ಜೆಸಿಬಿ ಯಂತ್ರಗಳು ಮಣ್ಣನ್ನು ಆಕಾಶಕ್ಕೆ ಎತ್ತಿ ಎತ್ತಿ ಮತ್ತೆ ಭೂಮಿಗೆ ಸುರಿಯುತ್ತ ಇದ್ದಾಗ ಅದರ ಆರ್ಭಟವನ್ನು ನೋಡಿ ನಮಗೆ ಖುಷಿಯೋ ಖುಷಿ. ಓ, ಇನ್ನು ನಮ್ಮ ಬೀದಿಗಳ ಕಚ್ಚಾ ಮಣ್ಣಿನ ರಸ್ತೆಗಳು ಉದ್ಧಾರ ಆಗಿ ಬಿಡುತ್ತವೆ ಎಂದು.

ನಾವು ವಾಸವಾಗಿರುವುದು ಏರ್ಫೋರ್ಸ್ ಹಿಂಭಾಗದ ಒಂದು ಗುಡ್ಡದ ಹಿಂದೆ. ಎರಡು ಗುಡ್ಡ; ಒಂದು ಕೆರೆ. ಇದಕ್ಕೆ ಸೇರಿದ ಹಾಗೆ ಒಂದು ಹಳ್ಳಿ. ಇದೇ ಸಿಂಗಾಪುರ. ನಮ್ಮ ಹುಡುಗರು ಮೂವರು ಇಲ್ಲಿ ಸೈಟು ಕೊಂಡು ಮನೆ ಕಟ್ಟಿದ್ದಾರೆ ಎಂದಾಗ, ಒಂದಿಬ್ಬರು ವಿಷಯ ತಿಳಿಯದೆ ಆಶ್ಚರ್ಯ ವ್ಯಕ್ತಪಡಿಸಿದ್ದೂ ಉಂಟು. ‘ಪರವಾಗಿಲ್ಲ ಕಣ್ರೀ.. ಸಿಂಗಪುರಕ್ಕೆ ಹೋಗಿ ಮನೆಗಳನ್ನು ಕಟ್ಟಿದ್ದೀರಲ್ಲ. ಸಾಲವೋ ಸೋಲವೋ ಅದು ಬೇರೆ ಮಾತು. ಸಾಹಸ ಕಣ್ರೀ..’

ಅವರು ನೆನೆಸಿಕೊಂಡದ್ದು ಮಲೇಷ್ಯಾ ಸಿಂಗಪುರ. ಇದು ಆ ಸಿಂಗಪುರ ಅಲ್ಲ. ಯಶವಂತಪುರ - ಯಲಹಂಕ ರಸ್ತೆಯಲ್ಲಿ, ಎಂ. ಎಸ್. ರಾಮಯ್ಯನವರ ಅರಮನೆಗಳು ಬಿಇಎಲ್ ಕಾರ್ಖಾನೆ, ಏರ್ಫೋರ್ಸ್ - ಇವನ್ನೆಲ್ಲ ದಾಟಿದ ಮೇಲೆ, ಎಂ. ಎಸ್. ಪಾಳ್ಯ ಎಂದು ಒಂದು ಊರು ಇದೆ. ಅಲ್ಲಿಂದ ಪಶ್ಚಿಮಕ್ಕೆ ಒಂದೂಕಾಲು ಕಿಲೋಮೀಟರ್ ಒಳಗೆ ಹೋದರೆ ಸಿಗುವುದೇ ನಮ್ಮ ಸಿಂಗಾಪುರ. ನಮ್ಮ ಅರಮನೆಗಳು ಇಲ್ಲಿಯೇ ಇವೆ. ಇದು ಸಿಂಗನಪುರ - ಸಿಂಗಾಪುರ ಆಯಿತಂತೆ. ಸಂಶೋಧಕರು ಹಾಗೆ ಹೇಳುತ್ತಾರೆ.

ನಾವು ಇರುವುದು ಲಕ್ಕಪ್ಪ ಬಡಾವಣೆ. ಇಲ್ಲಿ ಐದು ಕ್ರಾಸುಗಳು ಇವೆ. ಹಿಂದೆ ಇದು ಸಪೋಟಾ ಮತ್ತು ದ್ರಾಕ್ಷಿ ತೋಟ ಆಗಿತ್ತಂತೆ. ಈಗ ಈ ನಗರದ ಒಂದು ಬಡಾವಣೆ ಆಗಿಬಿಟ್ಟಿದೆ. ಅಂಚೆ ಕಚೇರಿ, ಜೆರಾಕ್ಸ್, ಬ್ಯಾಂಕ್, ಉಡುಪಿ ಹೋಟೆಲ್ - ಹೀಗೆ ಮೂಲಸೌಲಭ್ಯಗಳು ಯಾವುದೂ ಇಲ್ಲದ ಜಾಗ. ಗಾಳಿ ಒಂದು ಮಾತ್ರ ಚೆನ್ನಾಗಿದೆ. ಇನ್ನೂ ಮೂರು ಚುನಾವಣೆಗಳು ನಡೆದ ಮೇಲೆ ಅವೆಲ್ಲ ಸೌಲಭ್ಯವು ಒದಗುತ್ತದೋ ಏನೋ? ಅಲ್ಲಿಯವರೆಗೆ ನಾವು ಇರುವುದಿಲ್ಲ; ಸತ್ತು ಹೋಗಿರುತ್ತೇವೆ. ನಮ್ಮ ಮಕ್ಕಳು ಹಣ್ಣು - ಮುದುಕರಾಗಿರುತ್ತಾರೆ. ಮೊಮ್ಮಕ್ಕಳಿಗೆ ಮೀಸೆ ಬಂದಿರುತ್ತದೆ.

ಇಂಥ ಪರಿಸ್ಥಿತಿಯಲ್ಲಿ ಈ ಪ್ರದೇಶಕ್ಕೂ ‘ಕಾವೇರಿ ನೀರು ಬರುತ್ತದೆ’ ಎಂದರೆ ಎಷ್ಟು ಸಂತೋಷ ಉಕ್ಕುತ್ತದೆ! ಅದರಲ್ಲೂ ‘ಕಾವೇರಿ’ ಎಂದರೆ ನನಗೆ ಎಂಥದೋ ಅಭಿಮಾನ. ‘ಕಾವೇರಿ: ಒಂದು ಚಿಮ್ಮು ಒಂದು ಹೊರಳು’ ಎನ್ನುವ ಪುಸ್ತಕವನ್ನೂ ನಾನು ಬರೆದು ಬಿಟ್ಟಿದ್ದೇನೆ. ಅಷ್ಟಲ್ಲದೆ ನನ್ನ ತಾಯಿಯ ಹೆಸರೂ ‘ಕಾವೇರಿ’ ಎಂದೇ.

ಈ ರಸ್ತೆಗಳಿಗೆ ಇನ್ನು ಮಣ್ಣು ತೋಡಿ ಪೈಪ್ ಜೋಡಿಸಬೇಕಷ್ಟೆ. ಈಗ ಈ ರಸ್ತೆಯ ಒಂದು ತುದಿ; ನಾಳೆ ಆ ರಸ್ತೆ, ಇಲ್ಲವೇ ಮಧ್ಯ ಭಾಗ - ಹೀಗೆ ಮಣ್ಣು ತೋಡುವಿಕೆ. ಒಂದು ರಸ್ತೆಯನ್ನು ಪೂರ್ಣ ಮಾಡುವ ಹಾಗಿಲ್ಲ.

ಕೆಲಸಗಳಿಗೆ ಹೋಗುವವರೇ ಇಲ್ಲಿ ಜಾಸ್ತಿ ಸಂಖ್ಯೆಯಲ್ಲಿ ಇರುವವರು. ಅವರು ಸಮಯಕ್ಕೆ ಹೋಗಿ ಸೇರಲು ಕಾರು, ಸ್ಕೂಟರ್ - ಇಂಥ ವಾಹನಗಳನ್ನು ಇಟ್ಟುಕೊಂಡಿರುತ್ತಾರೆ. ಈಗ ಅವುಗಳನ್ನು ಎಲ್ಲೆಲ್ಲಿಯೋ ನಿಲ್ಲಿಸಿ ಬರಬೇಕು; ಹೋಗಬೇಕು. ಈಗಂತೂ ಕೆಲಸಗಳಿಗೆ ಹೋಗುವವರಿಗೆ ನಿಮಿಷಗಳ ಕರಾರು ಲೆಕ್ಕ. ಬೆಳಿಗ್ಗೆ ಆರೂವರೆಗೆ ‘ಎದ್ದೇಳು ಮಂಜುನಾಥಾ..’ ಆರೂವರೆಯಿಂದ ಏಳರವರೆಗೆ ಅರ್ಧ ಗಂಟೆಯಲ್ಲಿ ಟಾಯ್ಲೆಟ್, ಷೇವಿಂಗ್, ಸ್ನಾನ, ಡ್ರೆಸ್ಸಿಂಗ್.. ಈ ಥರ. ಏಳರಿಂದ ಏಳು ಹದಿನೈದರವರೆಗೆ ಬೆಳಗಿನ ಉಪಾಹಾರ. ಮಧ್ಯಾಹ್ನಕ್ಕೆ ಡಬ್ಬಿ, ಆ ಮೇಲೆ ಓಡು. ಮೂವತ್ತು ಮೂವತ್ತೈದು ಕಿಲೋಮೀಟರ್ ದೂರದ ಕೆಲಸಗಳಿಗೆ ಹೋಗುವವರೂ ಇದ್ದಾರೆ.

ಸರಿ, ಮಣ್ಣನ್ನು ಎಳೆದು ಹಾಕಲು ನಾಲ್ಕು ದಿನ, ಪೈಪು ಜೋಡಿಸಲು ನಾಲ್ಕು ದಿನ. ಆ ಮೇಲೆ ಪೈಪ್ ಮುಚ್ಚಿ ಮಣ್ಣು ಮುಚ್ಚಲು ನಾಲ್ಕು ದಿನ - ಹೀಗೆ ಒಂದು ತಿಂಗಳೇ ಕಳೆದು ಹೋಯಿತು. ಅಷ್ಟರವರೆಗೆ ಮಣ್ಣು ರಾಶಿಯನ್ನು ಏರಿ, ದಾಟಿ, ಆ ಕಡೆ ಜಿಗಿಯಬೇಕೆಂದರೆ ಅದು ತೇನ್ಸಿಂಗ್ನಿಂದ ಮಾತ್ರ ಸಾಧ್ಯ.

ಒಂದು ರಸ್ತೆಯನ್ನು ಪೂರ್ಣವಾಗಿ ಮುಗಿಸಿ ಪೈಪು ಜೋಡಿಸಬಾರದೆ? ಇವರಿಗೇನು ಬಂತು ಧಾಡಿ? ಉಹೂಂ, ಹಾಗೆ ಮಾಡಲು ಸಾಧ್ಯವಿಲ್ಲವಂತೆ. ಎಲ್ಲ ರಸ್ತೆಗಳಲ್ಲಿಯೂ ಲೆಕ್ಕದಲ್ಲಿ ಚೂರು ಚೂರು ತೋರಿಸಿ, ಪೂರಾ ಬಿಲ್ ಪಾಸು ಮಾಡಿಸಿಕೊಳ್ಳಬೇಕಂತೆ. ಸರಿ, ಇಲಾಖೆಗಳ ಮುಖ್ಯಸ್ಥರು ಸುಮ್ಮನಿರುತ್ತಾರೆಯೆ? ಕೆಲಸ ಆಗದಿದ್ದರೂ ‘ಕೆಲಸ ಆಗಿದೆ’ ಎಂದು ಷರಾ ಬರೆದು ಸಹಿ ಮಾಡಬೇಕು. ಯಾರೋ ಬಲ್ಲವರು, ಅನುಭವಸ್ಥರು ಈ ಗುಟ್ಟನ್ನು ನನಗೆ ಬಿಡಿಸಿದರು.
ಆಮೇಲೆ ಮನೆಗಳವರ ನಲ್ಲಿ, ದೀಪ, ಟೆಲಿಫೋನ್ ವೈರುಗಳು ಭೂಮಿಯಲ್ಲಿ ಹುದುಗಿರುತ್ತವಷ್ಟೇ; ಏರ್ಪಾಡು ಮಾಡಿಕೊಂಡಿರುತ್ತಾರಷ್ಟೆ. ಈಗ ಎಷ್ಟೇ ಜಾಗೃತರಾಗಿದ್ದರೂ ಈ ಜೆಸಿಬಿ ಎನ್ನುವ ರಾಕ್ಷಸ ಯಂತ್ರ ಕಿತ್ತು ಒದರಿ ಹಾಕಿ ಬಿಡುತ್ತದೆ.

ಸರಿ, ಇಂಥವನ್ನೆಲ್ಲ ಸರಿಪಡಿಸಲು ಇಲಾಖೆಯ ಪ್ಲಂಬರ್ ಇದ್ದೇ ಇರುತ್ತಾನಷ್ಟೆ: ಇರಲೇಬೇಕು. ಆದರೆ ಆತ ಇಲ್ಲಿರುವುದೇ ಇಲ್ಲ. ಬೀಡಿ ಸೇದಿಕೊಂಡು ಇನ್ನೆಲ್ಲೋ ಅಗೆಯುವ ಜಾಗದಲ್ಲಿ ಹಾಯಾಗಿ ನಿಂತಿರುತ್ತಾನೆ.

ಮನೆಯವರೇ ತಮ್ಮ ತಮ್ಮ ಮನೆಗಳನ್ನು ಕಟ್ಟುವಾಗ ಒಬ್ಬ ಪ್ಲಂಬರನನ್ನು ನಿಯಮಿಸಿಕೊಂಡಿರುತ್ತಾರೆ. ಸಣ್ಣ ಪುಟ್ಟ ಕೆಲಸಗಳಿಗೂ ಅವನೇ ಬರಬೇಕು. ಫೋನ್ ಮಾಡಿ ಅವನನ್ನು ಕರೆಸಬೇಕು. ಹದಗೆಟ್ಟಿರುವುದನ್ನು ಸರಿಪಡಿಸುವುದು ಎಂದರೆ ಎಲ್ಲ ಮನೆಗಳವರಿಗೂ ಸಾವಿರ- ಸಾವಿರದೈನೂರು ಖರ್ಚು.
ಹೀಗೆ ಖರ್ಚುಗಳು ಯಾವುದೋ ರೂಪದಲ್ಲಿ ಜನರನ್ನು ಹಣ್ಣು ಮಾಡುತ್ತವೆ. ಮನೆಯ ಹೆಂಗಸರಂತೂ ಜೆಸಿಬಿ ಯಂತ್ರ ಹೋದ ಕಡೆಗಳತ್ತ ಓಡುತ್ತ ‘ಹೋ ಹೋ ಅಲ್ಲಿ ವೈರ್ ಇದೆ.. ಇಲ್ಲಿ ವೈರ್ ಇದೆ..’ ಎನ್ನುತ್ತ ಬೀದಿ ತುಂಬಾ ಓಡಾಡುವುದನ್ನು ನೋಡಲು ಎರಡು ಕಣ್ಣುಗಳೂ ಸಾಲದು. ಇನ್ನು ಗಂಡಸರೆಲ್ಲ ಇಂಥ ಕೆಲಸಗಳಿಗೆ ರಜೆ ಹಾಕಲು ಸಾಧ್ಯವೆ? ಹೆಂಗಸರೇ ನಿಭಾಯಿಸಿಕೊಳ್ಳಬೇಕು.

ಇವನ್ನೆಲ್ಲ ಸರಿಪಡಿಸಲು ಸಾಧ್ಯವಿಲ್ಲವೆ? ಒಂದು ರಸ್ತೆಗೆ ಪೈಪ್ ಜೋಡಿಸುವುದು ಆರು ತಿಂಗಳಾದರೆ ಐದು ರಸ್ತೆಗೆ ಎಷ್ಟು ತಿಂಗಳು? ಎಲ್ಲ ಇಲಾಖೆಗಳಿಂದಲೂ ಸಂಬಂಧಪಟ್ಟ ಸಚಿವರಿಗೆ ಒಂದೋ ಎರಡೋ ಸೂಟ್ಕೇಸುಗಳು ಪ್ರತಿ ತಿಂಗಳು ಹೋಗಲೇಬೇಕಂತೆ. ವ್ಯವಹಾರ ಬಲ್ಲವರು ಹೇಳುತ್ತಾರೆ. ಇದು ಉತ್ಪ್ರೇಕ್ಷೆ, ಅತಿರೇಕದ ಮಾತು ಎನ್ನುವುದಾದರೆ ನಮ್ಮ ಲೋಕಾಯುಕ್ತ ಸಂತೋಷ ಹೆಗ್ಡೆಯವರ ಮಾತನ್ನೇ ಸ್ವಲ್ಪ ಕೇಳೋಣ: ‘ಭ್ರಷ್ಟಾಚಾರದ ಉಗಮ ವಿಧಾನಸೌಧ ...’

‘ಈ ವ್ಯವಸ್ಥೆಯನ್ನು ಸರಿಪಡಿಸಲು ಸಾಧ್ಯವೇ ಇಲ್ಲ’ ಎಂದು ನಿರಾಶರಾಗುವುದು ಬೇಡ. ಹೇಗೂ ಚುನಾವಣೆ; ಬರುತ್ತದೆ; ನಡೆಯುತ್ತದೆ. ‘ನಿಮ್ಮ ಓಟು ನನಗೇ ಕೊಡಿ’ ಎಂದು ಹಲ್ಲು ಕಿರಿದು ಒಬ್ಬ ನಿಮ್ಮ ಮನೆಯ ಬಾಗಿಲಿಗೆ ಬಂದೇ ಬರುತ್ತಾನೆ. ‘ನೀನು ಎಂಥ ಘನಂದಾರಿ ಕೆಲಸ ಮಾಡಿದೀಯ!’ ಎಂದು ಮುಲಾಜಿಲ್ಲದೆ ಜನ ಕೇಳಬೇಕು. ‘ಓಟು’ ಎನ್ನುವ ದಿವ್ಯಾಸ್ತ್ರ ಜನರಲ್ಲಿ ಇದೆ. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕಷ್ಟನಷ್ಟಗಳನ್ನು ಅನುಭವಿಸಿದ ನಮ್ಮ ಹಿರಿಯರು, ಅಂಥ ಅಸ್ತ್ರವನ್ನು ನಮಗೆ ಒದಗಿಸಿ ಕೊಟ್ಟಿದ್ದಾರೆ. ಬರೇ ಕಥೆ, ಕಾದಂಬರಿ, ಕವನ, ಕ್ಯಾಸೆಟ್ಟು ಇವಿಷ್ಟೆ ಸಾಲದು. ಜನರ ಮಧ್ಯೆ ಇರುವವರೂ ಜನರಿಗೆ ಇಂಥ ತಿಳಿವನ್ನು ಹೆಚ್ಚಿಸಬೇಕು; ಹೆಚ್ಚಿಸುವ ಪ್ರಯತ್ನ ಮಾಡಬೇಕು. ಆಗ ಪರಿಸ್ಥಿತಿ ಸುಧಾರಿಸಲು ಸಾಧ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.