ಶನಿವಾರ, ಮೇ 8, 2021
20 °C

ಎಸಿ ನಿವಾಸಕ್ಕೆ ಮುತ್ತಿಗೆ: ಧರಣಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ನಗರದ ಎ.ಜಿ.ದೇಸಾಯಿ ಸರ್ಕಲ್ ಹತ್ತಿರ ಇರುವ ನೆಮ್ಮದಿ ಕೇಂದ್ರದಲ್ಲಿ ಜಾತಿ ಪ್ರಮಾಣ ಪತ್ರ ದೊರೆಯುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರೂ ಸೇರಿದಂತೆ ನೂರಾರು ಮಂದಿ ಸಾರ್ವಜನಿಕರು ಇಲ್ಲಿನ ಎಸಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಿ ಧರಣಿ ನಡೆಸಿದ ಘಟನೆ ಮಂಗಳವಾರ ರಾತ್ರಿ 8.30 ಗಂಟೆಗೆ ನಡೆಯಿತು.`ಜಾತಿ ಪ್ರಮಾಣ ಪತ್ರ ನೀಡಲು ರೂ.15 ಮಾತ್ರ ಶುಲ್ಕ ನಿಗದಿ ಪಡಿಸಲಾಗಿದೆ. ಆದರೆ ರೂ.50 ಕೊಡುವವರಿಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತದೆ. ನಾವು ಬಡವರು ಕೂಲಿ ಮಾಡುವುದನ್ನು ಬಿಟ್ಟು ಬೆಳಿಗ್ಗೆ 6 ಗಂಟೆಗೆ ಬಂದು ಕ್ಯೂನಲ್ಲಿ ನಿಂತಿದ್ದೇವೆ. ರಾತ್ರಿಯಾದರೂ ನಮ್ಮ ಸರತಿ ಬರುತ್ತಿಲ್ಲ~ ಎಂದು ಧರಣಿ ನಿರತರು ದೂರಿದರು.ಶಾಲಾ ಮಕ್ಕಳಿಗೆ ಶಿಷ್ಯವೇತನಕ್ಕಾಗಿ ಜಾತಿ ಪ್ರಮಾಣಪತ್ರ ಬೇಕಾಗಿದೆ. ಆದರೆ ಅದು ದೊರೆಯುತ್ತಿಲ್ಲ. ನಾವೂ ಏನು ಮಾಡಬೇಕು ಎಂದು ಪ್ರಶ್ನಿಸಿದರು. ನೆಮ್ಮದಿ ಕೇಂದ್ರ ಆರಂಭವಾದ ಮೇಲೆ ನಮ್ಮ ನೆಮ್ಮದಿ ಹಾಳಾಗಿದೆ. ಮೊದಲಿನ ವ್ಯವಸ್ಥೆಯೇ ಚೆನ್ನಾಗಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.ಧರಣಿ ನಿರತರಲ್ಲಿ ದಲಿತರು ಹಾಗೂ ದಲಿತ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು. ದಸಂಸ (ನಾಗವಾರ ಬಣ) ತಾಲ್ಲೂಕು ವಿದ್ಯಾರ್ಥಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಶ್ರೀಕಾಂತ ಘಾಟಗೆ ನೆಮ್ಮದಿ ಕೇಂದ್ರದ ಸಿಬ್ಬಂದಿಯ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು.`ಜನದಟ್ಟನೆ ಇದ್ದರೂ ತಮ್ಮ ಮನಸ್ಸಿಗೆ ಬಂದಾಗ ನೆಮ್ಮದಿ ಕೇಂದ್ರದ ಬಾಗಿಲು ಮುಚ್ಚಿ ಅಲ್ಲಿನ ಸಿಬ್ಬಂದಿ ಹೊರಗೆ ಹೋಗುತ್ತಾರೆ. ರಾತ್ರಿ ವೇಳೆಯಲ್ಲಿ ನಮ್ಮೂರಿಗೆ ಹೋಗಲು ಬಸ್ ಇರುವುದಿಲ್ಲ. ನಾವು ರಾತ್ರಿ ಎಲ್ಲಿಗೆ ಹೋಗಬೇಕು~ ಎಂದು ಸರಸ್ವತಿ ಕರಡಿ ಬಿಕ್ಕಳಿಸಿ ಅತ್ತಳು.ನೆಮ್ಮದಿ ಕೇಂದ್ರವನ್ನು ಮುಚ್ಚಬೇಕು. ಇಲ್ಲವೇ ಇನ್ನೂ ಹೆಚ್ಚಿನ ಸಿಬ್ಬಂದಿ ನೇಮಕ ಮಾಡಿ ಕಂಪ್ಯೂಟರ್‌ಗಳ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕೆಲವರು ಒತ್ತಾಯಿಸಿದರು. ಆದರೆ ಧರಣಿ ನಿರತರ ಅಳಲು ಕೇಳಲು ಎಸಿ ಅವರಾಗಲಿ ಅಥವಾ ತಹಸೀಲ್ದಾರರಾಗಲಿ ಕೇಂದ್ರ ಸ್ಥಳದಲ್ಲಿ ಇರಲಿಲ್ಲ.ನಗರ ಪೊಲೀಸ್ ಠಾಣೆಯ ಪಿಎಸ್‌ಐ ಸಿ.ಬಿ.ಬಾಗೇವಾಡಿ ಹಾಗೂ ಅವರ ಸಿಬ್ಬಂದಿ ಧರಣಿ ನಿರತರನ್ನು ಸಮಾಧಾನ ಪಡಿಸುವ ಪ್ರಯತ್ನ ಮಾಡಿದರೂ ಅದು ಫಲಕಾರಿಯಾಗಲಿಲ್ಲ. ಇಡೀ ರಾತ್ರಿ ಇಲ್ಲಿಯೇ ಕುಳಿತು ಪ್ರತಿಭಟನೆ ನಡೆಸುವುದಾಗಿ ಪ್ರತಿಭಟನಾಕಾರರು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.