ಸೋಮವಾರ, ಏಪ್ರಿಲ್ 12, 2021
22 °C

ಎದೆ ಹಾಲು ವಿಷವಾಗುತ್ತಿದೆ ಹೇಗೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎದೆ ಹಾಲು ವಿಷವಾಗುತ್ತಿದೆ ಹೇಗೆ?

ಭಾಗ 2

ಒಮ್ಮೆ ದಂಪತಿ ತಮ್ಮ ಇಬ್ಬರು ಮಕ್ಕಳೊಂದಿಗೆ ನನ್ನ ಬಳಿ ಬಂದಿದ್ದರು. `ನೋಡಿ ಡಾಕ್ಟ್ರೇ ಮೊದಲ ಮಗು ಸುಮಾರಾಗಿ ಇದೆ. ಆದರೆ ಎರಡನೇ ಮಗು ಮಾತ್ರ ಯಾಕೋ ಸ್ವಲ್ಪ ಮಂಕು. ಹೇಗಾದ್ರೂ ಮಾಡಿ ಸರಿಮಾಡಿಕೊಡಿ~ ಎಂದು ಅಲವತ್ತುಕೊಂಡರು. ಕೊನೆಗೂ ಸಮಸ್ಯೆಯ ಮೂಲ ಪತ್ತೆ ಹಚ್ಚಿದಾಗ ತಿಳಿದುಬಂತು.ಹೆಂಡತಿ ಎರಡನೇ ಮಗುವಿನ ಗರ್ಭಿಣಿಯಾಗುವ ಹೊತ್ತಿಗೆ ಅವರು ಮೊದಲಿದ್ದ ಮನೆಯನ್ನು ತೊರೆದು ಬ್ಯಾಟರಿ ದುರಸ್ತಿ ಅಂಗಡಿಯ ಪಕ್ಕದ ಮನೆಗೆ ಸ್ಥಳಾಂತರಗೊಂಡಿದ್ದರು. ಎರಡೂ ಮಕ್ಕಳ ರಕ್ತಪರೀಕ್ಷೆ ಮಾಡಿಸಿದಾಗ ಚಿಕ್ಕ ಮಗುವಿನಲ್ಲಿ ಸೀಸದ ಅಂಶ ಸಾಕಷ್ಟು ಹೆಚ್ಚಾಗಿದ್ದುದು ಕಂಡುಬಂತು.

 

 
ಒಂದು ಯುಪಿಎಸ್‌ನಲ್ಲಿ ಎಷ್ಟು ಸೀಸ ಇರುತ್ತದೆ ಗೊತ್ತೇ? ಬರೋಬ್ಬರಿ 8 ಕೆ.ಜಿ. ನಮ್ಮ ಇಡೀ ಬೆಂಗಳೂರಿನ ಎಲ್ಲ ಮಕ್ಕಳ ಬುದ್ಧಿಮತ್ತೆಯನ್ನೂ ಹಾಳು ಮಾಡಲು ಇಷ್ಟು ಸೀಸ ಸಾಕು!

ಬ್ಯಾಟರಿ ದುರಸ್ತಿಗೆ ಬಳಸುವ ಸೀಸ ತಾಯಿಯ ಉಸಿರಾಟದ ಮೂಲಕ ಭ್ರೂಣವನ್ನು ಸೇರಿ, ಹುಟ್ಟಿದ ಬಳಿಕ ಮಗುವಿನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿತ್ತು. ನಗರ ಪ್ರದೇಶಗಳಲ್ಲಿ ಸೀಸದ ಅಂಶವು ಕಾರ್ಖಾನೆಗಳು ಹೊರಸೂಸುವ ಮಾಲಿನ್ಯ, ಜನವಸತಿಯ ನಡುವೆಯೇ ಇರುವ ಮೊಬೈಲ್, ಬ್ಯಾಟರಿ ದುರಸ್ತಿ ಅಂಗಡಿಗಳು, ರೇಡಿಯೇಟರ್‌ಗಳ ಮೂಲಕ ಗರ್ಭಿಣಿಯರನ್ನು ಸೇರಿ, ಇನ್ನೂ ಹುಟ್ಟದ ಮಕ್ಕಳ ಮೇಲೆ ಅಧಿಪತ್ಯ ಸ್ಥಾಪಿಸುತ್ತಿದೆ.ಎಸ್ಸೆಸ್ಸೆಲ್ಸಿ, ಪಿಯುಸಿ ಅಥವಾ ಐಟಿಐ ಉತ್ತೀರ್ಣರಾಗುತ್ತಿದ್ದಂತೆಯೇ ಕೆಲ ಯುವತಿಯರು ಎಲೆಕ್ಟ್ರಾನಿಕ್ ವಸ್ತುಗಳ ದುರಸ್ತಿ ಅಂಗಡಿಗಳಲ್ಲಿ, ಗ್ಯಾರೇಜ್‌ಗಳಲ್ಲಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ. ಅಲ್ಲೆಲ್ಲ ಉಪಕರಣಗಳ ಬೆಸುಗೆ ಹಾಕಲು ಬಳಸುವ ಸೀಸವನ್ನೇ ಉಸಿರಾಡುತ್ತಾರೆ. ಅದು ನಿಧಾನವಾಗಿ ಒಳಸೇರಿ ಅವರ ಎಲುಬುಗಳಲ್ಲಿ ಶೇಖರವಾಗತೊಡಗುತ್ತದೆ. ಹಾಗೆ ನೋಡಿದರೆ ಸೀಸದ ಖಜಾನೆಯೇ ಎಲುಬು.ಒಂದು ರೀತಿಯಲ್ಲಿ ಎಲುಬು ಸೀಸದ ರಿಸರ್ವ್ ಬ್ಯಾಂಕ್ ಇದ್ದಂತೆ. ಮುಂದೆ ಈ ಹುಡುಗಿಯರು ಮದುವೆಯಾಗಿ ಗರ್ಭಿಣಿಯರಾದಾಗ ಅವರ ದೇಹದಲ್ಲಿ ಅಡಗಿ ಕುಳಿತಿದ್ದ ಸೀಸ ಕರುಳುಬಳ್ಳಿಯ ಮೂಲಕ ಭ್ರೂಣ ಸೇರುತ್ತದೆ. ಬೆಳೆಯುವ ಮಗುವಿನ ವೆುದುಳಿನಲ್ಲಿ ಸ್ವಲ್ಪ ಸ್ವಲ್ಪವೇ ಶೇಖರಗೊಳ್ಳುತ್ತಾ ಹೋಗುತ್ತದೆ. ಅಷ್ಟೂ ಸಾಲದೆಂಬಂತೆ ತಾಯಿಯ ದೇಹದಲ್ಲಿರುವ ಸೀಸ ಎದೆಯ ಹಾಲಿನ ಮೂಲಕವೂ ಮಗುವನ್ನು ಸೇರುತ್ತದೆ.

 

ಯಾವ ತಾಯಿ ತನ್ನ ಮಗು ಬೆಳೆಯಲು ಅಮೃತ ನೀಡುತ್ತಿದ್ದೇನೆ ಎಂದುಕೊಳ್ಳುವಳೋ ಅದೇ ತಾಯಿ ತನಗೇ ಅರಿವಿಲ್ಲದಂತೆ ತನ್ನ ಕಂದನಿಗೆ ವಿಷ ಉಣಿಸುತ್ತಿರುತ್ತಾಳೆ! ಹೀಗಾಗಿ ಪ್ರತಿ ಗರ್ಭಿಣಿ ಮತ್ತು ಬಾಣಂತಿ ತನ್ನ ರಕ್ತದಲ್ಲಿ ಸೀಸದ ಅಂಶ ಯಾವ ಪ್ರಮಾಣದಲ್ಲಿದೆ ಎಂಬುದನ್ನು ಪರೀಕ್ಷಿಸಿಕೊಳ್ಳುವುದು ಒಳ್ಳೆಯದು.ಈ ಸೀಸದ ಕಾರಣದಿಂದಲೇ ಇತ್ತೀಚೆಗೆ ಬಹುತೇಕ ಹೆಂಗಸರಿಗೆ 40- 45 ವರ್ಷ ವಾಗುತ್ತಿದ್ದಂತೆಯೇ ಮೂಳೆಯ ಕಾಯಿಲೆ ಶುರುವಾಗುತ್ತಿದೆ. ಅದರಲ್ಲೂ ಪಟ್ಟಣವಾಸಿಗಳಲ್ಲಿ ಇದು ಹೆಚ್ಚು. ತಿಳಿವಳಿಕೆಯ ಕೊರತೆಯಿಂದ ಶಿಶುವಿಹಾರಗಳೂ ಮಕ್ಕಳಿಗೆ ಆಹಾರದ ಮೂಲಕ ಸೀಸವನ್ನು ಹಂಚುತ್ತಿವೆ. ಹೀಗಾಗಿ ಶಾಲೆಗೆ ಸೇರುವ ಮೊದಲು ಮತ್ತು ಶಾಲೆ ಸೇರಿದ 6 ತಿಂಗಳ ನಂತರ ಮಗುವಿನಲ್ಲಿ ಸೀಸದ ಅಂಶ ಎಷ್ಟು ಹೆಚ್ಚಾಯಿತು ಎಂದು ಅರಿಯಲು ರಾಷ್ಟ್ರ ಮಟ್ಟದಲ್ಲಿ ಸಂಶೋಧನೆಯನ್ನೇ ಕೈಗೆತ್ತಿಕೊಳ್ಳಲಾಗಿದೆ.ತೀವ್ರ ಆತಂಕದ ವಿಷಯವೆಂದರೆ ಸೀಸ ನಮ್ಮ ಜಲ ಮೂಲಗಳಲ್ಲಿ ಸೇರುತ್ತಿರುವುದು. ಒಮ್ಮೆ ಕಾರಿನಲ್ಲಿ ಬರುತ್ತಾ ಮಧ್ಯದಲ್ಲಿ ಯಾವುದೋ ಕಾರಣಕ್ಕೆ ಹಾಸನದ ಬಳಿ ಇಳಿಯಬೇಕಾಯಿತು. ಅಲ್ಲಿ ಜಲ ಮಂಡಳಿ ಸಿಬ್ಬಂದಿ, ಒಡೆದುಹೋಗಿದ್ದ ಕುಡಿಯುವ ನೀರಿನ ಪೈಪ್ ದುರಸ್ತಿ ಮಾಡುತ್ತಿದ್ದರು. ಆ ಪೈಪ್‌ಗೆ ಸೀಸದ ಬೆಸುಗೆ ಹಾಕುತ್ತಿದ್ದುದನ್ನು ನೋಡಿ ದಿಗ್ಭ್ರಾಂತನಾದೆ.ವಿಚಾರಿಸಿದಾಗ `ನಮಗೇನು ಗೊತ್ತು ಸಾರ್. ಮೇಲಿನವರು ಕೊಟ್ಟಿರೋದನ್ನ ಹಾಕಿ ಸರಿಮಾಡೋದಷ್ಟೇ ನಮ್ಮ ಕೆಲಸ~ ಎಂಬ ಉತ್ತರ ಬಂತು. ನೀರು ಸೋರದಂತೆ ಪೈಪ್‌ಗಳಿಗೆ ಸೀಸದ ಬೆಸುಗೆ ಹಾಕುವ ಪದ್ಧತಿ ಹಿಂದೆ ಅವೆುರಿಕದಲ್ಲೂ ಇತ್ತು. ಆದರೆ ಅಪಾಯ ಅರಿತ ಕೂಡಲೇ ಏನು ಮಾಡಬೇಕು ಎಂಬ ತಿಳಿವಳಿಕೆ ಅವರಿಗೆ ಇದೆ.ಮುದ್ರಣ ಮಾಧ್ಯಮ ಎಷ್ಟೇ ಮುಂದುವರಿದಿದ್ದರೂ ಸೀಸದ ಅಚ್ಚು ಮೊಳೆ ಜೋಡಿಸುವ ವ್ಯವಸ್ಥೆ ನಮ್ಮಲ್ಲಿ ಈಗಲೂ ಕೆಲವೆಡೆ ಇದೆ. ಅವೆುರಿಕ, ಆಸ್ಟ್ರೇಲಿಯ ಮತ್ತು ಯೂರೋಪ್ ದೇಶಗಳಲ್ಲಿ ಎಲ್ಲಿ ಹುಡುಕಿದರೂ ಇಂತಹ ಮೊಳೆಗಳು ಕಾಣಸಿಗುವುದಿಲ್ಲ.ಆದರೆ ಆಫ್ರಿಕಾ ದೇಶಗಳಲ್ಲಿ ಇವುಗಳ ಬಳಕೆ ವ್ಯಾಪಕವಾಗಿದೆ. ಒಟ್ಟಿನಲ್ಲಿ ಎಲ್ಲಿ ಬಡತನ ಹೆಚ್ಚಾಗಿ ಇರುತ್ತದೋ ಅಲ್ಲೆಲ್ಲಾ ಸೀಸದ ಬಳಕೆ ಹೆಚ್ಚು. ಇದೇ ಕಾರಣಕ್ಕೆ, ಮುಂದುವರಿದ ರಾಷ್ಟ್ರಗಳು ಹಳೆಯ ಹಡಗುಗಳನ್ನು ತಮ್ಮ ನೆಲದಲ್ಲಿ ಒಡೆದುಹಾಕಲು ಸಹ ಹಿಂಜರಿಯುತ್ತವೆ. ಇಂತಹ ಕಾರ್ಯಗಳಿಗೆ ನಮ್ಮಂತಹ ರಾಷ್ಟ್ರಗಳ ನೆಲವನ್ನು ಬಳಸಿಕೊಳ್ಳಲು ಹೊಂಚು ಹಾಕುತ್ತವೆ. ನಮ್ಮಲ್ಲಿ ತುತ್ತು ಕೂಳಿಗೂ ಪರದಾಡುವ ಮಂದಿ ಮಲ ಹೊರುತ್ತಾರೆ, ಚರಂಡಿ ದುರಸ್ತಿ ಮಾಡುತ್ತಾರೆ, ತ್ಯಾಜ್ಯದ ತಿಪ್ಪೆಗೇ ಕೈ ಹಾಕಿ ಅಳಿದುಳಿದದ್ದನ್ನು ಹೆಕ್ಕುತ್ತಾರೆ. ಇವೆಲ್ಲಾ ದೇಹಕ್ಕೆ ಸೀಸ ಸೇರಿಸುವ ಸಮೃದ್ಧ ತಾಣಗಳು.ಸಿಹಿ ತಿನಿಸುಗಳ ಮೇಲೆ ಹಾಕುವ `ಬೆಳ್ಳಿಯ ಹಾಳೆ~ಯಲ್ಲೂ (ಸಿಲ್ವರ್ ಫಾಯಿಲ್) ಸೀಸ ಇದೆ ಎಂದರೆ ನಂಬುವಿರಾ? ನಿಜ ಹೇಳಬೇಕೆಂದರೆ ಅದು `ಬೆಳ್ಳಿಯ ಹಾಳೆ~ ಅಲ್ಲವೇ ಅಲ್ಲ. ನಿಜವಾದ ಬೆಳ್ಳಿಯ ಹಾಳೆಯಲ್ಲಿ ಸೀಸ ಇರುವುದಿಲ್ಲ. ಆದರೆ ಅದು ಬಹಳಷ್ಟು ದುಬಾರಿ. ಈಗಿನ ಬೆಳ್ಳಿಯ ಬೆಲೆ ನೋಡಿದರೆ ಸಿಹಿ ತಿಂಡಿಗಳನ್ನು ನಿಜಕ್ಕೂ ಬೆಳ್ಳಿಯ ಹಾಳೆಯಿಂದ ಅಲಂಕರಿಸಲು ಸಾಧ್ಯವೇ?

ಸಾಮ್ರಾಜ್ಯವೇ ಮುಳುಗಿಹೋಯಿತು!ಸೀಸಕ್ಕೂ ರೋಮನ್ನರಿಗೂ ಬಿಡಿಸಲಾರದ ನಂಟು. ಸೀಸವನ್ನು ಪ್ರತಿಷ್ಠೆಯ ಸಂಗತಿ ಎಂದುಕೊಂಡು ಬಳಸುತ್ತಲೇ ಹೋದ ರೋಮನ್ನರು ಅದಕ್ಕೆ ತಕ್ಕ ಬೆಲೆಯನ್ನೇ ತೆತ್ತರು. ಮುಂದೆ ಇಡೀ ರೋಮ್ ಸಾಮ್ರಾಜ್ಯವೇ ಸೀಸದ ಕಾರಣದಿಂದಾಗಿ ನಾಶವಾಗಿಹೋಯಿತು ಎಂದು ಹೇಳಲಾಗುತ್ತದೆ.ಮರಗೆಲಸ, ಪ್ಯೂಟರ್ (ತವರ ಮತ್ತು ಸೀಸಗಳ ಮಿಶ್ರ ಲೋಹ) ಹಾಗೂ ಸೀಸದಿಂದ ತಯಾರಿಸಿದ ಪಾತ್ರೆ ಪಗಡಗಳು, ಸೀಸದ ಪುಡಿ ಬಳಸಿದ ಅಲಂಕಾರಿಕ ಸಾಮಗ್ರಿಗಳು, ಸೀಸಯುಕ್ತ ಔಷಧಿಗಳು, ಆಹಾರ ಸಂಸ್ಕರಣಾ ಪಾತ್ರೆ.... ಹೀಗೆ ಎಲ್ಲದಕ್ಕೂ ರೋಮನ್ನರು ಸೀಸವನ್ನು ಆಶ್ರಯಿಸಿದ್ದರು.

 

ಅತಿಥಿ ಅಭ್ಯಾಗತರಿಗೆ ಸೀಸದಿಂದ ತಯಾರಿಸಿದ ತಟ್ಟೆಯಲ್ಲಿ ಊಟ ಬಡಿಸುವುದು ಆ ಕಾಲಕ್ಕೆ ಒಂದು ಪ್ರತಿಷ್ಠೆಯ ಸಂಗತಿಯೇ ಆಗಿತ್ತು. ಗಣ್ಯ ವ್ಯಕ್ತಿಗಳು ಬಂದರಂತೂ ಹೀಗೆ ಬಳಸಿದ ತಟ್ಟೆಗಳನ್ನೇ ಅವರಿಗೆ ನೀಡುವುದು ಅವಮಾನದ ಸಂಗತಿಯಾಗಿತ್ತು. ಹೀಗಾಗಿ ಅದನ್ನು ಕರಗಿಸಿ ಹೊಸ ತಟ್ಟೆ ಸಿದ್ಧಪಡಿಸಿ ಬಡಿಸುವ ಸಂಪ್ರದಾಯ ಇತ್ತು.ದ್ರಾಕ್ಷಾ ರಸದಿಂದ ತಯಾರಿಸಿದ ಜನಪ್ರಿಯ ಪೇಯವನ್ನು ಅವರು ತುಂಬಿಸಿಡುತ್ತಿದ್ದುದೇ ಸೀಸದ ಕಂಟೇನರ್‌ಗಳಲ್ಲಿ. ಇಷ್ಟೇ ಅಲ್ಲದೆ ವಿಗ್ರಹಗಳು, ಮನೆಯ ಮೇಲ್ಛಾವಣಿಗಳು, ಚರಂಡಿ, ನಾಣ್ಯಗಳು, ತೂಕದ ಬಟ್ಟುಗಳು, ಯುದ್ಧ ಸಾಮಗ್ರಿ, ಹಡಗು ನಿರ್ಮಾಣ...ಹೀಗೆ ಅವರ ಬದುಕಿನ ಎಲ್ಲ ಸಂಗತಿಗಳಲ್ಲೂ ಸೀಸ ಹಾಸುಹೊಕ್ಕಾಗಿತ್ತು. ಒಂದು ಅಂದಾಜಿನ ಪ್ರಕಾರ ರೋಮನ್ ಸಾಮ್ರಾಜ್ಯ ವರ್ಷಕ್ಕೆ 80 ಸಾವಿರ ಟನ್ ಸೀಸ ಬಳಸುತ್ತಿತ್ತು! ಸೀಸದ ದುಷ್ಪರಿಣಾಮ ಅರಿಯುವಷ್ಟರಲ್ಲಿ ಕಾಲ ಮಿಂಚಿತ್ತು. ಆಗ ಬಳಸಿದ ಸೀಸ ಎಷ್ಟರಮಟ್ಟಿಗೆ ಅವರ ನೆಲದಲ್ಲಿ ಬೇರುಬಿಟ್ಟಿತ್ತೆಂದರೆ ಆ ಜನಾಂಗದ ಅನೇಕ ಪೀಳಿಗೆಗಳು ಆಗಿಹೋದರೂ, ಜಾಗತಿಕವಾಗಿ ಹೆಸರು ಮಾಡಿದ ವಿಜ್ಞಾನಿ, ಸಂಶೋಧಕರಂತಹ ಬುದ್ಧಿಜೀವಿಗಳ ಪರಂಪರೆ ಅವರಲ್ಲಿ ಉದಯಿಸಲೇ ಇಲ್ಲ.

(ಹಾಗಿದ್ದರೆ ಸೀಸದಿಂದ ಮುಕ್ತಿ ಹೇಗೆ? ಮುಂದಿನ ಸಂಚಿಕೆಯಲ್ಲಿ)

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.