ಮಂಗಳವಾರ, ಮೇ 11, 2021
25 °C

ಎಂ.ಟೆಕ್ ಕೌನ್ಸೆಲಿಂಗ್‌ನಲ್ಲಿ ಗೊಂದಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು:  ಪ್ರವೇಶ ಪ್ರಕ್ರಿಯೆಗೆ ಸಂಬಂಧಿಸಿದ ನಿಯಮಾವಳಿಗಳನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಎಂ.ಟೆಕ್ ಕೋರ್ಸ್‌ಗಳ ಪ್ರವೇಶಕ್ಕೆ `ಗೇಟ್~ ಪರೀಕ್ಷೆ ಬರೆದಿದ್ದ ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಕೌನ್ಸೆಲಿಂಗ್ ಸಂದರ್ಭದಲ್ಲಿ ಶೇ 10ರಷ್ಟು ಸೀಟುಗಳನ್ನು ಮೀಸಲಿಡುವ ಮೂಲಕ ಗೊಂದಲ ಸೃಷ್ಟಿಸಿದೆ.ವಿದ್ಯಾರ್ಥಿಗಳ ಪ್ರತಿಭಟನೆ, ಗೊಂದಲದ ನಡುವೆಯೇ ಎಂ.ಟೆಕ್ ಕೋರ್ಸ್‌ಗಳ ಪ್ರವೇಶಕ್ಕೆ ಶುಕ್ರವಾರ ಮಧ್ಯಾಹ್ನ ಕೌನ್ಸೆಲಿಂಗ್ ಆರಂಭವಾದಾಗ ಗೇಟ್ ಪರೀಕ್ಷೆ ಬರೆದಿರುವ ಕರ್ನಾಟಕೇತರ ಅಭ್ಯರ್ಥಿಗಳಿಗೆ ಮೀಸಲಾತಿ ಇರುವುದಿಲ್ಲ.

 

ಅರ್ಹತೆ ಮೇಲೆ ಯಾರು ಬೇಕಾದರೂ ಸೀಟು ಪಡೆಯಬಹುದು ಎಂದು ಪ್ರಾಧಿಕಾರದ ಅಧಿಕಾರಿಗಳು ತಿಳಿಸಿದರು. ಆದರೆ ಸಂಜೆ ವೇಳೆಗೆ ಶೇ 10ರಷ್ಟು ಸೀಟು ಮೀಸಲಿಟ್ಟಿರುವುದಾಗಿ ಪ್ರಾಧಿಕಾರ ಪ್ರಕಟಿಸಿತು.ವಾಸ್ತವವಾಗಿ ಗೇಟ್ ಪರೀಕ್ಷೆ ಬರೆದಿರುವ ಕರ್ನಾಟಕೇತರ ಅಭ್ಯರ್ಥಿಗಳಿಗೆ ಸೀಟುಗಳನ್ನು ಮೀಸಲಿಡಲು ಬರುವುದಿಲ್ಲ. ಅರ್ಹತೆ ಆಧಾರದ ಮೇಲೆ ಯಾರು ಬೇಕಾದರೂ ಪಡೆದುಕೊಳ್ಳಬಹುದು. ಕೇವಲ ಪಿಜಿಸಿಇಟಿ ಬರೆದಿರುವ ವಿದ್ಯಾರ್ಥಿಗಳಿಗೆ ಮೀಸಲಾದ ಸೀಟುಗಳಲ್ಲಿ ಮಾತ್ರ ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಸೀಟುಗಳನ್ನು ಮೀಸಲಿಡಬಹುದು.ಆದರೆ ಇದನ್ನು ಸರಿಯಾಗಿ ಅರ್ಥಮಾಡಿಕೊಳ್ಳದ ಅಧಿಕಾರಿಗಳು ಗೇಟ್ ಬರೆದಿದ್ದ ವಿದ್ಯಾರ್ಥಿಗಳಿಗೂ ಶೇ 10ರಷ್ಟು ಸೀಟುಗಳನ್ನು ಮೀಸಲಿಟ್ಟಿದ್ದಾರೆ ಎಂದು ಪೋಷಕರೊಬ್ಬರು ತಿಳಿಸಿದರು.ಕೌನ್ಸೆಲಿಂಗ್ ಆರಂಭವಾದಾಗ ಗೇಟ್‌ನಲ್ಲಿ ಕರ್ನಾಟಕ ವಿದ್ಯಾರ್ಥಿಗಳಿಗೆ ಶೇ 90ರಷ್ಟು ಹಾಗೂ ಕರ್ನಾಟಕೇತರ ವಿದ್ಯಾರ್ಥಿಗಳಿಗೆ ಶೇ 10ರಷ್ಟು ಸೀಟುಗಳನ್ನು ನೀಡಬೇಕು ಎಂದು ಕೆಲ ವಿದ್ಯಾರ್ಥಿಗಳು ಗಲಾಟೆ ಮಾಡಿದರು.ಅಖಿಲ ಭಾರತ ವಿದ್ಯಾರ್ಥಿ ಪರಿಷತ್‌ನ ಮುಖಂಡರು ಸಹ ಇದಕ್ಕೆ ಧ್ವನಿಗೂಡಿಸಿದರು. ಒತ್ತಡಕ್ಕೆ ಮಣಿದ ಪ್ರಾಧಿಕಾರದ ಅಧಿಕಾರಿಗಳು ಕರ್ನಾಟಕೇತರ ಅಭ್ಯರ್ಥಿಗಳಿಗೆ ಶೇ 10ರಷ್ಟು ಸೀಟುಗಳನ್ನು ನೀಡುವುದಾಗಿ ಪ್ರಕಟಿಸಿದರು.ಇದನ್ನು ಹೊರ ರಾಜ್ಯಗಳ ವಿದ್ಯಾರ್ಥಿಗಳು ವಿರೋಧಿಸಿದರು. ಗೊಂದಲದ ನಡುವೆಯೇ ಶುಕ್ರವಾರ ಬೆಳಿಗ್ಗೆ ನಡೆಯಬೇಕಾಗಿದ್ದ ಕೌನ್ಸೆಲಿಂಗ್ ರಾತ್ರಿ 9ಕ್ಕೆ ಶುರುವಾಗಿ ಶನಿವಾರ ಮುಂಜಾನೆವರೆಗೂ ನಡೆಯಿತು. ವಿದ್ಯಾರ್ಥಿಗಳು, ಪೋಷಕರು ರಾತ್ರಿಯೆಲ್ಲ ನಿದ್ದೆಯಿಲ್ಲದೆ ಕಳೆಯುವಂತಾಯಿತು ಎಂದು ಕೌನ್ಸೆಲಿಂಗ್‌ಗೆ ಹಾಜರಾಗಿದ್ದ ಪೋಷಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.ಹಾಲಿ ಇರುವ ನಿಯಮಾವಳಿಗಳ ಪ್ರಕಾರ ಗೇಟ್ ಪರೀಕ್ಷೆ ಬರೆದಿರುವ ಹೊರ ರಾಜ್ಯಗಳ ವಿದ್ಯಾರ್ಥಿಗಳಿಗೆ ಮೀಸಲಾತಿ ನೀಡಲು ಬರುವುದಿಲ್ಲ. ಆ ರೀತಿ ಮಾಡಬೇಕಾದರೆ ನಿಯಮಾವಳಿಗಳಲ್ಲಿ ಬದಲಾವಣೆ ಮಾಡಬೇಕಾಗುತ್ತದೆ. ತಪ್ಪು ಆಗಿರುವುದು ನಿಜ.ಆದರೆ ಬಹುತೇಕ ಎಲ್ಲ ಆಕಾಂಕ್ಷಿಗಳಿಗೆ ಸೀಟು ಸಿಗುವ ಸಾಧ್ಯತೆ ಇರುವುದರಿಂದ ತೊಂದರೆಯಾಗದು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.ಇದುವರೆಗೆ ಎಂಟೆಕ್ ಕೋರ್ಸ್‌ಗಳ ಪ್ರವೇಶ ಪರೀಕ್ಷೆ, ಕೌನ್ಸೆಲಿಂಗ್ ಅನ್ನು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವೇ ನಡೆಸುತ್ತಿತ್ತು.ಆದರೆ ಇದರಲ್ಲಿ ಪಾರದರ್ಶಕತೆ ಇರುವುದಿಲ್ಲ ಎಂಬ ದೂರುಗಳು ಬಂದ ಕಾರಣ, ಈ ವರ್ಷ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಈ ಜವಾಬ್ದಾರಿಯನ್ನು ವಹಿಸಲಾಗಿದೆ. ಮೊದಲ ಬಾರಿಗೆ ಪ್ರಾಧಿಕಾರ ಕೌನ್ಸೆಲಿಂಗ್ ನಡೆಸುತ್ತಿರುವುದರಿಂದ ಯಾವ ರೀತಿ ಸೀಟುಗಳನ್ನು ಹಂಚಿಕೆ ಮಾಡಬೇಕು ಎಂದು ಅವರಿಗೂ ಗೊತ್ತಾಗಿಲ್ಲ ಎಂದು ಅಭಿಪ್ರಾಯಪಟ್ಟರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.