ಭಾನುವಾರ, ಜೂನ್ 13, 2021
20 °C

ಕಡಲತೀರದ ಸೌಂದರ್ಯ ಸವಿದ ಬುದ್ಧಿಮಾಂದ್ಯರು

ಪಿ.ಕೆ. ರವಿಕುಮಾರ್‌/ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಪ್ರವಾಸಕ್ಕೆಂದು ಬಂದಿದ್ದ ಬುದ್ಧಿಮಾಂದ್ಯರು ಇಲ್ಲಿನ ರವೀಂದ್ರನಾಥ ಟ್ಯಾಗೋರ್‌ ಕಡಲತೀರದ ಸೌಂದರ್ಯದ ಸವಿಯನ್ನು ಉಂಡು, ಖುಷಿಯ ಅಲೆಯಲ್ಲಿ ತೇಲಿದರು.ಕಾರವಾರ ತಾಲ್ಲೂಕಿನ ಹಳಗಾದ ಅಂಬ್ರಾಯಿಯ ಬೆತ್‌ ಬೆತ್ಲಹೇಮ್‌ ಸೊಸೈಟಿಯು ತನ್ನ ಸಂಸ್ಥೆಯಲ್ಲಿದ್ದ 17 ಮಂದಿ ಬುದ್ಧಿಮಾಂದ್ಯರಿಗೆ ಪ್ರವಾಸವನ್ನು ಏರ್ಪಡಿಸಿತ್ತು. ಸಂಸ್ಥೆಯ ಮೇಲ್ವಿಚಾರಕರು ಹಾಗೂ ಸಿಬ್ಬಂದಿ ಜೊತೆ ಅವರು ಭಾನುವಾರ ಕಡಲತೀರದ ಸೊಬಗನ್ನು ಕಣ್ತುಂಬಿಕೊಳ್ಳಲು ಇಲ್ಲಿಗೆ ಭೇಟಿ ನೀಡಿದ್ದರು. ಅವರೆಲ್ಲ 25ರಿಂದ 60ರ ವಯೋಮಾನದವರಾಗಿದ್ದರು.ತೀರದಲ್ಲಿ ನೀರಿನ ಅಲೆಗಳು ಒಂದರ ಹಿಂದೆ ಒಂದರಂತೆ ಅಪ್ಪಳಿಸಿ ಬರುತ್ತಿದ್ದರೆ, ಬುದ್ಧಿಮಾಂದ್ಯರು ಅದನ್ನು ಕಂಡು ಚಪ್ಪಾಳೆ ಹಾಕುತ್ತಾ ಮಕ್ಕಳಂತೆ ಖುಷಿ ಅನುಭವಿಸಿದರು. ಅಲ್ಲದೇ ದಡದಲ್ಲಿ ನಿಂತಿದ್ದ ದೋಣಿಗಳನ್ನು ಕುತೂಹಲದಿಂದ ವೀಕ್ಷಿಸಿದರು. ಅವರಿಗೆ ನೀರಿನಲ್ಲಿ ಇಳಿಯುವ ಮನಸ್ಸಾದರೂ ಮುಂಜಾಗ್ರತಾ ಕ್ರಮವಾಗಿ ಸಂಸ್ಥೆಯ ಸಿಬ್ಬಂದಿ ಅವರನ್ನು ನೀರಿಗೆ ಇಳಿಸಲಿಲ್ಲ.ಟೋಪಿ ಹಾಗೂ ಸಮವಸ್ತ್ರತೊಟ್ಟಿದ್ದ ಅವರೆಲ್ಲರೂ ಮರಳಿನ ಮೇಲೆ ಹೆಜ್ಜೆ ಹಾಕಿದರು. ತೀರದಲ್ಲೇ ಇದ್ದ ಉದ್ಯಾನವನಕ್ಕೆ ತೆರಳಿ ಅಲ್ಲಿದ್ದ ಆಟಿಕೆಗಳಲ್ಲಿ ಸ್ವಲ್ಪ ಹೊತ್ತು ಆಟಗಳನ್ನು ಆಡಿ ಕುಣಿದು ಕುಪ್ಪಳಿಸಿದರು. ಜಾರುಬಂಡೆಯಲ್ಲಿ ಮಕ್ಕಳ ಹಾಗೆ ಜಾರುತ್ತಾ ನಲಿದರು.  ಮರದ ನೆರಳಲ್ಲಿ ಎಲ್ಲರೂ ಒಂದೆಡೆ ಸಾಲಾಗಿ ಕುಳಿತು ತಂಪು ಪಾನೀಯ ಸೇವಿಸುತ್ತಾ ದಣಿವಾರಿಸಿಕೊಂಡರು. ಈ ಪ್ರವಾಸ ಬುದ್ಧಿಮಾಂದ್ಯರ ಮುಖದಲ್ಲಿ ಒಂದು ರೀತಿಯ ನವೋಲ್ಲಾಸ ತುಂಬಿತ್ತು.‘ಗೋವಾ ಮೂಲದ ಬೆತ್‌ ಬೆತ್ಲಹೇಮ್‌ ಸೊಸೈಟಿಯು 2008ರಲ್ಲಿ ಆರಂಭವಾಗಿದ್ದು, ಇದುವರೆಗೆ 17 ಮಂದಿ ಬುದ್ಧಿಮಾಂದ್ಯರಿಗೆ ಉಚಿತವಾಗಿ ಪುನರ್ವಸತಿ ಕಲ್ಪಿಸಿದೆ. ಅನಾಥರಾಗಿರುವ ಇವರಿಗೆ ಇಲ್ಲಿ ವೈದ್ಯಕೀಯ ಸೌಲಭ್ಯವನ್ನು ಸಹ ಕಲ್ಪಿಸಲಾಗಿದೆ. ಬುದ್ಧಿಮಾಂದ್ಯರಾಗಿ ಬೀದಿಗಳಲ್ಲಿ ಅಲೆಯುತ್ತಿದ್ದವರನ್ನು ಇಲ್ಲಿಗೆ ಕರೆತಂದು ವಸತಿ ನೀಡಲಾಗಿದೆ.ಗೋವಾ ಹಾಗೂ ಉತ್ತರ ಕನ್ನಡ ಜಿಲ್ಲೆಯವರೇ ಇಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಮನರಂಜನೆ ಉದ್ದೇಶದಿಂದ ವರ್ಷಕ್ಕೆ ಎರಡು ಬಾರಿ ಅವರಿಗೆ ಪ್ರವಾಸ ಕೈಗೊಳ್ಳುತ್ತೇವೆ. ಅದರಂತೆ ಈ ಬಾರಿ ಅವರನ್ನು ಕಾರವಾರದ ಕಡಲತೀರಕ್ಕೆ ಕರೆತಂದಿದ್ದೇವೆ. ಕಡಲತೀರ ವೀಕ್ಷಿಸಿದ ಬುದ್ಧಿಮಾಂದ್ಯರು ಉಲ್ಲಾಸಭರಿತರಾಗಿದ್ದಾರೆ’ ಎಂದು ಸಂಸ್ಥೆಯ ಮೇಲ್ವಿಚಾರಕ ಅನಿಸೆಟ್ರೊ ಬ್ರದರ್‌ ‘ಪ್ರಜಾವಾಣಿ‘ಗೆ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.