ಗುರುವಾರ , ಮೇ 13, 2021
35 °C

ಉತ್ತರ ಭಾರತದಲ್ಲಿ ಮಳೆ: 138 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ಲಖನೌ/ಭೋಪಾಲ್/ಶಿಮ್ಲಾ (ಪಿಟಿಐ/ಐಎಎನ್‌ಎಸ್): ಉತ್ತರ ಭಾರತದಲ್ಲಿ ಭಾರಿ ಮಳೆಗೆ ಮೃತರ ಸಂಖ್ಯೆ 138ನ್ನು ತಲುಪಿದೆ. ಪ್ರಧಾನಮಂತ್ರಿ ಮನಮೋಹನಸಿಂಗ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಪ್ರವಾಹಪೀಡಿತ ಕೇದಾರನಾಥ ಕ್ಷೇತ್ರಕ್ಕೆ ಭೇಟಿ ನೀಡಿ ವೈಮಾನಿಕ ಸಮೀಕ್ಷೆ ನಡೆಸಿದ್ದಾರೆ.11 ಸಾವಿರ ಮಂದಿ ಯಾತ್ರಾರ್ಥಿಗಳನ್ನು ರಕ್ಷಿಸಲಾಗಿದೆ. ಆದರೆ ಇನ್ನೂ 62 ಸಾವಿರ ಮಂದಿ ಅಪಾಯದಲ್ಲೇ ಸಿಲುಕಿದ್ದಾರೆ.ಭಾರತ-ಟಿಬೆಟ್ ಗಡಿಭದ್ರತಾ ಪಡೆ,  ರಾಷ್ಟ್ರೀಯ ವಿಕೋಪ ಪರಿಹಾರ ಪಡೆಯ 14 ತಂಡಗಳು ಹಾಗೂ ಸೇನೆ ರಕ್ಷಣಾ ಕಾರ್ಯದಲ್ಲಿ ನಿರತವಾಗಿವೆ ಎಂದು ಗೃಹ ಸಚಿವ ಸುಶೀಲ್‌ಕುಮಾರ್ ಶಿಂಧೆ ಅವರು ತಿಳಿಸಿದ್ದಾರೆ.ಪ್ರಧಾನಿ ಅವರ ಸೂಚನೆ ಮೇರೆಗೆ 12 ಹೆಲಿಕಾಪ್ಟರ್‌ಗಳನ್ನು ರಕ್ಷಣಾ ಕಾರ್ಯಕ್ಕೆ ನಿಯೋಜಿಸಲಾಗಿದೆ ಎಂದು ಅವರು ಹೇಳಿದ್ದಾರೆ.ಬುಧವಾರ ಮಳೆಯ ಪ್ರಮಾಣ ಕೊಂಚ ಇಳಿದಿರುವುದರಿಂದ ರಕ್ಷಣಾ ಕಾರ್ಯ ಚುರುಕಿನಿಂದ ಸಾಗಿದೆ.ಸುಮಾರು 500 ರಸ್ತೆಗಳು ಹಾನಿಗೀಡಾಗಿದ್ದು, ನೂರಾರು ಕಟ್ಟಡಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ ಎಂದು ಹೇಳಲಾಗಿದೆ.ಡೆಹ್ರಾಡೂನ್‌ನಲ್ಲಿರುವ ಅರೆಸೇನಾಪಡೆಯ ಸಶಸ್ತ್ರ ಸೀಮಾ ಬಲದ ತರಬೇತಿ ಕೇಂದ್ರವೂ ಕೂಡ ಭಾರಿ ಮಳೆಗೆ ಹಾನಿಗೀಡಾಗಿದೆ. ಸುಮಾರು 100 ಕೋಟಿ ರೂಗಳಷ್ಟು ನಷ್ಟ ಉಂಟಾಗಿದೆ ಎಂದು ಇದರ ನಿರ್ದೇಶಕರು ತಿಳಿಸಿದ್ದಾರೆ. ಸದ್ಯ ಕೇಂದ್ರದ ಎಲ್ಲಾ ತರಬೇತಿಗಳನ್ನು ಮೊಟಕುಗೊಳಿಸಲಾಗಿದ್ದು, ಶಿಬಿರಾರ್ಥಿಗಳನ್ನು ಅವರವರ ಸ್ಥಳಗಳಿಗೆ ಕಳುಹಿಸಲಾಗಿದೆ.ಈ ಮಧ್ಯೆ ಉತ್ತರಾಖಂಡದಲ್ಲಿ ಸಂಭವಿಸಿರುವ ಜಲಪ್ರಳಯಕ್ಕೆ ತಮ್ಮ ಸಹಾನೂಭೂತಿ ವ್ಯಕ್ತಪಡಿಸಿರುವ ಉತ್ತರಪ್ರದೇಶ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು 25 ಕೋಟಿ ರೂಗಳ ಪರಿಹಾರ ನಿಧಿಯನ್ನು ಉತ್ತರಾಖಂಡಕ್ಕೆ ನೀಡುವುದಾಗಿ ಪ್ರಕಟಿಸಿದ್ದಾರೆ. ಮಧ್ಯಪ್ರದೇಶ ಸರ್ಕಾರವೂ ನೆರವಿಗೆ ಧಾವಿಸಿದ್ದು, ಉತ್ತರಾಖಂಡಕ್ಕೆ 5 ಕೋಟಿ ರೂಗಳನ್ನು ನೀಡುವುದಾಗಿ ತಿಳಿಸಿದೆ.ಹಿಮಾಚಲಪ್ರದೇಶದಲ್ಲಿರುವ ದೇಶದ ಅತಿದೊಡ್ಡ ಜಲವಿದ್ಯುತ್ ಘಟಕವು ಸತತ ನಾಲ್ಕನೆಯ ದಿನವಾದ ಬುಧವಾರವೂ ಕಾರ್ಯನಿರ್ವಹಿಸಲಾಗದೆ ಸ್ಥಗಿತಗೊಂಡಿದೆ. ಸಟ್ಲೇಜ್ ನದಿ ಭಯಂಕರ ಸ್ವರೂಪ ತಾಳಿ ಭೋರ್ಗರೆಯುತ್ತಿರುವುದು ಇದಕ್ಕೆ ಕಾರಣವಾಗಿದ್ದು, ನದಿಯಲ್ಲಿ ನೀರು ಕೊಂಚವಾದರೂ ಇಳಿಯದ ಹೊರತು ವಿದ್ಯುತ್ ಉತ್ಪಾದನೆ ಸಾಧ್ಯವಾಗದು ಎಂದು ತಜ್ಞರು ಹೇಳುತ್ತಿದ್ದಾರೆ. ಹೀಗಾಗಿ ಪಂಜಾಬ್, ಹರಿಯಾಣ ಹಾಗೂ ನವದೆಹಲಿಗಳ ವಿದ್ಯುತ್ ಸರಬರಾಜುವಿನಲ್ಲಿ ಭಾರಿ ವ್ಯತ್ಯಯ ಕಂಡು ಬಂದಿದೆ.

ಯಮುನಾ ನದಿಯಲ್ಲಿ ಕೆಸರು ನೀರಿನ   ಪ್ರವಾಹವು ಮೇರೆ ಮೀರಿದ್ದು, ನವದೆಹಲಿಯ 145 ವರ್ಷಗಳಷ್ಟು ಹಳೆಯ ರೈಲು ಸೇತುವೆ ಅಪಾಯದಂಚಿನಲ್ಲಿದೆ. ಪ್ರದೇಶದಲ್ಲಿನ ಸುಮಾರು 2 ಸಾವಿರ ಕುಟುಂಬಗಳನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.