ಸೋಮವಾರ, ಜನವರಿ 27, 2020
26 °C

ಎಟಿಎಸ್-ಪೊಲೀಸರ ನಡುವೆ ಸಹಕಾರ ಕೊರತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ, (ಪಿಟಿಐ): ಕಳೆದ ಜುಲೈ 13ರಂದು ನಡೆದ ಮುಂಬೈ ತ್ರಿವಳಿ ಬಾಂಬ್ ಸ್ಫೋಟ ಪ್ರಕರಣದ ತನಿಖೆಗೆ ಸಂಬಂಧಿಸಿ  ಮಹಾರಾಷ್ಟ್ರದ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಮತ್ತು ದೆಹಲಿ ಪೊಲೀಸ್ ನಡುವೆ ಸಹಕಾರದ ಕೊರತೆ ಇತ್ತು ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.ಆದರೆ ಎರಡು ತಂಡಗಳ ನಡುವೆ ಸಂಘರ್ಷ ನೆಲೆಸಿತ್ತು ಎಂಬ ಹೇಳಿಕೆಯನ್ನು ಇದೇ ವೇಳೆ ಅಲ್ಲಗಳೆದರು.

ಪ್ರಕರಣಕ್ಕೆ ಸಂಬಂಧಿಸಿ, ಎಟಿಎಸ್ ಇಬ್ಬರು ಮುಜಾಹಿದ್ದೀನ್ ಉಗ್ರರನ್ನು ಬಂಧಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಕೇಂದ್ರ ಗೃಹ ಕಾರ್ಯದರ್ಶಿ ಆರ್. ಕೆ. ಸಿಂಗ್, ರಾಜ್ಯಗಳಲ್ಲಿನ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯಲ್ಲಿ ಏಕರೂಪದ ನಿರ್ವಹಣಾ ವ್ಯವಸ್ಥೆಯ ಅಗತ್ಯವಿದೆ ಎಂದರು.ಸಾಕ್ಷ್ಯಗಳ ಆಧಾರದ ಮೇರೆಗೆ ಎಟಿಎಸ್ ಕಾರ್ಯನಿರ್ವಹಿಸಿದ್ದು, ಅದನ್ನೀಗ ಕಾನೂನು ರೀತ್ಯಾ ಮುಂದುವರಿಸಲಿದೆ ಎಂದರು.   ಭಯೋತ್ಪಾದನೆಯನ್ನು ನಿಗ್ರಹಿಸುವಲ್ಲಿ ಎಲ್ಲ ಪಡೆಗಳ ನಡುವೆ ಸಮಗ್ರತೆಯನ್ನು ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಭಯೋತ್ಪಾದನಾ ನಿಗ್ರಹ ಕೇಂದ್ರ (ಎನ್‌ಸಿಟಿಸಿ)ವನ್ನು ಸರ್ಕಾರ ಸ್ಥಾಪಿಸಿದ್ದು, ಕೂಡಲೇ ಅದು ಕಾರ್ಯಾಚರಿಸಲಿದೆ ಎಂದರು.ಏಕರೂಪದ ಕಾರ್ಯಾಚರಣೆಯನ್ನು ಜಾರಿಗೆ ತರುವ ಸಲುವಾಗಿ ವಿವಿಧ ರಾಜ್ಯಗಳ ಪೊಲೀಸ್ ಮಹಾ ನಿರ್ದೇಶಕರ ಸಭೆ ಕರೆಯಲಾಗುವುದು ಎಂದು ಅವರು ಹೇಳಿದರು.ಬಿಜೆಪಿ ಟೀಕೆ: ಬಾಂಬ್ ಸ್ಫೋಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿಗಳ ಕುರಿತು  ಎಟಿಎಸ್ ಮತ್ತು ದೆಹಲಿ ಪೊಲೀಸರು ವಿಭಿನ್ನ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಸರ್ಕಾರದ ರಾಜಕೀಯ ಇಚ್ಛಾಶಕ್ತಿಯ ಕೊರತೆಯನ್ನು ತೋರಿಸುತ್ತದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡೆಕರ್ ಟೀಕಿಸಿದ್ದಾರೆ.

ಭಯೋತ್ಪಾದನಾ ಪ್ರಕರಣಗಳ ತನಿಖೆಯಲ್ಲಿ ಭದ್ರತಾ ಸಂಸ್ಥೆಗಳು ಸಭ್ಯ ನಡವಳಿಕೆಯಿಂದ ದೂರ ಸಾಗುತ್ತಿದೆ ಎಂದು ಬಿಜೆಪಿ ವಕ್ತಾರ ಪ್ರಕಾಶ್ ಜಾವೇಡೆಕರ್ ದೂರಿದರು.ಇತ್ತೀಚೆಗೆ ನಡೆದ ಒಂಬತ್ತು ಬಾಂಬ್ ಸ್ಫೋಟ ಪ್ರಕರಣಗಳ ತನಿಖೆಯ ವಿಷಯದಲ್ಲಿ ಸರ್ಕಾರ ಸೋಲು ಅನುಭವಿಸಿದ್ದು,  ಗೃಹ ಸಚಿವ ಪಿ. ಚಿದಂಬರಂ ಅವರು ನೈತಿಕ ಜವಾಬ್ದಾರಿ ಹೊತ್ತು ದೇಶದ ಜನತೆಗೆ ಉತ್ತರ ನೀಡಬೇಕಾಗಿದೆ ಎಂದು ಹೇಳಿದರು.ಚಿದಂಬರಂ ಅವರು ಗೃಹ ಸಚಿವರಾಗಿ  ನೇಮಕಗೊಂಡಾಗ ಪರಿಸ್ಥಿತಿ ಸುಧಾರಿಸಬಹುದು ಎಂದು ಜನ ನಂಬಿದ್ದರು. `ಅವರು ಎನ್‌ಐಎ ಯಂತಹ ಸಂಸ್ಥೆಯನ್ನು ಹುಟ್ಟು ಹಾಕಿದರು. ಆದರೆ ಕನಿಷ್ಠ ಒಂಬತ್ತು ಸ್ಫೋಟ ಪ್ರಕರಣಗಳನ್ನು ಕೂಡ ಬಗೆಹರಿಸಲು ಸಾಧ್ಯವಾಗಲಿಲ್ಲ. ಈಗ ಹೊಸದಾಗಿ ತಲೆದೋರಿರುವ ದೆಹಲಿ ಪೊಲೀಸ್ ಮತ್ತು ಎಟಿಎಸ್ ನಡುವಿನ ಭಿನ್ನಾಭಿಪ್ರಾಯಗಳು ಎರಡೂ ತಂಡಗಳ ನಡುವಿನ ಸಹಕಾರದ ಕೊರತೆಯನ್ನು ಎತ್ತಿ ತೋರಿಸುತ್ತಿವೆ ಎಂದು  ಜಾವೇಡೆಕರ್ ಟೀಕಿಸಿದರು.ಬಾಂಬ್ ಸ್ಫೋಟ ಪ್ರಕರಣಗಳನ್ನು ಭೇದಿಸುವಲ್ಲಿ ತನಿಖಾ ಸಂಸ್ಥೆಗಳು ವಿಫಲವಾಗುತ್ತಿರುವ ಕುರಿತು ಆಳವಾದ ತನಿಖೆ ನಡೆಯುವುದು ಅತ್ಯಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದರು.

ಪ್ರತಿಕ್ರಿಯಿಸಿ (+)