ಗುರುವಾರ , ಏಪ್ರಿಲ್ 22, 2021
26 °C

ಒಳ್ಳೆಯ ಕ್ಯಾಮೆರಾ, ಆದರೆ ಕೆಟ್ಟ ಬ್ಯಾಟರಿ

ಯು.ಬಿ ಪವನಜ Updated:

ಅಕ್ಷರ ಗಾತ್ರ : | |

ಒಂದು ಕಾಲದಲ್ಲಿ, ಮೈಕ್ರೋಸಾಫ್ಟ್ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಒಂದು ಮಾತು ಪ್ರಚಲಿತವಾಗಿತ್ತು - ಐಬಿಎಂ ಎಷ್ಟು ಉತ್ತಮ ಉತ್ಪನ್ನ ತಯಾರಿಸಿದರೂ ಅದು ಜನರ ಗಮನಕ್ಕೆ ಬರುತ್ತಿಲ್ಲ.ಈಗ ಅದೇ ಮಾತನ್ನು ಐಬಿಎಂ ಬದಲಿಗೆ ಮೈಕ್ರೋಸಾಫ್ಟ್ ಎಂದು ಬದಲಿಸಿ ಹೇಳಬಹುದು. ಇದು ಮುಖ್ಯವಾಗಿ, ಸದ್ಯ ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಸ್ಮಾರ್ಟ್‌ಫೋನ್ ಮತ್ತು ಟ್ಯಾಬ್ಲೆಟ್‌ಗಳನ್ನು ಮನಸ್ಸಿನಲ್ಲಿಟ್ಟುಕೊಂಡು ಹೇಳಬಹುದು. ಈಗ ಈ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವುದು ಆಂಡ್ರಾಯ್ಡ.

ಮೈಕ್ರೋಸಾಫ್ಟ್ ತಾನು ಬಿಟ್ಟುಕೊಟ್ಟ ಸ್ಥಾನವನ್ನು ಪುನಃ ಗಳಿಸಲು ಶತಾಯಗತಾಯ ಪ್ರಯತ್ನಿಸುತ್ತಿದೆ. ಅದರ ಅಂಗವಾಗಿ ವಿಂಡೋಸ್ ಫೋನ್ 7 ನಂತರ ಇದೀಗ ವಿಂಡೋಸ್ 8 ಬಂದಿದೆ. ವಿಂಡೋಸ್ 8ರ ವೈಶಿಷ್ಟ್ಯವೆಂದರೆ ಗಣಕ, ಟ್ಯಾಬ್ಲೆಟ್ ಮತ್ತು ಸ್ಮಾರ್ಟ್‌ಫೋನ್ -ಎಲ್ಲದರಲ್ಲೂ ಒಂದೇ ನಮೂನೆಯ ಬಳಕೆಯ ಅನುಭವವನ್ನು ನೀಡುತ್ತದೆ.ಇದರ ಸ್ಮಾರ್ಟ್‌ಫೋನ್ ಆವೃತ್ತಿಗೆ ವಿಂಡೋಸ್ ಫೋನ್ 8 ಎಂದು ಹೆಸರಿಸಿದೆ. ನೋಕಿಯ ಮತ್ತು ಎಚ್‌ಟಿಸಿ ಕಂಪೆನಿಗಳು ವಿಂಡೋಸ್ ಫೋನ್ 8 ಅನ್ನು ಒಳಗೊಂಡ ಸ್ಮಾರ್ಟ್‌ಫೋನ್‌ಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿವೆ. ಎಚ್‌ಟಿಸಿ ವಿಂಡೋಸ್ ಫೋನ್ 8 ಎಕ್ಸ್ (HTC Windows Phone8ಗಿ) ನಮ್ಮ ಈ ವಾರದ ಅತಿಥಿ.

ಮೊದಲನೆಯದಾಗಿ ಇದರ ಗುಣ ವೈಶಿಷ್ಟ್ಯಗಳು. ಕ್ವಾಲ್ಕಾಂ ಎರಡು ಹೃದಯಗಳ 1.5 ಗಿಗಾಹರ್ಟ್ಸ್ ಪ್ರೋಸೆಸರ್. 1 ಗಿಗಾಬೈಟ್ ಪ್ರಾಥಮಿಕ ಮತ್ತು 16 ಗಿಗಾಬೈಟ್ ಸಂಗ್ರಹ ಮೆಮೊರಿ. 132.35  x 66.2 x 10.12 ಮಿಮೀ ಗಾತ್ರ. 4.3 ಇಂಚಿನ ಗೊರಿಲ್ಲ ಗ್ಲಾಸ್ ಸ್ಪರ್ಶಸಂವೇದಿ ಪರದೆ. 8 ಮೆಗಾಪಿಕ್ಸೆಲ್ ರೆಸೊಲೂಶನ್‌ನ ಊ2 ಅಪೆರ್ಚರ್ ಹೊಂದಿರುವ 28 ಮಿಮಿ ಫೋಕಲ್ ಲೆಂತ್‌ನ ಲೆನ್ಸ್ ಒಳಗೊಂಡ ಪ್ರಾಥಮಿಕ ಕ್ಯಾಮೆರಾ. ಕ್ಯಾಮೆರಾಗೆ ಫ್ಲಾಶ್ ಇದೆ.1080 ಹೈಡೆಫಿನಿಶನ್ ವೀಡಿಯೊ ರೆಕಾರ್ಡಿಂಗ್ ಸೌಲಭ್ಯ. ವೀಡಿಯೊ ಚಾಟ್ ಮಾಡಲು ಉಪಯುಕ್ತವಾಗುವಂತೆ 2.1 ಮೆಗಾಪಿಕ್ಸೆಲ್‌ನ ಇನ್ನೊಂದು ಕ್ಯಾಮೆರಾ. ಇದರಲ್ಲೂ ಹೈಡೆಫಿನಿಶನ್ ರೆಕಾರ್ಡಿಂಗ್ ಮಾಡಬಹುದು. 1800Ah ¸ÝÂoÄ. ಬ್ಯಾಟರಿ. 3.5 ಮಿಮೀ ಹೆಡ್‌ಫೋನ್ ಕಿಂಡಿ ಇದೆ. ವೈಫೈ, ಬ್ಲೂಟೂತ್ ಮತ್ತು ಎನ್‌ಎಫ್‌ಸಿ ಸಂಪರ್ಕ ಸೌಲಭ್ಯಗಳು. 3ಜಿ ಅಂತರಜಾಲ ಸಂಪರ್ಕ, ಅಕ್ಸೆಲೆರೊಮೀಟರ್, ಜಿಪಿಎಸ್, ಇತ್ಯಾದಿ. ಅಂದರೆ ಮೇಲ್ದರ್ಜೆಯ ಸ್ಮಾರ್ಟ್‌ಫೋನ್‌ಗಳಲ್ಲಿ ಕಂಡುಬರುವ ಎಲ್ಲ ಗುಣವೈಶಿಷ್ಟ್ಯಗಳು ಇದರಲ್ಲಿವೆ.

ಇದು ಮೈಕ್ರೋ ಸಿಮ್ ಕಾರ್ಡ್ ಬಳಸುತ್ತದೆ. ಇದೊಂದು ಕಿರಿಕಿರಿ. ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದಾಗ ಬಹುಶಃ ಈ ಮೈಕ್ರೋಸಿಮ್ ಕಾರ್ಡ್ ಅನ್ನು ಹೆಚ್ಚು ಹೆಚ್ಚು ಫೋನ್‌ಗಳು ಬಳಸುವ ಸಾಧ್ಯತೆಗಳು ಕಂಡುಬರುತ್ತಿವೆ. ಇದರಲ್ಲಿ ಮೈಕ್ರೋಎಸ್‌ಡಿ ಕಾರ್ಡ್ ಬಳಸಿ ಮೆಮೊರಿಯನ್ನು ಅಧಿಕಗೊಳಿಸುವ ಸೌಲಭ್ಯವಿಲ್ಲ. ಆದರೆ ಈ ಫೋನನ್ನು ಗಣಕಕ್ಕೆ ಸಂಪರ್ಕಿಸಿ ಹೆಚ್ಚುವರಿ ಡ್ರೈವ್ ಆಗಿ ಬಳಸಬಹುದು.

ವಿಂಡೋಸ್ ಫೋನ್ 7ರಲ್ಲಿ ಈ ಸೌಲಭ್ಯವಿರಲಿಲ್ಲ. ಅದೇ ರೀತಿ ಬ್ಯಾಟರಿಯನ್ನು ತೆಗೆಯಲೂ ಅಸಾಧ್ಯ. ಇದರ ಬಹುಮಾಧ್ಯಮ (ಆಡಿಯೋ, ವೀಡಿಯೊ) ಬಹು ಚೆನ್ನಾಗಿದೆ. ಉತ್ತಮ ಆಡಿಯೋಗಾಗಿ ಆಛಿಠಿ ಅ್ಠಜಿಟ ಎಂಬ ಸವಲತ್ತು ಇದೆ. ಇದನ್ನು ಬಳಸಿದಾಗ ಸಂಗೀತದ ಗುಣಮಟ್ಟ ಸುಧಾರಣೆಯಾಗುತ್ತದೆ.

ಆಲಿಸಲು ಚೆನ್ನಾಗಿರುತ್ತದೆ. ಇದಕ್ಕೆಂದೇ ವಿಶೇಷ ಆಂಪ್ಲಿಫೈಯರ್ ಅಳವಡಿಸಿದ್ದಾರೆ. ಹೈಡೆಫಿನಿಶನ್ ವೀಡಿಯೊ ವೀಕ್ಷಣೆ ಚೆನ್ನಾಗಿದೆ. ಕ್ಯಾಮೆರಾ ಚೆನ್ನಾಗಿದೆ. ಎಚ್‌ಟಿಸಿಯ ಯಾವ ಫೋನ್‌ನಲ್ಲೂ ಇಷ್ಟು ಚೆನ್ನಾದ ಕ್ಯಾಮೆರಾ ನಾನು ಗಮನಿಸಿಲ್ಲ. ಸಾಮಾನ್ಯವಾಗಿ ನೋಕಿಯ ಫೋನ್‌ಗಳಲ್ಲಿ ಅಳವಡಿಸಿರುವ ಕ್ಯಾಮೆರಾ ತುಂಬ ಚೆನ್ನಾಗಿರುತ್ತದೆ. ಈ ಫೋನಿನ ಕ್ಯಾಮೆರಾ ಅದೇ ಗುಣಮಟ್ಟದಲ್ಲಿದೆ.ಜೊತೆಗೆ ಫ್ಲಾಶ್ ಕೂಡ ಇದೆ. ಯಾವ ಸಂದರ್ಭದಲ್ಲಿ ಫ್ಲಾಶ್ ಬಳಸಬೇಕೆಂಬುದನ್ನು ನೀವು ನಿರ್ಧರಿಸಬಹುದು ಅಥವಾ ಆಟೊಮ್ಯೋಟಿಕ್ ಎಂದು ಆಯ್ಕೆ ಮಾಡಿಕೊಳ್ಳಬಹುದು. ವೀಕ್ಷಿಸುತ್ತಿರುವ ದೃಶ್ಯದಲ್ಲಿ ಯಾವ ಜಾಗಕ್ಕೆ ಫೋಕಸ್ ಮಾಡಬೇಕು ಎಂಬುದನ್ನು ಆಯ್ಕೆ ಮಾಡಬಹುದು. 

ಎಚ್‌ಟಿಸಿ ಕಂಪೆನಿಯವರು ಈ ಫೋನಿನ ವಿನ್ಯಾಸವನ್ನು ಪಿರಮಿಡ್ ಎಂದು ಕರೆದಿದ್ದಾರೆ. ಅದಕ್ಕೆ ಕಾರಣಗಳಿವೆ. ಈ ಫೋನ್‌ನ ಹಿಂಭಾಗ ಉಬ್ಬಿ ಪಿರಮಿಡ್‌ನಂತಿದೆ. ಹಾಗೆಂದು ಅದು ಸಂಪೂರ್ಣ ಉಬ್ಬಿಲ್ಲ. ಸಪಾಟಾದ ಮೇಲ್ಮೈ ಮೇಲೆ ಚೆನ್ನಾಗಿ ಕುಳಿತುಕೊಳ್ಳುತ್ತದೆ. ಬದಿಗಳಲ್ಲಿ ಮಾತ್ರ ತೆಳ್ಳಗಾಗಿದೆ. ಮಧ್ಯದಲ್ಲಿ ಉಬ್ಬಿ ಸಪಾಟಾಗಿದೆ.

ಕೈಯಲ್ಲಿ ಹಿಡಿದುಕೊಳ್ಳಲು ಆನಂದಕರವಾಗಿದೆ. ಪರದೆ ಸಪಾಟಾಗಿಯೇ ಇದೆ. ಒಟ್ಟಿನಲ್ಲಿ ವಿನ್ಯಾಸಕ್ಕೆ ಪೂರ್ತಿ ಮಾರ್ಕು ನೀಡಬಹುದು. ಹಲವು ಬಣ್ಣಗಳಲ್ಲಿ ಲಭ್ಯವಿದೆ.

ಬ್ಯಾಟರಿ ಅಷ್ಟೇನೂ ತೃಪ್ತಿದಾಯಕವಾಗಿಲ್ಲ. ಕೆಟ್ಟ ಸುದ್ದಿಯೆಂದರೆ ಇದರ ಬ್ಯಾಟರಿ ತೆಗೆಯಲು ಬರುವುದಿಲ್ಲ. ಸಂಪೂರ್ಣ ಸೀಲ್ ಆಗಿರುತ್ತದೆ.

ಅಂಗಡಿಗೆ ಹೋಗಿ ತುರ್ತುಪರಿಸ್ಥಿತಿಗೆ ಇರಲಿ ಎಂದು ಇನ್ನೊಂದು ಬ್ಯಾಟರಿ ಕೊಂಡುಕೊಂಡು ಬಂದರೂ ಅದರ ಅಂದ ನೋಡಿ ಆನಂದ ಪಡಬೇಕೇ ವಿನಾ ಅದನ್ನು ಫೋನಿಗೆ ಹಾಕುವಂತಿಲ್ಲ. ಇದು ನಿಜಕ್ಕೂ ಕೆಟ್ಟ ತೀರ್ಮಾನ. ಆಪಲ್ ಕಂಪೆನಿಯ ಐಫೋನ್ ಇದೇ ಮಾದರಿಯದು. ಅದರ ಬ್ಯಾಟರಿ ಬಳಕೆದಾರರಿಗೆ ತೆಗೆಯಲು/ಬದಲಿಸಲು ಬರುವುದಿಲ್ಲ.

ಇಂತಹ ಮೂರ್ಖತನವಿದ್ದರೂ ಐಫೋನ್ ಅತಿ ಜನಪ್ರಿಯವಾಗಿದೆ. ನಾವೂ ಹಾಗೆಯೇ ಮಾಡೋಣ ಎಂದು ಎಚ್‌ಟಿಸಿ (ಮೈಕ್ರೋಸಾಫ್ಟ್) ತೀರ್ಮಾನಿಸಿರುವಂತಿದೆ.

ಇದು ಬಳಸುವುದು ಮೈಕ್ರೋಸಾಫ್ಟ್ ವಿಂಡೋಸ್ ಫೋನ್ 8 ಕಾರ್ಯಾಚರಣ ವ್ಯವಸ್ಥೆ(operating system).

ಇದು ವಿಂಡೋಸ್ ಫೋನ್ 7ರ ಸುಧಾರಿತ ಆವೃತ್ತಿ. ಒಂದು ಉತ್ತಮ ಫೋನ್ ಕಾರ್ಯಾಚರಣ ವ್ಯವಸ್ಥೆ ಎನ್ನಬಹುದು. ಅಂತರಜಾಲ ವೀಕ್ಷಣೆ, ಇಮೇಲ್, ಸಾಮಾಜಿಕ ಜಾಲತಾಣಗಳು ಮತ್ತು ಸೋಶಿಯಲ್ ನೆಟ್‌ವರ್ಕಿಂಗ್, ಸಂದೇಶ, ಆಫೀಸ್ ತಂತ್ರಾಂಶ, ಇತ್ಯಾದಿ ಎಲ್ಲ ಸವಲತ್ತುಗಳಿವೆ. ಕಾರ್ಪೊರೇಟ್ ಉದ್ಯೋಗಿಗಳಿಗೆ ಹೇಳಿ ಮಾಡಿಸಿದಂತಿದೆ. ಕಂಪೆನಿಯ ಗಣಕ ಜಾಲಕ್ಕೆ ಸುಲಲಿತವಾಗಿ ಮಿಳಿತವಾಗುತ್ತದೆ.ಮೈಕ್ರೋಸಾಫ್ಟ್ ಸ್ಟೋರ್‌ಗೆ ಭೇಟಿ ಇತ್ತು ಲಭ್ಯವಿರುವ ಲಕ್ಷಗಟ್ಟಲೆ ಕಿರುತಂತ್ರಾಂಶಗಳಲ್ಲಿ () ಇಷ್ಟಬಂದವನ್ನು ಕೊಂಡುಕೊಳ್ಳಬಹುದು ಮತ್ತು ಡೌನ್‌ಲೋಡ್ ಮಾಡಿಕೊಳ್ಳಬಹುದು.

ಕನ್ನಡಿಗರಿಗೆ ಸಂತಸದ ಸುದ್ದಿಯೆಂದರೆ ಇದರಲ್ಲಿ ಕನ್ನಡ (ಯುನಿಕೋಡ್) ರೆಂಡರಿಂಗ್ ಇದೆ. ಅಂದರೆ ಕನ್ನಡ ಪಠ್ಯವನ್ನು ವೀಕ್ಷಿಸಬಹುದು.

ಇದು ಬ್ರೌಸರ್, ಇಮೇಲ್, ಫೇಸ್‌ಬುಕ್ ಇತ್ಯಾದಿಗಳಿಗೆ ಅನ್ವಯಿಸುತ್ತದೆ. ಆದರೆ ಕನ್ನಡ ಪಠ್ಯವನ್ನು ಊಡಿಸಲು ಸೂಕ್ತ ಕೀಲಿಮಣೆ ತಂತ್ರಾಂಶ ಇಲ್ಲ. ತಂತ್ರಾಂಶ ತಯಾರಕರಿಗೆ ಇಲ್ಲೊಂದು ಅವಕಾಶವಿದೆ.ಎಚ್‌ಟಿಸಿ 8ಎಕ್ಸ್ ಫೋನಿನ ಬೆಲೆ ಸುಮಾರು 34 ಸಾವಿರ ರೂ. ಇದೆ.

ಗ್ಯಾಜೆಟ್ ಸಲಹೆ

ಉತ್ತಮ ಗೌಡರ ಪ್ರಶ್ನೆ: ನನಗೆ 1 ಟಿಬಿ ಹಾರ್ಡ್‌ಡಿಸ್ಕ್ ಕೊಳ್ಳಬೇಕು. ಯಾವುದು ಕಡಿಮೆ ಬೆಲೆ ಮತ್ತು ಉತ್ತಮ ಗುಣಮಟ್ಟದ್ದು?


ಉ: ನೀವು ಸೀಗೇಟ್ ಅಥವಾ ವೆಸ್ಟರ್ನ್ ಡಿಜಿಟಲ್ ಹಾರ್ಡ್‌ಡಿಸ್ಕ್ ಕೊಳ್ಳಬಹುದು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.