ಗುರುವಾರ , ಜೂನ್ 24, 2021
21 °C

ಏರಿದ್ದ ರೈಲು ಪ್ರಯಾಣ ದರ ಇಳಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಕಳೆದ ವಾರವಷ್ಟೇ ಮಂಡಿಸಲಾಗಿದ್ದ ರೈಲ್ವೆ ಬಜೆಟ್‌ನಲ್ಲಿ ಏರಿಸಲಾಗಿದ್ದ ವಿವಿಧ ದರ್ಜೆಯ ರೈಲ್ವೆ ಪ್ರಯಾಣ ದರವನ್ನು ಸರ್ಕಾರ ಇಳಿಸಿದೆ.ಜನರ ಜೇಬಿಗೆ ಇದು ಭಾರಿ ಹೊರೆಯಾಗಲಿದೆ ಎಂದು ಹೇಳಿದ ನೂತನ  ರೈಲ್ವೆ ಸಚಿವ ಮುಕುಲ್ ರಾಯ್ ದರ ಇಳಿಕೆ ನಿರ್ಧಾರವನ್ನು ಗುರುವಾರ ಲೋಕಸಭೆಯಲ್ಲಿ ಪ್ರಕಟಿಸಿದರು.ಗ್ರಾಮೀಣ ಹಾಗೂ ನಗರ ಭಾಗಗಳ ರೈಲಿನ ಎರಡನೇ ದರ್ಜೆ ಪ್ರಯಾಣ ದರ, ಸ್ಲೀಪರ್, ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್ ದರವನ್ನು ಇಳಿಸಲಾಗಿದೆ.ರೈಲ್ವೆ ಬಜೆಟ್ ಮೇಲಿನ ಚರ್ಚೆಗೆ ಉತ್ತರಿಸುತ್ತಿದ್ದ ಮುಕುಲ್ ರಾಯ್, ಇದರಿಂದಾಗಿ ಬಡವರು ಹಾಗೂ ಸಾಮಾನ್ಯರ ಜೇಬಿಗೆ ಭಾರಿ ಹೊರೆಯಾಗಲಿದೆ. ಎ.ಸಿ. ಚೇರ್ ಕಾರ್ ಹಾಗೂ ಎ.ಸಿ. ತ್ರಿ-ಟಯರ್‌ಗಳಲ್ಲಿ ಇತ್ತೀಚೆಗೆ ಮಧ್ಯಮವರ್ಗದವರು ಹೆಚ್ಚಾಗಿ ಪ್ರಯಾಣಿಸುತ್ತಿದ್ದು ಅದು ಅವರಿಗೆ ಆರ್ಥಿಕ ಹೊಡೆತ ನೀಡಲಿದೆ ಎಂದರು.ಆದರೆ, ಎ.ಸಿ-ಟು ಟೈರ್ ಹಾಗೂ ಎ.ಸಿ-ಫಸ್ಟ್‌ಕ್ಲಾಸ್ ಬೋಗಿಗೆ ಕ್ರಮವಾಗಿ ಕಿ.ಮೀ.ಗೆ 15 ಪೈಸೆ ಹಾಗೂ 30 ಪೈಸೆಯಂತೆ ಏರಿಸಿರುವ ದರವನ್ನು ಸರ್ಕಾರ ಇಳಿಸಿಲ್ಲ.ಇದಲ್ಲದೇ ರೈಲ್ವೆ ಮಂಡಳಿಯನ್ನು  ವಿಸ್ತರಿಸುವ ದಿನೇಶ್ ತ್ರಿವೇದಿ ಅವರ ನಿರ್ಧಾರವನ್ನು ರದ್ದುಗೊಳಿಸುವುದಾಗಿ ರಾಯ್ ತಿಳಿಸಿದರು. ರೈಲ್ವೆ ದರ ನಿಯಂತ್ರಣ ಪ್ರಾಧಿಕಾರ ಸ್ಥಾಪನೆ ಕುರಿತು ಪರಿಶೀಲಿಸಲು ಸಮಿತಿ ರಚಿಸುವ ತ್ರಿವೇದಿ ಪ್ರಸ್ತಾಪವನ್ನು ಸದ್ಯಕ್ಕೆ ತಡೆಹಿಡಿದಿರುವುದಾಗಿ ಹೇಳಿದರು.ಸದನದ ಸದಸ್ಯರು ಕಳವಳ ವ್ಯಕ್ತಪಡಿಸಿದಂತೆ ಮಾನವರಹಿತ ಕ್ರಾಸಿಂಗ್‌ಗಳಲ್ಲಿ ಆಗುವ ಅಪಘಾತ ತಡೆಯಲು, ಸುರಕ್ಷತೆ ಕಾಪಾಡಲು ಹಾಗೂ ರೈಲು ನಿಲ್ದಾಣ ಮತ್ತು ರೈಲುಗಳಲ್ಲಿ ಶುಚಿತ್ವ ಕಾಪಾಡಲು ಆದ್ಯತೆ ನೀಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.ರಾಯ್ ಅವರ 20 ನಿಮಿಷಗಳ ಭಾಷಣದ ನಂತರ ಲೇಖಾನುದಾನಕ್ಕೆ ಸದನ ಅಂಗೀಕಾರ ನೀಡಿತು.  ರೈಲ್ವೆ ಸಮನ್ವಯ ಸಮಿತಿಯ ಎರಡನೇ ವರದಿಯ ಶಿಫಾರಸುಗಳನ್ನು ಧ್ವನಿಮತದಿಂದ ಅಂಗೀಕರಿಸಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.