ಭಾನುವಾರ, ಜನವರಿ 26, 2020
28 °C

ಎಲ್ಲೆಲ್ಲೂ ಹನುಮಮಯ...

ವೈ.ಬಿ.ಕಡಕೋಳ Updated:

ಅಕ್ಷರ ಗಾತ್ರ : | |

ಭಕ್ತನಿಗಾಗಿ ಉದ್ಭವಿಸಿದ ಮಾರುತಿ

ಇದೊಂದು ಬೆಟ್ಟ ಪ್ರದೇಶ. ಇಲ್ಲಿ ಈ ಮೊದಲು ತುಳಸಿ ಗಿಡಗಳು ಅಪಾರ ಪ್ರಮಾಣದಲ್ಲಿ ಇದ್ದ ಕಾರಣ ಇದು ತುಳಸೀಗೆರೆ. ಬಾಗಲಕೋಟೆ ಜಿಲ್ಲೆಯಲ್ಲಿರುವ ಈ ತುಳಸೀಗೆರೆ ಅದ್ಭುತ ಆಂಜನೇಯ ದೇವಾಲಯದಿಂದ ಪ್ರಸಿದ್ಧ ಯಾತ್ರಾ ಸ್ಥಳವಾಗಿ ಗುರುತಿಸಲ್ಪಟ್ಟಿದೆ. ಕದಂಬರ ಕಾಲದ ದೇಗುಲವಿದು. ಇಲ್ಲೀಗ ಹನುಮ ಜಯಂತಿಯ ಸಡಗರ.ನೀರ ಬೂದಿಹಾಳದ ದೇಸಾಯಿ ಎಂಬ ತಿರುಪತಿ ತಿಮ್ಮಪ್ಪನ ಅಪಾರ ಭಕ್ತರೊಬ್ಬರಿಂದ ಉಗಮಿಸಿರುವ ಇಲ್ಲಿಯ ಆಂಜನೇಯ ತಿಮ್ಮಪ್ಪನ ಅವತಾರವೆಂದೇ ನಂಬಿಕೆ ಇದೆ. ಆದ ಕಾರಣ ದೇವಾಲಯದ ಹಿಂದೆ ತಿರುಪತಿ ತಿಮ್ಮಪ್ಪನ ಮೂರು ನಾಮಗಳ ಚಿತ್ರಣವಿದ್ದು ದೇವರಿಗೆ ನಮಸ್ಕರಿಸಿ ಹಿಂದೆ ಹೋಗಿ ಆ ಚಿತ್ರಣಕ್ಕೂ ನಮಸ್ಕರಿಸಿ ಬರುವ ಮೂಲಕ ತಿರುಪತಿ ತಿಮ್ಮಪ್ಪನನ್ನು ನೆನೆಯುವ ಸಂಪ್ರದಾಯ ಇಲ್ಲಿದೆ.80 ವರ್ಷಗಳವರೆಗೆ ದೇಸಾಯಿಯವರು ತಿರುಪತಿಯಲ್ಲಿ ನಡೆಯುವ ಬ್ರಹ್ಮೋತ್ಸವಕ್ಕೆ ಚಿನ್ನ, ಬೆಳ್ಳಿ, ದವಸ ಧಾನ್ಯ, ನಾಣ್ಯಗಳನ್ನು ತಮ್ಮ ಅಶ್ವಗಳ ಮೇಲೆ ಹೇರಿಕೊಂಡು ಹೋಗಿ ಅರ್ಪಿಸುತ್ತಿದ್ದರು. ಒಮ್ಮೆ ಅವರ ಕನಸಿನಲ್ಲಿ ತಿಮ್ಮಪ್ಪನು ಕಾಣಿಸಿಕೊಂಡು ‘ನಿನ್ನ ಭಕ್ತಿಗೆ ನಾನು ಮೆಚ್ಚಿರುವೆ, ಇನ್ನು ಮುಂದೆ ನೀನಿರುವಲ್ಲಿಯೇ ಬಂದು ದರ್ಶನ ನೀಡುವೆ’ ಎಂದನಂತೆ. ಇದರಿಂದ ತಿಮ್ಮಪ್ಪ ಎಲ್ಲಿ ಉದ್ಭವ ಆಗುವನೆಂಬ ಕಾತರ ದೇಸಾಯಿಯವರಿಗೆ. ಅವರ ಮನೆಯಲ್ಲಿ ಹಸುಗಳನ್ನು ಸಾಕಿದ್ದರು. ಅವುಗಳನ್ನು ಕಾಯಲು ಒಬ್ಬ ಗೋಪಾಲನಿದ್ದ. ಆತ  ತುಳಸೀವನದತ್ತ ಗೋವುಗಳನ್ನು ಮೇಯಿಸಲೆಂದು ಹೋಗುತ್ತಿದ್ದ. ಅವುಗಳಲ್ಲಿ ಒಂದು ಹಸು ದಿನವೂ ತುಳಸೀ ವನಗಳ ಮಧ್ಯೆ ಕೆಲಹೊತ್ತು ವಿಶ್ರಮಿಸುತ್ತಿತ್ತು. ಮನೆಗೆ ಬಂದಾಗ ಎಲ್ಲ ಹಸುಗಳಂತೆ ಅದು ಹಾಲು ಕರೆಯುತ್ತಿರಲಿಲ್ಲ.ಇದೊಂದೇ ಯಾಕೆ ಈ ರೀತಿ ಮಾಡುತ್ತಿದೆ ಎಂಬುದನ್ನು ಅರಿಯಲು ಆ ಗೋಪಾಲಕ ಆ ಹಸುವನ್ನು ಹಿಂಬಾಲಿಸಿದ. ಅದು ತುಳಸೀವನದ ಮಧ್ಯದಲ್ಲಿರುವ ಹುತ್ತವೊಂದಕ್ಕೆ ಹಾಲು ಬಿಡುವ ದೃಶ್ಯ ಕಂಡು ಅಚ್ಚರಿಗೊಂಡ. ದೇಸಾಯಿಯವರಿಗೆ ಈ ವಿಷಯ ತಿಳಿಸಿದ. ದೇಸಾಯಿಯವರು ಹುತ್ತದ ಒಳಗೆ ನೋಡಿದಾಗ ಅಲ್ಲಿ ಆಂಜನೇಯನ ಉದ್ಭವಮೂರ್ತಿ ಗೋಚರವಾಯಿತು. ಇದು ತಿರುಪತಿ ತಿಮ್ಮಪ್ಪನ ಪ್ರತಿರೂಪ ಎಂದುಕೊಂಡು ೧೧೦೨ ರಲ್ಲಿ ಈ ತಾಣದಲ್ಲಿ ನಿರ್ಮಿಸಿದರು ಎಂಬ ಪ್ರತೀತಿ ಇದೆ.ರಾಜ್ಯ ಹೆದ್ದಾರಿಯಲ್ಲಿ ಅನತಿ ದೂರದಲ್ಲಿರುವ ಈ ದೇವಾಲಯ ಸದಾ ಭಕ್ತರಿಂದ ಕೂಡಿರುತ್ತದೆ. ಭಕ್ತಿಭಾವದ ಸಂಕಲ್ಪ ಪೂಜಾ ವಿಧಿವಿಧಾನಗಳು ನಿತ್ಯವೂ ಜರುಗುತ್ತವೆ. ಪ್ರತಿವರ್ಷ ದೀಪಾವಳಿ ಪಾಡ್ಯದ ಮರುದಿನ ಪ್ರಾರಂಭವಾಗುವ ಕಾರ್ತಿಕದ ನಂತರ ಬರುವ ಏಳನೇ ಶನಿವಾರದಂದು ಜಾತ್ರೆಯನ್ನು ಸಡಗರದಿಂದ ನಡೆಸುತ್ತ ಬಂದಿರುವುದು ಈ ಸ್ಥಳದ ಇನ್ನೊಂದು ವಿಶೇಷ.

 

ಭವ್ಯ-, ದಿವ್ಯ ಆಂಜನೇಯ

ಒಂದೂವರೆ ಅಡಿ ಎತ್ತರದ ಪಾಣಿಪೀಠದ ಮೇಲೆ ನಿಂತ ಆರು ಅಡಿ ಎತ್ತರದ ಉತ್ತರಾಭಿಮುಖವಾಗಿರುವ ಆಂಜನೇಯದ ದರುಶನ ಪಡೆಯಬೇಕೆಂದರೆ, ಬನ್ನಿ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಕಚ್ಚಿಗೆಬೈಲು ಗ್ರಾಮಕ್ಕೆ.ವಿಶಿಷ್ಟ ಕೆತ್ತನೆಯಿಂದ ಕಣ್ಮನ ಸೆಳೆಯುವ ಪುರಾತನ ಆಂಜನೇಯ ದೇಗುಲ ಇಲ್ಲಿ ಎಲ್ಲರನ್ನೂ  ಕೈಬೀಸಿ ಕರೆಯುತ್ತದೆ.  ಕೆಳದಿಯ ಅರಸ ಭದ್ರಪ್ಪ ನಾಯಕ ಸುಮಾರು ೧೬ನೇ ಶತಮಾನದಲ್ಲಿ ಈ ಸುಂದರ ಮೂರ್ತಿಗೆ ಆಲಯವನ್ನು ಕಟ್ಟಿಸಿದನಂತೆ. ಈ ದೇಗುಲ ನಿರ್ವಹಣೆಗೆ ಜಾಗದ್ದೆ ಪಟೇಲರನ್ನು ನೇಮಕ ಮಾಡಿ ೧೫ ಖಂಡುಗ ಭತ್ತದ ಫಸಲು ಬರುವಷ್ಟು ವಿಶಾಲವಾದ ಗದ್ದೆಯನ್ನು ದಾನವಾಗಿ ನೀಡಿದ್ದನೆಂದು ತಾಮ್ರಶಾಸನದಲ್ಲಿ ಉಲ್ಲೇಖವಿದೆ.ಸುಮಾರು ೫೦ ವರ್ಷಗಳ ಹಿಂದೆ ಬಿದಿರಿನ ಪೊದೆಯಲ್ಲಿ ಈ ಆಂಜನೇಯ ವಿಗ್ರಹ ಕಂಡುಬಂದಿತು. ಗ್ರಾಮಸ್ಥರು ಮತ್ತು ಭಕ್ತರು ಸೇರಿ ಈ ಪೊದೆ ಮತ್ತು ಸುತ್ತ ಆವರಿಸಿದ ಮರಗಳ ಪೊದೆಯನ್ನು ಸ್ವಚ್ಛಗೊಳಿಸಿ ಮತ್ತೆ ಗುಡಿ ನಿರ್ಮಿಸಿ ಪೂಜಿಸಲು ಆರಂಭಿಸಿದರು. ಇಷ್ಟಾರ್ಥ ಸಿದ್ಧಿಸುವ ಶಕ್ತಿ ಈ ದೇವರಿಗಿದೆ ಎಂಬ ನಂಬಿಕೆ ಭಕ್ತರದ್ದು.ಇಲ್ಲಿಗೆ ಬಂದರೆ ಶರಾವತಿಯ ನಿನಾದ, ಅಮ್ಮನಘಟ್ಟದ ಜೇನು ಕಲ್ಲಮ್ಮನ ಗುಡ್ಡ ಹಾಗೂ ಬಾಣಿಗದ ಜೋಡಿ ವೆಂಕಟರಮಣ ದೇವಾಲಯದ ಸೌಂದರ್ಯವನ್ನೂ ಸವಿಯಬಹುದು.

ಶತಮಾನ ಪೂರೈಸಿದ ದೇವಾಲಯ

ಪುಣ್ಯಕ್ಷೇತ್ರಗಳಿಗೆ ಪ್ರಸಿದ್ಧಿಯಾಗಿರುವ ತುಮಕೂರಿನ ಶೆಟ್ಟಿಹಳ್ಳಿ ಗ್ರಾಮದ ಶತಮಾನ ಪೂರೈಸಿದ ಹನುಮ ದೇಗುಲದಲ್ಲೀಗ ಜಯಂತಿಯ ಸಂಭ್ರಮ.

ಮಹಾಭಾರತ ಕಾವ್ಯದಲ್ಲಿ ಬರುವ ಜನಮೇಜಯ ಮಹಾರಾಜರು ಯಾಗ ಮಾಡುವ ಮುನ್ನ ವಿಘ್ನಗಳು ಬಾರದಂತೆ ಪ್ರತಿಷ್ಠಾಪಿಸಿರುವ ಆಂಜನೇಯ ಈತ. ಸುಮಾರು ೧೦ /6 ಅಡಿ ವಿಸ್ತೀರ್ಣದ ಇಲ್ಲಿಯ ಹನುಮ ಪ್ರತಿಮೆ ಮುಳುಬಾಗಿಲಿನಲ್ಲಿರುವ ಹನುಮಂತನನ್ನು ಬಿಟ್ಟರೆ ಎತ್ತರದಲ್ಲಿ ಎರಡನೆಯದ್ದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.ಆಂಜನೇಯನ ಕೈಯಲ್ಲಿ ಮೂರು ಮಾವಿನ ಹಣ್ಣುಗಳನ್ನು ಹಿಡಿದಿದ್ದು, ಇದು ತ್ರಿಕರ್ಣ, ತ್ರಿಗಣ ಮತ್ತು ತ್ರಿಶಕ್ತಿಯನ್ನು ಸೂಚಿಸುತ್ತದೆ. ವಿಶೇಷವೆಂದರೆ ಈ ಪ್ರತಿಮೆಯು ಉದ್ಭವ ಮೂರ್ತಿಯಾಗಿದ್ದು, ದಿನೇ ದಿನೇ ಮೇಲೆ ಬೆಳೆಯುತ್ತಿದ್ದ. ಮತ್ತೆ ಬೆಳೆಯಬಾರದು ಎಂದು ತಲೆಯ ಮೇಲೆ ಕಲ್ಲೆಳೆದು ಮೊಳೆ ಹೊಡೆದರೆಂದು ಹೇಳಲಾಗುತ್ತದೆ. ಇದಕ್ಕೆ ಇಂಬು ನೀಡಲು ವಿಗ್ರಹದ ಮೇಲೆ ಕಲ್ಲು ಚಪ್ಪಡಿಯೊಂದನ್ನು ಇಟ್ಟು ಗರ್ಭಗುಡಿ ಕಟ್ಟಲಾಗಿದೆ.

ಆಂಜನೇಯನಾದ ಹುಲಿಕುಂಟ

ಕರ್ನಾಟಕದ ಪ್ರಸಿದ್ದ ಪ್ರಾಣದೇವರ ಕ್ಷೇತ್ರಗಳಲ್ಲಿ ಬಳ್ಳಾರಿ ಜಿಲ್ಲೆಯ ಸಂಡೂರು ತಾಲ್ಲೂಕಿನ ಬೊಮ್ಮಘಟ್ಟವೂ ಒಂದು.

ಇಲ್ಲಿಯ ಹುಲಿಕುಂಟೇಶ್ವರ ಬಹಳ ಪ್ರಸಿದ್ಧಿ ಪಡೆದ ದೇವತೆ. ಆಂಜನೇಯನೇ ಇಲ್ಲಿ ಹುಲಿಕುಂಟೇಶ್ವರನಾಗಿದ್ದಾನೆ. ಹುಲಿಕುಂಟೆ ಕೆರೆಯ ಹಿಂಭಾಗದಲ್ಲಿರುವುದರಿಂದ ಈ ಹೆಸರು ಬಂದಿದೆ.  ಈ ಹುಲಿಕುಂಟೇಶ್ವರನಲ್ಲಿಯೇ ವಿದೇಶಗಳಿಂದಲೂ ಭಕ್ತರು ಬರುವುದು ವಿಶೇಷ. ಅನೇಕ ಮಹಾನುಭಾವರು, ಯತಿವರ್ಯರು ಈತನ ಮೇಲೆ ಅನೇಕ ಸ್ತುತಿ ಮಂಜರಿಗಳನ್ನು ರಚಿಸಿದ್ದಾರೆ.ದೇವಸ್ಥಾನದ ಸನ್ನಿಧಿಯಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠಾಧೀಶ ಸುಭೋದೇಂದ್ರ ತೀರ್ಥ ಸ್ವಾಮೀಜಿಗಳಿಂದ ಪ್ರತಿಷ್ಠಾಪಿತರಾದ ಲಕ್ಷ್ಮಣ-ಗರುಡ, ಮುಖ್ಯಪ್ರಾಣ ಸೀತಾ ಸಮೇತ ಶ್ರೀರಾಮಚಂದ್ರ ದೇವರ ವಿಗ್ರಹಗಳಿವೆ. ದೇವಾಲಯದ ಕೈಪಿಡಿ ಗೋಡೆಯಲ್ಲಿ ಸುತ್ತಲೂ ಶಾಲಾ ಶಿಖರಗಳುಳ್ಳ ದೇವ ಕೋಷ್ಠಕಗಳಿವೆ. ವಿಶೇಷ ಸಂದರ್ಭಗಳಲ್ಲಿ ಭೂತಬಲಿ ಹಾಕುವುದು ವಾಡಿಕೆ ಇದೆ. ಭಕ್ತರ ಇಚ್ಚೆಯ ಮೇರೆಗೆ ಪ್ರಾಣ ದೇವರಿಗೆ ಗಂಧ ಮತ್ತು ಬೆಣ್ಣೆಯ ಅಲಂಕಾರ, ಬೆಳ್ಳಿ ರಥವನ್ನು ದೇವಸ್ಥಾನದ ಪ್ರಕಾರದಲ್ಲಿ ಎಳೆಯಲು ಅವಕಾಶವಿದೆ. ಕಷ್ಟಗಳ ನಿವಾರಣೆಗಾಗಿ ತುಪ್ಪದ ದಿಪೋತ್ಸವ ಸೇವೆ ಇದೆ.

ಈ ವಿಶಿಷ್ಟ ದೇಗುಲಕ್ಕೆ ಬೊಮ್ಮಘಟ್ಟಕ್ಕೆ ಸಂಡೂರು ಕೂಡ್ಲಿಗಿ ಗುಡೇಕೊಟ ಮುಖೇನ ಚೋರನೂರು ಮಾರ್ಗವಾಗಿ ಬರಬಹುದಾಗಿದೆ.  ವಿವರಗಳಿಗೆ ೯೪೪೮೪೯೭೯೨೩ .ಬಂಡೆಯಲ್ಲಿ ಉದ್ಭವ

ಶತಮಾನಗಳ ಹಿಂದೆ ಬಂಡೆಯೊಂದರಲ್ಲಿ ತಂತಾನೇ ಉದ್ಭವಿಸಿ ಭಕ್ತ ಸಂಕುಲಕ್ಕೆ ಅಚ್ಚರಿ ಮೂಡಿಸಿರುವ ರಾಮಬಂಟನ ವಿಶೇಷ ದರ್ಶನಕ್ಕೆ ಸಿದ್ಧವಾಗಿ ನಿಂತಿದೆ ಬೆಂಗಳೂರಿನ ನಂದಿದುರ್ಗ ಬಡಾವಣೆಯ ಬಂಡೆ ಆಂಜನೇಯ ದೇಗುಲ.ಬೇಡಿದ್ದನ್ನೆಲ್ಲ ನೀಡುವಾತ ಎಂದೇ ಈತ ಪ್ರಸಿದ್ಧ. ವಿಶೇಷ ದೀಪಾಲಂಕಾರ, ವೈವಿಧ್ಯ ಹೂವುಗಳ ಶೃಂಗಾರದಿಂದ ಹನುಮ ಜಯಂತಿಯಂದು ಇಲ್ಲಿಯ ಆಂಜನೇಯ ಭಕುತರಿಗೆ ಅಪರೂಪದ ದರ್ಶನ ನೀಡಲಿದ್ದಾನೆ.         ಲೇಖಕರು: ವೈ.ಬಿ.ಕಡಕೋಳ

ಕಲಾ ಹೆಗಡೆ ಆನಂದಪುರಂ

ಶೆಟ್ಟಿಹಳ್ಳಿ ಸುಜಾತ ಎಸ್.ಎನ್

ಸ್ವರೂಪಾನಂದ ಎಂ. ಕೊಟ್ಟೂರು

ಪ್ರತಿಕ್ರಿಯಿಸಿ (+)