ಶುಕ್ರವಾರ, ಮೇ 14, 2021
31 °C

ಋಣಭಾರದ ಸುಳಿಯಲ್ಲಿ ಮತದಾರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಲೂರು: ಮತದಾರರನ್ನು `ಋಣ~ದ ಹಂಗಿಗೆ ದೂಡಿ ವೋಟ್ ಗಿಟ್ಟಿಸುವಂತಹ ಹೊಸ `ಟ್ರೆಂಡ್~ ಹುಟ್ಟುಹಾಕಿದ ಮಾಲೂರು ತಾಲ್ಲೂಕಿನಲ್ಲಿ ಓಲೈಕೆ ರಾಜಕಾರಣದ ಬೀಸು ಈಗ ಹೊಸ ಎತ್ತರಗಳನ್ನು ಕಂಡಿದೆ. ವಿಧಾನಸಭಾ ಚುನಾವಣೆಗೆ ಇನ್ನೂ ಒಂದೂವರೆ ವರ್ಷ ಇರುವಾಗಲೇ ಮತದಾರರ ಮುಂದೆ ಪ್ರಲೋಭನೆಗಳ ರಾಶಿ ಒಡ್ಡುವ ಕೆಲಸ ಬಿರುಸಿನಿಂದ ಸಾಗಿದೆ. ಕ್ಷೇತ್ರದ ಉದ್ದಗಲಕ್ಕೂ ಈ ಕುರಿತೇ ಮಾತು. ಎಲ್ಲರ ಬಾಯಲ್ಲೂ ಉಡುಗೊರೆಗಳದೇ ಜಪ!ಅವಿಭಜಿತ ಕೋಲಾರ ಜಿಲ್ಲೆಯಲ್ಲಿ ಓಲೈಕೆ ರಾಜಕಾರಣ ಇಂತಹದೊಂದು ಹೊಸ ಆಯಾಮ ಪಡೆದದ್ದು ಇದೇ ಕ್ಷೇತ್ರದಿಂದ. ಅದರ ಅಧ್ವರ್ಯು ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ. ತೀರ್ಥ, ಪ್ರಸಾದ, ಯಾತ್ರೆ, ಉಡುಗೊರೆಗಳನ್ನು ಚುನಾವಣೆ ಗೆಲ್ಲುವ `ಬ್ರಹ್ಮಾಸ್ತ್ರ~ಗಳನ್ನಾಗಿ ಪರಿವರ್ತಿಸಿದ ಹರಿಕಾರ ಅವರು.ಇವರಿಗೂ ಮೊದಲು ಬೇಡಿ ಮತ ಪಡೆಯುವುದು ರೂಢಿಯಾಗಿತ್ತು. ಇವರು ನೀಡಿ ಮತದಾರರನ್ನು ಒಲಿಸಿಕೊಳ್ಳುವ ಹೊಸ ವರಸೆ ಆರಂಭಿಸಿದರು ಎಂದು ಕ್ಷೇತ್ರದ ಜನರೇ ನೆನೆಯುತ್ತಾರೆ. ನಂತರ ಈ `ಲೀಲೆ~ ವರ್ತೂರು ಪ್ರಕಾಶ್ ಮೂಲಕ ಪಕ್ಕದ ಕೋಲಾರ ಕ್ಷೇತ್ರಕ್ಕೂ ಚಾಚಿ ಅಲ್ಲಿಯೂ ಫಲ ಪಡೆಯಿತು. ಅಷ್ಟೇ ವೇಗವಾಗಿ ಇವರಿಬ್ಬರ `ಖ್ಯಾತಿ~ ರಾಜ್ಯದ ಉದ್ದಗಲಕ್ಕೂ ಹಬ್ಬಿದ್ದೂ ಆಯಿತು. ಈ ವರಸೆ ಈಗ ಚಿಂತಾಮಣಿ ಕ್ಷೇತ್ರಕ್ಕೂ ವಿಸ್ತರಿಸಿಕೊಂಡಿದೆ. ಹಣ ಚೆಲ್ಲಿ, ಚಮತ್ಕಾರಗಳಿಂದ ಚುನಾವಣೆ ಗೆಲ್ಲುವ ಈ ಆಟ ಜಿಲ್ಲೆಯ ಮಟ್ಟಿಗೆ ಇಲ್ಲಿಯವರೆಗೂ ಒಂದು ರೀತಿ `ವಾಕ್ ಓವರ್~ ಆಗಿತ್ತು. ಅದಕ್ಕೆ ಮೊದಲ ಬಾರಿಗೆ ತೀವ್ರ ಸ್ಪರ್ಧೆ ಎದುರಾಗಿದೆ. ಆ ಸೆಣಸು ಕೂಡ ಮಾಲೂರಿನಿಂದಲೇ ಶುರುವಾಗುವ ಸ್ಪಷ್ಟ ಸೂಚನೆ ಹೊರಬಿದ್ದಿದೆ.ದಿಗಿಲು ಹುಟ್ಟಿಸಿದ ಮೊದಲ ಹೆಜ್ಜೆ: ಪ್ರತಿಸ್ಪರ್ಧಿಯ ಹೆಸರು ಕೆ.ಎಸ್.ಮಂಜುನಾಥ ಗೌಡ. ನೆರೆಯ ಹೊಸಕೋಟೆ ತಾಲ್ಲೂಕಿನ ಕೋಡಿಹಳ್ಳಿಯವರು. ಇನ್ನೂ ಯಾವ ಪಕ್ಷದೊಂದಿಗೂ ಗುರ್ತಿಸಿಕೊಂಡಿಲ್ಲ.ಕೃಷ್ಣಯ್ಯ `ಲೀಲೆ~ಗಳಿಂದ ಮುಕ್ತಿ ದೊರಕಿಸಿಕೊಡುವಂತಹ ನಾಯಕನ ನಿರೀಕ್ಷೆಯಲ್ಲಿರುವ ಪ್ರಜ್ಞಾವಂತರಿಗೆ ಈ ಯುವ ನೇತಾರನ `ಮೊದಲ ಹೆಜ್ಜೆ~ಯೇ ದಿಗಿಲು ಹುಟ್ಟಿಸಿದೆ. ಅವರ ಲೀಲೆಗಳನ್ನು ಮೀರಿಸುವಂತಿವೆ ಇವರ ಯೋಜನೆಗಳು.ಸೇರಿಗೆ ಸವ್ವಾಸೇರು ಎನ್ನುವ ರೀತಿ ಮಂಜುನಾಥ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ. ಗಣೇಶ ಚತುರ್ಥಿಗೆ ಕೃಷ್ಣಯ್ಯ ಕಡೆಯವರು ವಿನಾಯಕನ ಮೂರ್ತಿಗಳನ್ನು ಉಡುಗೊರೆಯಾಗಿ ನೀಡಿದರೆ, ಇವರ ಕಡೆಯಿಂದ ವಿನಾಯಕ ಪ್ರತಿಷ್ಠಾಪನಾ ಮಂಡಳಿಗೆ ರೂ 5,000ದಿಂದ 30,000ದವರೆಗೆ ದೇಣಿಗೆ. ಆರತಿ ತಟ್ಟೆಗೆ ಅವರಿಂದ ಐನೂರರ ನೋಟು ಬಿದ್ದರೆ, ಇವರಿಂದ ಗರಿಗರಿಯಾದ ಸಾವಿರದ ನೋಟು. ಹಾಗಂತ ಇವರ `ದಾನ~ ಕತೆಗಳು ರಂಜನೆಯ ವಸ್ತುವಾಗಿ ಕ್ಷೇತ್ರದ ಜನರ ನಾಲಿಗೆ ಮೇಲೆ ನಲಿದಾಡುತ್ತಿವೆ.ಕೊಡುಗೆ ನೀಡುವುದೇ ತಮ್ಮ ಬಹುದೊಡ್ಡ ಕೊಡುಗೆ ಎಂದು ಭಾವಿಸಿದಂತಿರುವ ಕೃಷ್ಣಯ್ಯ ಶೆಟ್ಟಿ ತಮ್ಮ ಬತ್ತಳಿಕೆಯಲ್ಲಿ ಇನ್ನೂ ಬಹಳಷ್ಟು ಅಸ್ತ್ರಗಳಿವೆ. ಹೊರಗೆ ಬಿಟ್ಟಿರುವುದು ಶೇ 5ರಷ್ಟು ಮಾತ್ರ ಎಂದು ತಮ್ಮ ಅನುಯಾಯಿಗಳ ಮುಂದೆ ಬೀಗುತ್ತಾರಂತೆ. ಯಾರ ಮನೆ ಒಳಗೆ ಕಾಲಿಟ್ಟರೂ ಅವರದೇ ಕೊಡುಗೆಯಾದ ವೆಂಕಟೇಶ್ವರನ ಕಟ್ಟುಹಾಕಿಸಿದ ಪಟ ಕಾಣಿಸುತ್ತದೆ. ಮದುವೆಯ ಆಮಂತ್ರಣ ಪತ್ರಿಕೆ ತೋರಿಸಿದರೆ 25 ಕೆ.ಜಿ ಅಕ್ಕಿ, 10 ಕೆ.ಜಿ ಸಕ್ಕರೆ ಉಡುಗೊರೆ. ಸ್ವಾತಂತ್ರ್ಯ ದಿನ ಪ್ರಯುಕ್ತ ರಂಗೋಲಿ ಸ್ಪರ್ಧೆ. ಸ್ಪರ್ಧೆ ನೆಪಮಾತ್ರ. ಭಾಗವಹಿಸುವ ಎಲ್ಲ ಮಹಿಳೆಯರಿಗೂ ಬಹುಮಾನವಾಗಿ ಸ್ಟೀಲ್ ಬಿಂದಿಗೆ.ಶಿಕ್ಷಕರ ದಿನಾಚರಣೆಗೆ ಮೇಷ್ಟ್ರುಗಳಿಗೂ ಉಡುಗೊರೆ. ಈ ಸಲ ಶಿಕ್ಷಕರಿಗೆ ಸ್ಟೀಲ್ ಬಕೆಟ್, ಸಫಾರಿ ಉಡುಪು ಮತ್ತು ಸೀರೆ ಕೊಡುಗೆ. ಅದನ್ನು ಪಡೆಯಲು ನೂಕುನುಗ್ಗಲು. ವಿದ್ಯಾರ್ಥಿ ಸಮುದಾಯಕ್ಕೆ `ರೋಲ್ ಮಾಡೆಲ್~ ಆಗಬೇಕಾದ ಶಿಕ್ಷಕರ ಮೇಲೂ ಇಂತಹದೊಂದು ಋಣಭಾರ. ಮುಲಾಜಿಗೆ ಬಿದ್ದು ಕೆಲವರು ಉಡುಗೊರೆ ಸ್ವೀಕರಿಸಿದ್ದಾರೆ.

 

`ಗೌರವಕ್ಕೆ ಕುಂದು ತರುವ ಕೆಲಸ ಎಂಬುದು ನಮಗೂ ಗೊತ್ತು. ಆದರೆ, ಶಾಸಕರ ಅವಕೃಪೆಗೆ ಒಳಗಾಗಿ ಇಲ್ಲಸಲ್ಲದ ಕಿರಿಕಿರಿಗಳನ್ನು ಆಹ್ವಾನಿಸಿಕೊಳ್ಳುವುದು ಬೇಡ ಎಂದು ಸ್ವೀಕರಿಸಿದೆ~ ಎಂದು ಶಿಕ್ಷಕರೊಬ್ಬರು ಪ್ರತಿಕ್ರಿಯಿಸಿದರು. ಇವರ ಆಡಳಿತ ಅವಧಿಯಲ್ಲಿ ಕ್ಷೇತ್ರದಲ್ಲಿ ಸರ್ಕಾರಕ್ಕೆ ಹೊರತಾದ ಪರ್ಯಾಯ ವ್ಯವಸ್ಥೆಯೊಂದು ರೂಪುಗೊಂಡಿದೆ ಎಂಬ ದೂರಿದೆ.ಇನ್ನು `ಮಾಲೂರು ತಾಲ್ಲೂಕಿನ ಮನೆ ಮನೆ ಮಗನಾಗಲು~ ಹೊರಟಿರುವ ಮಂಜುನಾಥ, `ತಾಯಂದಿರ ಆಶೀರ್ವಾದ~ ಕಾರ್ಯಕ್ರಮದಡಿ ತಾಲ್ಲೂಕಿನ ಪ್ರತಿ ಮನೆಗೂ ಒಂದು ಗೃಹೋಪಯೋಗಿ ವಸ್ತು ವಿತರಿಸಲು ಮುಂದಾಗಿದ್ದಾರೆ.ಇದಲ್ಲದೇ ಪ್ರತಿ ಹೋಬಳಿಗೆ ಪ್ರತ್ಯೇಕ ಯೋಜನೆ, ಬಹುಮಾನ. ಮಾಲೂರು ಪಟ್ಟಣದಲ್ಲಿ ಮನೆ ಮನೆಗೆ ತೆರಳಿ ಟಿಕೆಟ್ ವಿತರಿಸುವ ಕೆಲಸ ಆರಂಭವಾಗಿದೆ ಎಂದು ಈ ನಾಯಕನ ಬೆಂಬಲಿಗರೊಬ್ಬರು ಹೆಮ್ಮೆಯಿಂದ ಹೇಳಿದರು.ಈ ಟಿಕೆಟ್‌ಗಳ ಪಕ್ಕಪ್ರತಿಗಳನ್ನು (ಕೌಂಟರ್‌ಫಾಯಿಲ್) ಒಂದೆಡೆ ಬೆರೆಸಿ ಲಾಟರಿ ಎತ್ತುವ ಮೂಲಕ ಬಹುಮಾನ ವಿಜೇತರನ್ನು ಆಯ್ಕೆ ಮಾಡಲಾಗುವುದು. ಸೋಫಾಸೆಟ್, ಫ್ರಿಜ್, ವಾಷಿಂಗ್ ಮೆಷಿನ್, ಎಲ್‌ಸಿಡಿ ಟಿ.ವಿ, ವಾರ್ಡ್‌ರೋಬ್, ಡೈನಿಂಗ್ ಟೇಬಲ್, ಡ್ರೆಸಿಂಗ್ ಟೇಬಲ್, ಹೋಂ ಥಿಯೇಟರ್, ಗ್ರೈಂಡರ್, ಡಿ.ವಿ.ಡಿ ಪ್ಲೇಯರ್ ಹೀಗೆ ಕ್ರಮವಾಗಿ 10 ಬಹುಮಾನಗಳಿವೆ. ಇದೇ 25ರಂದು ನಡೆಯುವ ಸಾರ್ವಜನಿಕ ಸಮಾರಂಭದಲ್ಲಿ ಬಹುಮಾನ ವಿತರಣೆ ನಡೆಯಲಿದೆ. ಮಹಿಳೆಯರೇ ಖುದ್ದಾಗಿ ಬಂದು ಬಹುಮಾನ ಸ್ವೀಕರಿಸಬೇಕು ಎಂಬ ಫರ್ಮಾನು ಹೊತ್ತ ಕರಪತ್ರಗಳು ಎಲ್ಲೆಡೆ ಕಾಣಸಿಗುತ್ತವೆ.

ಹಳಿ ತಪ್ಪಿದ ಆದ್ಯತೆ: ತಾಲ್ಲೂಕಿನಲ್ಲಿ ಯಾರನ್ನೇ ಮಾತಿಗೆ ಎಳೆದರೂ ತೀರ್ಥ- ಪ್ರಸಾದಗಳೇ ಚರ್ಚೆಯ ವಸ್ತು. ಹಾಲಿ ಶಾಸಕ ಮತ್ತು ಶಾಸಕನಾಗಲು ಹೊರಟಿರುವ ಯುವ ನಾಯಕನೇ ಅದರ ಕೇಂದ್ರ ಬಿಂದು. ಜನರ ಮಾತಿನಲ್ಲಿ ಪಕ್ಷವಾಗಲೀ, ಸರ್ಕಾರವಾಗಲೀ, ಕಾರ್ಯಕ್ರಮಗಳಾಗಲೀ ಪ್ರಸ್ತಾಪವೇ ಆಗುವುದಿಲ್ಲ. ವ್ಯಕ್ತಿ ಕೇಂದ್ರಿತ ರಾಜಕಾರಣದಲ್ಲಿ ಸಮುದಾಯ ಹಿತ ಪೂರ್ತಿ ಪಕ್ಕಕ್ಕೆ ಸರಿದಿದೆ. ಆದ್ಯತೆಗಳು ಹಳಿ ತಪ್ಪಿವೆ ಎಂಬುದು ಜನರ ಅನಿಸಿಕೆಗಳಿಂದಲೇ ಸ್ಪಷ್ಟವಾಗುತ್ತದೆ.ತಾಲ್ಲೂಕಿನಲ್ಲಿ ಕೊಳವೆಬಾವಿ ಸಾವಿರ ಅಡಿ ಕೊರೆಸಿದರೂ ನೀರು ಸಿಗುವ ಖಾತರಿ ಇಲ್ಲ. ಈಗ ದೊರೆತ ನೀರು ಮುಂದಿನ ಹಂಗಾಮಿಗೆ ಉಳಿಯುವ ಭರವಸೆಯೂ ಇಲ್ಲ. ಆದರೆ ಪ್ರತಿ ಶಿವರಾತ್ರಿಗೂ `ಗಂಗಾಜಲ~ ತಪ್ಪದೆ ಹರಿಯುತ್ತದೆ ಎಂದರು ರಾಮಸ್ವಾಮಿ. ಹಾಗೆ ಹೇಳುವಾಗ ಅವರ ಮುಖದಲ್ಲಿ ವ್ಯಂಗ್ಯದ ಲಾಸ್ಯ ಇತ್ತು.

`ರಸ್ತೆಗಿಸ್ತೆ ಯಾವುದೂ ಇಲ್ಲ. ತಾಲ್ಲೂಕು ಕಚೇರಿ ಎದುರು ನಿತ್ಯ ಮಧ್ಯಾಹ್ನ ಪುಕ್ಕಟೆ ಅನ್ನ ಹಾಕ್ತಾರಲ್ಲ, ಅಷ್ಟೇ ಸಾಕು...~ ಎಂದರು ಬೆಳ್ಳಾವಿಯ ಬಿ.ಕೆ. ರಾಮಣ್ಣ.`ಅನ್ನ ದಾಸೋಹದಿಂದ ಪಟ್ಟಣದ ಹೋಟೆಲ್ ಉದ್ಯಮ ಹಳ್ಳ ಹಿಡಿದಿದೆ. ಮೈಗಳ್ಳರ ಸಂಖ್ಯೆ ಹೆಚ್ಚತೊಡಗಿದೆ~ ಎಂದು ಶಾಸಕರ ಅಭಿವೃದ್ಧಿ ಮಾದರಿಗಳ ಬಗ್ಗೆ ತಾಲ್ಲೂಕು ಪಂಚಾಯ್ತಿ ಮಾಜಿ ಸದಸ್ಯ ಟಿ. ಮುನಿಯಪ್ಪ ಕುಟುಕಿದರು. `ಪರ‌್ವಾಗಿಲ್ಲ. ಹಬ್ಬಕ್ಕೆ ಒಂದಷ್ಟು ಐಟಂ ಕೊಟ್ಟರು~ ಎಂಬುದು ಮೆಕಾನಿಕ್ ದಿಲ್ಶನ್ ಖುಷಿಗೆ ಕಾರಣ. ದೇವಸ್ಥಾನ ಕಟ್ಟಲು ನೆರವಾಗಿದ್ದಾರೆ ಎಂದು ಡಿ.ಎನ್.ದೊಡ್ಡಿಯ ನಾರಾಯಣಪ್ಪ ಮೆಚ್ಚುಗೆ ಸೂಚಿಸಿದರು.ಮಾಲೂರಿನಿಂದ ಮಾಸ್ತಿಗೆ ಹೋಗಿ ಬಂದರೆ ಸಾಕು ಮೂಲಸೌಕರ್ಯದ ದುಃಸ್ಥಿತಿ ಯಾರಿಗಾದರೂ ಮನವರಿಕೆ ಆಗುತ್ತದೆ. ರಸ್ತೆ ಈ ಪರಿ ಕೆಟ್ಟಿದೆ, ಯಾರೂ ಕೇಳೋದಿಲ್ವೆ ಎಂದು ಚಿಕ್ಕ ಇಗ್ಗಲೂರು ಬಳಿ ಹೊಲದ ಬದು ಮೇಲೆ ನಿಂತಿದ್ದ ಅಜ್ಜನನ್ನು ಕೇಳಿದರೆ, `ಹೋಗಪ್ಪೋ... ಜನ ನಾಲಿಗೆ ಕಳಕೊಂಡವರೆ~ ಎಂದರು. ಹಂಗಿಗೆ ಒಳಗಾದ ಜನರಿಗೆ ಪ್ರಶ್ನಿಸುವ ನೈತಿಕತೆ ಹೇಗೆ ಉಳಿದೀತು ಎಂದು ಕೇಳಿದಂತಿತ್ತು ಅವರ ಮಾತಿನ ಮರ್ಮ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.