ಸೋಮವಾರ, ಜೂನ್ 14, 2021
26 °C

ಇಲ್ಲಿ ಗೆದ್ದಿದ್ದು :ಈಜು ಮೇಲಿನ ಪ್ರೀತಿ

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಹಣಕಾಸಿನ ಸಮಸ್ಯೆ ಕಾರಣ ಈಜು ತೊರೆಯಲು ನಿರ್ಧರಿಸಿದ್ದನು ಈ ಹುಡುಗ...!

ಏಕೆಂದರೆ ವಿದೇಶದಲ್ಲಿ ನಡೆಯಲಿರುವ ಚಾಂಪಿಯನ್‌ಷಿಪ್‌ಗಳಲ್ಲಿ ಪಾಲ್ಗೊಳ್ಳಲು ಈ ಹುಡುಗನಿಗೆ ಆರಂಭದ ದಿನಗಳಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಈ ಕಾರಣದಿಂದ ಬೇಸರಗೊಂಡು ಈಜು ಕ್ಷೇತ್ರದಿಂದಲೇ ದೂರ ಉಳಿಯಲು ತೀರ್ಮಾನಿಸಿದ್ದನು.ಆದರೆ ಈಜು ಸ್ಪರ್ಧಾ ಕ್ಷೇತ್ರದಲ್ಲಿನ ಆಸಕ್ತಿ ಹಾಗೂ ಪ್ರೀತಿ ಅದಕ್ಕೆ ಅವಕಾಶ ನೀಡಲಿಲ್ಲ. ಕಷ್ಟದ ಅಲೆಗಳ ವಿರುದ್ಧವೇ ಈಜಲು ಈ ಹುಡುಗ ಅಂದು ತೀರ್ಮಾನಿಸಿದ. ಇದು ಆರಂಭದ ದಿನಗಳಲ್ಲಿ 19ರ ಹರೆಯದ ಹುಡುಗನೊಬ್ಬ ಎದುರಿಸಿದ ಅತ್ಯಂತ ಕಷ್ಟದ ಕ್ಷಣಗಳು.ಆ ಕಷ್ಟಗಳ ಬೆನ್ನಟ್ಟಿ ಯಶಸ್ವಿಯಾದ ಅದೇ ಹುಡುಗ ಈಗ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದಾನೆ. ಈ ಮೂಲಕ ತಾನು ಕಂಡ ಕನಸನ್ನು ನಿಜ ಮಾಡಿದ್ದಾನೆ. ಆತನ ಹೆಸರು ಆ್ಯರನ್ ಡಿಸೋಜಾ.ಕ್ರೀಡೆಯಲ್ಲಿ ದೇಶವನ್ನು ಪ್ರತಿನಿಧಿಸಬೇಕು ಎಂಬುದು ಪ್ರತಿಯೊಬ್ಬ ಹುಡುಗರ ಕನಸು. ಇದು ಪೋಷಕರ ಆಸೆ ಕೂಡ. ಅದರಲ್ಲೂ ಒಲಿಂಪಿಕ್ಸ್‌ನಂಥ ಉನ್ನತ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದಕ್ಕಿಂತ ಮತ್ತೊಂದು ಅದ್ಭುತ ಕ್ಷಣ ಯಾವುದಿದೆ ಹೇಳಿ?ಹೌದು, ಪ್ರತಿಭಾವಂತ ಈಜುಪಟು ಕರ್ನಾಟಕದ ಆ್ಯರನ್ ಲಂಡನ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ. ವಿಶೇಷವೆಂದರೆ ಈ ಕ್ಷಣವನ್ನು ಆ್ಯರನ್ ಅವರ ತಂದೆ ಕೂಡ ಕಣ್ತುಂಬಿಕೊಂಡರು. ಇಬ್ಬರ ಪಾಲಿಗೂ ಕನಸು ನನಸಾದ ಖುಷಿ. 43ನೇ ಸಿಂಗಪುರ ರಾಷ್ಟ್ರೀಯ ಏಜ್ ಗ್ರೂಪ್ ಈಜು ಚಾಂಪಿಯನ್‌ಷಿಪ್‌ನ 200 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಅವರು ಗಮನಾರ್ಹ ಪ್ರದರ್ಶನ ತೋರಿ ಈ ಸಾಧನೆ ಮಾಡಿದ್ದಾರೆ.ಬಸವನಗುಡಿ ಈಜು ಕೇಂದ್ರ (ಬಿಎಸಿ)ದಲ್ಲಿ ತರಬೇತಿ ಪಡೆಯುತ್ತಿರುವ ಡಿಸೋಜಾ ಈ ದೂರವನ್ನು 1 ನಿಮಿಷ 50.89 ಸೆಕೆಂಡ್‌ಗಳಲ್ಲಿ ತಲುಪಿದರು. ಈ ಮೂಲಕ ಒಲಿಂಪಿಕ್ಸ್‌ನ `ಬಿ~ ದರ್ಜೆಯ ಅರ್ಹತಾ ಮಟ್ಟ (ಒಲಿಂಪಿಕ್ಸ್ ಆಹ್ವಾನ ಸಮಯ) ಮುಟ್ಟಿದರು.`ಈ ಸಾಧನೆ ಮಾಡಿರುವುದಕ್ಕೆ ನನಗೆ ತುಂಬಾ ಖುಷಿಯಾಗುತ್ತಿದೆ. ಆದರೆ ಮತ್ತಷ್ಟು ಕಠಿಣ ಪ್ರಯತ್ನ ಹಾಕಬೇಕಾಗಿದೆ. ಈ ಸಾಧನೆಗೆ ಕೋಚ್ ಪ್ರದೀಪ್ ಹಾಗೂ ಪೋಷಕರು ಕಾರಣ~ ಎಂದು ಆ್ಯರನ್ ಪ್ರತಿಕ್ರಿಯಿಸಿದ್ದಾರೆ. ಬಿಎಸಿನಲ್ಲಿ ತರಬೇತಿ ಪಡೆಯುತ್ತಿರುವ ಸೌರಭ್ ಸಾಂಗ್ವೇಕರ್ ಕೂಡ 1500 ಮೀ. ಫ್ರೀಸ್ಟೈಲ್ ವಿಭಾಗದಲ್ಲಿ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.  ಅವರಿಗಿನ್ನೂ 17 ವರ್ಷ.ವಿಶೇಷವೆಂದರೆ ಇವರಿಬ್ಬರ ಈ ಸಾಧನೆಗೆ ರಾಷ್ಟ್ರೀಯ ಕೋಚ್ ಪ್ರದೀಪ್ ಕುಮಾರ್ ಪ್ರಮುಖ ಕಾರಣ. ಇವರ ಮಾರ್ಗದರ್ಶನದಲ್ಲಿ ಈ ಹುಡುಗರು ತರಬೇತಿ ಪಡೆಯುತ್ತಿದ್ದಾರೆ. `ಆ್ಯರನ್  ಹಾಗೂ ಸಾಂಗ್ವೇಕರ್ ಕಠಿಣ ಪ್ರಯತ್ನ ಹಾಕುತ್ತಾರೆ. ಅವರ ಮೇಲೆ ನಾನು ಭರವಸೆ ಇಟ್ಟಿದ್ದೇನೆ. ಮತ್ತಷ್ಟು ಸಾಧನೆಯನ್ನು ಅವರಿಂದ ನಿರೀಕ್ಷಿಸುತ್ತೇನೆ~ ಎಂದು ಪ್ರದೀಪ್ `ಪ್ರಜಾವಾಣಿ~ಗೆ ತಿಳಿಸಿದರು.`ಈಗ ಇವರೆಲ್ಲಾ ಉತ್ತಮ ಪ್ರದರ್ಶನ ತೋರುತ್ತಿದ್ದಾರೆ. ಈ ಟೂರ್ನಿಗೆ ಮುನ್ನ ಕಠಿಣ ಅಭ್ಯಾಸ ನಡೆಸಿದ್ದರು. ಇವರೀಗ `ಬಿ~ ದರ್ಜೆಯ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್ಸ್‌ಗೆ ಇನ್ನೂ ಸಮಯವಿದೆ. ಅಷ್ಟರಲ್ಲಿ ತಮ್ಮ ಸಮಯವನ್ನು ಮತ್ತಷ್ಟು ಸುಧಾರಿಸಿಕೊಳ್ಳಲು ಅವಕಾಶವಿದೆ. ನಾವಿನ್ನೂ ಹಲವು ಕೂಟಗಳಲ್ಲಿ ಪಾಲ್ಗೊಳ್ಳುತ್ತಿದ್ದೇವೆ~ ಎಂದು ಅವರು ನುಡಿಯುತ್ತಾರೆ.ಇಂತಹವೊಂದು ಯಶಸ್ಸಿನ ಅಲೆ ಎಬ್ಬಿಸಲು ಕಾರಣವಾಗಿರುವುದು ಬಸವನಗುಡಿ ಈಜು ಕೇಂದ್ರದಲ್ಲಿ ನಡೆಯುತ್ತಿರುವ ಕ್ರೀಡಾ ಚಟುವಟಿಕೆಗಳು. ದೇಶದ ಪ್ರಸಿದ್ಧ ಈಜು ಕೇಂದ್ರಗಳಲ್ಲಿ ಒಂದೆನಿಸಿರುವ `ಬಿಎಸಿ~ ಈ ವರ್ಷ 25ನೇ ಹುಟ್ಟು ಹಬ್ಬದ ಸಂಭ್ರಮದಲ್ಲಿದೆ.ಈ ಸಂದರ್ಭದಲ್ಲಿ ಈ ಕೇಂದ್ರಕ್ಕೆ ಮತ್ತಷ್ಟು ಮೆರುಗು ಬಂದಿದೆ. ಕಾರಣ ಈ ಕೇಂದ್ರದ ಆ್ಯರನ್ ಹಾಗೂ ಸಾಂಗ್ವೇಕರ್ ಅವರ ಸಾಧನೆ. ಈ ಕೇಂದ್ರದ ಈಜುಪಟುಗಳಾದ ನಿಶಾ ಮಿಲೆಟ್ ಹಾಗೂ ರೆಹಾನ್ ಪೂಂಚಾ ಕೂಡ ಈ ಹಿಂದೆ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡಿದ್ದರು.

ಈಜುವಿನ ಮೇಲಿನ ಆಸಕ್ತಿಯನ್ನು ಹೇಗೆ ಹೆಚ್ಚಿಸಬಹುದು ಎಂಬುದಕ್ಕೆ ಈ ಕೇಂದ್ರವೇ ಸಾಕ್ಷಿ. ಈ ಕೇಂದ್ರದ ಮುಖ್ಯ ಕೋಚ್ ಪ್ರದೀಪ್.ಇವತ್ತು ಬೆಂಗಳೂರಿನಲ್ಲಿರುವಷ್ಟು ಸೌಲಭ್ಯ ಭಾರತದ ಮತ್ತೊಂದು ನಗರದಲ್ಲಿಲ್ಲ. ಹಾಗಾಗಿ ಈಜುಪಟುಗಳು ಬೇರೆ ರಾಜ್ಯಗಳಿಂದಲೂ ಇಲ್ಲಿಗೆ ಆಗಮಿಸಿ ಅಭ್ಯಾಸ ನಡೆಸುತ್ತಿದ್ದಾರೆ. ಇಲ್ಲಿರುವ ಕೋಚಿಂಗ್ ಶೈಲಿಯನ್ನು ಮತ್ತೊಂದು ರಾಜ್ಯದಲ್ಲಿ ಕಾಣಲು ಅಸಾಧ್ಯ.ಪೋಷಕರು ಕೂಡ ಈಜುವಿನತ್ತ ಹೆಚ್ಚು ಗಮನ ಹರಿಸಲು ತಮ್ಮ ಮಕ್ಕಳನ್ನು ಹುರಿದುಂಬಿಸುತ್ತಿದ್ದಾರೆ. ಶಿಬಿರಕ್ಕೆಂದು ಬೇರೆ ಬೇರೆ ಜಿಲ್ಲೆಗಳಿಂದಲೂ ಮಕ್ಕಳನ್ನು ಉದ್ಯಾನ ನಗರಿಗೆ ಕಳುಹಿಸಿ ಕೊಡುತ್ತಿದ್ದಾರೆ.  `ಈಜು ಕ್ರೀಡೆಯಲ್ಲಿ ರಾಷ್ಟ್ರಕ್ಕೆ ಈ ಕೇಂದ್ರ ಅಪಾರ ಕೊಡುಗೆ ನೀಡಿದೆ. ನಾನು ಬಿಎಸಿಯೊಂದಿಗೆ ಬೆಳೆಯುತ್ತಿದ್ದೇನೆ~ ಎಂದು ಪ್ರದೀಪ್ ಹೆಮ್ಮೆಯಿಂದ ಹೇಳುತ್ತಾರೆ.

ಜುಲೈ 27ರಂದು ಆರಂಭವಾಗಲಿರುವ ಲಂಡನ್ ಒಲಿಂಪಿಕ್ಸ್‌ಗೆ ಭಾರತದಿಂದ ಇದುವರೆಗೆ ನಾಲ್ಕು ಮಂದಿ ಈಜುಪಟುಗಳು ಅರ್ಹತೆ ಗಿಟ್ಟಿಸಿದ್ದಾರೆ.

 

ಇನ್ನಿಬ್ಬರೆಂದರೆ ವೀರ್‌ಧವಳ್ ಖಾಡೆ (50 ಮೀ. ಹಾಗೂ 100 ಮೀ. ಫ್ರೀಸ್ಟೈಲ್) ಮತ್ತು ಸಂದೀಪ್ ಸೆಜ್ವಾಲ್ (100 ಮೀ. ಹಾಗೂ 200 ಮೀ. ಬ್ರೆಸ್ಟ್ ಸ್ಟ್ರೋಕ್). ಖಾಡೆ ಹಾಗೂ ಸೆಜ್ವಾಲ್ ಕೂಡ ಪ್ರದೀಪ್ ಮಾರ್ಗದರ್ಶನದಲ್ಲಿ ಬಿಎಸಿಯಲ್ಲಿ ಒಲಿಂಪಿಕ್ಸ್‌ಗಾಗಿ ತರಬೇತಿ ನಿರತರಾಗಿದ್ದಾರೆ. ಆದರೆ ಈ ನಾಲ್ಕೂ ಮಂದಿ `ಎ~ ದರ್ಜೆಯ ಅರ್ಹತಾ ಮಟ್ಟ ತಲುಪಬೇಕಾಗಿದೆ.ಅಂತರರಾಷ್ಟ್ರೀಯ ಈಜು ಸಂಸ್ಥೆ `ಫಿನಾ~ ಲಂಡನ್ ಒಲಿಂಪಿಕ್ಸ್‌ಗೆ ಒಟ್ಟು 900 ಈಜುಪಟುಗಳಿಗೆ ಅವಕಾಶ ನೀಡಲು ನಿರ್ಧರಿಸಿದೆ. ಹಾಗಾಗಿ `ಬಿ~ ದರ್ಜೆ ಅರ್ಹತೆ ಗಿಟ್ಟಿಸಿರುವ ಭಾರತದ ಈಜುಪಟುಗಳು ಒಲಿಂಪಿಕ್ಸ್ ಪ್ರವೇಶವನ್ನು ಖಚಿತಪಡಿಸಿಕೊಳ್ಳಲು ಜುಲೈನವರೆಗೆ ಕಾಯಬೇಕು.ಅದರೊಳಗೆ `ಎ~ ದರ್ಜೆ ಅರ್ಹತೆ ಗಿಟ್ಟಿಸಿದರೆ ನೇರ ಪ್ರವೇಶ ಪಡೆಯಲಿದ್ದಾರೆ. ಹಾಗಾಗಿ ಇವರೆಲ್ಲಾ ಈಗ `ಎ~ ದರ್ಜೆಯ ಪ್ರವೇಶದ ಮೇಲೆ ಕಣ್ಣಿಟ್ಟಿದ್ದಾರೆ.ಅದೇನೇ ಇರಲಿ, ಈ ಹುಡುಗರ ಸಾಧನೆಗೆ ಶಹಬ್ಬಾಸ್ ಹೇಳಲೇಬೇಕು.                      

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.