ಶನಿವಾರ, ಮೇ 28, 2022
21 °C

ಎಲ್ಲಿ ಮಾಯವೋ...?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

ಏಕೋ ಇದು ಬೋರಿಂಗ್ ವಿಶ್ವಕಪ್!

ಕ್ರಿಕೆಟ್ ಆಟವನ್ನು ಧರ್ಮದಂತೆ ಪರಿಗಣಿಸಿರುವ ಅಭಿಮಾನಿಗಳು ಹೇಳುತ್ತಿರುವ ಮಾತಿದು. ನಿಜ, ಬೆಂಗಳೂರಿನಲ್ಲಿ ಟಿಕೆಟ್ ಖರೀದಿ ವೇಳೆ ಲಾಠಿ ಚಾರ್ಜ್ ನಡೆದಿರಬಹುದು. ರಾತ್ರಿ ಇಡೀ ನಿದ್ದೆಗೆಟ್ಟು ಟಿಕೆಟ್‌ಗಾಗಿ ಕಾದಿರಬಹುದು. ಆದರೆ ವಿಶ್ವಕಪ್ ಕ್ರೇಜ್ ಎಲ್ಲೂ ಕಾಣುತ್ತಿಲ್ಲ. ನಿಜವಾದ ಕ್ರಿಕೆಟ್ ಫೀವರ್ ನಾಪತ್ತೆಯಾಗಿದೆ.ದಕ್ಷಿಣ ಆಫ್ರಿಕಾದಲ್ಲಿ ಫುಟ್‌ಬಾಲ್ ವಿಶ್ವಕಪ್ ನಡೆದಾಗ ಭಾರತದಲ್ಲಿ ಉದ್ಭವಿಸಿದಷ್ಟು ಕ್ರೇಜ್ ಕೂಡ ಕ್ರಿಕೆಟ್ ವಿಶ್ವಕಪ್‌ನಲ್ಲಿ ಕಾಣುತ್ತಿಲ್ಲ. ಅದೇಕೇ ಹೀಗೆ? ಪಂದ್ಯಗಳಲ್ಲಂತೂ ಪೈಪೋಟಿಯೇ ಇಲ್ಲ ಬಿಡಿ. ಗುಂಪು ಹಂತದ ಪಂದ್ಯಗಳೇ ಭರ್ತಿ ಒಂದು ತಿಂಗಳು ನಡೆಯುತ್ತಿವೆ. ಆದರೆ ಹೆಚ್ಚಿನ ಪಂದ್ಯಗಳ ಫಲಿತಾಂಶಗಳನ್ನು ಮೊದಲೇ ಊಹಿಸಬಹುದಾಗಿದೆ. ರೋಚಕತೆ ಇಲ್ಲವಾಗಿದೆ. ಟರ್ನಿಂಗ್ ಪಾಯಿಂಟ್, ಅದ್ಭುತ ಪ್ರದರ್ಶನದ ಉಸಿರೇ ಇಲ್ಲ.ವೆಸ್ಟ್‌ಇಂಡೀಸ್‌ನಲ್ಲಿ ನಡೆದ 2007ರ ಕ್ರಿಕೆಟ್ ವಿಶ್ವಕಪ್‌ನಲ್ಲೂ ಹೀಗೆ ಆಗಿತ್ತು. ಅದೊಂದು ಫೆಲ್ಯೂರ್ ವಿಶ್ವಕಪ್. ಅದಕ್ಕೆ ಕಾರಣ ಒಂದೂವರೆ ತಿಂಗಳಿನ ಸುಧೀರ್ಘ ವೇಳಾಪಟ್ಟಿ. ಈ ರೀತಿ ಆಗಲು ಮುಂದೆ ಅವಕಾಶ ನೀಡುವುದಿಲ್ಲ ಎಂದು ಐಸಿಸಿ ಹೇಳಿತ್ತು. ಆದರೆ ಈಗ ನೋಡಿ!

ನಿಮಗೆ ಗೊತ್ತಿರಬಹುದು, ದಕ್ಷಿಣ ಆಫ್ರಿಕಾದಲ್ಲಿ ನಡೆದ 2010ರ ಫುಟ್‌ಬಾಲ್ ವಿಶ್ವಕಪ್‌ನ ಪ್ರತಿ ಪಂದ್ಯದ ವೇಳೆ ಕ್ರೀಡಾಂಗಣಗಳು ಭರ್ತಿಯಾಗಿರುತ್ತಿದ್ದವು. ಆತಿಥೇಯ ದಕ್ಷಿಣ ಆಫ್ರಿಕಾ ಚಾಂಪಿಯನ್‌ಷಿಪ್‌ನಿಂದ ಬೇಗನೇ ಹೊರಬಿದ್ದರೂ ಪ್ರೇಕ್ಷಕರು ಆಸಕ್ತಿ ಕಳೆದುಕೊಳ್ಳಲಿಲ್ಲ.ಡೆನ್ಮಾರ್ಕ್-ಜಪಾನ್ ನಡುವಿನ ಪಂದ್ಯದ ವೇಳೆಯೂ ಕ್ರೀಡಾಂಗಣ ತುಂಬಿರುತಿತ್ತು. ಅದ್ಭುತ ಕ್ರೇಜ್ ಸೃಷ್ಟಿಯಾಗಿತ್ತು. ಕೊನೆಯವರೆಗೆ ಹಾಗೇ ಇತ್ತು. ಟೂರ್ನಿಯಲ್ಲಿ ತನ್ನ ತಂಡ ಇಲ್ಲದಿದ್ದರೂ ಭಾರತದಲ್ಲಿ ಹೊಸ ತರದ ತಳಮಳ, ರೋಮಾಂಚನಕ್ಕೆ ಕಾರಣವಾಗಿತ್ತು. ಆ ಚಾಂಪಿಯನ್‌ಷಿಪ್‌ನಲ್ಲಿ ‘ವಾಕಾ ವಾಕಾ ದಿಸ್ ಟೈಮ್ ಫಾರ್ ಸೌಥ್ ಆಫ್ರಿಕಾ’ ಎಂದು ಶಕೀರಾ ಹಾಡಿದ್ದ ಹಾಡು ಇನ್ನೂ ಜನಪ್ರಿಯ. ಆದರೆ ಕ್ರಿಕೆಟ್ ವಿಶ್ವಕಪ್‌ನ ಹಾಡು ‘ದೇ ಘಮಾ ಕೆ’ ಎಲ್ಲೂ ಕೇಳಿಸುತ್ತಿಲ್ಲ. ಉತ್ಕಟ ಪ್ರೀತಿಯಿಂದ ಫುಟ್‌ಬಾಲ್ ಪಂದ್ಯಗಳನ್ನು ಅಭಿಮಾನಿಗಳು ವೀಕ್ಷಿಸುತ್ತಿದ್ದರು.ಫೈವ್‌ಸ್ಟಾರ್ ಹೋಟೆಲ್, ಬಾರ್, ಪಬ್, ರೆಸ್ಟೋರೆಂಟ್‌ಗಳಲ್ಲಿ ದೊಡ್ಡ ದೊಡ್ಡ ಪರದೆ ಮೇಲೆ ಪಂದ್ಯಗಳನ್ನು ಪ್ರದರ್ಶಿಸಲಾಗುತಿತ್ತು. ಉದ್ಯಾನ ನಗರಿಯ ಕಂಠೀರವ ಕ್ರೀಡಾಂಗಣದಲ್ಲಿ ಬೃಹತ್ ಎಲ್‌ಇಡಿ ಪರದೆಯ ಮೇಲೆ ಪ್ರದರ್ಶಿಸಲಾಗಿತ್ತು. ಆದರೆ ಕ್ರಿಕೆಟ್ ಸುದ್ದಿಯೇ ಆಗುತ್ತಿಲ್ಲ. ಅದರಲ್ಲೂ ಕ್ರಿಕೆಟ್‌ನ ಹುಚ್ಚು ಅಭಿಮಾನಿಗಳಿರುವ ದೇಶದಲ್ಲಿ!ಭಾರತದ ಪಂದ್ಯಗಳಿಗೆ ಪ್ರೀತಿ ಕಡಿಮೆ ಆಗಿಲ್ಲ ಬಿಡಿ. ಆದರೆ ಐರ್ಲೆಂಡ್, ಕೀನ್ಯಾ, ಜಿಂಬಾಬ್ವೆ, ಹಾಲೆಂಡ್ ಪಂದ್ಯಗಳಿಗೆ ಜನರೇ ಸೇರುತ್ತಿಲ್ಲ.ಕ್ರೀಡಾಂಗಣಗಳು ಖಾಲಿ ಖಾಲಿ. ಆ ತಂಡಗಳ ಪಾಡೇನು? ಹೋಗಲಿ, ನಾಗಪುರದಲ್ಲಿ ನಡೆದ ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಪಂದ್ಯಕ್ಕಾದರೂ ಜನರು ಸೇರಿದ್ದರಾ? ಉತ್ತಮ ತಂಡಗಳ ನಡುವೆ ಪೈಪೋಟಿ ನಡೆದರೂ ಕ್ರೀಡಾಂಗಣದ ಕಾಲು ಭಾಗದಷ್ಟು ಆಸನಗಳು ಭರ್ತಿಯಾಗುತ್ತಿಲ್ಲ. ಶ್ರೀಲಂಕಾ, ಬಾಂಗ್ಲಾದಲ್ಲೂ ಇದೇ ಪರಿಸ್ಥಿತಿ. ಇದೆಂಥಾ ಕ್ರಿಕೆಟ್ ಪ್ರೀತಿ ಎಂದು ಪ್ರಶ್ನೆ ಹಾಕಿದ್ದು ಇದೇ ಕಾರಣಕ್ಕೆ.ಆಟಕ್ಕೆ ಪ್ರೀತಿ ತೋರಿಸಬೇಕೇ ಹೊರತು ದೇಶ ನೋಡಿ ಅಲ್ಲ. ಇದರ ನಡುವೆ ದುರ್ಬಲ ತಂಡಗಳಿಗೆ ಮುಂದಿನ ವಿಶ್ವಕಪ್‌ನಲ್ಲಿ ಸ್ಥಾನ ನೀಡಬಾರದು ಎಂಬ ಮಾತುಗಳು ಕೇಳಿ ಬರುತ್ತಿವೆ. ಹಾಗೇ, ಭಾರತ ಆಡುವ ಪ್ರತಿ ಪಂದ್ಯಗಳ ನಡುವೆ ತುಂಬಾ ಅಂತರವಿದೆ. ಇದು ಆಸಕ್ತಿಯನ್ನು ಕುಗ್ಗಿಸಲು ಮತ್ತೊಂದು ಕಾರಣ. ಇಂಗ್ಲೆಂಡ್ ಎದುರಿನ ಪಂದ್ಯದ ಟಿಕೆಟ್‌ಗಳಿಗೆ ವ್ಯಕ್ತವಾದ ಪ್ರತಿಕ್ರಿಯೆ ಐರ್ಲೆಂಡ್ ವಿರುದ್ಧದ ಪಂದ್ಯಕ್ಕೆ ವ್ಯಕ್ತವಾಗಲಾರದು.ನಿಜ, ಇವತ್ತು ಬಿಸಿಸಿಐ ಶ್ರೀಮಂತ ಕ್ರೀಡಾ ಮಂಡಳಿ. ಕ್ರಿಕೆಟ್‌ಗೆ ಭಾರತದಲ್ಲಿರುವಷ್ಟು ಮಾರುಕಟ್ಟೆ ಬೇರೆಲ್ಲೂ ಇಲ್ಲ. ಇಲ್ಲಿ ಕ್ರಿಕೆಟಿಗರನ್ನು ದೇವರಂತೆ ಪೂಜಿಸುತ್ತಾರೆ. ಅವರು ಹೊರಬಂದರೆ ಜೇನಿನಂತೆ ಮುತ್ತಿಕೊಳ್ಳುತ್ತಾರೆ. ಇದೇ ಕಾರಣಕ್ಕೆ ಐಸಿಸಿ ಕೂಡ ಈ ಬಾರಿಯ ವಿಶ್ವಕಪ್‌ನಲ್ಲಿ ಭಾರಿ ಆದಾಯ ನಿರೀಕ್ಷೆ ಇಟ್ಟುಕೊಂಡಿದೆ. ಆದರೆ ಪ್ರೇಕ್ಷಕರು ಭಾರತ ತಂಡ ಇಲ್ಲದ ಪಂದ್ಯಗಳಿಗೆ ಅದೇ ರೀತಿ ಉತ್ಸಾಹ, ಪ್ರೀತಿ ತೋರುತ್ತಿಲ್ಲ ಏಕೆ? ಐರ್ಲೆಂಡ್, ಕೀನ್ಯಾ, ಜಿಂಬಾಬ್ವೆ ದುರ್ಬಲ ತಂಡಗಳು ಎಂದೇ? ಪಂದ್ಯಗಳು ಏಕಪಕ್ಷೀಯವಾಗಿರುತ್ತವೆ ಎಂಬ ಕಾರಣವೇ?ನಾಗಪುರದಲ್ಲಿ ವಿದರ್ಭ ಕ್ರಿಕೆಟ್ ಸಂಸ್ಥೆ ಕ್ರೀಡಾಂಗಣ ನಗರದಿಂದ 18 ಕಿ.ಮೀ. ದೂರದಲ್ಲಿದೆ. ಅಲ್ಲಿ ಹಾಲೆಂಡ್-ಇಂಗ್ಲೆಂಡ್ ಪಂದ್ಯ ನಡೆದರೆ ಯಾರು ವೀಕ್ಷಿಸುತ್ತಾರೆ ಹೇಳಿ? ಈ ನಡುವೆಯೂ 300ರಿಂದ ಮೂರು ಸಾವಿರ ರೂಪಾಯಿ ನೀಡಿ ಟಿಕೆಟ್ ಖರೀದಿಸಿ ಪಂದ್ಯ ನೋಡುತ್ತಾರಾ?

ಶ್ರೀಲಂಕಾದಲ್ಲಿ ಶಾಲಾ ಮಕ್ಕಳಿಗೆ ಉಚಿತ ಪ್ರವೇಶ ನೀಡಲಾಗುತ್ತಿದೆ. ಪಾಕಿಸ್ತಾನ-ಕೀನ್ಯಾ ನಡುವೆ ಹಂಬಂಟೋಟಾದ ಮಹಿಂದಾ ರಾಜಪಕ್ಸೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಸಾರ್ವಜನಿಕರಿಗೂ ಉಚಿತ ಪ್ರವೇಶ ನೀಡಲಾಗಿತ್ತು.ಈ ರೀತಿಯ ಸಂಗತಿಗಳು ಟೂರ್ನಿಯ ಆಸಕ್ತಿ ಹೆಚ್ಚಿಸಲು ಕಾರಣವಾಗುತ್ತವೆ. ಬಿಸಿಸಿಐ ಕೂಡ ಈ ಕ್ರಮ ಕೈಗೊಳ್ಳುತ್ತಾ? ಮಾರ್ಚ್ 20ರವರೆಗೆ ಗುಂಪು ಹಂತದ ಪಂದ್ಯಗಳೇ ನಡೆಯುತ್ತಿವೆ. ಅಲ್ಲಿಯವರೆಗೆ ಇದೇ ರೀತಿಯ ವಾತಾವರಣ ಮುಂದುವರಿಯುವ ಲಕ್ಷಣಗಳು ಗೋಚರವಾಗುತ್ತಿವೆ. ಕ್ವಾರ್ಟರ್ ಫೈನಲ್ ಶುರುವಾದ ಮೇಲೆ ಕ್ರೇಜ್ ಹೆಚ್ಚಾಗಬಹುದು ಎಂಬ ನಿರೀಕ್ಷೆ ಇದೆ. ಅಕಸ್ಮಾತ್ ಎಂ.ಎಸ್.ದೋನಿ ಪಡೆ ನಾಕ್‌ಔಟ್ ಹಂತದಲ್ಲಿ ಮುಗ್ಗರಿಸಿದರೆ ಕಥೆ ಮುಗಿಯಿತು. ಈಗಿರುವ ಒಂದಿಷ್ಟು ಕ್ರೇಜ್ ಕೂಡ ಇಲ್ಲದಂತಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.