ಸೋಮವಾರ, ಜನವರಿ 20, 2020
26 °C

ಎಲ್ಲ ಸರಿಯಿದ್ದವರೇ ನಮ್ಮ ತಪ್ಪೇನು ಹೇಳಿ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಸರಿಯಿದ್ದವರೇ ನಮ್ಮ ತಪ್ಪೇನು ಹೇಳಿ..

ಕೋಲಾರ: ವೈದ್ಯ ಸಿಬ್ಬಂದಿ ಇಲ್ಲದೆ 2 ವರ್ಷದಿಂದ ತೆವಳುತ್ತಲೇ ಇರುವ ಜಿಲ್ಲಾ ಅಂಗ­ವಿಕ­ಲರ ಪುನರ್ವಸತಿ ಕೇಂದ್ರ, ವರ್ಷ­ಗಳು­ರು­ಳಿದರೂ ನಡೆಯದ ಅಂಗವಿಕಲರ ಸಮೀಕ್ಷೆ, ಸಿಬ್ಬಂದಿ ಕೊರ­ತೆ­ಯಿಂದ ಅಂಗವಿಕಲರ ಕಲ್ಯಾಣ ಇಲಾಖೆಗೂ ಅಂಗ­ವೈಕಲ್ಯ, 50 ಗ್ರಾಮ ಪಂಚಾಯಿತಿಗಳಲ್ಲಿ ಪುನರ್ ವಸತಿ ಕಾರ್ಯಕರ್ತರೇ ಇಲ್ಲದ ಸ್ಥಿತಿ, ಈ ನಡುವೆ ನಿಜವಾದ ಅಂಗವಿಕಲರಿಗೆ ಸುಲಭವಾಗಿ ದಕ್ಕದ ಸೌಲಭ್ಯ, ದುಡ್ಡು ಕೊಟ್ಟರೆ ಎಂಥವರಿಗಾದರೂ ದೊರಕುವ ಅಂಗವಿಕಲರ ಗುರುತಿನ ಚೀಟಿ....–ವಿಶ್ವ ಅಂಗವಿಕಲರ ದಿನಾಚರಣೆ ಸಂದರ್ಭ­ದಲ್ಲಿ ಜಿಲ್ಲೆಯಲ್ಲಿರುವ ಸನ್ನಿ­ವೇಶ ಇದು. ಜಿಲ್ಲೆ­ಯಲ್ಲಿ ಅಂಗವಿಕಲರು ಮತ್ತು ಹಿರಿಯ ನಾಗರಿಕರ ಕಲ್ಯಾಣ ಇಲಾಖೆ, ಅದಕ್ಕೊಬ್ಬ ಉಪನಿರ್ದೇ­ಶಕರು, ಕಚೇರಿ, ಸಿಬ್ಬಂದಿ ಇದ್ದರೂ ಅಂಗವಿಕಲರ ಸಮಸ್ಯೆ­ಗಳು ಮಾತ್ರ ಬೆಟ್ಟದಂತೆ ಹಾಗೇ ಉಳಿದಿವೆ. ಅದಕ್ಕೆ ಅಂಗವಿಕಲರ ಕಲ್ಯಾಣ ಇಲಾಖೆಯಷ್ಟೇ ಅಲ್ಲದೆ, ಆರೋಗ್ಯ ಇಲಾಖೆ, ಗ್ರಾಮೀ­ಣಾ­ಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಪೌರಾಡಳಿತ ಸಂಸ್ಥೆ­ಗಳೂ ತಮ್ಮ ಪಾಲಿನ ಕೊಡುಗೆ ನೀಡಿವೆ.ಸೌಕರ್ಯವಿಲ್ಲದ ಕೇಂದ್ರ: 2010–11ನೇ ಸಾಲಿ­ನಲ್ಲಿ ಜಿಲ್ಲೆಯಲ್ಲಿ ಜಿಲ್ಲಾ ಅಂಗವಿಕಲರ ಪುರಸತಿ ಕೇಂದ್ರವನ್ನು ಸರ್ಕಾರೇತರ ಸಂಸ್ಥೆ ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಮೂಲಕ ನಗರ ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯ ಆವ­ರಣದಲ್ಲಿ ಆರಂಭಿ­ಸಲಾಗಿದೆ. 2011ರ ಅ.7ರಂದು ಶುರುವಾಗಿರುವ ಕೇಂದ್ರ­ದಲ್ಲಿ ಮೂವರು ಸಿಬ್ಬಂದಿ ಬಿಟ್ಟರೆ ಬೇರೆ ತಜ್ಞರೇ ಇಲ್ಲ. ಕೇಂದ್ರಕ್ಕೆಂದೇ ನೀಡಲಾಗಿರುವ ಐದು ಕೊಠಡಿಗಳ ಪೈಕಿ ಕೇವಲ ಒಂದು ಕೊಠಡಿಯಲ್ಲಿ ಅಂಗವಿಕ­ಲರಿಗೆ ಗುರುತಿನ ಚೀಟಿ ನೀಡುವ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.

ಮತ್ತೊಂದು ಕೊಠಡಿ­ಯಲ್ಲಿ ಜಿಲ್ಲಾ ಕ್ಷಯ ರೋಗ ನಿಯಂತ್ರಣ ಘಟಕ ಕಾರ್ಯ­ನಿರ್ವಹಿಸುತ್ತಿದೆ. ಉಳಿದ ಮೂರು ಕೊಠಡಿ­ಗಳು ದಾಸ್ತಾನು ಕೊಠಡಿಗಳಾಗಿವೆ. ಹಳೆಯದಾದ ಕೊಠಡಿ ಮಳೆ ಬಂದಾಗ ಸೋರುತ್ತದೆ..ಕೇಂದ್ರದಲ್ಲಿ ದೈಹಿಕ ಚಿಕಿತ್ಸಕರು, ಮನಃಶಾಸ್ತ್ರ­ಜ್ಞರು, ವಾಕ್ ಶ್ರವಣ ತಜ್ಞರು, ಚಲನವಲನ ಬೋಧ­ಕರು ಮತ್ತು ವಿವಿಧೋದ್ದೇಶ ಪುರ್ನವಸತಿ ಕಾರ್ಯಕರ್ತರಿರಬೇಕು. ಆದರೆ ಈ ಆರು ಮಂದಿ ಪೈಕಿ ಕೃತಕಾಂಗ–ಸಾಧನ ಸಲಕರಣೆ ತಜ್ಞ­ರೊಬ್ಬ­ರಿ­ದ್ದಾರೆ. ಪೂರ್ಣಾವಧಿಗೆ ಯಾರನ್ನೂ ನೇಮಕ ಮಾಡಿಲ್ಲ. ಬದಲಿಗೆ ಆಸ್ಪತ್ರೆಯ ವೈದ್ಯರನ್ನೇ ಆಗಾಗ ಕರೆತರಲಾಗುತ್ತದೆ. ಕೆಲವು ತಜ್ಞರನ್ನು ತಿಂಗಳಿಗೆ ಒಮ್ಮೆ, ಎರಡು ಬಾರಿ ಕರೆತರಲಾಗುತ್ತದೆ. ಅಷ್ಟನ್ನು ಹೊರತುಪಡಿಸಿದರೆ ಅಂಗವಿಕಲರಿಗೆ ಈ ಕೇಂದ್ರ­ದಲ್ಲಿ ಪುನರ್ವಸತಿ ನೀಡುವ ಸೌಲಭ್ಯಗಳೇ ಇಲ್ಲ. ಜಿಲ್ಲೆಯ ಹಲವೆಡೆ ನಿಯಮಿತವಾಗಿ ಕೇಂದ್ರವು ಅಂಗವಿಕಲರಿಗಾಗಿ ಶಿಬಿರಗಳನ್ನು ನಡೆಸುತ್ತಿದೆ.

ಕೇಂದ್ರದ ಬಗ್ಗೆ ಅಂಗವಿಕಲರು ಹೇಳುವ ಒಂದೇ ಒಂದು ಒಳ್ಳೆಯ ಮಾತೆಂದರೆ, ಅಂಗವಿ­ಕಲರ ಗುರು­ತಿನ ಚೀಟಿಗಾಗಿ ದಿನಗಟ್ಟಲೆ ಅಲೆಯ­ಬೇಕಾಗಿದ್ದ ದಿನಗಳು ಕೇಂದ್ರ ಸ್ಥಾಪನೆಯಾ­ದಂದಿನಿಂದ ದೂರ­ವಾಗಿದೆ. ಒಂದೇ ದಿನದಲ್ಲಿ ನೋಂದಣಿ, ತಪಾಸಣೆ ಮತ್ತು ಗುರುತಿನ ಚೀಟಿ ವಿತರಣೆ ನಡೆಯುವುದು ಇಲ್ಲಿನ ವಿಶೇಷ. ಅಂಗವಿಕಲರಿಗೆ ಸಾಧನ, ಸಲಕರಣೆ ವಿತರಣೆ, ತಪಾಸಣೆ ಶಿಬಿರಗಳನ್ನು ಏರ್ಪಡಿಸುವ ಕೆಲಸ­ವನ್ನು ಸಂಸ್ಥೆ ಮಾಡುತ್ತಿದೆ. ಅದೂ ಕೂಡ ಕೇಂದ್ರದ ಕೆಲಸ ಎಂದೇ ಹೇಳಲಾಗುತ್ತದೆ.ಸೌಕರ್ಯ ಏಕಿಲ್ಲ ಎಂದು ಕೇಳಿದರೆ ಸಂಸ್ಥೆ ಮತ್ತು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿ­ಕಾರಿ­ಗಳು ‘ಅವರನ್ನೇ ಕೇಳಿ’ ಎಂದು ಪರಸ್ಪರರ ಕಡೆಗೆ ಕೈ ತೋರಿಸುತ್ತಾರೆ. ಈ ಇಬ್ಬರ ನಡುವೆ ಸಮನ್ವಯದ ಕೊರತೆ ದೊಡ್ಡ ಸಮಸ್ಯೆಯಾಗಿದೆ.ಕಾರ್ಯಕರ್ತರಿಲ್ಲ: ಜಿಲ್ಲೆಯಲ್ಲಿ ಎಲ್ಲ 156 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲೂ ಗ್ರಾಮೀಣ ಪುರ್ನ­ವ-­ಸತಿ ಕಾರ್ಯಕರ್ತರು ಇಲ್ಲದೇ ಇರು­ವುದು ದೊಡ್ಡ ಕೊರತೆಯಾಗಿದೆ. ಅಂಗವಿಕಲರಿಗೆ ಸೌಲಭ್ಯ­ಗಳನ್ನು ಕಲ್ಪಿಸುವಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಯ­ಕರ್ತರು 50 ಗ್ರಾಮ ಪಂಚಾಯಿತಿಗಳಲ್ಲಿ ಇಲ್ಲ.ಶ್ರೀನಿವಾಸಪುರ ತಾಲ್ಲೂಕಿನ 25 ಗ್ರಾಮ ಪಂಚಾಯಿತಿಗಳಲ್ಲೂ ಕಾರ್ಯಕರ್ತರಿದ್ದಾರೆ. ಉಳಿ­ದಂತೆ ಕೋಲಾರದ 36 ಪಂಚಾಯಿತಿ ಪೈಕಿ11, ಬಂಗಾರಪೇಟೆಯ 37 ಪಂಚಾಯಿತಿ ಪೈಕಿ –27, ಮಾಲೂರಿನ 28 ಪಂಚಾಯಿತಿ ಪೈಕಿ 9,  ಮುಳ­ಬಾಗಲಿನ 30 ಪಂಚಾಯಿತಿ ಪೈಕಿ 3 ಕಡೆ ಕಾರ್ಯ­ಕರ್ತರಿಲ್ಲ. ಒಟ್ಟಾರೆ 3ನೇ ಒಂದು ಭಾಗದಷ್ಟು ಪಂಚಾಯಿತಿಗಳಲ್ಲಿ ಕಾರ್ಯಕರ್ತರ ಕೊರತೆ ಇದೆ.ಕಾರ್ಯಕರ್ತರ ನೇಮಕ ಏಕೆ ಆಗಿಲ್ಲ ಎಂಬ ಪ್ರಶ್ನೆಗೆ ಅಂಗವಿಕಲರ ಕಲ್ಯಾಣಾಧಿಕಾರಿ ಎಚ್‍.ಸಿ.­ನಾಗಮಣಿ, ವೇತನ ಸಾಲದು ಎಂಬ ಕಾರಣಕ್ಕೆ ಆ ಕೆಲಸ ಮಾಡಲು ಅಂಗವಿಕಲರು ಮುಂದೆ ಬರುತ್ತಿಲ್ಲ ಎನ್ನುತ್ತಾರೆ.ಗ್ರಾಮೀಣ ಪುರ್ನವಸತಿ ಕಾರ್ಯಕರ್ತರ ಮೇಲ್ವಿ­ಚಾ­ರಣೆ ಮಾಡಲು ಪ್ರತಿ ತಾಲ್ಲೂಕಿ­ನಲ್ಲೂ ವಿವಿ­ಧೋ­ದ್ದೇಶ ಪುರ್ನವಸತಿ ಕಾರ್ಯ­ಕರ್ತರಿ­ರ­ಬೇಕು. ಬಂಗಾರಪೇಟೆ ತಾಲ್ಲೂಕಿನಲ್ಲಿ ಈ ಕಾರ್ಯ­ಕರ್ತರಿಲ್ಲ.ಏಕಿಲ್ಲ? ಬಂಗಾರಪೇಟೆಯಿಂದ ಬೆಂಗಳೂರಿಗೆ ರೈಲು ಸೌಲಭ್ಯವಿರುವುದರಿಂದ ಯಾವ ಅಂಗವಿ­ಕಲರೂ ಬಂಗಾರಪೇಟೆಯಲ್ಲೇ ಉಳಿದು ಕೆಲಸ ಮಾಡಲು ಬರುತ್ತಿಲ್ಲ ಎನ್ನುತ್ತಾರೆ ಅಧಿಕಾರಿ ನಾಗಮಣಿ.ಅನುದಾನ ಬಳಕೆ ಇಲ್ಲ: ಪ್ರತಿ ಗ್ರಾಮ ಪಂಚಾ­ಯಿತಿ­ಯೂ ತನ್ನ ಆದಾಯದಲ್ಲಿ ಶೇ 3ರಷ್ಟನ್ನು ಅಂಗವಿಕಲರ ಕಲ್ಯಾಣಕ್ಕಾಗಿ ಮೀಸಲಿಡಬೇಕು ಎಂಬುದು ಕಾನೂನು. ಹಾಗೆ ಎಷ್ಟು ಪಂಚಾ­ಯಿತಿ­ಗಳು ಆದಾಯವನ್ನು ಮೀಸಲಿಟ್ಟು ಅಂಗ­ವಿಕಲರಿ­ಗಾಗಿ ಬಳಸಿದೆ ಎಂಬ ಮಾಹಿತಿಯೂ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ಇಲ್ಲ.ಶೇ 3ರಷ್ಟು ಅನುದಾನ ಬಳಕೆ ಬಗ್ಗೆ ಮಾಹಿತಿ ನೀಡಿ ಎಂದು ಎಲ್ಲ ತಾಲ್ಲೂಕು ಪಂಚಾ­ಯಿತಿ­ಗಳಿಗೂ ಪತ್ರಗಳನ್ನು ಹಲವು ಬಾರಿ ಬರೆಯ­ಲಾ­ಗಿದೆ. ಆದರೆ ಇದುವರೆಗೆ ಜಿಲ್ಲೆಯ ಯಾವೊಂದು ಪಂಚಾ­ಯಿ­ತಿಯ ಮಾಹಿತಿಯೂ ತಮಗೆ ದೊರೆ­ತಿಲ್ಲ ಎಂದು ಅಧಿಕಾರಿ ನಾಗಮಣಿ ಅಸಹಾಯಕತೆ ವ್ಯಕ್ತಪಡಿಸುತ್ತಾರೆ.ನಡೆಯದ ಸಮೀಕ್ಷೆ: ಜಿಲ್ಲೆಯಲ್ಲಿ ಅಂಗವಿಕಲರ ಸಮೀಕ್ಷೆ ನಡೆದು ಆರು ವರ್ಷಕ್ಕೂ ಹೆಚ್ಚಿನ ಕಾಲ­ವಾ­ಗಿದೆ. ಗ್ರಾಮೀಣ ಪುರ್ನವಸತಿ ಯೋಜನೆ ಅಡಿ­ಯಲ್ಲಿ 2005–06ನೇ ಸಾಲಿನಲ್ಲಿ ನಡೆದ ಸಮೀಕ್ಷೆ­ಯನ್ನು ಹೊರತುಪಡಿಸಿದರೆ ಮತ್ತೆ ಸಮೀಕ್ಷೆಯೇ ನಡೆದಿಲ್ಲ. ಹೀಗಾಗಿಯೇ ಜಿಲ್ಲೆ­ಯಲ್ಲಿ ಈಗ ಎಷ್ಟು ಮಂದಿ ಅಂಗವಿಕಲರಿದ್ದಾರೆ ಎಂಬ ಸ್ಪಷ್ಟ ಅಂಕಿ ಅಂಶವೂ ಲಭ್ಯವಿಲ್ಲ.ಗ್ರಾಮೀಣ ಪ್ರದೇಶದಲ್ಲಿ ಪುರ್ನವಸತಿ ಕಾರ್ಯ­ಕರ್ತರಿರುವಂತೆ ಪಟ್ಟಣ, ನಗರ ಪ್ರದೇಶ­ಗಳಲ್ಲಿ ಕಾರ್ಯಕರ್ತರಿಲ್ಲ. ಪರಿಣಾಮವಾಗಿ ನಗರ ಪ್ರದೇ­ಶದ ಅಂಗವಿಕಲರ ಬಗ್ಗೆಯೂ ಇಲಾಖೆಯಲ್ಲಿ ಮಾಹಿತಿ ಇಲ್ಲ.

₨ 1200ಕ್ಕೆ ಗುರುತಿನ ಚೀಟಿ

ಶೇ 40ರಿಂದ 74ರಷ್ಟು ಅಂಗವೈಕಲ್ಯವುಳ್ಳವರಿಗೆ ಇಲಾಖೆಯು ಮಾಸಿಕ 500 ರೂಪಾಯಿ ಭತ್ಯೆ ನೀಡುತ್ತದೆ. ಶೇ 75ಕ್ಕಿಂತ ಹೆಚ್ಚು ಅಂಗವೈಕಲ್ಯ­ವುಳ್ಳವರಿಗೆ 1100 ರೂಪಾಯಿ ದೊರಕುತ್ತದೆ. ಈ ಸೌಲಭ್ಯವನ್ನು ಪಡೆಯುವ ಸಲುವಾಗಿಯೇ ಅಂಗವಿಕಲರಲ್ಲದವರು, ಕಡಿಮೆ ಅಂಗವೈಕಲ್ಯವುಳ್ಳವರು ಸುಳ್ಳು ಮಾಹಿತಿ ನೀಡಿ, ಸಿಬ್ಬಂದಿಗೆ ಲಂಚ ನೀಡಿ ಗುರುತಿನ ಚೀಟಿ ಮಾಡಿಸಿ­ಕೊಳ್ಳುತ್ತಾರೆ. ಈ ಭ್ರಷ್ಟಾಚಾರದಲ್ಲಿ ಅಂಗವಿಕಲರ ಕಲ್ಯಾಣ ಇಲಾಖೆ ಹಲವು ಸಿಬ್ಬಂದಿ, ಅಂಗವೈಕಲ್ಯದ ಬಗ್ಗೆ ಪ್ರಮಾಣಪತ್ರ ನೀಡುವ ವೈದ್ಯರು, ಹಲವು ಪುನರ್ವಸತಿ ಕಾರ್ಯಕರ್ತರು ಶಾಮೀಲಾಗಿದ್ದಾರೆ ಎನ್ನುತ್ತಾರೆ ಹೆಸರು ಪ್ರಕಟವಾಗಲು ಬಯಸದ ರೆಡ್ ಕ್ರಾಸ್ ಸಂಸ್ಥೆಯ ಸದಸ್ಯರೊಬ್ಬರು.ಅಂಗವಿಕಲರಲ್ಲದವರು, ಕಡಿಮೆ ಅಂಗವೈಕಲ್ಯವುಳ್ಳವರಿಗೆ ಚೀಟಿ ನೀಡು­ವಂತೆ ರಾಜಕೀಯ ಪಕ್ಷಗಳ ಮುಖಂಡರೂ ಕೂಡ ಒತ್ತಡ ಹೇರುವುದು ದುರಂತ. ಶ್ರೀನಿವಾಸಪುರ ತಾಲ್ಲೂಕಿನ ಹಳ್ಳಿಯೊಂದರ ಬಾಲಕನಿಗೆ ಕಳೆದ ತಿಂಗಳು ಗುರುತಿನ ಚೀಟಿ ನೀಡಲು 1200 ರೂಪಾಯಿ ಪಡೆಯಲಾಗಿದೆ. ಅಸಲಿ ಗುರು­ತಿನ ಚೀಟಿಯ ಹಾಳೆಗಳನ್ನು ಜೆರಾಕ್ಸ್ ಮಾಡಿ ಒಬ್ಬರೇ ಎಲ್ಲ ಅಧಿಕಾರಿಗಳ ಸೀಲು ಹಾಕಿ ಸಹಿ ಮಾಡಿದ್ದಾರೆ. ದುಡ್ಡು ಕೊಟ್ಟರೆ ಇಂಥ ಚೀಟಿಗಳು ಸಲೀಸಾಗಿ ಸಿಗು­ತ್ತವೆ. ಈ ಚೀಟಿಯನ್ನು ಆಧರಿಸಿ ವಿವಿಧ ಸೌಲಭ್ಯಗಳನ್ನು ನೀಡುವ ಸಂದ­ರ್ಭದಲ್ಲಿ ಇಲಾಖೆಗಳ ಅಧಿಕಾರಿಗಳೂ ಸೂಕ್ಷ್ಮ ತಪಾಸಣೆ ಮಾಡುವುದಿಲ್ಲ. ಗುರು­ತಿನ ಚೀಟಿ ದಂಧೆಗೆ ಕಡಿವಾಣ ಹಾಕುವವರು ಯಾರು? ಎಂಬುದು ಅವರ ಪ್ರಶ್ನೆ.ಸಭೆ ಸೇರುವ ಜಿಲ್ಲಾ ಮೇಲ್ವಿಚಾರಣಾ ತಂಡ...

ಅಂಗವಿಕಲರ ಪುರ್ನವಸತಿ ಕೇಂದ್ರ­ಕ್ಕಾಗಿಯೇ ಜಿಲ್ಲಾ ಮೇಲ್ವಿಚಾರಣಾ ತಂಡವನ್ನು ರಚಿಸಲಾಗಿದೆ. ಜಿಲ್ಲಾಧಿಕಾರಿಗಳು ತಂಡದ ಅಧ್ಯಕ್ಷರು. ಜಿಲ್ಲಾ ಎಸ್ಎನ್ಆರ್ ಆಸ್ಪತ್ರೆಯ ಜಿಲ್ಲಾ ಶಸ್ತ್ರಚಿಕಿತ್ಸಕರು ನೋಡಲ್ ಅಧಿಕಾರಿಯಾಗಿದ್ದಾರೆ. ರೆಡ್ ಕ್ರಾಸ್ ಸಂಸ್ಥೆಯ ಪ್ರತಿನಿಧಿ ಸದಸ್ಯ ಕಾರ್ಯ­ದರ್ಶಿ­ಯಾಗಿದ್ದಾರೆ. ಜಿಲ್ಲಾ ಪಂಚಾ­ಯತ್ ಮುಖ್ಯ ಕಾರ್ಯ­ನಿವರ್ಹಣಾ­ಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾ­ಧಿಕಾರಿ, ಉಪವಿಭಾ­ಗಾಧಿಕಾರಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾ­ಧಿಕಾರಿಗಳು, ಜಿಲ್ಲಾ ಉದ್ಯೋಗಾ­­ಧಿ­ಕಾರಿ, ವಾರ್ತಾ ಇಲಾಖೆ ಉಪ­ನಿರ್ದೇಶಕರು, ನಗರ­ಸಭೆ ಪೌರಾ­ಯು­ಕ್ತರು, ರೆಡ್ ಕ್ರಾಸ್ ಸಂಸ್ಥೆಯ ಅಧ್ಯ­ಕ್ಷರು ಇತರರು ಇರುತ್ತಾರೆ.

ಅಂಗವಿಕಲರ ವಿದ್ಯಾರ್ಥಿ ವೇತನ: ಮಾಹಿತಿ ಕೊರತೆ

ಅಂಗವಿಕಲ ವಿದ್ಯಾರ್ಥಿ ವೇತನ ವಿತರಣೆಗೆ ಸಂಬಂಧಿಸಿ ಅಂಗವಿಕಲರ ಕಲ್ಯಾಣ ಇಲಾಖೆಯಲ್ಲಿ ದಾಖಲೆಗಳ ನಿರ್ವಹಣೆ ಸಮರ್ಪಕವಾಗಿಲ್ಲ ಎಂಬುದು ಗಮನಾರ್ಹ.1ರಿಂದ 5ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ₨ 500, 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ₨ 1 ಸಾವಿರ, ಪಿಯುಸಿ ವಿದ್ಯಾರ್ಥಿಗಳಿಗೆ ₨ 1,5 ಸಾವಿರ, ಪದವಿ ವಿದ್ಯಾರ್ಥಿಗಳಿಗೆ ₨ 2 ಸಾವಿರ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ₨ 2.5 ಸಾವಿರ ವಿದ್ಯಾರ್ಥಿ ವೇತನ ನೀಡಲಾಗುತ್ತದೆ. ಒಟ್ಟಾರೆ  418 ಮಂದಿಗೆ ನೀಡ­ಲಾಗಿದೆ ಎಂಬುದು ಇಲಾಖೆಯ ಮಾಹಿತಿ. ಅವರಲ್ಲಿ ತರಗತಿವಾರು ವಿದ್ಯಾರ್ಥಿಗಳ ಮಾಹಿತಿ ಇದೆಯೇ ಎಂಬ ಪ್ರಶ್ನೆಗೆ ಇಲಾಖೆಯಲ್ಲಿ ಸ್ಪಷ್ಟ ಉತ್ತರ­ವಿಲ್ಲ. ಆ ಬಗೆಯ ದಾಖಲೀಕರಣ ಮಾಡಿಲ್ಲ ಎಂದು ಅಧಿಕಾರಿಗಳು ನಿಸ್ಸಂಕೋಚವಾಗಿ ಹೇಳುತ್ತಾರೆ.ಶಾಲೆಯ ಮುಖ್ಯಶಿಕ್ಷಕರು ದೃಢೀಕರಿಸಿ ಸಲ್ಲಿಸಬೇಕಾದ ಅರ್ಜಿಗಳು ನಿಗದಿತ ಜೂನ್ ತಿಂಗಳ ಸಮಯಕ್ಕೆ ಬರುವುದಿಲ್ಲ ಎಂಬುದು ಅವರ ನುಡಿ.ಮಾಹಿತಿ ನೀಡದ ಸ್ಥಳೀಯ ಸಂಸ್ಥೆಗಳು

ಜಿಲ್ಲೆಯ ನಗರಸಭೆ, ಪುರಸಭೆ, ಗ್ರಾಮ ಪಂಚಾ­ಯಿತಿ­ಗಳು ತಮ್ಮ ಆದಾಯದಲ್ಲಿ ಶೇ 3ರಷ್ಟನ್ನು ಅಂಗವಿ­ಕಲ­ರಿಗೆ ಮೀಸಲಿಟ್ಟು ಅವರಿಗಾಗಿ ಬಳಸಿರುವ ಕುರಿತ ಮಾಹಿ­ತಿ­ಯನ್ನು ಇದುವರೆಗೂ ನೀಡಿಲ್ಲ. ಮಾಹಿತಿ ನೀಡುವಂತೆ  ಕೋರಿ ಹಲವು ಪತ್ರ ಬರೆದರೂ ಪ್ರಯೋಜನವಾಗಿಲ್ಲ.

ಹಲವು ಗ್ರಾಮ ಪಂಚಾಯಿತಿಗಳಲ್ಲಿ ಪುನರ್ವಸತಿ ಕಾರ್ಯಕರ್ತರಿಗೆ ಕುಳಿತುಕೊಳ್ಳುವ ವ್ಯವಸ್ಥೆಯೇ ಇಲ್ಲವಾಗಿದೆ. ಅಂಗವಿಕಲರಿಗಾಗಿ ಕೆಲಸ ಮಾಡುವ ಅವರಿಗೆ ಕನಿಷ್ಠ ಸೌಲಭ್ಯಗಳನ್ನು ಪಂಚಾಯಿತಿಗಳು ಕಲ್ಪಿಸಿಕೊಡಬೇಕು.

–ಎಚ್.ಸಿ,ನಾಗಮಣಿ, ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣಾಧಿಕಾರಿ.

ಪ್ರತಿಕ್ರಿಯಿಸಿ (+)