ಗುರುವಾರ , ಜೂನ್ 24, 2021
25 °C

ಎಂಟು ಜಿಲ್ಲೆಗಳಿಗೂ ವಿಸ್ತರಿಸಿದ ಚಟುವಟಿಕೆ:ನೀರಾವರಿಗಾಗಿ ಹೋರಾಟ ಸಮಿತಿಗಳ ಪೈಪೋಟಿ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ Updated:

ಅಕ್ಷರ ಗಾತ್ರ : | |

ಚಿಕ್ಕಬಳ್ಳಾಪುರ: ಒಂದೆಡೆ ರಾಜ್ಯದ ರಾಜಧಾನಿಯಲ್ಲಿ ಬಿರುಸಾದ ರಾಜಕೀಯ ಚಟುವಟಿಕೆ ರಂಗೇರುತ್ತಿದ್ದರೆ, ಮತ್ತೊಂದೆಡೆ ಬರಪೀಡಿತ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕಾಗಿ ಮತ್ತೆ ಹೋರಾಟ ಆರಂಭಗೊಂಡಿದೆ.

 

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಮಾತ್ರವೇ ಸೀಮಿತವಾಗಿದ್ದ ಹೋರಾಟ ಈಗ ಬೇರೆ ಜಿಲ್ಲೆಗಳಿಗೂ ವಿಸ್ತರಿಸಿದೆ. ಆಯಾ ಜಿಲ್ಲೆಯ ಸಂಘಸಂಸ್ಥೆಗಳು ಹೋರಾಟಕ್ಕೆ ಸಿದ್ಧತೆ ನಡೆಸಿವೆ. ಆದರೆ ಈ ಬಾರಿಯ ಹೋರಾಟ ಈ ಹಿಂದಿನ ಹೋರಾಟಗಳಿಗಿಂತ ಕೊಂಚ ಭಿನ್ನವಾದದ್ದು.ಭಿನ್ನತೆಗೆ ಕಾರಣ: ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಗೊಳಿಸಲು ಹೋರಾಟ ನಡೆಸಲೆಂದೇ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಗಳ ನಡುವೆಯೇ ಭಾರಿ ಪೈಪೋಟಿ ಏರ್ಪಟ್ಟಿದೆ. ಸಿಪಿಎಂ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೇತೃತ್ವದಲ್ಲಿ ಒಂದೆಡೆ ಎಂಟು ಬರಪೀಡಿತ ಜಿಲ್ಲೆಗಳಲ್ಲಿ ಹೋರಾಟ ಸಮಿತಿಗಳು ರಚನೆಯಾದರೆ, ಮತ್ತೊಂದೆಡೆ ಇತರ ಸಂಘಸಂಸ್ಥೆಗಳ ಸಹಯೋಗದಲ್ಲಿ ಅದೇ ಜಿಲ್ಲೆಗಳಲ್ಲಿ ಪ್ರತ್ಯೇಕ ಹೋರಾಟ ಸಮಿತಿಗಳು ರಚನೆಯಾಗಿವೆ. ಹೋರಾಟದ ಸಿದ್ಧತಾ ಪ್ರಕ್ರಿಯೆ ಆರಂಭಗೊಂಡಿದೆ.ಕೇಂದ್ರ ಸಚಿವ ವೀರಪ್ಪ ಮೊಯಿಲಿಯವರ ಮಹತ್ವಾಕಾಂಕ್ಷೆಯ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ಪ್ರಬಲವಾಗಿ ವಿರೋಧಿಸುವ ಪ್ರಗತಿಪರ ಸಂಘಟನೆಗಳ ನೇತೃತ್ವದ ಹೋರಾಟ ಸಮಿತಿಯು ನೀರಾವರಿ ತಜ್ಞ ಜಿ.ಎಸ್.ಪರಮಶಿವಯ್ಯ ವರದಿ ಆಧರಿಸಿದ ನೀರಾವರಿ ಯೋಜನೆ ಜಾರಿಗೆ ಪಟ್ಟು ಹಿಡಿದಿದೆ.

 

ಆದರೆ ಎತ್ತಿನಹೊಳೆ ಯೋಜನೆಯನ್ನು ಸ್ಪಷ್ಟವಾಗಿ ವಿರೋಧಿಸದ ಸಂಘಸಂಸ್ಥೆಗಳ ಹೋರಾಟ ಸಮಿತಿಯು ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆಯಷ್ಟೇ ಅಲ್ಲ, ಬೇರೆ ಕಡೆಯಿಂದ ನೀರು ಬಂದರೂ ಸ್ವಾಗತವಿದೆ ಎಂದು ಹೇಳುತ್ತಿದೆ.ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿಯು ತುಮಕೂರಿನಲ್ಲಿ ಬೃಹತ್ ಸಮಾವೇಶ ನಡೆಸುವುದರ ಮೂಲಕ ನೀರಾವರಿ ಹೋರಾಟಕ್ಕೆ ಚಾಲನೆ ನೀಡಿದರೆ, ಸಂಘಸಂಸ್ಥೆಗಳ ಹೋರಾಟ ಸಮಿತಿಯು ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನದ ಆವರಣದಲ್ಲಿ ಮಂಗಳವಾರ ಪ್ರತಿಭಟನೆ ನಡೆಸುವುದರ ಮೂಲಕ ಹೋರಾಟ ಆರಂಭಿಸಿದೆ.ನೀರಾವರಿ ಯೋಜನೆಗೆ ಸಂಬಂಧಿಸಿದಂತೆ ಎರಡೂ ಸಮಿತಿಗಳು ಕೃತಿಗಳನ್ನು ರಚಿಸಿದ್ದು, ಈಗಾಗಲೇ ಎರಡು ಕೃತಿಗಳು ತುಮಕೂರಿನಲ್ಲಿ ಬಿಡುಗಡೆಯಾಗಿದೆ. ಮತ್ತೊಂದು ಕೃತಿಯು ಗುರುವಾರ ಬಿಡುಗಡೆಯಾಗಲಿದೆ.`ಒಂದು ಹೋರಾಟ ಯಶಸ್ವಿಯಾಗಬೇಕಿದ್ದರೆ, ಅದು ಜನಾಂದೋಲನ ರೂಪ ಪಡೆಯಬೇಕು. ಬರೀ ನಾಯಕರೇ ಉಪಸ್ಥಿತರಿದ್ದು, ಕಾರ್ಯಕರ್ತರು ಮತ್ತು ಜನರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದರೆ ಯಾವ ಹೋರಾಟವು ಯಶಸ್ವಿಯಾಗುವುದಿಲ್ಲ. ಎತ್ತಿನಹೊಳೆ ಯೋಜನೆಯನ್ನು ವಿರೋಧಿಸುವ ನಾವು ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆಗೆ ಪಟ್ಟು ಹಿಡಿದಿದ್ದೇವೆ.ನೀರಾವರಿಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುತ್ತೇವೆ. ಗ್ರಾಮಮಟ್ಟದಿಂದ ಹೋರಾಟ ಬಲಗೊಳಿಸುತ್ತ ಮುನ್ನಡೆಯುತ್ತೇವೆ~ ಎಂದು ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಸಮಿತಿಯ ಮುಖಂಡ ಹಾಗೂ ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಹೇಳುತ್ತಾರೆ.`ಜಿಲ್ಲೆಯ ವಿವಿಧ ಸಂಘಟನೆಗಳ ಜೊತೆಗೂಡಿ ಹೋರಾಟ ನಡೆಸಬೇಕಾಗುತ್ತದೆ. ಯಾವುದೇ ನಿರ್ಧಾರ ತೆಗೆದು ಕೊಳ್ಳಬೇಕಿದ್ದರೂ ಎಲ್ಲ ಸಂಘಸಂಸ್ಥೆಗಳ ಅಭಿಪ್ರಾಯ, ಅನಿಸಿಕೆ ಪಡೆಯಬೇಕಾಗುತ್ತದೆ. ನಾವು ಸದ್ಯಕ್ಕೆ ಎತ್ತಿನಹೊಳೆ ನೀರಾವರಿ ಯೋಜನೆಯನ್ನು ವಿರೋಧಿಸುವುದಿಲ್ಲ.

 

ಆದರೆ ಪರಮಶಿವಯ್ಯ ವರದಿಯಾಧಾರಿತ ನೀರಾವರಿ ಯೋಜನೆ ಜಾರಿಗೆ ತರುವಂತೆ ರಾಜ್ಯ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ. ನಿರಂತರವಾಗಿ ಪ್ರತಿಭಟನೆ, ಹೋರಾಟ ಹಮ್ಮಿಕೊಳ್ಳುತ್ತೇವೆ~ ಎಂದು ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ಸಂಚಾಲಕ ಆಂಜನೇಯರೆಡ್ಡಿ ಹೇಳುತ್ತಾರೆ.ಬಿಡುಗಡೆ:  ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ  ಜಿ.ಎಸ್.ಶ್ರೀರಾಮರೆಡ್ಡಿಯವರ `ಬರನಾಡಿನ ಬವಣೆಗಳು~ ಮತ್ತು ಕರಾವಳಿಯ ಸಿಪಿಎಂ ಮುಖಂಡ ಬಿ.ಮಾಧವ ಅವರ `ಕರಾವಳಿ ಜನರ ಆತಂಕಗಳು ಮತ್ತು ನೀರಾವರಿ~ ಎಂಬ ಕೃತಿಯು ಈಗಾಗಲೇ ಬಿಡುಗಡೆಯಾಗಿದೆ. ಒಕ್ಕಲಿಗರ ಸಂಘದ ಕಲ್ಯಾಣ ಮಂಟಪದಲ್ಲಿ ನಡೆಯುವ ಸಮಾರಂಭದಲ್ಲಿ ಡಾ. ಮಧುಸೀತಪ್ಪ ಅವರ `ಬಯಲುಸೀಮೆಗೆ ಶಾಶ್ವತ ನೀರಾವರಿ~ ಎಂಬ ಕೃತಿ ಬಿಡುಗಡೆಯಾಗಲಿದೆ.ಪ್ರತಿಭಟನೆ, ಸಮಾವೇಶ

 

ವಿಶ್ವ ಜಲ ದಿನಾಚರಣೆ ಅಂಗವಾಗಿ ಚಿಕ್ಕಬಳ್ಳಾಪುರದ ಎರಡೂ ಶಾಶ್ವತ ನೀರಾವರಿ ಹೋರಾಟ ಸಮಿತಿಗಳು ಗುರುವಾರ ಕಾರ್ಯಕ್ರಮ ಹಮ್ಮಿಕೊಂಡಿವೆ.ಪ್ರಗತಿಪರ ಸಂಘಟನೆಗಳ ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಅಂದು ಬೃಹತ್ ಪ್ರತಿಭಟನೆ ಆಯೋಜಿಸಿದ್ದರೆ, ಸಂಘಸಂಸ್ಥೆಗಳ ಶಾಶ್ವತ ನೀರಾವರಿ ಹೋರಾಟ ಸಮಿತಿಯು ಒಕ್ಕಲಿಗರ ಸಂಘದ ಕಲ್ಯಾಣ ಮಂಟಪದಲ್ಲಿ ಬೃಹತ್ ಸಮಾವೇಶ ಹಮ್ಮಿ ಕೊಂಡಿದೆ.ಎರಡೂ ಕಾರ್ಯಕ್ರಮಗಳಿಗೆ ಜಿಲ್ಲೆಯ ಪ್ರಮುಖ ಮುಖಂಡರು ಮತ್ತು ಇತರರು ಭಾಗವಹಿಸಲಿದ್ದಾರೆ.

ಅವಿಭಜಿತ ಕೋಲಾರ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆದರೆ, ಹಾಲಿ ನೀರಾವರಿ ಹೋರಾಟ ಸಮಿತಿಯ ಸಹಯೋಗದಲ್ಲಿ ಸಮಾವೇಶ ನಡೆಯಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.