ಗುರುವಾರ , ಮೇ 19, 2022
20 °C

ಎಲ್ಲೆಡೆ ಎಫ್‌ಎಂ ಕಲರವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು ಸೇರಿದಂತೆ ರಾಜ್ಯದ ಅನೇಕ ನಗರಗಳಲ್ಲಿನ  ಖಾಸಗಿ ಎಫ್.ಎಂ. ನಿಲಯಗಳು  ಮಾಹಿತಿ ಮತ್ತು  ಮನರಂಜನೆಯ ಹೊಸ ಲೋಕವನ್ನೇ ಸೃಷ್ಟಿಸಿವೆ. `ಎಫ್.ಎಂ.  ಕ್ರಾಂತಿಯ ಹಿನ್ನೆಲೆಯಲ್ಲಿ   ರೇಡಿಯೋಕ್ಕೆ  ಮತ್ತೆ ಜನಪ್ರಿಯತೆ ದೊರೆತಿರುವುದು ನಿರ್ವಿವಾದ.ಬೆಂಗಳೂರು, ಮೈಸೂರು, ಮಂಗಳೂರಿನಂತಹ ಕೆಲವೇ ಪಟ್ಟಣಗಳಿಗೆ ಮೀಸಲಾಗಿರುವ ಖಾಸಗಿ ಕೇಂದ್ರಗಳು ನಮ್ಮ ಊರಿನಲ್ಲೇಕೆ ಇಲ್ಲ ಎನ್ನುವುದು ಅನೇಕರ ಪ್ರಶ್ನೆ.  ಅವರ ಪ್ರಶ್ನೆಗೆ ಉತ್ತರ ಎನ್ನುವಂತೆ ಎಫ್.ಎಂ. ವಿಸ್ತರಣೆಯ ಮೂರನೆಯ ಹಂತದಲ್ಲಿ, ಒಂದು ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಇರುವ 227 ಹೊಸ ನಗರಗಳಲ್ಲಿ 839 ಖಾಸಗಿ ಎಫ್.ಎಂ. ಕೇಂದ್ರಗಳು ಕಾರ್ಯಾರಂಭ ಮಾಡಲಿವೆ.ರಾಜ್ಯದಲ್ಲಿ 91ಕೇಂದ್ರಗಳು: ರಾಜ್ಯದ 20 ನಗರಗಳಲ್ಲಿ ಒಟ್ಟು 59 ಹೊಸ ಎಫ್.ಎಂ.ಕೇಂದ್ರಗಳು ಕಾರ್ಯಾರಂಭ ಮಾಡಲಿವೆ. ಬೆಳಗಾವಿ, ಬಳ್ಳಾರಿ, ದಾವಣಗೆರೆ, ಹುಬ್ಬಳ್ಳಿ-ಧಾರವಾಡ ತಲಾ 4, ಬೀದರ್, ವಿಜಾಪುರ, ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ಗದಗ - ಬೆಟಗೇರಿ, ಹಾಸನ, ಹೊಸಪೇಟೆ, ಕೋಲಾರ, ರಾಯಚೂರು, ತುಮಕೂರು, ಉಡುಪಿ  ತಲಾ 3, ಈಗಾಗಲೇ 7 ಖಾಸಗಿ ಚಾನಲ್‌ಗಳನ್ನು ಹೊಂದಿರುವ ಬೆಂಗಳೂರಿಗೆ ಮತ್ತೊಂದು, 2 ಚಾನೆಲ್ ಹೊಂದಿರುವ ಮೈಸೂರಿಗೆ ಮತ್ತೆರಡು, 1 ಕೇಂದ್ರ  ಹೊಂದಿರುವ ಗುಲ್ಬರ್ಗಕ್ಕೆ ಮತ್ತೆ 3. ಈಗಾಗಲೇ ಮೂರು ಕೇಂದ್ರಗಳನ್ನು ಹೊಂದಿರುವ ಮಂಗಳೂರಿಗೆ ಇನ್ನೊಂದು ಹೀಗೆ.. ಮೂರನೇಯ ಹಂತದ ವಿಸ್ತರಣೆಲ್ಲಿ 59 ಕೇಂದ್ರಗಳನ್ನು ನೀಡಲಾಗಿದೆ.ರಾಜ್ಯದಲ್ಲಿ ಈಗ ಆಕಾಶವಾಣಿಯ 17, ಗ್ಯಾನವಾಣಿಯ 2 ಶೈಕ್ಷಣಿಕ ಚಾನೆಲ್‌ಗಳು ಪ್ರಸಾರದಲ್ಲಿ ನಿರತವಾಗಿವೆ. ಹೀಗೆ ಕರ್ನಾಟಕದಲ್ಲಿ ಒಟ್ಟು  ರೇಡಿಯೊ ಕೇಂದ್ರಗಳ ಸಂಖ್ಯೆ 91 ಆಗಲಿದೆ.ಹೊಸ ನೀತಿ: ಖಾಸಗಿ ಎಪ್.ಎಂ. ಪ್ರಸಾರಕ್ಕೆ ಹೆಚ್ಚು ಪ್ರೋತ್ಸಾಹ ನೀಡುವ ಉದ್ದೆೀಶದಿಂದ ಸರಕಾರ ಪ್ರಸಾರ ನೀತಿಯಲ್ಲಿ ಹಲವು ಬದಲಾವಣಿಗಳನ್ನೂ ಮಾಡಿದೆ. ಲೈಸೆನ್ಸ್ ಅವಧಿಯನ್ನು 10 ವರ್ಷಗಳಿಂದ 15 ವರ್ಷಗಳಿಗೆ ಹೆಚ್ಚಿಸಲಾಗಿದೆ, ವಿದೇಶಿ ಹೂಡಿಕೆಯ ಮಿತಿಯನ್ನು 21 ರಿಂದ 26 ಕ್ಕೆ ಹೆಚ್ಚಿಸಿದೆ, ಆಕಾಶವಾಣಿಯ ವಾರ್ತೆಗಳನ್ನು ಬಳಸಿಕೊಳ್ಳಲು ಸಮ್ಮತಿ ನೀಡಿ, ಸುದ್ದಿ ಪ್ರಸಾರದ ಸೀಮಿತ ಅವಕಾಶ ಕಲ್ಪಿಸಲಾಗಿದೆ.ಖಾಸಗಿ ಸಂಸ್ಥೆಗಳು ದೇಶದಾದ್ಯಂತ ಇರುವ ತಮ್ಮದೇ ಚಾನೆಲ್‌ಗಳ ಪ್ರಸಾರ ಜಾಲ (ನೆಟ್‌ವರ್ಕ) ಹೊಂದಬಹುದಾಗಿದೆ. ಆದರೆ, ಇಂತಹ ಚಾನೆಲ್‌ಗಳು ಕನಿಷ್ಠ ಶೇಕಡಾ 20 ರಷ್ಟು ಪ್ರಸಾರ ಸಮಯವನ್ನು ಸ್ಥಳೀಯ ಭಾಷೆಗಾಗಿ ಮೀಸಲಾಗಿಡಬೇಕಾಗಿದೆ.ಉದ್ಯೋಗಾವಕಾಶ, ಮಾಹಿತಿ, ವಿದ್ಯುಚ್ಛಕ್ತಿ, ನೀರು ಸರಬರಾಜು, ನೈಸರ್ಗಿಕ ವಿಕೋಪ, ಇನ್ನಿತರ ನಾಗರಿಕ ಸೌಲಭ್ಯ ಕುರಿತ ಸಾರ್ವಜನಿಕ ಪ್ರಕಟಣೆ, ಕ್ರೀಡಾ ಮಾಹಿತಿ, ಸ್ಥಳೀಯ ಕ್ರೀಡೆಗಳ ನೇರ ಪ್ರಸಾರ, ಇವುಗಳನ್ನು ಬಿತ್ತರಿಸಲು ಅವಕಾಶ ನೀಡಲಾಗಿದೆ.  ಸವಾಲುಗಳು: ಮೂಲಭೂತವಾಗಿ ಮನರಂಜನೆಗೆ ಮೀಸಲಾದ ಎಲ್ಲ ವಾಣಿಜ್ಯ ಖಾಸಗಿ ಬಾನುಲಿ ಕೇಂದ್ರಗಳು ತಾಂತ್ರಿಕವಾಗಿ ಎಫ್.ಎಂ ಕೇಂದ್ರಗಳಾಗಿವೆ. ಆದರೆ ಎಫ್.ಎಂ.ಟ್ರಾನ್ಸ್‌ಮೀಟರ್ ಹೊಂದಿರುವ ಎಲ್ಲ ಎಫ್.ಎಂ. ಕೇಂದ್ರಗಳು ಮನರಂಜನೆಗೆ ಮೀಸಲಾದ ವಾಣಿಜ್ಯ ಕೇಂದ್ರಗಳಾಗಿಲ್ಲ. ಆಕಾಶವಾಣಿ  ಕೂಡ 161 ಎಫ್.ಎಂ.ಟ್ರಾನ್ಸ್‌ಮೀಟರ್‌ಗಳನ್ನು ಹೊಂದಿದ್ದು, ಎಲ್ಲ ಸ್ಥಳೀಯ ಆಕಾಶವಾಣಿ ಕೇಂದ್ರಗಳು  ಎಫ್.ಎಂ. ಬ್ಯಾಂಡ್ ಮೇಲೆ ಲಭ್ಯ ಇವೆ.ಅವೆಲ್ಲ ಮೂಲಭೂತವಾಗಿ ಸಾರ್ವಜನಿಕ ಸೇವಾ ಪ್ರಸಾರಕ್ಕೆ ಮೀಸಲಾದ ಕೇಂದ್ರಗಳಾಗಿವೆ. ಎಲ್ಲ ಸಮುದಾಯ ಬಾನುಲಿ ಕೇಂದ್ರಗಳೂ ಎಫ್.ಎಂ.ಬ್ಯಾಂಡ್ ಮೇಲೆಯೇ ಲಭ್ಯ ಇವೆ. ಆಕಾಶವಾಣಿ ಸಹ ದೇಶದಾದ್ಯಂತ 40 ವಿವಿಧ ಭಾರತಿ, 18 ಎಫ್.ಎಂ. ರೇನ್‌ಬೊ, 4 ಎಫ್.ಎಂ ಗೋಲ್ಡ್, ವಾಣಿಜ್ಯ ಪ್ರಸಾರ ಕೇಂದ್ರಗಳನ್ನು ಹೊಂದಿದೆ.  ಎಫ್.ಎಂ. ಕ್ರಾಂತಿಯ ಹಿನ್ನೆಲೆಯಲ್ಲಿ  ಹೆಚ್ಚೆಚ್ಚು ಜನರು  ಹೆಚ್ಚು ಸಮಯ ರೇಡಿಯೊ ಕೇಳುತ್ತಿದ್ದಾರೆ. ದೇಶದಲ್ಲಿ ಇರುವ 70 ಕೋಟಿಗೂ ಹೆಚ್ಚು ಮೊಬೈಲ್ ಫೋನ್‌ಗಳಲ್ಲಿ ಎಫ್‌ಎಂ ಕೇಳಲು ಅವಕಾಶ ಇದೆ.ಮಹಾನಗರಗಳಲ್ಲಿ ಇರುವ ಎಫ್‌ಎಂ ಚಾನೆಲ್‌ಗಳು ದಿನದ 24 ಗಂಟೆ ಪ್ರಸಾರ ಮಾಡುವ ಚಿತ್ರಗೀತೆ, ಪಾಶ್ಚಾತ್ಯ ಸಂಗೀತ, ಸ್ಥಳೀಯ ಮಾಹಿತಿ, ತಡೆರಹಿತ ಜಾಹೀರಾತುಗಳು, ಆರ್.ಜೆ ಗಳ ಆರ್ಭಟ, ಸ್ಪರ್ಧೆಗಳು, ಬಹುಮಾನಗಳ ಆಮಿಷ, ವಿಶಿಷ್ಟ ಪ್ರಚಾರ ತಂತ್ರಗಳು, ಪೋನ್, ಎಸ್‌ಎಂಎಸ್ ಮುಖಾಂತರ ನಿರಂತರ ದ್ವಿಮುಖ ಸಂವಹನೆ, ವೈವಿಧ್ಯಮಯ ಕಾರ್ಯಕ್ರಮ, ಗಗನಕ್ಕೇರಿದ ಪೈಪೋಟಿಗಳಿಂದ  ಹೊಸ ಬಾನುಲಿ ಪ್ರಸಾರಲೋಕವೇ ಸೃಷ್ಟಿಯಾಗಿದೆ. ಯುವ ಜನರನ್ನು ಗುರಿಯಾಗಿಸಿ ಅವರನ್ನು ಆಕರ್ಷಿಸುವಂತಹ ಕಾರ್ಯಕ್ರಮಗಳನ್ನು  ನೀಡಿ ಅವರನ್ನು, ಈ ಕೇಂದ್ರಗಳು ಆಯಸ್ಕಾಂತದಂತೆ ಆಕರ್ಷಿಸುತ್ತವೆ.ಎಫ್.ಎಂ.ಚಾನೆಲ್‌ಗಳ ಕಾರ್ಯ ನಿರ್ವಹಣೆ ಎಲ್ಲವೂ ಸರಿಯಾಗಿದೆ  ಎಂದರ್ಥವಲ್ಲ. ಜಾಹೀರಾತುಗಳ ಮೇಲೆ ಕಣ್ಣಿರಿಸಿ, ದುಡ್ಡೇ ದೊಡ್ಡಪ್ಪ ಎನ್ನುವ ಈ ಚಾನೆಲ್‌ಗಳ ಗಮನ ಯಾವಾಗಲೂ ದುಡ್ಡಿದ್ದವರ ಕಡೆಗೆ. ಕೇಳುಗರ ಅಭಿರುಚಿ, ಆಸಕ್ತಿಗಳಿಗೆ ಪ್ರಾಧಾನ್ಯ, ಪೈಪೋಟಿಯ ಭರದಲ್ಲಿ ಅನೇಕ ಸಲ ಸಭ್ಯತೆ ಮೀರಿದ ಪ್ರಸ್ತುತಿ.ಹಾಟ್ ಮಗಾ, ಸ್ಲೀವ್‌ಲೆಸ್ ಸರಸಾ, ಡೌವ್ ಇಂತಹ ಅಸಂಬದ್ಧ ಪದ ಪ್ರಯೋಗ, ಸಭ್ಯರು ನಾಚಿಕೊಳ್ಳುವಂತಹ ಅಶ್ಲೀಲ ಜೋಕುಗಳು,  ಅಪ್ರಸ್ತುತ ವಿಷಯಗಳ ಆಯ್ಕೆ ಮುಂತಾದ ಕಿರಿಕಿರಿಗಳು ಅಸಂಖ್ಯ ಕೇಳುಗರ ಪಾಲಿಗೆ ಅಸಹ್ಯವಾಗಿವೆ.ಬಹುಸಂಖ್ಯಾತರ ಸುಗಮ ಜೀವನ ನಿರ್ವಹಣೆಗೆ ಅವಶ್ಯವಾದ ಮಾಹಿತಿ- ಶಿಕ್ಷಣ ನೀಡುವಂತಹ ಕಾರ್ಯಕ್ರಮಗಳು ಅಲ್ಲಿ ಗೌಣ.  ಕೇವಲ ಕಿರುಚಾಟ, ಚಿತ್ರಗೀತೆ, ಕೆಳದರ್ಜೆಯ ತಂತ್ರಗಳಿಂದ ಕೇಳುಗರನ್ನು ಬಹಳ ದಿನ ಹಿಡಿದಿಡುವುದು ಕಷ್ಟಸಾಧ್ಯ. ಎಲ್ಲ ಬಾನುಲಿಗಳಲ್ಲೂ ಎಲ್ಲ ಸಮಯ ಅದೇ 20-30 ಜನಪ್ರಿಯ ಹಾಡು, ಅದೇ ಪ್ರಸಾರ ತಂತ್ರಗಳ ಪುನರಾವರ್ತನೆ ಆಗುತ್ತಿದ್ದರೆ ಏಕತಾನತೆ  ಬರುವದು ಸಹಜ. ಪೈಪೋಟಿ,  ಜನಪ್ರಿಯತೆ ಹಾಗೂ ವರಮಾನ  ಕುಸಿತ  ತಡೆಯಲು ಚಾನೆಲ್‌ಗಳು  ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ತೀವ್ರಗತಿಯಲ್ಲಿ ಬದಲಾಗುತ್ತಿರುವ ಕೇಳುಗರ ಅಭಿರುಚಿ ಅಪೇಕ್ಷೆಗಳಿಗೆ ಸ್ಪಂದಿಸುವ ಕಾರ್ಯಕ್ರಮಗಳ ಪ್ರಸ್ತುತಿ ಹಾಗೂ ಕೇಳುಗರನ್ನು ಆಕರ್ಷಿಸುವ ಜಾಹೀರಾತುಗಳ ನಿರ್ಮಾಣ ಖಾಸಗಿ ಚಾನಲ್‌ಗಳಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸುತ್ತಿದೆ.ಶೇಕಡಾ 99 ರಷ್ಟು ಜನಸಂಖ್ಯೆ ತಲುಪಬಲ್ಲ ಅಪಾರ ವ್ಯಾಪ್ತಿ, ಪ್ರತಿದಿನ ಸರಾಸರಿ 40 ಕೋಟಿಗೂ ಹೆಚ್ಚು ಜನ ರೇಡಿಯೊ ಕೇಳುತ್ತಾರೆ ಎನ್ನುವ ಹೆಗ್ಗಳಿಕೆಗಳು ರೇಡಿಯೋದ ಸಾಮರ್ಥ್ಯ ಸಾಬೀತು ಪಡಿಸುತ್ತವೆ. ನಿಜವಾದ ಅರ್ಥದಲ್ಲಿ ಇದೊಂದು ಸಮೂಹ ಮಾಧ್ಯಮವಾಗಿದೆ. ಸಾವಿರಾರು ಕೇಂದ್ರಗಳಿಂದ ಯುವಜನರಿಗೆ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಾಗಲಿವೆ.ಬರಲಿರುವ ನೂರಾರು ಖಾಸಗಿ `ಎಫ್‌ಎಂ~ ಕೇಂದ್ರಗಳ ಬಗ್ಗೆ ಕೇಳುಗರ ಕುತೂಹಲ ನಿರೀಕ್ಷೆಗಳು ಬಹಳಷ್ಟಿವೆ. ಅವು ಪ್ರಸಾರ ಸಂಹಿತೆಯ ಎಲ್ಲೆ ಮೀರದಂತೆ ಸ್ವಚ್ಛ ಸೊಗಸಾದ ಮಾಹಿತಿ ಮನರಂಜನೆ ನೀಡಬೇಕಾಗಿದೆ..ಇಂತಹ ಪ್ರಭಾವಶಾಲಿ ಮಾಧ್ಯಮವನ್ನು ಕೇವಲ ಪ್ರಸಾರಕರ ವಿವೇಚನೆಗೆ ಬಿಡದೆ ಪ್ರಸಾರದಲ್ಲಿ ಸಕ್ರಿಯವಾಗಿ ಭಾಗವಹಿಸಿ ಅದರ ಮೇಲೆ ನಿಗಾ ಇಡುವುದು ಕೇಳುಗರ ಕರ್ತವ್ಯವೂ ಹೌದು. ಹಾಗಾದಾಗ ಮಾತ್ರ  ಬಾನುಲಿ ಪ್ರಸಾರ ಕ್ರಾಂತಿ ಅರ್ಥಪೂರ್ಣವಾದೀತು, ಬಾನುಲಿಯ ಅಗಾಧ ಶಕ್ತಿ ಸಾಮರ್ಥ್ಯಗಳ ಸಮರ್ಪಕ  ಬಳಕೆಯು ಆದೀತು.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.