ಭಾನುವಾರ, ಆಗಸ್ಟ್ 1, 2021
28 °C

ಉದಿತ್ ಮಿಂಚಿನ ಆಟ; ಗೌತಮ್ ಶತಕ...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಉದಿತ್ ಮಿಂಚಿನ ಆಟ; ಗೌತಮ್ ಶತಕ...

ಕಾನ್ಪುರ: ರಣಜಿ ಟ್ರೋಫಿ ಸೂಪರ್ ಲೀಗ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ’ಅಮೂಲ್ಯ’ ಶತಕ ಗಳಿಸಿದ ಗೌತಮ್ ಮತ್ತು ಸಿಕ್ಕ ‘ಅವಕಾಶ’ ಬಳಸಿಕೊಂಡ ಉದಿತ್ ಮಿಂಚಿನ ಬ್ಯಾಟಿಂಗ್‌ನಿಂದಾಗಿ ಕರ್ನಾಟಕ 416 ರನ್ನುಗಳ ಉತ್ತಮ ಮೊತ್ತ ಗಳಿಸಿತು. ನಂತರ ಬ್ಯಾಟಿಂಗ್ ಆರಂಭಿಸಿದ ಮೊಹಮ್ಮದ್ ಕೈಫ್ ಬಳಗ 57 ಓವರುಗಳಲ್ಲಿ 5 ವಿಕೆಟ್ ಕಳೆದು ಕೊಂಡು 163 ರನ್ ಗಳಿಸಿದೆ. ಕರ್ನಾಟಕ ದ ಫೀಲ್ಡರ್‌ಗಳು ಬಿಟ್ಟ ಮೂರು ‘ಕ್ಯಾಚ್’ಗಳಿಂದಾಗಿ ಆತಿಥೇಯ ತಂಡ ಹೋರಾಟವನ್ನು ಇನ್ನೂ ಉಳಿಸಿಕೊಂಡಿದೆ.ಉತ್ತರ ಪ್ರದೇಶಕ್ಕೆ ಫಾಲೋಆನ್ ತಪ್ಪಿಸಿಕೊಳ್ಳಲು ಇನ್ನೂ 102 ರನ್ನುಗಳು ಬೇಕು.ಬುಧವಾರ 90 ಓವರುಗಳಲ್ಲಿ 7 ವಿಕೆಟ್‌ಗಳಿಗೆ 274 ರನ್ನುಗಳಿಸಿದ್ದ ಕರ್ನಾಟಕ ಗುರುವಾರ ಬೆಳಿಗ್ಗೆ ಎರಡು ತಾಸಿನಲ್ಲಿ 14 ರನ್ನುಗಳನ್ನು ಸೇರಿಸಲು ಗೌತಮ್ (115; 185ಎಸೆತ, 12ಬೌಂಡರಿ, 286ನಿಮಿಷ) ಮತ್ತು ಮಿಂಚಿನ ಬ್ಯಾಟಿಂಗ್ ಪ್ರದರ್ಶಿಸಿದ ಉದಿತ್ ಪಟೇಲ್ (72; 96ಎಸೆತ, 12ಬೌಂಡರಿ, 1ಸಿಕ್ಸರ್) ಪಾಲುದಾರಿಕೆಯಿಂದ ಸಾಧ್ಯವಾಯಿತು.ಗೌತಮ್ ಶತಕದ ಗಮ್ಮತ್ತು: ಬುಧವಾರ ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ್ದ ಕರ್ನಾಟಕ 135 ರನ್ನುಗಳಿಗೆ 6 ವಿಕೆಟ್ ಕಳೆದುಕೊಂಡಾಗ ಕ್ರೀಸ್‌ಗೆ ಬಂದಿದ್ದ ಗೌತಮ್ 62 ರನ್ ಗಳಿಸಿ ಬ್ಯಾಟಿಂಗ್ ಉಳಿಸಿಕೊಂಡಿದ್ದರು. ಇನ್ನೊಂದು ತುದಿಯಲ್ಲಿ 13 ರನ್ ಗಳಿಸಿದ್ದ ಸುನೀಲ್ ಜೋಶಿ ತಮ್ಮ ಖಾತೆಗೆ ಮತ್ತೆ 13 ರನ್ ಸೇರಿಸಿ ಭುವನೇಶ್ವರಕುಮಾರ ಅವರ ಎಲ್‌ಬಿಡಬ್ಲ್ಯು ಬಲೆಗೆ ಬಿದ್ದಾಗ ತಂಡದ ಮೊತ್ತ 290 ಆಗಿತ್ತು. ಬೆನ್ನುನೋವಿರುವ ಅಭಿಮನ್ಯು ಮಿಥುನ್ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿದ್ದ ಉದಿತ್ ಬ್ರಿಜೇಶ್ ಪಟೇಲ್ ಕ್ರೀಸ್‌ಗೆ ಬಂದವರೇ ಸ್ಕೋರರ್ ಗಳಿಗೆ ಕೈತುಂಬಾ ಕೆಲಸ ಕೊಟ್ಟರು!ಮುನ್ನೂರರ ಮೊತ್ತದೊಳಗೆ ಕರ್ನಾ ಟಕವನ್ನು ಕಟ್ಟಿಹಾಕುವ ಕೈಫ್ ಯೋಜನೆಯನ್ನು ಇವರಿಬ್ಬರೂ ನುಚ್ಚುನೂರು ಮಾಡಿದರು. ಉತ್ತಮ ಎಸೆತಗಳನ್ನು ಗೌರವಿಸಿ, ಕೆಟ್ಟ ಎಸೆತಗಳಿಗೆ ಬೌಂಡರಿಯ ದಾರಿ ತೋರಿಸುತ್ತಿದ್ದ ಗೌತಮ್ ಕಲಾತ್ಮಕವಾಗಿ ಆಡುತ್ತಿದ್ದರು. ಕವರ್‌ಡ್ರೈವ್, ಸ್ವೀಪ್, ಡ್ರೈವ್‌ಗಳ ಮೂಲಕ ರನ್ ಗಳಿಸುತ್ತಿದ್ದ ಅವರ ಆಟ ಚಿತ್ತಾಕರ್ಷಕ.ಇನ್ನೊಂದು ಕಡೆ ಚೆಂಡಿನ ಮುಖ ನೋಡದೇ ಚಚ್ಚುವ ಕೆಲಸವನ್ನು ಉದಿತ್ ಆರಂಭಿಸಿದ್ದರು. ಪ್ರವೀಣ್ ಗುಪ್ತಾ ಎಸೆತವನ್ನು ಲಾಂಗ್ ಆಫ್‌ಗೆ ಉದಿತ್ ಎತ್ತಿದ ಸಿಕ್ಸರ್ ಪ್ರೇಕ್ಷಕರ ಚಪ್ಪಾಳೆ ಗಿಟ್ಟಿಸಿತು. ಗೌತಮ್ 90 ರನ್ ಗಳಿಸಿದ್ದಾಗಲೇ ಬಲಗೈ ಬ್ಯಾಟ್ಸ್‌ಮನ್ ಉದಿತ್ ತಮ್ಮ ಪ್ರಥಮ ದರ್ಜೆ ಕ್ರಿಕೆಟ್‌ನ ಪ್ರಥಮ ಅರ್ಧಶತಕ ಪೂರೈಸಿಕೊಂಡರು.ಶತಕದ ಅಂಚಿನಲ್ಲಿದ್ದರೂ ಗೌತಮ್ ತಾಳ್ಮೆಯಿಂದಲೇ ಬ್ಯಾಟಿಂಗ್ ಮಾಡಿದರು. ಶಿಸ್ತುಭರಿತ ಪಾದಚಲನೆ ಮತ್ತು ಕರಾರುವಾಕ್ ಹೊಡೆತಗಳನ್ನು ಪ್ರದರ್ಶಿ ಸಿದ ಗೌತಮ್, ಪ್ರವೀಣ ಗುಪ್ತಾ ಎಸೆತವನ್ನು ಸ್ವೀಪ್ ಮೂಲಕ ಬೌಂಡರಿಗೆ ಕಳಿಸಿ ಶತಕ ಪೂರೈಸಿದರು.  ಈ ಋತುವಿನಲ್ಲಿ ಇದು ಅವರ ಎರಡನೇ ಶತಕ. ಬೆಂಗಳೂರಿನಲ್ಲಿ ಒಡಿಶಾ ವಿರುದ್ಧ ಶತಕ ಗಳಿಸಿದ್ದರು. ಅದೇ ಪಂದ್ಯದಲ್ಲಿ ಶತಕ ಗಳಿಸಿದ್ದ ಮನೀಶ್ ಪಾಂಡೆ ಜೊತೆಗೆ ಜೊತೆಯಾಟ ಆಡಿ ತಂಡದ ಗೆಲುವಿಗೆ ಕಾರಣರಾಗಿದ್ದರು.ಶತಕದ ನಂತರವೂ ಬ್ಯಾಟ್ ಝಳಪಿಸುವುದನ್ನು ಅವರು ನಿಲ್ಲಿಸಲಿಲ್ಲ. ಬೌಲರ್‌ಗಳಿಗೆ ನಡುಕ ಹುಟ್ಟಿಸಿದ್ದ ಉದಿತ್ ವೈಯಕ್ತಿಕ 72  ರನ್ ಗಳಿಸಿ ಶತಕದತ್ತ ದೃಷ್ಟಿ ನೆಟ್ಟಿದ್ದರು. ಆದರೆ, ಬುಧವಾರ ನಾಲ್ಕು ವಿಕೆಟ್ ಗಳಿಸಿದ್ದ ಪಿಯೂಷ್ ಚಾವ್ಲಾ ಓವರಿನಲ್ಲಿ ಮಂಡಿಯೂರಿ ಕಟ್ ಮಾಡುವ ಯತ್ನಿಸಿ ದರು. ಆದರೆ, ಬ್ಯಾಟಿನ ಮೇಲ್ಮುಖದ ಅಂಚು ಸವರಿದ ಚೆಂಡು ಹಿಂದೆ ಹಾರಿತು. ಸ್ಲಿಪ್‌ನಲ್ಲಿದ್ದ ಮೊಹಮ್ಮದ್ ಕೈಫ್ ಚಂಗನೆ ಎಗರಿ ಕ್ಯಾಚ್ ತೆಗೆದುಕೊಂಡರು.ಊಟದ ವಿರಾಮಕ್ಕೆ ಮೂರು ಓವರುಗಳು ಬಾಕಿಯಿದ್ದಾಗ, ಪ್ರವೀಣ ಗುಪ್ತಾ ಎಸೆತವನ್ನು ಡ್ರೈವ್ ಮಾಡುವ ಯತ್ನದಲ್ಲಿ ಗೌತಮ್ ಸ್ಲಿಪ್‌ನಲ್ಲಿದ್ದ ಭುವನೇಶ್ವರಕುಮಾರಗೆ ಕ್ಯಾಚ್ ಆದರು. ಅಲ್ಲಿಗೆ ಗೌತಮ್ ಸುಂದರ ಇನಿಂಗ್ಸ್ ಜೊತೆಗೆ ಕರ್ನಾಟಕದ ಇನಿಂಗ್ಸ್‌ಗೂ ತೆರೆ ಬಿತ್ತು.ಚಾವ್ಲಾ-ಭುವನೇಶ್ವರ ಆಸರೆ: ಕರ್ನಾಟಕದ ಬೌಲಿಂಗ್ ‘ಬಿರುಗಾಳಿ’ ಮುಂದೆ ತಡಬಡಾಯಿಸಿದ ಉತ್ತರ ಪ್ರದೇಶದ ಇನಿಂಗ್ಸ್ ಎರಡನೇ ದಿನವೇ ಮುಗಿದುಹೋಗುವ ಅಪಾಯವನ್ನು ಎದುರಿಸಿತು. ಆದರೆ ಕರ್ನಾಟಕದ ಫೀಲ್ಡರುಗಳು ನೀಡಿದ ‘ಜೀವದಾನ’ ಮತ್ತು ಭುವನೇಶ್ವರ ಕುಮಾರ (ಬ್ಯಾಟಿಂಗ್ 51; 118ಎಸೆತ, 8 ಬೌಂಡರಿ) ಪಿಯೂಷ್ ಚಾವ್ಲಾ (ಬ್ಯಾಟಿಂಗ್ 43; 56ಎಸೆತ, 7ಬೌಂಡರಿ, 1 ಸಿಕ್ಸರ್)  ಮತ್ತು  ಜೊತೆಯಾಟ ಆತಿಥೇಯ ತಂಡವನ್ನು ಸದ್ಯಕ್ಕೆ ಆಪಾಯದಿಂದ ಪಾರು ಮಾಡಿದೆ.ಮೇಲ್ನೋಟಕ್ಕೆ ಸ್ಪಿನ್ ದಾಳಿಗೆ ಸಹಕರಿಸುವಂತೆ ಕಾಣುವ ಪಿಚ್ ಮೇಲೆ ಎಡಗೈ ವೇಗಿ ಎಸ್. ಅರವಿಂದ್ ಮೊದಲ ಆಘಾತ ನೀಡಿದರು.ತಮ್ಮ ಎರಡನೇ ಓವರಿನಲ್ಲಿಯೇ ಶಿವಕಾಂತ್ ಶುಕ್ಲಾ ಅವರನ್ನು ಎಲ್‌ಬಿ ಬಲೆಗೆ ಕೆಡವಿದರು. ನಂತರ ದಾಳಿಗಿಳಿದ ನಾಯಕ ವಿನಯಕುಮಾರ ಬೌಲಿಂಗ್‌ನಲ್ಲಿ ಹೊರಹೋಗುವ ಚೆಂಡನ್ನು ಆಡಲು ಯತ್ನಿಸಿದ ಏಕಲವ್ಯ ದ್ವಿವೇದಿ, ವಿಕೆಟ್‌ಕೀಪರ್ ಗೌತಮ್ ಗ್ಲೌಸ್‌ಗಳಲ್ಲಿ ಬಂಧಿಯಾದರು.  ತಮ್ಮ ಇನ್ನೊಂದು ಓವರಿನಲ್ಲಿ ವಿನಯ್, ತನ್ಮಯ್ ಶ್ರೀವಾಸ್ತವ ಅವರನ್ನು ಎಲ್‌ಬಿಡಬ್ಲ್ಯು ಬಲೆಗೆ ಹಾಕಿದಾಗ ತಂಡದ ಮೊತ್ತ ಕೇವಲ 15 ಅಗಿತ್ತು.ನಂತರ ಬೌಲಿಂಗ್ ಆರಂಭಿಸಿದ ಉದಿತ್ ಪಟೇಲ್‌ಗೆ ಭರವಸೆಯ ಬ್ಯಾಟ್ಸ್ ಮನ್ ಪರ್ವಿಂದರ್‌ಸಿಂಗ್ ವಿಕೆಟ್ ಒಪ್ಪಿಸಿದರು. ತಿರುಗುತ್ತಿದ್ದ ಚೆಂಡನ್ನು ಕಟ್ ಮಾಡುವ ಯತ್ನದಲ್ಲಿ ಸ್ಲಿಪ್‌ನಲ್ಲಿದ್ದ ಪಾಂಡೆಗೆ ಕ್ಯಾಚ್ ನೀಡಿದರು. ಚಹಾ ವೇಳೆಗೆ ನಾಲ್ಕು ವಿಕೆಟ್ ಕಳೆದುಕೊಂಡು 77 ರನ್‌ಗಳನ್ನು ತಂಡ ಗಳಿಸಿತ್ತು. ಸ್ವಲ್ಪ ಹೊತ್ತಿನ ನಂತರ ಸುನೀಲ್ ಜೋಶಿ ಸ್ಪಿನ್‌ಗೆ ಮೊಹ್ಮದ್ ಕೈಫ್ ಶರಣಾದರು. ನಂತರ ಭುವನೇಶ್ವರ್ ಮತ್ತು ಪಿಯೂಷ್ ಆಸರೆಯಾದರು. ಬೌಂಡರಿ ಲೈನ್‌ನಲ್ಲಿ ಫೀಲ್ಡರ್ ಅರವಿಂದ್‌ರಿಂದ ಜೀವದಾನ ಪಡೆದ ಭುವನೇಶ್ವರ ಅರ್ಧಶತಕ ಪೂರೈ ಸಿದ್ದಾರೆ. ಈ ನಡುವೆ ಫೀಲ್ಡಿಂಗ್ ಮಾಡು ವಾಗ ಗಣೇಶ್ ಸತೀಶ್ ಬಿದ್ದು ಕಾಲಿಗೆ ಪೆಟ್ಟಾಗಿ ಮೈದಾನದಿಂದ ಹೊರಬಂದು ವಿಶ್ರಾಂತಿ ಪಡೆದರು.

ಸ್ಕೋರು ವಿವರ

ಪ್ರಥಮ ಇನಿಂಗ್ಸ್

ಕರ್ನಾಟಕ: 121 ಓವರುಗಳಲ್ಲಿ 416

ಸಿ.ಎಂ. ಗೌತಮ್ ಸಿ ಭುವನೇಶ್ವರ್ ಬಿ ಗುಪ್ತಾ  115

ಸುನೀಲ್ ಜೋಶಿ ಎಲ್‌ಬಿಡಬ್ಲ್ಯು ಭುವನೇಶ್ವರ್  26

ಉದಿತ್ ಪಟೇಲ್ ಸಿ ಕೈಫ್ ಬಿ ಚಾವ್ಲಾ  72

ಎಸ್. ಅರವಿಂದ್ ಔಟಾಗದೇ  0

ಇತರೆ: 29 (ಬೈ 6, ಲೆಗ್‌ಬೈ 7, ನೋಬಾಲ್ 10, ವೈಡ್ 6)ವಿಕೆಟ್ ಪತನ: 8-290 (ಸುನೀಲ್‌ಜೋಶಿ), 9-416 (ಪಟೇಲ್), 10-416 (120.6 ಗೌತಮ್). 

ಬೌಲಿಂಗ್: ಶಲಭ್ ಶ್ರೀವಾಸ್ತವ್ 21-4-59-0 (ವೈಡ್ 5), ಭುವನೇಶ್ವರಕುಮಾರ 33-10-93-2 (ನೋಬಾಲ್ 10, ವೈಡ್ 1), ರೋಹಿತ್ ಚೌಧರಿ 14-2-88-2, ಪಿಯೂಷ್ ಚಾವ್ಲಾ 32-6-95-5, ಪ್ರವೀಣ ಗುಪ್ತಾ 15-4-37-1, ಶಿವಕಾಂತ್ ಶುಕ್ಲಾ 5-1-24-0, ಮೊಹ್ಮದ್ ಕೈಫ್ 1-0-7-0.ಉತ್ತರ ಪ್ರದೇಶ: 57 ಓವರುಗಳಲ್ಲಿ 5 ವಿಕೆಟ್‌ಗೆ 163

ಶಿವಕಾಂತ್ ಶುಕ್ಲಾ ಎಲ್‌ಬಿಡಬ್ಲ್ಯು ಅರವಿಂದ್  05

ತನ್ಮಯ್ ಶ್ರೀವಾಸ್ತವ ಎಲ್‌ಬಿಡಬ್ಲ್ಯು ವಿನಯಕುಮಾರ  08

ಏಕಲವ್ಯ ದ್ವಿವೇದಿ ಸಿ ಗೌತಮ್ ಬಿ ವಿನಯಕುಮಾರ  00

ಮೊಹ್ಮದ್ ಕೈಫ್ ಸಿ ಗೌತಮ್ ಬಿ ಜೋಶಿ  23

ಪರ್ವಿಂದರ್‌ಸಿಂಗ್ ಸಿ ಪಾಂಡೆ ಬಿ ಉದಿತ್ ಪಟೇಲ್  22

ಭುವನೇಶ್ವರಕುಮಾರ ಬ್ಯಾಟಿಂಗ್  51

ಪಿಯೂಷ್ ಚಾವ್ಲಾ ಬ್ಯಾಟಿಂಗ್  43

ಇತರೆ: 11 (ಲೆಗ್‌ಬೈ 4, ನೋಬಾಲ್ 7)ವಿಕೆಟ್ ಪತನ:1-13 (ಶುಕ್ಲಾ 3.4), 2-14 (ಏಕಲವ್ಯ 4.3), 3-15 (ಶ್ರೀವಾಸ್ತವ 6.2), 4-44 (ಸಿಂಗ್ 16.6), 5-90 (ಕೈಫ್ 34.3)

ಬೌಲಿಂಗ್: ಸುನೀಲ್ ಜೋಶಿ 12-5-22-1, ಎಸ್. ಅರವಿಂದ್ 12-2-32-1, ಆರ್. ವಿನಯಕುಮಾರ 11-4-29-2, ಉದಿತ್ ಪಟೇಲ್ 15-2-57-1, ಸ್ಟುವರ್ಟ್ ಬಿನ್ನಿ 3-1-7-0, ಅಮಿತ್ ವರ್ಮಾ 4-1-12-0.   

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.