ಭಾರತದಲ್ಲಿ ನಾವು ದೀಪಾವಳಿ ಆಚರಣೆಯ ಸಡಗರದಲ್ಲಿ ಮುಳುಗಿರುವ ಸಂದರ್ಭದಲ್ಲಿ ಯುರೋಪ್ ದೇಶಗಳಲ್ಲಿ ಕೂಡ ಬೆಳಕಿನ ಧ್ಯಾನ ನಡೆದಿರುತ್ತದೆ. ಅದು `ಹ್ಯಾಲೋವಿನ್~ ಸಂಭ್ರಮ. ಕಳೆದ ಸಲ ಯುರೋಪ್ಗೆ ಹೋದಾಗ, ಅಲ್ಲಿನ ನಗರಗಳಲ್ಲಿ `ಹ್ಯಾಲೋವಿನ್~ ಸಂಭ್ರಮ ಚಿಗುರೊಡೆದಿತ್ತು. ಅರೆರೆ, ನಮ್ಮ ದೀಪಾವಳಿಗೂ ಇದಕ್ಕೂ ಸಂಬಂಧ ಇದ್ದಂತಿದೆಯಲ್ಲ ಎಂದು ಅಚ್ಚರಿಯಾಯಿತು.

`ಹ್ಯಾಲೋವಿನ್~ ಹಬ್ಬದ ಆಚರಣೆ ನಡೆಯುವುದು ಪ್ರತಿ ವರ್ಷದ ಅಕ್ಟೋಬರ್ 31ರಂದು. ಅದರ ಮರುದಿನ, `ಆಲ್ ಸೇಂಟ್ಸ್ ಡೇ~ ಆಚರಿಸಲಾಗುತ್ತದೆ. ಇದು ಮೂಲತಃ `ಸೆಲ್ಟ್~ ಜನಗಳ ಸೋಯಿನ್ ಹಬ್ಬವಾಗಿದ್ದು, ಕ್ರೈಸ್ತರ ಪವಿತ್ರ ದಿನವಾದ `ಆಲ್ ಸೇಂಟ್ಸ್~ನಲ್ಲಿ ತನ್ನ ಬೇರು ಹೊಂದಿದೆ.

ಈ ಆಚರಣೆಯನ್ನು, ಜಾತ್ಯತೀತವಾಗಿ ದೊಡ್ಡ ಪ್ರಮಾಣದಲ್ಲಿ ಆಚರಿಸಲಾಗುತ್ತದೆ. ಇತಿಹಾಸಕಾರರು, ಜಾನಪದ ತಜ್ಞರು ಇದರ ಮೂಲವನ್ನು ರೋಮ್ನ ಪಮೊನಾ ದೇವತಾರಾಧನೆಯ ಹಬ್ಬವೆಂದು ಗುರುತಿಸುತ್ತಾರೆ. ಹೂವು, ಹಣ್ಣು, ಬೀಜಗಳ ಹಬ್ಬವಿದು. ಸತ್ತವರ ನೆನಪಿಗಾಗಿಯೂ ಇದನ್ನು ಆಚರಿಸಲಾಗುತ್ತದೆ.

ನಮ್ಮ ದೀಪಾವಳಿಯಂತೆ `ಹ್ಯಾಲೋವಿನ್~ ಕೂಡ ಬೆಳಕಿನ ಹಂಬಲದ ಹಬ್ಬ. ಅಕ್ಟೋಬರ್ ಕೊನೆಯಲ್ಲಿ ಹಗಲು ಕ್ರಮೇಣ ಕಡಿಮೆಯಾಗಿ, ರಾತ್ರಿ ದೀರ್ಘವಾಗಿರುತ್ತದೆ. ಯುರೋಪ್ನ ಹಲವೆಡೆ, ಮಧ್ಯಾಹ್ನ ಸುಮಾರು 3.30ಕ್ಕೆ ಕತ್ತಲಾಗಿ ಬೆಳಿಗ್ಗೆ 7.30ವರೆಗೂ ಕತ್ತಲಿರುತ್ತದೆ.

(ಬೇಸಿಗೆಯಲ್ಲಿ ರಾತ್ರಿ 8-9ರವರೆಗೂ ಬೆಳಕಿದ್ದು, ಬೆಳಿಗ್ಗೆ ಏಳೂವರೆಗೆ ಬೆಳಗಾಗುತ್ತದೆ). ಇದೇ ಸಮಯದಲ್ಲಿ ಚಳಿಯೂ ಹೆಚ್ಚಾಗತೊಡಗುತ್ತದೆ. ಹಿಮ ಸುರಿಯತೊಡಗುತ್ತದೆ.

ಚಳಿಯಿಂದಾಗಿ ಜನ ಸಾಯುತ್ತಾರೆ ಎಂಬ ಕಲ್ಪನೆ ಅಂದಿನ ಜನರಲ್ಲಿತ್ತು. ಕತ್ತಲು ಹೆಚ್ಚಾದಂತೆ ಆತ್ಮಗಳು ಜಾಗೃತಗೊಳ್ಳುತ್ತವೆ. ಕೆಟ್ಟ ಆತ್ಮಗಳಿಂದ ಸಾವು-ನೋವು ಉಂಟಾಗುತ್ತದೆ. ಆದರೆ, ಮನೆಯ ಹಿರಿಯರನ್ನು ಸ್ವಾಗತಿಸಿ ಅವರನ್ನು ಸನ್ಮಾನಿಸುವುದರಿಂದ ದುಷ್ಟ ಆತ್ಮಗಳನ್ನು ಓಡಿಸಬಹುದೆಂದು ಭಾವಿಸಿದ ಜನ, ಹಿರಿಯರ ನೆನಪಿನ ದಿನವಾಗಿ `ಹ್ಯಾಲೋವಿನ್~ ಹಬ್ಬವನ್ನು ರೂಪಿಸಿಕೊಂಡರು. ಈ ಹಬ್ಬದಲ್ಲಿ ಭೂತ, ದೆವ್ವ, ಪಿಶಾಚಿ, ಮಾಟಗಾತಿ, ಅಸ್ಥಿಪಂಜರದಂತಹ ದಿಗಿಲು ಹುಟ್ಟಿಸುವ ವೇಷಭೂಷಣಗಳನ್ನು ಧರಿಸುವ ಸಂಪ್ರದಾಯವೂ ಆರಂಭವಾಯಿತು.

ಹಬ್ಬದ ಹಿನ್ನೆಲೆ ಮತ್ತೂ ಇದೆ. ಚಳಿಗಾಲಕ್ಕಾಗಿ ಆಹಾರ ದಾಸ್ತಾನು ಮಾಡಲು ಪ್ರಾಣಿಗಳನ್ನು ಬೇಟೆಯಾಡಿ ಆಹಾರ ಸಂಗ್ರಹಿಸುತ್ತಿದ್ದರು. ಪ್ರಾಣಿಗಳ ಮೂಳೆ ಸುಟ್ಟು ಬೆಂಕಿ ಉರಿಸುತ್ತಿದ್ದರು. ಪ್ರತಿ ಮನೆಯವರೂ ಬೆಂಕಿ ಕುಂಡದಿಂದ ಬೆಂಕಿ ತಂದು ತಮ್ಮ ಒಲೆಯನ್ನು ಹಚ್ಚುತ್ತಿದ್ದರು. ಕೊಂದ ಪ್ರಾಣಿಗಳ ಮೂಳೆಯನ್ನು ಕುಂಡಗಳಿಗೆ ಹಾಕಿ ಜನರು ಮತ್ತು ಅವರ ಸಾಕಿದ ಪ್ರಾಣಿಗಳು ಕುಂಡಗಳ ಮಧ್ಯೆ ನಡೆಯುತ್ತಿದ್ದರು. ಇದು ಶುದ್ಧೀಕರಣದ ಭಾಗವಾಗಿ ನಡೆಯುತ್ತಿತ್ತು.

`ಹ್ಯಾಲೋವಿನ್~ ಎಂಬ ಪದ 16 ನೇ ಶತಮಾನದ ಇಂಗ್ಲಿಷ್ನಲ್ಲಿ ಬಳಕೆಯಲ್ಲಿರುವುದು ಕಂಡುಬಂದಿದೆ. ಇದು ಸ್ಕಾಟಿಷನ್ `ಆಲ್ ಹಾಲೋಸ್ ಈವ್~ - ಪೂರ್ಣ ಪವಿತ್ರ ದಿನ (ಆಲ್ ಹ್ಯಾಲೋಸ್ ಡೇ) ಹಿಂದಿನ ರಾತ್ರಿ- ಎಂಬ ಪದದಿಂದ ನಿಷ್ಪನ್ನಗೊಂಡದ್ದು. ಸ್ಕಾಟ್ಲೆಂಡ್ನಲ್ಲಿ ಯುವಕರು ಬಿಳಿ ಉಡುಪು ಧರಿಸಿ, ಮುಖಕ್ಕೆ ಕಪ್ಪುಬಣ್ಣ ಬಳಿದುಕೊಂಡು ಅಥವಾ ಕಪ್ಪು ಮುಸುಕು ಹಾಕಿಕೊಂಡು ಆತ್ಮಗಳನ್ನು ಪಂಜರದಲ್ಲಿ ಬಂಧಿಸಿದಂತೆ ನಟಿಸುತ್ತಾರೆ.

ಕಾಲಾಂತರದಲ್ಲಿ ಮಧ್ಯಯುಗದ ಪವಿತ್ರ ದಿನಗಳ ಸಂಪ್ರದಾಯ ಸಮಕಾಲೀನ ಸಂಸ್ಕೃತಿಗಳನ್ನು ಒಳಗೊಂಡು ಈ ಹಬ್ಬಕ್ಕೆ ಸಂಬಂಧಿಸಿದಂತೆ ಕುಶಲ ಕಲೆಗಳು ಮತ್ತು ಸಂಕೇತಗಳೂ ಹಲವಾರು ರೀತಿಯ ಆಟಗಳೂ ಸೇರ್ಪಡೆಗೊಂಡವು. ಟರ್ನಿಫ್ (ಸೀ ಮೂಲಂಗಿ) ಯಿಂದ ಆತ್ಮ, ಭೂತ, ಪಿಶಾಚಿಗಳನ್ನು ರಚಿಸಿ ಅದರಲ್ಲಿ ಮೇಣದ ಬತ್ತಿಗಳನ್ನು ಇಡುವ ಪದ್ಧತಿ ಲಾಟಿನ್ (ಲ್ಯಾಂಟ್ರನ್) ಆಗಿ ಪರಿವರ್ತನೆಯಾಯ್ತು.

ದುಷ್ಟ ಆತ್ಮಗಳನ್ನು ತೊಲಗಿಸುವುದಕ್ಕೊಸ್ಕರ ದೊಡ್ಡ ಕುಂಬಳಕಾಯಿಯಲ್ಲಿ ನಾನಾ ರೀತಿಯ ರಾಕ್ಷಸ ಆಕಾರ, ಭಯಾನಕ ಇಲ್ಲವೇ ಹಾಸ್ಯಮುಖ ಕೆತ್ತಿ ಲಾಟೀನ್ ಆಕಾರ ಮಾಡಿ ಅಥವಾ ಟರ್ನಿಫ್ಗಳನ್ನು ಕೊರೆದು ಟೊಳ್ಳು ಮಾಡಿ ಅದಕ್ಕೆ ಭೂತದ ಆಕಾರ ಕೊಟ್ಟು, ಅದರಲ್ಲಿ ಮೇಣದಬತ್ತಿಗಳನ್ನು ಹಚ್ಚಿ, ಕಿಟಕಿ ಬಾಗಿಲಿನಲ್ಲಿ ಇಡುತ್ತಾರೆ. ಇಲ್ಲವೇ ನೇತು ಹಾಕುತ್ತಾರೆ. ಈ ರೀತಿ ನಮ್ಮಲ್ಲಿ ಆಕಾಶಬುಟ್ಟಿಗಳನ್ನು ಹಾಕುತ್ತೇವೆ.

ಮಕ್ಕಳನ್ನು ಸತ್ಕರಿಸುವುದು ಹ್ಯಾಲೋವೀನ್ನ ಒಂದು ಆಚರಣೆ. ದಿಗಿಲು ಹುಟ್ಟಿಸುವ ಚಿತ್ರ-ವಿಚಿತ್ರ, ಭಯಾನಕ ವೇಷಭೂಷಣದ ಮಕ್ಕಳು ಲಾಟೀನ್ ಅಥವಾ ದೀಪ ಹಚ್ಚಿಕೊಂಡು ಮನೆಮನೆಗೆ ಹೋಗಿ ಹಾಡುತ್ತಾರೆ. ದೆವ್ವ ಭೂತಗಳ ಕಥೆಗಳನ್ನು ಹೇಳುತ್ತಾರೆ.

ಮನೆಯವರು ಅವರಿಗೆ ಚಾಕೊಲೇಟ್, ಮಿಠಾಯಿ, ಹಣ್ಣು, ಹಣ ಕೊಟ್ಟು ಸತ್ಕರಿಸುತ್ತಾರೆ. ಇದೇ ರೀತಿ, ನಮ್ಮಲ್ಲಿ ಕೆಲವೆಡೆ ಬಲಿಪಾಡ್ಯಮಿಯಿಂದ ಮೂರು ದಿನಗಳವರೆಗೆ `ಅಂಟಿಕೆ-ಪಂಟಿಕೆ~ ಆಚರಣೆ ನಡೆಯುತ್ತದೆ.

ಮೂರ್ನಾಲ್ಕು ಗ್ರಾಮದವರು ನಾಲ್ಕರಿಂದ ಆರುಜನದ ಒಂದೊಂದು ತಂಡಗಳಾಗಿ `ಅಂಟಿಕೆ-ಪಂಟಿಕೆ~ ಹಾಡಲು ಊರೂರಿಗೆ ಹೋಗುತ್ತಾರೆ. ಪ್ರಾರಂಭದ ದಿನದ ರಾತ್ರಿ ಆ ಸೀಮೆಯ ದೇವಸ್ಥಾನಕ್ಕೆ ಹೋಗಿ ಅಲ್ಲಿ ತಮ್ಮ ಹಣತೆಯನ್ನು ಹಚ್ಚಿಕೊಂಡು ಹಾದಿಯುದ್ದಕ್ಕೂ ಹಾಡುತ್ತಾ ಗ್ರಾಮಗಳಿಗೆ ಹೋಗುತ್ತಾರೆ.

ಬೆಳಕಿನ ಹಂಬಲ ಭೂಗೋಳದ ಎಲ್ಲೆಡೆಯೂ ಏಕತ್ರವಾಗಿದೆ ಎನ್ನುವುದಕ್ಕೆ ದೀಪಾವಳಿ ಹಾಗೂ `ಹ್ಯಾಲೋವಿನ್~ ಸಾಕ್ಷಿಯಂತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.