ಭಾನುವಾರ, ಮೇ 16, 2021
29 °C

ಉಸಿರು ಕಟ್ಟಿಸಿದ ರಾಜಕೀಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: “ಕನ್ನಡ ನಾಡು ರಾಜಕೀಯ, ನೈತಿಕ ಹಾಗೂ ಸಾಂಸ್ಕೃತಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಅದರಲ್ಲೂ ಇಂದಿನ ರಾಜಕೀಯವು ಎಲ್ಲವನ್ನೂ ಹೊಡೆದೋಡಿಸಿ ಉಸಿರು ಕಟ್ಟಿಸುವ ಸ್ಥಿತಿಗೆ ತಲುಪಿದೆ” ಎಂದು ಹಿರಿಯ ಕವಿ, ನಾಡೋಜ ಚನ್ನವೀರ ಕಣವಿ ಕಳವಳ ವ್ಯಕ್ತಪಡಿಸಿದರು.ಎಸ್.ಡಿ. ಇಂಚಲ ಸ್ಮಾರಕ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ನಿರ್ದೇಶನಾಲಯದ ಆಶ್ರಯದಲ್ಲಿ ಎಸ್.ಜಿ. ಬಾಳೇಕುಂದ್ರಿ ಎಂಜಿನಿಯರಿಂಗ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ `ಎಸ್.ಡಿ. ಇಂಚಲ ಜನ್ಮಶತಮಾನೋತ್ಸವ~ ವರ್ಷಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.“ಶಾಂತಿ- ಸಹಬಾಳ್ವೆಗೆ ಹೆಸರಾಗಿದ್ದ ಕನ್ನಡ ನಾಡಿನಲ್ಲಿ ಈಗ ಪರಸ್ಪರ ವೈಷಮ್ಯ ಮೂಡಿರುವುದು ವಿಪರ್ಯಾಸದ ಸಂಗತಿ. ಅಧಿಕಾರಕ್ಕಾಗಿ ಕಚ್ಚಾಡುತ್ತಿರುವ ನಾಯಕರಿಗೆ ನಾಡು-ನುಡಿಯ ಬಗ್ಗೆ ಕಾಳಜಿ ಇಲ್ಲ. ಈ ಬಗ್ಗೆ ನಾಡಿನ ಧರ್ಮ ಗುರುಗಳು ಧ್ವನಿ ಎತ್ತಬೇಕು. ನಾಯಕರನ್ನು ಸರಿ ದಾರಿಗೆ ತರಬೇಕು” ಎಂದು ಕಣವಿ ಸಲಹೆ ನೀಡಿದರು.“ಹಿಂದೆ ರಾಜ್ಯದಲ್ಲಿನ ಸಾಹಿತ್ಯಿಕ, ಸಾಂಸ್ಕೃತಿಕ ಚಟುವಟಿಕೆಗಳ ವರದಿಯನ್ನು ನೋಡಿ ಹೊರ ರಾಜ್ಯದ ಮಿತ್ರರು ಕರೆ ಮಾಡುತ್ತಿದ್ದರು. ಆದರೆ, ಇಂದು ಹಗರಣ, ರಾಜಕೀಯ ಬಿಕ್ಕಟ್ಟಿನ ಸುದ್ದಿ ನೋಡಿ ಕರೆ ಮಾಡುತ್ತಿರುವುದು ಮುಜುಗರವನ್ನು ಉಂಟು ಮಾಡುತ್ತದೆ” ಎಂದು ವಿಷಾದಿಸಿದರು.“ಕನ್ನಡ ಕಟ್ಟುವ ಕೆಲಸವನ್ನು ಸರ್ಕಾರಿ ಸಂಸ್ಥೆಗಳೇ ಮಾಡಬೇಕು ಎಂದುಕೊಳ್ಳಬಾರದು. ಭಾಷೆ, ಸಂಸ್ಕೃತಿಯನ್ನು ರೂಪಿಸಲು ನಾವು ಪ್ರಭುತ್ವವನ್ನು ಅವಲಂಬಿಸುವುದು ಸರಿಯಲ್ಲ. ಪ್ರತಿಯೊಬ್ಬರೂ ಕನ್ನಡ ಕಟ್ಟುವ ಕೆಲಸದಲ್ಲಿ ತೊಡಗಿಕೊಳ್ಳಬೇಕು. ಸಂಸ್ಕೃತಿ ಪ್ರತಿಪಾದಕರು ದೇಶದ ಬಹುರೂಪಿ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳಬೇಕು. ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಕೆಲಸ ಮಾಡಬೇಕು” ಎಂದು ಹಿರಿಯ ಕವಿ ಸಲಹೆ ನೀಡಿದರು.“ಎಸ್.ಡಿ. ಇಂಚಲರು ಒಬ್ಬ ಒಳ್ಳೆಯ ಶಿಕ್ಷಕ, ಸಂಘಟಕ ಹಾಗೂ ಕವಿಯಾಗಿ ಸೇವೆ ಸಲ್ಲಿಸಿದ್ದಾರೆ. ಅವರು ಸಹೃದಯ ಓದುಗರನ್ನು ಸೃಷ್ಟಿಸಿದ್ದಾರೆ. ಇಂಚಲರ ಜನ್ಮಶತಮಾನೋತ್ಸವ ಅಂಗವಾಗಿ ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯವು ಇಂಚಲರ ಸಮಗ್ರ ಕೃತಿಯನ್ನು ಪುನರ್ ಮುದ್ರಣಗೊಳಿಸಬೇಕು” ಎಂದು ಒತ್ತಾಯಿಸಿದರು.ಪ್ರಾಸ್ತಾವಿಕವಾಗಿ ಮಾತನಾಡಿದ ಎಸ್.ಡಿ. ಇಂಚಲ ಸ್ಮಾರಕ ಸಮಿತಿ ಕಾರ್ಯಾಧ್ಯಕ್ಷ ಡಾ. ಬಸವರಾಜ ಜಗಜಂಪಿ, “ಇಂಚಲರು ಶಿಕ್ಷಕ ವೃತ್ತಿಯ ಗೌರವವನ್ನು ಹೆಚ್ಚಿಸಿದ್ದಾರೆ. ಅವರು ಲೇಖನಿಯನ್ನು ಖಡ್ಗವಾಗಿಸಿ ಕೊಂಡಿ ದ್ದರು. ವೀರ, ರಾಷ್ಟ್ರ ಪ್ರೇಮ, ಆದರ ಭಾಗ, ಸ್ನೇಹದಂತಹ ಗುಣಗಳನ್ನು ಅವರ ಬರಹಗಳಲ್ಲಿ ಕಾಣಬಹುದಿತ್ತು” ಎಂದು ಹೇಳಿದರು.ಇಂಚಲರ ಕುರಿತು ರಚಿಸಿದ `ಸಾವಿರದ ಕವಿ~ ಕೃತಿಯನ್ನು ಹಿರಿಯ ಕವಿ ಡಾ. ಬಿ.ಎ. ಸನದಿ ಬಿಡುಗಡೆ ಗೊಳಿಸಿದರು. ಸಮಾರಂಭದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಬಿ.ಎಸ್. ಗವಿಮಠ ವಹಿಸಿದ್ದರು. ರುದ್ರಾಕ್ಷಿಮಠದ ಸಿದ್ಧರಾಮ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪತ್ರಕರ್ತ ಸರಜೂ ಕಾಟ್ಕರ್ ಆಗಮಿಸಿದ್ದರು.

ನಾಡು ನುಡಿಗೆ ಸೇವೆ ಸಲ್ಲಿಸಿದ ಬೆಳಗಾವಿಯ ಸಿದ್ಧನಗೌಡ ಪಾಟೀಲ, ರಾಘವೇಂದ್ರ ಜೋಷಿ, ಅಶೋಕ ಚಂದರಗಿ, ಅನಿಲ ಪೋತದಾರ, ಅರವಿಂದ ದೇಶಪಾಂಡೆ, ರಾಮಚಂದ್ರ ಢವಳೆ ಮತ್ತಿತರರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಪ್ರೊ. ಸಿ.ಜಿ. ಮಠಪತಿ ನಿರೂಪಿಸಿದರು. ಯ.ರು. ಪಾಟೀಲ ವಂದಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.