ಬುಧವಾರ, ಏಪ್ರಿಲ್ 14, 2021
28 °C

ಉಲ್ಬಣಗೊಂಡ ನೀರಿನ ಸಮಸ್ಯೆ

ಪ್ರಜಾವಾಣಿ ವಾರ್ತೆ / ಎ.ಎಂ.ಸುರೇಶ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೇಸಿಗೆಯ ಧಗೆ ಹೆಚ್ಚಾಗುತ್ತಿದ್ದಂತೆಯೇ ರಾಜ್ಯದ ಬಹುತೇಕ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಒಂದು ಬಿಂದಿಗೆ ನೀರಿಗೂ ಜನ ಪರದಾಡುವಂತಹ ಪರಿಸ್ಥಿತಿ ಇದೆ.

ಗ್ರಾಮಾಂತರ ಪ್ರದೇಶಗಳಿಗಿಂತ ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಹಾಹಾಕಾರ ಹೆಚ್ಚಾಗಿದೆ. 50ಕ್ಕೂ ಹೆಚ್ಚು ಪಟ್ಟಣ ಹಾಗೂ ನಗರ ಪ್ರದೇಶಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದ್ದು,  ಟ್ಯಾಂಕರ್ ನೀರು ಪೂರೈಸಲಾಗುತ್ತಿದೆ. ಆದರೆ ಟ್ಯಾಂಕ ರ್‌ನಿಂದ ಸರಬರಾಜು ಆಗುವ ನೀರು ಸಾಕಾಗುತ್ತಿಲ್ಲ, ಅಲ್ಲದೆ ಸಕಾಲಕ್ಕೆ ಪೂರೈಕೆಯೂ ಆಗುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಮೈಸೂರು, ತುಮಕೂರು, ವಿಜಾಪುರ, ಬಳ್ಳಾರಿ, ಧಾರವಾಡ, ಗದಗ ಜಿಲ್ಲೆಗಳಲ್ಲಿ ನೀರಿನ ಸಮಸ್ಯೆ ಹೆಚ್ಚಾಗಿದೆ. ಈ ಪೈಕಿ ಮೊದಲ ಮೂರು ಜಿಲ್ಲೆಗಳಲ್ಲಿ ಕೇವಲ ಕೊಳವೆಬಾವಿ ಮೇಲೆ ಅವಲಂಬನೆಯಾಗಿರುವುದರಿಂದ ಟ್ಯಾಂಕರ್ ಮೂಲಕ ಸರಬರಾಜು ಮಾಡುವುದಕ್ಕೂ ಅಗತ್ಯವಿರುವಷ್ಟು ನೀರು ಲಭ್ಯವಾಗುತ್ತಿಲ್ಲ.

ಕೊಳವೆಬಾವಿಗಳು ಒಣಗಿದಂತಹ ಸಂದರ್ಭದಲ್ಲಿ ಕೃಷಿ ಕೊಳವೆಬಾವಿಗಳ ನೀರನ್ನು ಬಳಕೆ ಮಾಡಲು ಸೂಚನೆ ನೀಡಲಾಗಿದೆ. ರೈತರ ಜತೆ ಮಾತುಕತೆ ನಡೆಸಿ, ಕೊಳವೆಬಾವಿ ಸ್ವಾಧೀನಕ್ಕೆ ಪಡೆಯಬೇಕು. ಅದಕ್ಕೆ ರೈತರು ಒಪ್ಪದಿದ್ದರೆ ಬಲವಂತವಾಗಿ ವಶಕ್ಕೆ ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ನೀರು ನೀಡಲು ಒಪ್ಪುವತರಿಗೆ ಮಾಸಿಕ  5ರಿಂದ 10 ಸಾವಿರ ರೂಪಾಯಿ ನೀಡಲಾಗುವುದು.

ಬೆಂಗಳೂರಿನಲ್ಲಿ ಅಷ್ಟೇ ಅಲ್ಲದೆ  ಆನೇಕಲ್, ಹೊಸಕೋಟೆ, ನೆಲಮಂಗಲ, ವಿಜಯಪುರ, ಕೋಲಾರ, ಮಾಲೂರು, ರಾಮನಗರ, ತುಮಕೂರಿನಲ್ಲೂ ನೀರಿನ ಸಮಸ್ಯೆ ಹೆಚ್ಚಾಗಿದೆ. ಆನೇಕಲ್‌ನ 23 ವಾರ್ಡ್‌ಗಳ ಪೈಕಿ 12 ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರು ಪೂರೈಕೆಯಾಗುತ್ತಿದೆ. ವಿಜಯಪುರದ 23 ವಾರ್ಡ್‌ಗಳ ಪೈಕಿ 19, ನೆಲಮಂಗಲದ 23 ವಾರ್ಡ್ ಪೈಕಿ 10, ಕೋಲಾರದ 35 ವಾರ್ಡ್ ಪೈಕಿ 20, ಮಾಲೂರಿನ 23 ವಾರ್ಡ್ ಪೈಕಿ 18, ರಾಮನಗರದ 31 ವಾರ್ಡ್ ಪೈಕಿ 13 ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರು ಸರಬರಾಜು ಆಗುತ್ತಿದೆ. ಗದಗ- ಬೆಟಗೇರಿ, ಕಡೂರು, ಸುರಪುರ, ಮುಂಡರಗಿಯ ಎಲ್ಲ ವಾರ್ಡ್‌ಗಳಲ್ಲಿ, ಮೈಸೂರಿನ 65 ವಾರ್ಡ್ ಪೈಕಿ 59, ತುಮಕೂರಿನ 35 ವಾರ್ಡ್ ಪೈಕಿ 20, ಹುಬ್ಬಳ್ಳಿಯ 21, ಧಾರವಾಡದ 24 ವಾರ್ಡ್‌ಗಳಲ್ಲಿ ಟ್ಯಾಂಕರ್ ನೀರಿನ ವ್ಯವಸ್ಥೆ ಮಾಡಲಾಗಿದೆ.

ದೊಡ್ಡಬಳ್ಳಾಪುರ, ದೇವನಹಳ್ಳಿ, ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ದಾವಣಗೆರೆ, ಮುಳಬಾಗಿಲು, ಕನಕಪುರ, ಮಾಗಡಿ, ಶಿವಮೊಗ್ಗ, ಭದ್ರಾವತಿ, ಮಧುಗಿರಿ, ಕುಣಿಗಲ್, ಪಾವಗಡ, ಚಿಕ್ಕನಾಯಕನಹಳ್ಳಿ, ಬೀರೂರು, ಮೂಡಬಿದ್ರೆ, ಪುತ್ತೂರು, ಉಳ್ಳಾಲ, ಮಂಗಳೂರು, ಮಡಿಕೇರಿ, ವಿರಾಜಪೇಟೆ, ಮಂಡ್ಯ, ಸಿರಗುಪ್ಪ, ತೆಕ್ಕಲಕೋಟೆ, ರಬಕವಿ-ಬನಹಟ್ಟಿ, ಇಂಡಿ, ಯಲ್ಲಾಪುರ, ಮುಂಡಗೋಡ, ಕಾರವಾರದ ಕೆಲವು ವಾರ್ಡ್‌ಗಳಲ್ಲಿ ನೀರಿನ ಸಮಸ್ಯೆ ಇದೆ.

ಬೇಸಿಗೆಯಲ್ಲಿ ಅಂತರ್ಜಲ ಕುಸಿಯುವುದರಿಂದ ಸಹಜವಾಗಿಯೇ ಕೊಳವೆಬಾವಿಗಳಲ್ಲಿ ನೀರು ಕಡಿಮೆಯಾಗುತ್ತದೆ. ಕೆಲವು ಸಂಪೂರ್ಣವಾಗಿ ಒಣಗಿ ಹೋಗುತ್ತವೆ. ಇದನ್ನು ಗಮನದಲ್ಲಿಟ್ಟುಕೊಂಡು ಅಗತ್ಯವಿರುವ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಯುವುದು ಸೇರಿದಂತೆ ಒಟ್ಟಾರೆ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ರಾಜ್ಯ ಹಣಕಾಸು ಆಯೋಗದ ಅನುದಾನದಡಿ ನಗರಾಭಿವೃದ್ಧಿ ಇಲಾಖೆ 15 ಕೋಟಿ ರೂಪಾಯಿ ಬಿಡುಗಡೆ ಮಾಡಿದೆ.

ರಾಜ್ಯ ಹಣಕಾಸು ಆಯೋಗದ ಅನುದಾನದಡಿ ವರ್ಷಕ್ಕೆ 900 ಕೋಟಿ ರೂಪಾಯಿ ಹಣವನ್ನು ನಗರ ಸ್ಥಳೀಯ ಸಂಸ್ಥೆಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಇದಲ್ಲದೆ 13ನೇ ಹಣಕಾಸು ಆಯೋಗದ ಶಿಫಾರಸು ಪ್ರಕಾರ ಕೇಂದ್ರದಿಂದ 160 ಕೋಟಿ ರೂಪಾಯಿ ಅನುದಾನ ದೊರೆಯುತ್ತದೆ. ಇದರಲ್ಲಿ ಮೊದಲ ಆದ್ಯತೆ ಕುಡಿಯುವ ನೀರಿಗೆ ನೀಡುವಂತೆ ಸೂಚನೆ ನೀಡಲಾಗಿದೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕ ಅಂಜುಮ್ ಪರ್ವೇಜ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಕೊಳವೆಬಾವಿಗಳನ್ನೇ ಅವಲಂಬಿಸಿರುವ ಕಡೆ ಪ್ರತಿವರ್ಷ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉದ್ಭವವಾಗುತ್ತದೆ. ನದಿಗಳು ಲಭ್ಯವಿರುವ ಕಡೆ ಮೇಲ್ಮೈ ಮೂಲಗಳಿಂದ ನೀರು ಪೂರೈಕೆ ವ್ಯವಸ್ಥೆ ಮಾಡಲಾಗುತ್ತಿದೆ. ಉಳಿದ ಕಡೆ ಟ್ಯಾಂಕರ್ ಮೂಲಕ ನೀರು ಪೂರೈಸುವುದು ಅನಿವಾರ್ಯವಾಗಿದೆ’ ಎಂದರು.

ಗ್ರಾಮಾಂತರ ಪ್ರದೇಶಗಳಲ್ಲೂ ನೀರಿನ ಅಭಾವ ತಲೆದೋರಿದೆ. ಆದರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ಅಧಿಕಾರಿಯೊಬ್ಬರು ಮಾತ್ರ ಇದನ್ನು ಒಪ್ಪಲು ಸಿದ್ದರಿಲ್ಲ. ಎಲ್ಲೂ ನೀರಿನ ಸಮಸ್ಯೆ ಇಲ್ಲ. ನೀರಿಲ್ಲದೆ ಯಾರೊಬ್ಬರೂ ಸತ್ತ ಉದಾಹರಣೆ ಇಲ್ಲ. ಎಲ್ಲ ಜನವಸತಿಗಳಿಗೆ ಕನಿಷ್ಠ ಒಂದು ಜಲ ಮೂಲ ಇದೆ ಎಂಬುದು ಅವರ ಸಮರ್ಥನೆ. ಆದರೆ ಜಲಮೂಲಗಳು ಬತ್ತಿ ಹೋಗಿರುವುದರಿಂದ ಗ್ರಾಮೀಣ ಪ್ರದೇಶದ ಜನರು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ.

ಕುಡಿಯುವ ನೀರಿನ ಸಮಸ್ಯೆ ತಲೆದೋರುವ ನಾಲ್ಕು ಸಾವಿರ ಗ್ರಾಮಗಳನ್ನು ಗುರುತಿಸಿ 150 ಕೋಟಿ ರೂಪಾಯಿ ವೆಚ್ಚದ ತುರ್ತು ಕ್ರಿಯಾ ಯೋಜನೆ ರೂಪಿಸಿ ಕೇಂದ್ರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅಲ್ಲದೆ ಕೇಂದ್ರದಿಂದ ಬರುವ ಹಣಕ್ಕೆ ಕಾಯದೆ ಈಗಾಗಲೇ ಪ್ರತಿಯೊಂದು ವಿಧಾನ ಸಭಾ ಕ್ಷೇತ್ರಕ್ಕೆ ಅಗತ್ಯತೆ ಆಧರಿಸಿ 15ರಿಂದ 40 ಲಕ್ಷ ರೂಪಾಯಿ ಹಣ ನೀಡಲಾಗಿದೆ. ಈ ರೀತಿ ಸುಮಾರು 38 ಕೋಟಿ ರೂಪಾಯಿ ಹಣವನ್ನು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಬಿಡುಗಡೆ ಮಾಡಿದ್ದು, ಅವರು ಶಾಸಕರ ಅಧ್ಯಕ್ಷತೆಯ ಕಾರ್ಯಪಡೆ ರೂಪಿಸುವ ಯೋಜನೆಗಳಿಗೆ ಹಣ ಹಂಚಿಕೆ ಮಾಡಲಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು. ಪ್ರಕೃತಿ ವಿಕೋಪ ನಿಧಿಯಡಿ ಈಗಾಗಲೇ ಜಿಲ್ಲಾಧಿಕಾರಿಗಳ ಬಳಿ 147 ಕೋಟಿ ರೂಪಾಯಿ ಹಣ ಇದೆ. ಇದಲ್ಲದೆ ಅಗತ್ಯಬಿದ್ದರೆ ಇನ್ನೂ ಹೆಚ್ಚಿನ ಹಣ ನೀಡಲಾಗುವುದು. ಕುಡಿಯುವ ನೀರಿಗೆ ಹಣದ ಕೊರತೆ ಇಲ್ಲ. ಅಗತ್ಯವಿರುವ ಕಡೆ ಹೊಸದಾಗಿ ಕೊಳವೆಬಾವಿಗಳನ್ನು ಕೊರೆಯಲು ಹಾಗೂ ಹಳೆಯ ಕೊಳವೆಬಾವಿಗಳನ್ನು ಪುನರುಜ್ಜೀವಗೊಳಿಸಲು ಸೂಚನೆ ನೀಡಲಾಗಿದೆ ಎಂದು ಕಂದಾಯ ಇಲಾಖೆಯ ಮೂಲಗಳು ತಿಳಿಸಿವೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.