ಭಾನುವಾರ, ಮೇ 29, 2022
31 °C

ಕಣ್ಣೀರಿನ ದ್ವೀಪ ಎಲಿಸ್

ಎ.ಎಸ್. ನಾರಾಯಣರಾವ್ Updated:

ಅಕ್ಷರ ಗಾತ್ರ : | |

ಕಣ್ಣೀರಿನ ದ್ವೀಪ ಎಲಿಸ್

ಅದೊಂದು ಪುಟ್ಟ ದ್ವೀಪ. ನ್ಯೂಯಾರ್ಕ್ - ನ್ಯೂಜೆರ್ಸಿ ಎರಡೂ ಕಡೆಯಿಂದಲೂ ಕಾಣುತ್ತದೆ. ಮೊದಲು 3.3 ಎಕರೆಯಷ್ಟಿತ್ತು. ನ್ಯೂಯಾರ್ಕ್ ಸಬ್‌ವೇ ನಿರ್ಮಾಣ ಕಾಲದಲ್ಲಿ ತೆಗೆದ ಮಣ್ಣು ತುಂಬಿಸಿ ಭೂಮಿ ವಿಸ್ತರಿಸಿದ ನಂತರ 27.5 ಎಕರೆಯಷ್ಟು ದೊಡ್ಡದಾಯಿತು.ಒಂದು ಕಾಲದಲ್ಲಿ `ಕಣ್ಣೀರಿನ ದ್ವೀಪ~ ಎಂದೇ ಕರೆಯುತ್ತಿದ್ದ ಈ ಪುಟ್ಟ ಪ್ರದೇಶದ ಹೆಸರು `ಎಲಿಸ್ ಐಲೆಂಡ್~.ಐರೋಪ್ಯ ದೇಶಗಳ ಬಹುಪಾಲು ವಲಸಿಗರು ಅಮೆರಿಕಕ್ಕೆ ಬಂದದ್ದು ಈ ದ್ವೀಪದಲ್ಲಿದ್ದ ವಲಸೆ ಪರವಾನಗಿ ಕೇಂದ್ರದಿಂದ. 1892 ರಿಂದ 1954ರ ವರೆಗೆ ಸುಮಾರು 1.2 ಕೋಟಿ ಜನ ಇಲ್ಲಿಂದ ಅಮೆರಿಕ ಪ್ರವೇಶಿಸಿ ನೆಲೆಸಿದರು. ಇವರೇ ಅಮೆರಿಕದ ಈಗಿನ ತಲೆಮಾರಿನ ಅರ್ಧಕ್ಕೂ ಹೆಚ್ಚು ಕುಟುಂಬಗಳ ಪೂರ್ವಿಕರು.ವೈದ್ಯರು ಮತ್ತು ವಲಸೆ ಅಧಿಕಾರಿಗಳ ಕಟ್ಟುನಿಟ್ಟು ತಪಾಸಣೆ, ವಲಸೆ ಕೇಂದ್ರದಲ್ಲಿನ ಕನಿಷ್ಠ ಸೌಲಭ್ಯ, ವಿಪರೀತ ದಟ್ಟಣೆ, ನೀರು, ಊಟ, ತಿಂಡಿ, ತಂಗುವ ವ್ಯವಸ್ಥೆ, ಶೌಚಾಲಯ ಹೀಗೆ ಎಲ್ಲದಕ್ಕೂ ತತ್ವಾರ, ವಾರಗಟ್ಟಲೆ ಅನುಮತಿಗಾಗಿ ಕಾಯಬೇಕಾದ ಯಾತನೆ ಇತ್ಯಾದಿ ಕಾರಣಗಳಿಂದಾಗಿ ಇದು `ಕಣ್ಣೀರಿನ ದ್ವೀಪ~ (ಐಲೆಂಡ್ ಆಫ್ ಟಿಯರ್ಸ್). ಇದೇ ಕಾರಣದಿಂದ ಚಾರಿತ್ರಿಕವಾಗಿ ಈ ದ್ವೀಪಕ್ಕೆ ಈಗಲೂ ಮಹತ್ವವಿದೆ. ಇದು ನ್ಯೂಯಾರ್ಕ್‌ನ ಪ್ರಸಿದ್ಧ ಪ್ರವಾಸಿ ಸ್ಥಳವಾಗಿ ಬೆಳೆದಿದೆ.ಇತಿಹಾಸ: ಅಮೆರಿಕ ಮೂಲತಃ ವಲಸೆ ಬಂದವರು ಕಟ್ಟಿಕೊಂಡ ದೇಶ. 17ನೇ ಶತಮಾನದ ಉತ್ತರಾರ್ಧದಲ್ಲಿ 25 ಲಕ್ಷಕ್ಕೂ ಹೆಚ್ಚು ಇಂಗ್ಲಿಷರು ಇಲ್ಲಿ ಬಂದು ನೆಲೆಯೂರಿದರು. ಬ್ರಿಟನ್‌ನಿಂದ ಬೇರ್ಪಟ್ಟು 1776ರಲ್ಲಿ ತಮ್ಮದೇ ಸ್ವತಂತ್ರ ದೇಶ ಎಂದು ಘೋಷಿಸಿಕೊಂಡರು.ಮುಂದೆ ಯುದ್ಧ, ಸಾಂಕ್ರಾಮಿಕ ಕಾಯಿಲೆ, ಬಡತನ ಮತ್ತಿತರ ಕಾರಣಗಳಿಂದ ಉತ್ತರ ಮತ್ತು ಪಶ್ಚಿಮ ಯುರೋಪ್‌ನ ಅದರಲ್ಲೂ ವಿಶೇಷವಾಗಿ ಇಂಗ್ಲೆಂಡ್, ಐರ್ಲೆಂಡ್, ಜರ್ಮನಿ, ನಾರ್ವೆ, ಹಾಲೆಂಡ್ ಮತ್ತಿತರ ದೇಶಗಳ ಜನ ಬಂದು ಅಮೆರಿಕದಲ್ಲಿ ನೆಲೆಯೂರಿದರು. (ಇವರೆಲ್ಲ ಬಹುಪಾಲು ಅಮೆರಿಕದಲ್ಲಿ ಅದಾಗಲೇ ಇದ್ದವರ ಬಂಧು ಬಾಂಧವರು- ಸ್ನೇಹಿತರು).

 

ಅಮೆರಿಕನ್ನರ ಸೇವೆ, ಸೌಕರ್ಯಗಳಿಗಾಗಿ ಆಫ್ರಿಕದ ದೇಶಗಳಿಂದ ದೊಡ್ಡ ಪ್ರಮಾಣದಲ್ಲಿ ಗುಲಾಮರನ್ನು ಕರೆ ತರಲಾಯಿತು. ಇವರ ಪ್ರವೇಶ ಕೇಂದ್ರವೇ ಎಲಿಸ್.ಯುರೋಪ್‌ನಿಂದ ಹಡಗುಗಳಲ್ಲಿ ಮೊದಲ ಮತ್ತು ಎರಡನೇ ದರ್ಜೆಯ ಟಿಕೆಟ್ ಪಡೆದು ಬರುತ್ತಿದ್ದ ವಲಸೆಗಾರರು ಎಲಿಸ್ ದ್ವೀಪದಲ್ಲಿ ತಪಾಸಣೆಗೆ ಒಳಪಡಬೇಕಿರಲಿಲ್ಲ. ಇವರಿಗೆ ಹಡಗಿನಲ್ಲಿಯೇ ತಪಾಸಣೆ ಮಾಡಿ ಅಮೆರಿಕದಲ್ಲಿ ಕಾಯಂ ಆಗಿ ವಾಸಿಸಲು ಅನುಮತಿ ಕೊಡಲಾಗುತ್ತಿತ್ತು. ಇವರೆಲ್ಲ ಅನುಕೂಲಸ್ಥರು; ಇವರ ಹೊಟ್ಟೆ ಬಟ್ಟೆ, ಆರೋಗ್ಯಕ್ಕೆ ಬೊಕ್ಕಸದ ಮೇಲೆ ಹೊರೆ ಬೀಳುವುದಿಲ್ಲ ಎಂಬುದು ಸರ್ಕಾರದ ಭಾವನೆಯಾಗಿತ್ತು.ಬಡತನದಿಂದಾಗಿ ಹಡಗಿನಲ್ಲಿ ಮೂರನೇ ದರ್ಜೆ ಟಿಕೆಟ್ ಪಡೆದು ಕನಿಷ್ಠ ಸೌಕರ್ಯವೂ ಇಲ್ಲದೇ ತಿಂಗಳುಗಟ್ಟಲೆ ಪಯಣಿಸಿ ಬರುತ್ತಿದ್ದವರನ್ನು ಮಾತ್ರ ಕಡ್ಡಾಯವಾಗಿ ಎಲಿಸ್ ಕೇಂದ್ರಕ್ಕೆ ಕಳಿಸಲಾಗುತ್ತಿತ್ತು. ಅಲ್ಲಿ ಆರೋಗ್ಯ, ಕಾನೂನು ತಪಾಸಣೆಗೆ ಒಳಪಡಿಸಲಾಗುತ್ತಿತ್ತು. ಬಹುತೇಕ ಸಂದರ್ಭದಲ್ಲಿ ತಮ್ಮ ತಪಾಸಣೆ ಪಾಳಿ ಬರಲು ವಲಸಿಗರು ವಾರಗಟ್ಟಲೆ ಕಾಯಬೇಕಿತ್ತು.ತಪಾಸಣಾ ವೈದ್ಯರು, ಅಧಿಕಾರಿಗಳ ಮರ್ಜಿಯಂತೆಯೇ ಎಲ್ಲವೂ ನಡೆಯುತ್ತಿತ್ತು. ಗಂಡ, ಹೆಂಡತಿ, ಮಕ್ಕಳನ್ನು ಪ್ರತ್ಯೇಕವಾಗಿಯೇ ತಪಾಸಣೆ ಮಾಡುತ್ತಿದ್ದರು. ಕುಟುಂಬದ ಎಲ್ಲರಿಗೂ ಒಟ್ಟಾಗಿ ಅನುಮತಿ ಸಿಗುವ ಖಾತರಿ ಇರಲಿಲ್ಲ. ಅದೃಷ್ಟ ಇದ್ದವರು ಪಾಸ್; ಇಲ್ಲದವರು ಗಂಟುಮೂಟೆ ಸಹಿತ ವಾಪಸ್.ಇತ್ತ ನ್ಯೂಯಾರ್ಕ್ ಬಂದರಿನಲ್ಲಿ ವಲಸಿಗರ ಬಂಧು ಮಿತ್ರರು ತಮ್ಮವರಿಗೆ ಅನುಮತಿ ಸಿಗಲಿ ಎಂದು ಪ್ರಾರ್ಥಿಸುತ್ತ ಕಾಯುತ್ತಿರುತ್ತಿದ್ದರು. ಅನುಮತಿ ಸಿಕ್ಕು ಅವರು ಬಂದರೆ ಇವರ ಮುಖದಲ್ಲಿ ಸಂತೋಷ, ಆನಂದಬಾಷ್ಪ. ಅಕಸ್ಮಾತ್ ಅವರನ್ನು ಮರಳಿ ಹಡಗಿಗೆ ಹತ್ತಿಸಿ ವಾಪಸ್ ಕಳಿಸಿದರೆ ಇಲ್ಲಿ ಕಣ್ಣೀರ ಕೋಡಿ.ಮೊದಲ ಮಹಾಯುದ್ಧದ ನಂತರ ವಿವಿಧ ದೇಶಗಳಲ್ಲಿ ಅಮೆರಿಕ ರಾಯಭಾರ ಕಚೇರಿಗಳು ತಲೆಯೆತ್ತಿದವು. ವಲಸೆ ಅನುಮತಿಗಳನ್ನು ಅಲ್ಲಿಯೇ ಕೊಡಲು ಶುರು ಮಾಡಿದವು. ಹೀಗಾಗಿ ಕ್ರಮೇಣ ಎಲಿಸ್ ತಪಾಸಣೆ ನಿಂತು ಹೋಯಿತು.1808ಕ್ಕೂ ಮೊದಲು ಆ ದ್ವೀಪದ ಮಾಲೀಕತ್ವದ ಬಗ್ಗೆ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿ ರಾಜ್ಯಗಳ ಮಧ್ಯೆ ಮಧ್ಯೆ ಸದಾ ಕಿತ್ತಾಟ ನಡೆಯುತ್ತಲೇ ಇತ್ತು. 1808ರಲ್ಲಿ ಅಮೆರಿಕದ ಫೆಡರಲ್ ಸರ್ಕಾರ ಈ ದ್ವೀಪವನ್ನು ನ್ಯೂಯಾರ್ಕ್ ರಾಜ್ಯ ಸರ್ಕಾರದಿಂದ ಖರೀದಿಸಿ ತನ್ನ ಸುಪರ್ದಿಗೆ ತೆಗೆದುಕೊಂಡಿತು.ಏನೇನಿದೆ?

ಈ ದ್ವೀಪ ಈಗ ಅಮೆರಿಕದ ರಾಷ್ಟ್ರೀಯ ಸ್ಮಾರಕ. ಸ್ವಾತಂತ್ರ್ಯ ದೇವಿ ಪ್ರತಿಮೆ (ಸ್ಟ್ಯಾಚು ಆಫ್ ಲಿಬರ್ಟಿ) ಪ್ರವಾಸದ ಒಂದು ಭಾಗ. 1976ರಿಂದ 84ರವರೆಗೆ ಸೀಮಿತ ಪ್ರಮಾಣದಲ್ಲಿ ಪ್ರವಾಸಿಗಳಿಗೆ ತೆರೆಯಲಾಗಿತ್ತು. ನಂತರ ಅಮೆರಿಕದ ಇತಿಹಾಸದಲ್ಲಿಯೇ ಅತ್ಯಂತ ಬೃಹತ್ ಯೋಜನೆಯಡಿ ನವೀಕರಿಸಲಾಯಿತು.ಅಲ್ಲೆಗ ಆ ಕಾಲದ ಕಟ್ಟಡಗಳು, ಚಿತ್ರಗಳು, ವಲಸಿಗರು ಬಳಸುತ್ತಿದ್ದ ಸಾಮಗ್ರಿಗಳನ್ನು ಜೋಪಾನವಾಗಿ ಸಂರಕ್ಷಿಸಲಾಗಿದೆ. ಹಳೆಯ ವಲಸೆ ಮಾಹಿತಿಗಳನ್ನು ಕಂಪ್ಯೂಟರ್‌ನಲ್ಲಿ ಅಳವಡಿಸಲಾಗಿದೆ. ಇಲ್ಲಿನ `ಅಮೆರಿಕನ್ ಫ್ಯಾಮಿಲಿ ಇಮಿಗ್ರೇಷನ್ ಹಿಸ್ಟರಿ ಸೆಂಟರ್~ನಲ್ಲಿ ಅಮೆರಿಕ ನಿವಾಸಿಗಳು ತಮ್ಮ ಪೂರ್ವಜರ ಮಾಹಿತಿ ಹುಡುಕಾಡುವುದನ್ನು ಕಾಣಬಹುದು.ಇಲ್ಲಿನ ಒಂದೊಂದು ಕಲ್ಲು, ಮರ ಕೂಡ ಒಂದೊಂದು ಕಥೆಗೆ ಸಾಕ್ಷಿಯಾಗಿದೆ. ಆ ಕಥೆಯಲ್ಲಿ ನೋವೂ ಇದೆ; ನಲಿವೂ ಇದೆ. 45 ನಿಮಿಷದ ಆಡಿಯೊ ಟೂರ್, `ದಿ ಅಮೆರಿಕನ್ ಇಮಿಗ್ರಂಟ್ ವಾಲ್ ಆಫ್ ಆನರ್ ಮ್ಯೂಸಿಯಂ~ಗಳು ಮುಖ್ಯ ಆಕರ್ಷಣೆ.ಖ್ಯಾತನಾಮರು: ಎಲಿಸಿ ಕೇಂದ್ರದ ಮೂಲಕ ಅಮೆರಿಕ ಪ್ರವೇಶಿಸಿದವರಲ್ಲಿ ವುಡ್ರೊ ವಿಲ್ಸನ್, ಥಿಯೋಡರ್ ರೂಸ್‌ವೆಲ್ಟ್, ವಿಲಿಯಂ ಟಾಫ್ಟ್ ಮತ್ತು ಹರ್ಬರ್ಟ್ ಹೂವರ್ (ಮುಂದೆ ಈ ನಾಲ್ವರೂ ಅಮೆರಿಕ ಅಧ್ಯಕ್ಷ ಪದವಿಗೇರಿದರು), ನಟ ಚಾರ್ಲಿ ಚಾಪ್ಲಿನ್ ಮತ್ತು ಲಾರೆಲ್ ಹಾರ್ಡಿ ಖ್ಯಾತಿಯ ಹಾರ್ಡಿ ಪಾತ್ರಧಾರಿ ಅರ್ಥರ್ ಸ್ಟಾನ್ಲಿ ಜೆಫರಸನ್, ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟೈನ್, ಲೇಖಕ ರುಡ್‌ಯಾರ್ಡ್ ಕಿಪ್ಲಿಂಗ್, ಜಾದೂಗಾರ ಹ್ಯಾರಿ ಹೌಡಿನಿ, ಡಿಸ್ನಿ ಸ್ಥಾಪಕ ವಾಲ್ಟರ್ ಡಿಸ್ನಿ ಮುಂತಾದವರು ಸೇರಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.