ಭಾನುವಾರ, ಮೇ 9, 2021
28 °C

ಕಗ್ಗಳ ಗ್ರಾಮದಲ್ಲಿ ಸಮಸ್ಯೆಗಳ ಕಾಳಗ

ಪ್ರಜಾವಾಣಿ ವಾರ್ತೆ/ವಿಶೇಷ ವರದಿ/ಮನು ಶ್ಯಾನುಭೋಗ Updated:

ಅಕ್ಷರ ಗಾತ್ರ : | |

ಗುಂಡ್ಲುಪೇಟೆ: `ಸುವರ್ಣ ಗ್ರಾಮೋದಯ ಯೋಜನೆ' ಅನುಷ್ಠಾನವಾದರೂ ತಾಲ್ಲೂಕಿನ ಕಗ್ಗಳ ಗ್ರಾಮದ ಸಮಸ್ಯೆಗಳಿಗೆ ಇನ್ನೂ ಮುಕ್ತಿ ಸಿಕ್ಕಿಲ್ಲ!ಹೌದು. ಕೆಲಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಈ ಗ್ರಾಮದಲ್ಲಿ ಅಭಿವೃದ್ಧಿ ಇನ್ನೂ ಮರೀಚಿಕೆಯಾಗಿದೆ.ಹಿಂದುಳಿದ ನಾಯಕ ಜನಾಂಗದವರೇ ಹೆಚ್ಚಿನ ಸಂಖ್ಯೆಯಲ್ಲಿ ವಾಸಿಸುತ್ತಿದ್ದಾರೆ. ಕೃಷಿ, ವ್ಯಾಪಾರ, ಬೀಡಿ ಕಟ್ಟುವುದು ಮತ್ತು  ಕೂಲಿ ಮಾಡುವುದು ಇವರ ಪ್ರಮುಖ ಕಾಯಕ. ಸರ್ಕಾರದ ಸೌಲಭ್ಯಗಳ ಸದ್ಬಳಕೆ ಮಾಡಿಕೊಳ್ಳುವಲ್ಲಿ ಜನರು ಸಾಕಷ್ಟು ಹಿಂದೆ ಬಿದ್ದಿದ್ದಾರೆ.2004-05ನೇ ಸಾಲಿನಲ್ಲಿ `ಕುಗ್ರಾಮ- ಸುಗ್ರಾಮ ಯೋಜನೆ'ಗೂ ಈ ಗ್ರಾಮ ಆಯ್ಕೆಯಾಗಿತ್ತು. ತಾಂತ್ರಿಕ ಕಾರಣದಿಂದ ಯೋಜನೆ ಅನುಷ್ಠಾನ ಸಾಧ್ಯವಾಗಲಿಲ್ಲ. ಇದರಿಂದ ನಿರಾಶರಾದ ಜನರಿಗೆ 2010-11ನೇ ಸಾಲಿನ `ಸುವರ್ಣ ಗ್ರಾಮದೋಯ ಯೋಜನೆ' ಭರವಸೆ ಮೂಡಿಸಿತು. ಆದರೆ, ಜನರ ನಿರೀಕ್ಷೆಸುಳ್ಳಾಗಿದೆ. ಸುವರ್ಣ ಗ್ರಾಮೋದಯ ಯೋಜನೆಯಡಿ ಸಮುದಾಯ ಭವನ, ಅಂಗನವಾಡಿ ಕೇಂದ್ರ, ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಲಾಗಿದೆ. ಆದರೆ,  ಅದು ಕೂಡ ಪೂರ್ಣ ಪ್ರಮಾಣದಲ್ಲಿ ನಿರ್ಮಾಣವಾಗಲಿಲ್ಲ. ಇದರಿಂದ ಚರಂಡಿಯಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗುತ್ತಿಲ್ಲ, ಹೂಳಿನಿಂದ ತುಂಬಿದ್ದು, ಗಬ್ಬೆದ್ದು ನಾರುತ್ತಿವೆ.ಬಯಲು ಶೌಚಾಲಯ

ಗ್ರಾಮದ ಹೃದಯ ಭಾಗದ ಕಟ್ಟೆಯಲ್ಲೇ ಕೊಳಚೆ ನೀರು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹವಾಗುತ್ತಿದೆ. ವೈಯಕ್ತಿಕ ಮತ್ತು ಸಾಮೂಹಿಕ ಶೌಚಾಲಯಗಳ ವ್ಯವಸ್ಥೆ ಇಲ್ಲದ ಕಾರಣ ಬಯಲು ಶೌಚಾಲಯ ಪದ್ಧತಿ ಗ್ರಾಮದ ನೈರ್ಮಲ್ಯಕ್ಕೆ ಸವಾಲಾಗಿ ಪರಿಣಮಿಸಿದೆ. ಸಾಂಕ್ರಾಮಿಕ ರೋಗಗಳ ಹರಡುವ ಸಾಧ್ಯತೆಗಳು ಹೆಚ್ಚಿವೆ. ಆದರೂ ಯಾವುದೇ ಅಧಿಕಾರಿಗಳು ಇತ್ತ ತಿರುಗಿ ನೋಡಿಲ್ಲ.ಹೊಸ ಬಡಾವಣೆಗಳಿಗೆ ಸಮರ್ಪಕವಾದ ರಸ್ತೆಗಳಿಲ್ಲ. ಸುತ್ತಲೂ ಕಾಡು ಜಾತಿಯ ಗಿಡಗಂಟಿಗಳು ಬೆಳೆದು ಭಯದ ವಾತಾವರಣ ನಿರ್ಮಾಣವಾಗಿದೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಹಳೇ ಕಟ್ಟಡದ ಬಳಿ ನಿರ್ಮಿಸಿರುವ ಸೇತುವೆ ಕುಸಿದಿದೆ. ಇದರಿಂದ ಮಳೆ ನೀರು ರಸ್ತೆಯಲ್ಲಿ ಹರಿಯುತ್ತದೆ. ಎಚ್ಚರ ತಪ್ಪಿದರೆ ವಾಹನಗಳು ಹಳ್ಳಕ್ಕೆ ಬೀಳುವ ಸಾಧ್ಯತೆ ಇದೆ.ಕುಡಿಯುವ ನೀರಿಗೆ ಪರದಾಟ

ಕುಡಿಯುವ ನೀರಿಗಾಗಿ ಲಕ್ಷಾಂತರ ರೂಪಾಯಿ ಅನುದಾನ ಒದಗಿಸಿದರೂ ಪ್ರಯೋಜನವಾಗಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಜನರು ಪರಿತಪಿಸಬೇಕಾಗಿದೆ. ಸದ್ಯ ಚಾಮರಾಜನಗರ ಮುಖ್ಯ ರಸ್ತೆಯಲ್ಲಿ 3 ಮತ್ತು ಗುಡ್ಡದ ರಸ್ತೆಯಲ್ಲಿರುವ 2 ಕೊಳವೆ ಬಾವಿಯಿಂದ ಗ್ರಾಮದ 9 ಮಿನಿ ನೀರಿನ ತೊಂಬೆಗಳಿಗೆ ನೀರು ಪೂರೈಸಲಾಗುತ್ತಿದೆ. ಆದರೂ ದೊಡ್ಡಮ್ಮತಾಯಿ ದೇವಾಲಯಕ್ಕೆ ಹೋಗುವ ರಸ್ತೆಯಲ್ಲಿರುವ ತೊಂಬೆಯನ್ನು ಜನ ಅವಲಂಬಿಸಬೇಕಾಗಿದೆ. ಇದರ ಫ್ಲ್ಯಾಟ್‌ಫಾರಂ ಕಿತ್ತುಹೋಗಿದೆ. ಚರಂಡಿ ನೀರು ಸೇರಿಕೊಳ್ಳುವ ಕಾರಣ ಕೊಳಚೆಯಲ್ಲೇ ನಿಂತು ನೀರು ಸಂಗ್ರಹಿಸಬೇಕಿದೆ.ಬಿಂದಿಗೆ, ಪಾತ್ರೆ ಇಡಲು ಜಾಗವಿಲ್ಲದೇ ತೊಂದರೆಯಾಗಿದೆ. ಕುಡಿಯುವ ನೀರಿನ ತೊಂಬೆ ಶುಚಿಗೊಳಿಸುವ ಮೂಲಕ  ಸುತ್ತಲಿನ ಪ್ರದೇಶದಲ್ಲಿ ಉತ್ತಮ ವಾತಾವರಣ ಇರುವಂತೆ ನೋಡಿಕೊಳ್ಳುವ ಜವಾಬ್ದಾರಿ ಸ್ಥಳೀಯ ಸಂಸ್ಥೆಗಳ ಮೇಲಿದೆ. ಆದರೆ, ಗ್ರಾಮದಲ್ಲಿ ಅಂತಹ ಯಾವುದೇ ಕೆಲಸ ಕಂಡುಬರುತ್ತಿಲ್ಲ.ದಶಕದಿಂದ ಟ್ಯಾಂಕ್ ನಿರುಪಯುಕ್ತ

ಗ್ರಾಮದಲ್ಲಿ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಗೊಂಡು 10 ವರ್ಷ ಕಳೆದರೂ ಅದರ ಬಳಕೆ ಸಾಧ್ಯವಾಗಿಲ್ಲ!

2008-09ನೇ ಸಾಲಿನಲ್ಲಿ ರಾಷ್ಟ್ರೀಯ ಗ್ರಾಮಾಂತರ ಕುಡಿಯುವ ನೀರಿನ ಯೋಜನೆಯಡಿ ಬಿಡುಗಡೆಗೊಂಡ ರೂ 10 ಲಕ್ಷ ಅನುದಾನದಲ್ಲಿ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪವಿಭಾಗದವರು 2 ಕಿ.ಮೀ. ದೂರದ ದೊಡ್ಡಮ್ಮತಾಯಿ ದೇವಾಲಯ ಬಳಿ ಕೊಳವೆಬಾವಿ ಕೊರೆಸಿದ್ದಾರೆ. ಪೈಪ್‌ಲೈನ್ ಅಳವಡಿಸಲಾಗಿದೆ. ಆದರೆ, ಅವಶ್ಯಕತೆ ಇರುವ ವಿದ್ಯುತ್ ಸಂಪರ್ಕ ಮತ್ತು ಮೋಟಾರು ಪಂಪುಗಳನ್ನೇ ಅಳವಡಿಸಿಲ್ಲ. ಟ್ಯಾಂಕ್ ದುರಸ್ತಿಗೊಳಿಸಲಾಗಿದೆ. ಆದರೆ, ಉಪಯೋಗ ಪಡೆಯಲು ಸಾಧ್ಯವಾಗುತ್ತಿಲ್ಲ. ಏಕೆಂದರೆ ವಿತರಣಾ ವ್ಯವಸ್ಥೆಯ ಕೊಳವೆ ಮಾರ್ಗವನ್ನೇ ಅಳವಡಿಸದ ಕಾರಣ ಟ್ಯಾಂಕ್ ಇದ್ದೂ ಇಲ್ಲದಂತಾಗಿದೆ.ಸರ್ಕಾರದ ಅನುದಾನ ನೀರಿನಲ್ಲಿ ಹೋಮ ಮಾಡಿದಂತಾಗಿದೆ. ಗ್ರಾಮ ಪಂಚಾಯಿತಿ ಅಧ್ಯಕ್ಷರು, ಕ್ಷೇತ್ರದ ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷ ಮತ್ತು ಒಬ್ಬ ಸದಸ್ಯರು ಇದೇ ಗ್ರಾಮದವರಾಗಿದ್ದಾರೆ. ಆದರೂ ಅವರು ಈ ಬಗ್ಗೆ ಗಮನ ಹರಿಸಿಲ್ಲ.  ಇನ್ನಾದರೂ ಗ್ರಾಮದ ಸಮಸ್ಯೆಗಳಿಗೆ ಸಂಬಂಧಪಟ್ಟವರು ಮುಕ್ತಿ ದೊರಕಿಸಬೇಕು ಎಂಬುದು ಜನರ ಕೂಗು.ಸಮಸ್ಯೆ ಪರಿಹಾರಕ್ಕೆ ಕ್ರಮ

ಕಗ್ಗಳ ಗ್ರಾಮದಲ್ಲಿರುವ ನೀರಿನ ಟ್ಯಾಂಕಿಗೆ ಜಿಲ್ಲಾ ಪಂಚಾಯಿತಿ ತಾಂತ್ರಿಕ ಉಪ ವಿಭಾಗದವರು ನೀರು ಪೂರೈಕೆ ಮಾಡುವ ವ್ಯವಸ್ಥೆ ಮಾಡಬೇಕಿದೆ. ಇದಾದ ನಂತರ ಸರಬರಾಜಿಗೆ ಪೈಪ್‌ಲೈನ್ ಅಳವಡಿಸುತ್ತೇವೆ. ಗ್ರಾಮದ ಇತರೆ ಸಮಸ್ಯೆ ನನ್ನ ಗಮನಕ್ಕೆ ಬಂದಿರಲಿಲ್ಲ. ಕೂಡಲೇ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿ, ಸಮಸ್ಯೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.

-ಶಿವಪ್ರಸಾದ್. ತಾ.ಪಂ. ಕಾರ್ಯನಿರ್ವಹಣಾ ಅಧಿಕಾರಿ

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.