರ ಸೇವನೆ ದೇಹಕ್ಕೆ ಆಪತ್ತು' ಎಂಬುದನ್ನು ಚೆನ್ನಾಗಿಯೇ ಅರಿತಿರುವ ಅವರು ಮಿತ ಆಹಾರ ಪದ್ಧತಿ ರೂಢಿಸಿಕೊಂಡಿದ್ದಾರೆ.ಬೆಳಿಗ್ಗೆ ಓಟ್ಸ್, ಹಣ್ಣಿನ ರಸದ ಜತೆಗೆ ಒಂದು ಇಡ್ಲಿ ಅಥವಾ ಚಪಾತಿಗೆ ದೇಹವನ್ನು ಒಗ್ಗಿಸಿಕೊಂಡಿದ್ದಾರೆ. ಅನ್ನವೆಂದರೆ ವರ್ಜ್ಯದ ಭಾವ. ಹೆಚ್ಚು ಮೊರೆ ಹೋಗುವುದು ಚಪಾತಿಗೆ. ಮಧ್ಯಾಹ್ನ ಮುಷ್ಟಿ ಅನ್ನದ ಜತೆಗೆ ಎರಡು ಚಪಾತಿಯಾದರೆ, ರಾತ್ರಿ ಮೂರೇ ಮೂರು ಚಪಾತಿ. ಈ ಆಹಾರದ ಮೆನು ಮುಂಜಾನೆಯಿಂದ ಸಂಜೆಯವರೆಗೂ ಅವರ ಮನಸ್ಸನ್ನು ಉಲ್ಲಸಿತವಾಗಿ ಇಡುತ್ತದಂತೆ.ದೇಹದ ಜತೆಗೆ ಮನಸ್ಸನ್ನೂ ಆರೋಗ್ಯವಾಗಿ ಇಟ್ಟುಕೊಳ್ಳಬೇಕೆಂಬ ಅರಿವು ಮೂಡಿದ ಮೇಲೆ, ಮನಸ್ಸಿನ ಆರೋಗ್ಯಕ್ಕೆ ತಮ್ಮದೇ ಟಿಪ್ಸ್‌ಗಳನ್ನು ಕಂಡುಕೊಂಡಿದ್ದಾರೆ. ಕಿರುತೆರೆ ಪ್ರವೇಶಿಸುತ್ತಲೇ ಮನಸ್ಸನ್ನು ಅರಳಿಸುವ ಯೋಗ ವಿದ್ಯೆ ಕಲಿತವರು. ಬೆಳ್ಳಂ ಬೆಳಿಗ್ಗೆ ಜಿಮ್‌ನಲ್ಲಿ ದಣಿದ ದೇಹ ಮತ್ತು ಮನಸ್ಸಿಗೆ ಯೋಗದ ಮೂಲಕ ರಿಲ್ಯಾಕ್ಸ್ ಹೇಳುತ್ತಾರೆ. ವೃತ್ತಿ ಬದುಕಿನ ಒತ್ತಡ ಎಷ್ಟೇ ಇದ್ದರೂ ಯೋಗ, ಜಾಗಿಂಗ್‌ಗೆ ದೇಹ ಒಪ್ಪಿಸುವುದನ್ನು ತಪ್ಪಿಸುವುದಿಲ್ಲ. ಜಿಮ್ ತರಬೇತುದಾರರನ್ನು ಹೊರತು ಪಡಿಸಿದರೆ ಫಿಟ್‌ನೆಸ್ ಪಾಠವನ್ನು ಯಾರಿಂದಲೂ ಕೇಳಿಲ್ಲ. ಯೋಗ ಶಾಲೆಯಲ್ಲಿ ಕೆಲ ಕಾಲ ಆಸನದ ಪಠ್ಯ ಓದಿದ್ದು ಬಿಟ್ಟರೆ ಎಲ್ಲ ಸ್ವ ಅನುಭವ ಎನ್ನುವಂತೆ ಯೋಗಾಸನದ ಪಾಠ ಒಪ್ಪಿಸುತ್ತಾರೆ.ಹೋಟೆಲ್‌ಗಿಂತ ಮನೆಯೂಟದ ರುಚಿಯನ್ನು ಇಷ್ಟಪಡುವ ಅದಿತಿ, ಶೂಟಿಂಗ್ ಸ್ಥಳಕ್ಕೂ ಮನೆಯಿಂದಲೇ ಊಟ ಕೊಂಡೊಯ್ಯುತ್ತಾರೆ. ಚಿತ್ರೀಕರಣದ ಬಿಡುವಿನಲ್ಲಿ ಮೊಳಕೆ ಕಾಳು ಮೆದ್ದು, ಹಣ್ಣಿನ ರಸ ಹೀರಿ ಚೈತನ್ಯ ಪಡೆಯುತ್ತಾರೆ. ಹಣ್ಣಿನ ಪಾನೀಯಗಳಿದ್ದರೆ ಸಾಕು, ಊಟಕ್ಕೆ ಕೊಂಚ ವಿರಾಮ ಹೇಳುತ್ತೇನೆ ಎನ್ನುವಷ್ಟು ತಮ್ಮ ಆರೋಗ್ಯದ ಮೇಲೆ ವಿಶ್ವಾಸ ಇಟ್ಟಿದ್ದಾರೆ.ಮಧ್ಯಾಹ್ನ ಮತ್ತು ರಾತ್ರಿ ಕಲ್ಲಂಗಡಿ ಹಣ್ಣು ಮತ್ತು ಕಿತ್ತಲೆ ರಸವನ್ನು ರಸವತ್ತಾಗಿಯೇ ಸವಿಯುತ್ತಾರೆ. ಆಯಾ ಕಾಲಕ್ಕೆ ತಕ್ಕಂತೆ ಫಲಾಹಾರವನ್ನು ಪ್ರೀತಿಸುವುದರಿಂದ ದೇಹದ ಆರೋಗ್ಯ ಮತ್ತು ಕಾಂತಿಯನ್ನು ಅವು ಪ್ರಖರವಾಗಿಯೇ ಕಾಪಾಡಿವೆ.ಸಂಗೀತಕ್ಕೆ ಮನಸ್ಸು ಕೊಟ್ಟು ಹಗುರವಾಗುವ ಅದಿತಿ, ರಾಕ್ ಬ್ಯಾಂಡ್ ಮತ್ತು  ಕನ್ನಡ ಚಲನಚಿತ್ರಗಳನ್ನು ಆಲಿಸಿ, ಆಲಾಪಿಸಿ ಒತ್ತಡ ನಿವಾರಿಸಿಕೊಳ್ಳುತ್ತಾರೆ. ಸಮಸ್ಯೆಗಳನ್ನು ನಿಭಾಯಿಸುವ ಜಾಣ್ಮೆ ಸಿದ್ಧಿಸಿದ್ದು ಪುಸ್ತಕಗಳ ಅಭ್ಯಾಸದಿಂದ ಎನ್ನುವ ಈ ಚೆಲುವೆಗೆ `ಇನ್‌ಸ್ಪಿರೇಷನ್' ಕೃತಿಗಳು ಹೊಸ ಹುರುಪು ನೀಡುತ್ತವಂತೆ. ಚೇತನ್ ಭಗತ್‌ರ `ಮಿಸ್ಟೇಕ್ ಆಫ್ ಮೈ ಲವ್', `ಫೈವ್ ಪಾಯಿಂಟ್ ಸಮ್‌ಒನ್' ಮತ್ತಿತರ ಕೃತಿಗಳು ಅವರ ಜ್ಞಾನದ ಕಪಾಟಿನಲ್ಲಿ ಸ್ಥಾನ ಪಡೆದಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.