ಮಂಗಳವಾರ, ಜೂನ್ 22, 2021
24 °C

ಎಲ್ಲ ಸಾಲಗಳೂ ಕೆಟ್ಟವಲ್ಲ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಎಲ್ಲ ಸಾಲಗಳೂ ಕೆಟ್ಟವಲ್ಲ!

2016–17ನೇ ಸಾಲಿನ ರಾಜ್ಯ ಮುಂಗಡ ಪತ್ರವನ್ನು ಎರಡು ಕಾರಣಗಳಿಂದಾಗಿ ಕಾತರದಿಂದ ಕಾಯಲಾಯಿತು. ಮೊದಲನೆಯದು: 14ನೇ ಹಣಕಾಸು ಆಯೋಗದ ಶಿಫಾರಸುಗಳ ಜಾರಿಯಿಂದ ಆದ ಪರಿಣಾಮಗಳಿಗೆ ಸ್ಪಂದಿಸಲು ಕಳೆದ ವರ್ಷದ ರಾಜ್ಯ ಬಜೆಟ್‌ ಮಂಡನೆ ವೇಳೆ ಕರ್ನಾಟಕ ಮತ್ತು ಇತರ ರಾಜ್ಯಗಳಿಗೆ ತೀರಾ ಕಡಿಮೆ ಅವಧಿ ದೊರಕಿತ್ತು.ಈ ಶಿಫಾರಸುಗಳ ಅನ್ವಯ, ಕರ್ನಾಟಕಕ್ಕೆ ಕೇಂದ್ರದಿಂದ ಷರತ್ತುರಹಿತವಾಗಿ ಸಿಗುವ ಅನುದಾನದ ಮೊತ್ತದಲ್ಲಿ ಶೇಕಡ 61ರಷ್ಟು ಹೆಚ್ಚಳ ಆಗಿತ್ತು. ಇನ್ನೊಂದೆಡೆ, ಕೇಂದ್ರ ಸರ್ಕಾರದ ಅನುದಾನದಲ್ಲಿ ನಡೆಯುವ ಯೋಜನೆಗಳಿಗೆ ಸಿಗುವ ಮೊತ್ತದಲ್ಲಿ ಶೇಕಡ 50ರಷ್ಟು ಕಡಿತ ಆಗಿತ್ತು. ಬಜೆಟ್‌ ಮಂಡನೆಗೆ ಕೆಲವೇ ದಿನಗಳ ಹಿಂದೆ ಈ ಬದಲಾವಣೆಗಳು ಆದ ಕಾರಣ, ಬಜೆಟ್‌ನಲ್ಲಿ ಅಲ್ಪ ಮಾತ್ರದ ಹೊಂದಾಣಿಕೆ ಮಾಡಿಕೊಳ್ಳಲು ರಾಜ್ಯಕ್ಕೆ ಸಾಧ್ಯವಾಯಿತು.ಎರಡನೆಯ ಕಾರಣ

ರಾಜ್ಯದ ಇಂದಿನ ಸರ್ಕಾರಕ್ಕೆ ಚುನಾವಣೆ ಎದುರಿಸಬೇಕಾದ ಪ್ರಮೇಯ ಇಲ್ಲದ ಆರ್ಥಿಕ ವರ್ಷ 2016–17 ಮಾತ್ರ. ಹಿಂದಿನ ಮೂರು ಆರ್ಥಿಕ ವರ್ಷಗಳಲ್ಲಿ ಕ್ರಮವಾಗಿ ರಾಜ್ಯ, ಕೇಂದ್ರ ಮತ್ತು ಪ್ರಮುಖ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆಗಳು ನಡೆದವು. ಮುಂದಿನ ವರ್ಷದ ಬಜೆಟ್‌ ಮಂಡನೆ ವೇಳೆಗೆ 2018ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇರಿಸಿಕೊಳ್ಳಬೇಕಾಗುತ್ತದೆ. ಚುನಾವಣೆ ಇಲ್ಲದ ವರ್ಷದಲ್ಲಿ, ಭವಿಷ್ಯದಲ್ಲಿ ಒಳಿತು ಮಾಡುವ  ಜನಪ್ರಿಯ ಅಲ್ಲದ ನಿರ್ಧಾರಗಳನ್ನು ಕೈಗೊಳ್ಳುವ ಅವಕಾಶ ಸರ್ಕಾರಕ್ಕೆ ಇರುತ್ತದೆ. ಈ ವರ್ಷದ ಪ್ರಾಮುಖ್ಯತೆಯನ್ನು ಹಿನ್ನೆಲೆಯಲ್ಲಿ ಇರಿಸಿಕೊಂಡು ಗಮನಿಸಿದರೆ, ಪ್ರಮುಖ ಕ್ಷೇತ್ರಗಳ ಬಗ್ಗೆ ಬಜೆಟ್‌ ಏನು ಹೇಳುತ್ತದೆ? ರಾಜ್ಯ ಸರ್ಕಾರಕ್ಕೆ ಸಿಕ್ಕ ಅನನ್ಯ ಅವಕಾಶದ ಹಿನ್ನೆಲೆಯಲ್ಲಿ ಈ ಲೇಖನ ಬಜೆಟ್‌ ವಿಶ್ಲೇಷಣೆ ನಡೆಸಿದೆ.ರಾಜ್ಯದ ಆದಾಯ ಹೇಗೆ ಬದಲಾಗಿದೆ?

ರಾಜ್ಯದ ಸ್ವಂತ ಆದಾಯದಲ್ಲಿ ಶೇಕಡ 11ರಷ್ಟು ಹೆಚ್ಚಳ ಆಗಿದೆ. ಇದರಲ್ಲಿ ದೊಡ್ಡ ಮೊತ್ತ ಸಂಗ್ರಹ ಆಗಿದ್ದು ಉತ್ಪನ್ನಗಳ ಮೇಲಿನ ಮೌಲ್ಯವರ್ಧಿತ ತೆರಿಗೆ (ವ್ಯಾಟ್‌), ಮದ್ಯ ಮತ್ತು ಭೂ ಕರದಿಂದ. ಕೇಂದ್ರದ ತೆರಿಗೆಯಲ್ಲಿನ ರಾಜ್ಯದ ಪಾಲಿನಲ್ಲಿ ಶೇಕಡ 12ರಷ್ಟು ಹೆಚ್ಚಳ ಆಯಿತು. ಕೇಂದ್ರದಿಂದ ರಾಜ್ಯಕ್ಕೆ ಷರತ್ತುರಹಿತವಾಗಿ ಸಿಗುವ ಮೊತ್ತ ಒಟ್ಟು ₹ 26,978 ಕೋಟಿ ಆಯಿತು. 14ನೇ ಹಣಕಾಸು ಆಯೋಗದ ಶಿಫಾರಸುಗಳ ಅನ್ವಯ ಈ ಮೊತ್ತದಲ್ಲಿ ಕಳೆದ ವರ್ಷವೇ ಶೇಕಡ 61ರಷ್ಟು ಹೆಚ್ಚಳ ಆಗಿತ್ತು ಎಂಬುದನ್ನು ಗಮನಿಸಬೇಕು.ಮಾರುಕಟ್ಟೆಯಿಂದ ಪಡೆಯಲಿರುವ ಸಾಲದಲ್ಲಿ ಗಣನೀಯ ಪ್ರಮಾಣದ ಹೆಚ್ಚಳ ಆಗಿರುವುದು ಈ ಬಾರಿಯ ದೊಡ್ಡ ಬದಲಾವಣೆ. ವಿತ್ತೀಯ ಕೊರತೆ ಪ್ರಮಾಣದಲ್ಲಿ ಯಾವುದೇ ಬದಲಾವಣೆ ಮಾಡಿಕೊಳ್ಳದೆಯೂ ಇದು ಸಾಧ್ಯವಾಯಿತು. ಅದು ಹೇಗೆಂದರೆ, ರಾಜ್ಯದ ಒಟ್ಟು ಆಂತರಿಕ ಉತ್ಪಾದನೆಯನ್ನು (ಜಿಎಸ್‌ಡಿಪಿ) ಲೆಕ್ಕ ಮಾಡುವ ವಿಧಾನದಲ್ಲೇ ಬದಲಾವಣೆ ತರಲಾಯಿತು. 2015–16ರಲ್ಲಿ ₹ 7.36 ಲಕ್ಷ ಕೋಟಿ ಇದ್ದ ಜಿಎಸ್‌ಡಿಪಿ 2016–17ನೇ ಸಾಲಿಗೆ ಹಠಾತ್ತನೆ ₹ 12.13 ಲಕ್ಷ ಕೋಟಿಗೆ ಏರಿತು. ಹೊಸ ಲೆಕ್ಕಾಚಾರ ವಿಧಾನವು, ಕರ್ನಾಟಕದ ಪ್ರಾಬಲ್ಯ ಇರುವ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೊಡುಗೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ.ಜಿಎಸ್‌ಡಿಪಿಯ ಇಂತಿಷ್ಟು ಪ್ರಮಾಣದವರೆಗೆ ಸಾಲ ಪಡೆಯಬಹುದು ಎಂಬ ನಿಯಮ ಇರುವ ಕಾರಣ, ಹೆಚ್ಚಿನ ಜಿಎಸ್‌ಡಿಪಿಯು ಹೆಚ್ಚಿನ ಮೊತ್ತವನ್ನು ಮಾರುಕಟ್ಟೆಯಿಂದ ಸಾಲದ ರೂಪದಲ್ಲಿ ಪಡೆಯಲು ಸರ್ಕಾರಕ್ಕೆ ಅನುವು ಮಾಡಿಕೊಟ್ಟಿತು. ಆದರೆ, ಸಾಲ ಯಾವತ್ತಿಗೂ ಸಮಸ್ಯೆಯೇ ಅಲ್ಲವೇ? ಇಲ್ಲ, ಹಾಗೇನೂ ಇಲ್ಲ. ಪಡೆದ ಸಾಲವನ್ನು ಯಾವ ಉದ್ದೇಶಕ್ಕೆ ಬಳಸಲಾಗಿದೆ ಎಂಬುದನ್ನು ಆಧರಿಸಿ ಅದು ಕೆಟ್ಟ ಸಾಲವೋ, ಒಳ್ಳೆಯ ಸಾಲವೋ ಎಂಬುದು ತೀರ್ಮಾನವಾಗುತ್ತದೆ. ದೂರಗಾಮಿ ಸಂಪತ್ತು ಸೃಷ್ಟಿಗೆ ಸಾಲದ ಹಣ ಬಳಸಿದರೆ, ಸಾಮಾನ್ಯ ಸಂದರ್ಭಗಳಲ್ಲಿ ಅದರಿಂದ ಒಳ್ಳೆಯದೇ ಆಗುತ್ತದೆ.ರಾಜ್ಯದ ಖರ್ಚುಗಳಲ್ಲಿ ಆಗಿರುವ ಬದಲಾವಣೆ ಹೇಗಿದೆ?

ರಾಜ್ಯದ ಬಂಡವಾಳ ವೆಚ್ಚದಲ್ಲಿ (ಸಂಪತ್ತು ಸೃಷ್ಟಿಗೆ ಮಾಡಿದ ಖರ್ಚು) ಶೇಕಡ 21ರಷ್ಟು ಹೆಚ್ಚಳ ಆಗಿದೆ. ಇದಕ್ಕೆ ಒಟ್ಟು ₹ 26,341 ಕೋಟಿ ಖರ್ಚು ಮಾಡಲಾಗಿದೆ. ವರಮಾನ ವೆಚ್ಚದಲ್ಲಿ (ವೇತನ ಪಾವತಿಯಂತಹ ಕಿರು ಅವಧಿಯ ಖರ್ಚುಗಳು) ಶೇಕಡ 11ರಷ್ಟು ಹೆಚ್ಚಳ ಆಗಿದೆ. ಇದರ ಮೊತ್ತ ₹ 1.30 ಲಕ್ಷ ಕೋಟಿ ಆಗಿದೆ. ನಗರಾಭಿವೃದ್ಧಿ, ನೀರಾವರಿ ಮತ್ತು ಪ್ರವಾಹ ನಿಯಂತ್ರಣ, ಪೊಲೀಸ್ ಮತ್ತು ವ್ಯವಸಾಯ ಕ್ಷೇತ್ರಗಳು ಹೆಚ್ಚಿನ ಪ್ರಮಾಣದ ಅನುದಾನ ಪಡೆದುಕೊಂಡವು.ನೀರಾವರಿ ಮತ್ತು ಪ್ರವಾಹ ನಿಯಂತ್ರಣ ಕ್ಷೇತ್ರಗಳಲ್ಲಿ ಬಂಡವಾಳ ವೆಚ್ಚ ಮತ್ತು ವರಮಾನ ವೆಚ್ಚದಲ್ಲಿ ಹೆಚ್ಚಳ ಆಗುತ್ತಿರುವುದು, ಈ ಸರ್ಕಾರಕ್ಕೆ ಕೃಷಿಯು ಆದ್ಯತೆಯ ಕ್ಷೇತ್ರವಾಗಿ ಮುಂದುವರಿದಿದೆ ಎಂಬುದನ್ನು ತೋರಿಸುತ್ತದೆ. ಈ ಕ್ಷೇತ್ರದಲ್ಲಿ ಸಂಪತ್ತು ಸೃಷ್ಟಿಗೆ, ಕಿರು ಅವಧಿಯ ವೆಚ್ಚಗಳನ್ನು ಭರಿಸಲು ಸರ್ಕಾರ ಸಿದ್ಧವಿದೆ ಎಂಬುದನ್ನೂ ತೋರಿಸುತ್ತದೆ.ನೀರು ಸರಬರಾಜು ಮತ್ತು ನೈರ್ಮಲ್ಯ ಕಾಪಾಡಲು ಮಾಡಿರುವ ವೆಚ್ಚದಲ್ಲಿ ಹೆಚ್ಚಳ ಆಗಿದೆ. ಆದರೆ ಹೆಚ್ಚಳದಲ್ಲಿನ ಬಹುಪಾಲು ಮೊತ್ತ ನಿರ್ವಹಣಾ ವೆಚ್ಚಗಳಿಗೆ ಬಳಕೆಯಾಗಿದೆ. ಈ ಕ್ಷೇತ್ರಗಳಲ್ಲಿ ಆಸ್ತಿ ಸೃಷ್ಟಿಗೆ ಹೆಚ್ಚುವರಿಯಾಗಿ ದೊರೆತ ಮೊತ್ತ ಶೇಕಡ 10ರಷ್ಟು ಮಾತ್ರ. ಸಾಮಾಜಿಕ ಭದ್ರತೆ ಮತ್ತು ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗಿನ ಬಂಡವಾಳ ವೆಚ್ಚ ಎರಡು ಪಟ್ಟು ಹೆಚ್ಚಾಗಿದೆ. ಅಲ್ಲದೆ, ನಗರಾಭಿವೃದ್ಧಿಗೆ ಹೆಚ್ಚಿನ ಬಂಡವಾಳ ವೆಚ್ಚ ನಿಗದಿ ಮಾಡಲಾಗಿದೆ.ಕಳೆದ ವರ್ಷ ಮೀಸಲಿಟ್ಟ ₹ 365 ಕೋಟಿಗೆ ಹೋಲಿಸಿದರೆ ಈ ಬಾರಿ ₹ 1,886 ಕೋಟಿ ನಿಗದಿ ಮಾಡಲಾಗಿದೆ. ಸಾಲ ಪಡೆದಿದ್ದು ಹೆಚ್ಚಾಗಿದ್ದರೂ ಅದರಲ್ಲಿ ದೊಡ್ಡ ಪ್ರಮಾಣವನ್ನು ಸಂಪತ್ತು ಸೃಷ್ಟಿಗೆ ವಿನಿಯೋಗಿಸಲಾಗಿದೆ. ಇದು ಗಮನಾರ್ಹ. ಆದರೆ, ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರಗಳಿಗೆ ಮೀಸಲಿಟ್ಟ ಮೊತ್ತದಲ್ಲಿ ಸಣ್ಣ ಪ್ರಮಾಣದ ಬದಲಾವಣೆ ಮಾತ್ರ ಕಂಡುಬಂದಿದೆ. ಇದು ನಿರಾಶಾದಾಯಕ.(ಲೇಖಕರು ಬೆಂಗಳೂರು ಮೂಲದ ಸಾರ್ವಜನಿಕ ನೀತಿ ನಿರೂಪಣಾ ಸಂಸ್ಥೆ ‘ದಿ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌’ನಲ್ಲಿ ಸಂಶೋಧಕರು.)

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.