ಭಾನುವಾರ, ಜೂನ್ 20, 2021
20 °C

ಎಲ್ಲಿ ಆಗಿದೆ ಅಭಿವೃದ್ಧಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸಾಧನೆಗಳಿಂದ ಜಗತ್ತಿನ ಗಮನ ಸೆಳೆದಿದ್ದರೂ ಅಭಿವೃದ್ಧಿಯ ವಿವಿಧ ಮಾನದಂಡಗಳಲ್ಲಿ ಹಿಂದುಳಿದಿದೆ.ಇತ್ತೀಚೆಗೆ ಬಿಡುಗಡೆಯಾದ 2011ರ ಮನೆಗಣತಿಯ ಅಂಕಿ ಅಂಶಗಳ ಅನ್ವಯ ಕರ್ನಾಟಕ ಕುಡಿಯುವ ನೀರು, ವಿದ್ಯುತ್, ಸಾರಿಗೆ, ಶೌಚಾಲಯ ಸೇರಿದಂತೆ ಅನೇಕ ಮೂಲಸೌಕರ್ಯಗಳನ್ನು ಜನರಿಗೆ ಸಮಾನವಾಗಿ ಒದಗಿಸುವ ವಿಷಯದಲ್ಲಿ ದಕ್ಷಿಣ ಭಾರತದ ಉಳಿದೆಲ್ಲ ರಾಜ್ಯಗಳಿಗಿಂತಲೂ ಹಿಂದುಳಿದಿದೆ.ಈ ಹಿನ್ನಡೆ ರಾಜ್ಯ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕನ್ನಡಿ. ಇತ್ತೀಚಿನ ವರ್ಷಗಳಲ್ಲಿ ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ, ಸರ್ಕಾರಿ ಭೂಮಿ ಕಬಳಿಕೆ, ರಾಜಕೀಯ ಅಸ್ಥಿರತೆ ಸೇರಿದಂತೆ ಅನೇಕ ಅವ್ಯವಹಾರಗಳಿಂದ ಕರ್ನಾಟಕ ದೇಶದ ಗಮನ ಸೆಳೆಯುತ್ತಿದೆ.ಆಡಳಿತ ಪಕ್ಷದ ಶಾಸಕರು, ಸಂಸದರೇ ಗುಂಪುಗಾರಿಕೆಯಲ್ಲಿ ತೊಡಗಿ ಸರ್ಕಾರವನ್ನು ದುರ್ಬಲಗೊಳಿಸುತ್ತಿದ್ದಾರೆ. ನಾಯಕತ್ವಕ್ಕಾಗಿ ಪೈಪೋಟಿ ಹೆಚ್ಚಾಗಿ ಜನಹಿತವನ್ನು ಕಡೆಗಣಿಸಲಾಗಿದೆ. ರಾಜಕೀಯ ಅನಿಶ್ಚಿತತೆಯೇ ಅಭಿವೃದ್ಧಿ ಹಿನ್ನಡೆಗೆ ಕಾರಣ.ಮೇಲುನೋಟಕ್ಕೆ ಎಲ್ಲ ವ್ಯವಸ್ಥಿತವಾಗಿರುವಂತೆ ಕಂಡರೂ ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ. ಒಂದೆರಡು ದಶಕಗಳ ಹಿಂದಿನವರೆಗೂ ಮಾದರಿ ರಾಜ್ಯವಾಗಿದ್ದ ಕರ್ನಾಟಕ ಈಗ ಅಭಿವೃದ್ಧಿಯಲ್ಲಿ ಹಿಂದುಳಿದಿರುವುದು ಆತಂಕದ ವಿಷಯ. ರಾಜ್ಯದಲ್ಲಿ ಸಂಪನ್ಮೂಲಗಳಿಗೆ ಕೊರತೆ ಇಲ್ಲ.ಆದರೆ ಸಂಪನ್ಮೂಲಗಳನ್ನು ಬಳಸಿಕೊಂಡು ಅಭಿವೃದ್ಧಿ ಸಾಧಿಸುವ ವಿಷಯದಲ್ಲಿ ಸರ್ಕಾರ ವಿಫಲವಾಗಿದೆ. ನಗರ ಹಾಗೂ ಗ್ರಾಮೀಣ ಪ್ರದೇಶದ ಅಭಿವೃದ್ಧಿ ವಿಷಯದಲ್ಲಿ ಸರ್ಕಾರ ತಾರತಮ್ಯ ಮಾಡುತ್ತಿದೆ. ಜಾಗತೀಕರಣದ ನಂತರ ನಗರ ಪ್ರದೇಶಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು ಸಿಕ್ಕಿದೆ.

 

ಸರ್ಕಾರ ಗ್ರಾಮೀಣ ಪ್ರದೇಶದ ಜನರನ್ನು ಕಡೆಗಣಿಸಿದೆ. ಸಾಕ್ಷರತೆ ಹೆಚ್ಚಾಗಿರುವ ಕೇರಳ ಅಭಿವೃದ್ಧಿ ವಿಷಯದಲ್ಲಿ ದಕ್ಷಿಣದ ಉಳಿದ ಮೂರು ರಾಜ್ಯಗಳಿಗಿಂತ ಮುಂದಿರುವುದು ಹೊಸ ಬೆಳವಣಿಗೆ. ಈ ವಿಷಯದಲ್ಲಿ ಕೇರಳ ರಾಜ್ಯಕ್ಕೆ ಮಾದರಿ ಆಗಬೇಕಿದೆ.ಕರ್ನಾಟಕ ಪ್ರತಿ ಮೂರು ನಾಲ್ಕು ವರ್ಷಗಳಿಗೊಮ್ಮೆ ಬರಗಾಲದ ಪರಿಸ್ಥಿತಿ ಎದುರಿಸುತ್ತಿದೆ. ಉತ್ತರ ಕರ್ನಾಟಕದ 8-10 ಜಿಲ್ಲೆಗಳ ಲಕ್ಷಾಂತರ ಜನರು ಪ್ರತಿ ವರ್ಷ ಕೆಲಸ ಅರಸಿ ಗುಳೆ ಹೋಗುತ್ತಾರೆ. ಇಡೀ ರಾಜ್ಯದಲ್ಲಿ ಅಂತರ್ಜಲ ಮಟ್ಟ ಕುಸಿದಿದೆ. ವಿದ್ಯುತ್ ಕೊರತೆ ಹೆಚ್ಚಾಗಿದೆ. ಕೃಷಿ, ಕೈಗಾರಿಕೆ ಉತ್ಪಾದನೆ ಕುಸಿದಿದೆ.ರೈತರ ಆತ್ಮಹತ್ಯೆಗಳು ಹೆಚ್ಚಾಗಿವೆ. ಬೆಂಗಳೂರು ಮತ್ತಿತರ ನಗರಗಳಿಗೆ ಹೊರ ರಾಜ್ಯಗಳಿಂದ ವಲಸೆ ಬರುವ ಜನರ ಸಂಖ್ಯೆಯೂ ಹೆಚ್ಚಾಗಿದೆ. ರಾಜ್ಯದ ಸಂಪನ್ಮೂಲ ಕ್ರೋಡೀಕರಿಸಿಕೊಂಡು ರಾಜ್ಯದ ಅಭಿವೃದ್ಧಿ ಮಾಡುವ ಬದ್ಧತೆ ಮತ್ತು ದಕ್ಷತೆ ಸರ್ಕಾರಿ ಸಿಬ್ಬಂದಿಯಲ್ಲಿ ಕಾಣುತ್ತಿಲ್ಲ.

 

ರಾಜ್ಯದ ಅಭಿವೃದ್ಧಿ ಹಿನ್ನಡೆಗೆ ಇವು ಮುಖ್ಯ ಕಾರಣಗಳು. ಅದೇನೇ ಇರಲಿ, ಸರ್ಕಾರ ಮತ್ತು ರಾಜಕೀಯ ಪಕ್ಷಗಳು  ಅಭಿವೃದ್ಧಿ ಹಿನ್ನಡೆಯನ್ನು ಗಂಭೀರವಾಗಿ ಪರಿಗಣಿಸಬೇಕು. ಸರ್ಕಾರ ಅಭಿವೃದ್ಧಿ ಮಂತ್ರವನ್ನು ಮತಗಳಿಕೆಯ ತಂತ್ರವಾಗಿ ಮಾತ್ರ ಜಪಿಸುವುದನ್ನು ಬಿಟ್ಟು ಜನರ ಸಮಸ್ಯೆಗಳತ್ತ ಗಮನಹರಿಸಬೇಕು.ಲಭ್ಯವಿರುವ ಆರ್ಥಿಕ ಸಂಪನ್ಮೂಲಗಳನ್ನು ನ್ಯಾಯಸಮ್ಮತವಾಗಿ ಎಲ್ಲ ಜಿಲ್ಲೆಗಳಿಗೂ ಹಂಚುವ ರಾಜಕೀಯ ಬದ್ಧತೆಯನ್ನು  ಪ್ರದರ್ಶಿಸಬೇಕು. ಅದು ಸಾಧ್ಯವಾದರೆ ಅಭಿವೃದ್ಧಿ ಇನ್ನಷ್ಟು ಕುಸಿಯದಂತೆ ತಡೆಯಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.