ಗುರುವಾರ , ಏಪ್ರಿಲ್ 15, 2021
21 °C

ಆಹ್ಲಾದಕರ ನಾಗಸ್ವರ

ಡಾ. ಎಂ. ಸೂರ್ಯ ಪ್ರಸಾದ್ Updated:

ಅಕ್ಷರ ಗಾತ್ರ : | |

ಸ್ವಾತಂತ್ರ್ಯ ದಿನಾಚರಣೆಯ ಆಹ್ಲಾದಕರ ಬೆಳಿಗ್ಗೆ ವಿರಳವಾಗಿ ನೆರೆದಿದ್ದ ರಸಿಕರು ಬೆಂಗಳೂರು ಗಾಯನ ಸಮಾಜದಲ್ಲಿ ನಡೆದ ಯುಗಳ ನಾಗಸ್ವರ ವಾದನ ಕಛೇರಿಯನ್ನು ಸವಿದರು.ವಾದ್ಯ ಸಂಗೀತ ಕಛೇರಿಗಳದೇ ಆದ ಐದು ದಿನಗಳ `ವಾದ್ಯ ವೈಭವ-2012~ ಸಂಗೀತೋತ್ಸವದ ಕೊನೆಯ ದಿನದ ಕಾರ್ಯಕ್ರಮದಲ್ಲಿ ವಡವೂರು ಎಸ್.ಎನ್.ಆರ್. ಕೃಷ್ಣಮೂರ್ತಿ ಮತ್ತು ಪೆಳಂಬೂರು ಎನ್. ಮಣಿಕಂಠನ್ ಅವರ ನಾಗಸ್ವರ ವಾದನ ಮನೋಹರವಾಗಿತ್ತು.

 

ತಂಜಾವೂರು ಗೋವಿಂದರಾಜನ್ ಮತ್ತು ದಿನೇಶ್‌ಕುಮಾರ್ (ಡಬಲ್ ಡೋಲು) ಮಿಶ್ರ ಫಲದ ಸಹಕಾರವನ್ನಿತ್ತರು.ನಿರೀಕ್ಷಿಸಿದಂತೆ `ವಾತಾಪಿ ಗಣಪತಿಂ ಭಜೆ~ (ಹಂಸಧ್ವನಿ) ರಾಗಾಲಾಪನೆ ಮತ್ತು ಸ್ವರಕಲ್ಪನೆಯ ಸಹಿತ ಮೂಡಿಬಂದಿತು.ನಾಗಸ್ವರ ಕಲಾವಿದ ದ್ವಯರು ಅನುಸರಿಸಿದ ವೇಗ ಮತ್ತು ಓಘ ಕಛೇರಿಗೆ ಚುರುಕಾದ ಚಾಲನೆಯನ್ನು ನೀಡಿತು. ಗೌಳ ಪಂಚರತ್ನ ಕೀರ್ತನೆ `ದುಡುಕು ಗಲದಾ~ ಎಂದಿನಂತೆ ಸ್ವರ ಸಾಹಿತ್ಯ ಸಹಿತ ಲವಲವಿಕೆಯಿಂದ ಕೇಳಿ ಬಂದಿತು. ಚಕ್ರವಾಕ ಮತ್ತು ಮಧ್ಯಮಾವತಿ ರಾಗಗಳ ಅಲ್ಪ ಆಲಾಪನೆಯ ಹಿನ್ನೆಲೆಯಲ್ಲಿ ಕೃತಿಗಳ ವಾದನ ಸೊಗಸೆನಿಸಿತು.ಬಯಲು ವಾದ್ಯವನ್ನು ನಾಲ್ಕು ಗೋಡೆಗಳ ನಡುವೆ ವೇದಿಕೆಯ ಮೇಲೆ ನುಡಿಸಬೇಕಾದರೆ ಹಲವಾರು ರೀತಿಯ ನಿಯಂತ್ರಣವನ್ನು ಕಲಾವಿದರು ಸಾಧಿಸಬೇಕಾಗುತ್ತದೆ. ಉಸಿರಿನ ಬಳಕೆ, ಧ್ವನಿವರ್ಧಕದ ಉಪಯೋಗ, ತಮಗೆ ನಿಗದಿ ಪಡಿದಲಾಗಿರುವ ಕಛೇರಿಯ ಒಟ್ಟಾರೆ ಅವಧಿ ಇತ್ಯಾದಿ ಅಂಶಗಳ ಪರಿಗಣನೆ ಅತ್ಯವಶ್ಯಕವಾಗುತ್ತದೆ.ಈ ದೃಷ್ಟಿಯಿಂದ ಕೃಷ್ಣಮೂರ್ತಿ ಮತ್ತು ಮಣಿಕಂಠನ್ ಉಚಿತವಾಗಿಯೇ ಸ್ಪಂದಿಸಿದರು. ಆಕರ್ಷಕ ಗತಿಯಲ್ಲಿ `ಪರಮಾತ್ಮುಡು ವೆಲಗೆ~ (ವಾಗಧೀಶ್ವರಿ ರಾಗ) ಮುದ ನೀಡಿತು.

ಶಂಕರಾಭರಣ ರಾಗದ ಸವಿಸ್ತಾರ ನಿರೂಪಣೆ ಶಾಸ್ತ್ರೀಯವಾಗಿತ್ತು. ರಾಗಾಲಾಪನೆಗಳ ಸೊಗಸು ನಾಗಸ್ವರ ವಾದನದಲ್ಲಿ ವಿಶೇಷವಾಗಿ ಅಡಗಿರುತ್ತದೆ.ಕ್ರಮಬದ್ಧ ಪ್ರಸಾರದಲ್ಲಿ ರಾಗ ಪ್ರತಿಮೆಯು ಕಂಗೊಳಿಸಿತು. ವಿಶಿಷ್ಟ ಸಂಗತಿಗಳು ನಾಗಸ್ವರ ವಾದ್ಯ ಧರ್ಮಕ್ಕನುಗುಣವಾಗಿ ನಿರ್ಮಾಣವಾಗಿ, `ಯದುಟ ನಿಲಚಿತೆ~ ಕೀರ್ತನೆಯ ಮಂಡನೆಯನ್ನು ಆಪ್ತಗೊಳಿಸಿತು. ಇದೇ ಮಾತನ್ನು ನಾಸಿಕಾಭೂಷಿಣಿ ರಾಗದ ವಿಶದೀಕರಣದ ಕುರಿತಾಗಿಯೂ ಹೇಳಬಹುದು.ಸೂಕ್ತವಾದ ಗಮಕಗಳು, ಕಲಾವಿದರಿಬ್ಬರ ನಡುವಿನ ಸೊಗಸಾದ ಹೊಂದಾಣಿಕೆ ಮತ್ತು ನಿರೂಪಣಾ ಕೌಶಲ್ಯ ಮಾಧುರ್ಯದ ಸಂರಚನೆಗಳಿಗೆ ಅದರಲ್ಲೂ ವಿಶೇಷವಾಗಿ ಕಲ್ಪನಾಸ್ವರಗಳ ನಿರ್ಮಿತಿಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದವು.ವೈವಿಧ್ಯಮಯವಾಗಿದ್ದ ಟುಕುಡಾ (ಲಘು ರಚನೆಗಳು) ಗಳನ್ನು ಅವರು ನುಡಿಸಿ ತಮ್ಮ ಕಛೇರಿಯ ಆಕರ್ಷಣೆಯನ್ನು ಹೆಚ್ಚಿಸಿದರು. ಮಂದ್ರ ಸ್ಥಾಯಿಯಲ್ಲಿ ಮಣಿಕಂಠನ್ ಅವರು ತೊಡರಿದರಾದರೂ ಅದೊಂದು ಯುಗಳ ಕಛೇರಿಯಾದ್ದರಿಂದ ಅಷ್ಟಾಗಿ ವ್ಯತ್ಯಾಸಗಳುಂಟಾಗಲಿಲ್ಲ. ಹಾಗೆಯೇ ಡೋಲು ವಾದಕರ ಪಕ್ಕವಾದ್ಯ ಸಹಕಾರ ಮತ್ತು ತನಿ ಆವರ್ತನವೂ ಏರು ಪೇರುಗಳಿಂದೊಡಗೂಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.