ಬುಧವಾರ, ಜೂನ್ 23, 2021
22 °C

ಕನ್ನಡದಲ್ಲಿ ಮಮ್ಮುಟಿ ಶಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಇದು ಕ್ಲಾಸ್‌ನಲ್ಲಿಯೇ ಕ್ಲಾಸ್ ಚಿತ್ರ. ಕಮರ್ಷಿಯಲ್ ಆಯಾಮದಲ್ಲಿ ರೂಪುಗೊಂಡಿದ್ದರೂ ಕಲಾತ್ಮಕತೆಯ ಸ್ಪರ್ಶ ಚಿತ್ರಕ್ಕಿದೆ. ವ್ಯಾವಹಾರಿಕವಾಗಿ ಮಾತ್ರ ಇದು ಕಮರ್ಷಿಯಲ್ ಸಿನಿಮಾ ಎನಿಸಿಕೊಳ್ಳುತ್ತದೆ~- ಕನ್ನಡದಲ್ಲಿ ಮೊದಲ ಬಾರಿಗೆ ನಟಿಸಿರುವ ಮಲಯಾಳಂ ನಟ ಮಮ್ಮುಟಿ ತಮ್ಮ `ಶಿಕಾರಿ~ ಚಿತ್ರವನ್ನು ವರ್ಣಿಸಿದ್ದು ಹೀಗೆ.ಕನ್ನಡ ಮತ್ತು ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ತಯಾರಾದ `ಶಿಕಾರಿ~ ಚಿತ್ರದ ದನಿಮುದ್ರಿಕೆಯ ಬಿಡುಗಡೆ ಸಮಾರಂಭವದು. ಮಲಯಾಳಂನಲ್ಲಿ ಎರಡು ವಾರದ ಹಿಂದೆಯೇ ಬಿಡುಗಡೆಯಾದ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆತಿದೆ ಎಂಬ ಸಂತಸ ಚಿತ್ರತಂಡದ್ದು. ಕನ್ನಡ ಭಾಷೆ ಬಾರದಿದ್ದರೂ ಮಲಯಾಳಂನಲ್ಲಿ ಬರೆದುಕೊಂಡು ಸ್ವತಃ ಡಬ್ ಮಾಡಿರುವ ಮಮ್ಮುಟಿ ಕನ್ನಡ ಭಾಷೆಯ ಸೊಗಡಿನ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು.ಕರ್ನಾಟಕಿ ಸಂಗೀತದ ಒಲವನ್ನು ಮುಕ್ತವಾಗಿ ಹಂಚಿಕೊಂಡರು. ಕನ್ನಡಕ್ಕೆ ನನ್ನನ್ನು ಪರಿಚಯಿಸಲು ನಿರ್ದೇಶಕ ಅಭಯ ಸಿಂಹ ಮತ್ತು ನಿರ್ಮಾಪಕ ಕೆ.ಮಂಜು ಅವರನ್ನು ಯಾವ ಭರವಸೆ ಪ್ರೇರೇಪಿಸಿತೋ ಗೊತ್ತಿಲ್ಲ ಎಂದು ನಗೆ ಬೀರಿದರು. ಕನ್ನಡದಲ್ಲಿ ಇದು ಮೊದಲ ಚಿತ್ರವಾದರೂ ಮಲಯಾಳಂ ಚಿತ್ರಗಳ ಮೂಲಕವೇ ಕನ್ನಡದ ಸಂಪರ್ಕ ಪಡೆದಿದ್ದನ್ನು ಅವರು ನೆನಪಿಸಿಕೊಂಡರು.ಬೆಂಗಳೂರು, ಮೈಸೂರು, ತೀರ್ಥಹಳ್ಳಿ ಸುತ್ತಮುತ್ತ ನಡೆದ ಚಿತ್ರೀಕರಣದ ದಿನಗಳನ್ನು ಮೆಲುಕು ಹಾಕಿದ ಅವರು, ಇಲ್ಲಿನ ಭಾಷೆ, ಜನ ಯಾರೂ ನನಗೆ ಅಪರಿಚಿತರಲ್ಲ ಎಂಬ ಭಾವನೆ ಮೂಡಿತು ಎಂದರು.ಇದು ಎರಡು ಕಾಲಘಟ್ಟದಲ್ಲಿ ನಡೆಯುವ ಕಥೆ. ನವಯುಗದಲ್ಲಿ ಮಾನಸಿಕವಾಗಿ ಹುಟ್ಟಿಕೊಳ್ಳುತ್ತಿರುವ ವಸಾಹತುಶಾಹಿ ಮತ್ತು ಸ್ವಾತಂತ್ರ್ಯ ಪೂರ್ವದ ವಸಾಹತುಶಾಹಿ ಸಮಾಜದ ಎರಡು ಮುಖಗಳನ್ನು `ಶಿಕಾರಿ~ ಬಿಂಬಿಸುತ್ತದೆ ಎಂದರು ನಿರ್ದೇಶಕ ಅಭಯ ಸಿಂಹ.ಸಾಫ್ಟ್‌ವೇರ್ ಎಂಜಿನಿಯರ್ ಆಗಿ ತೆರೆಮೇಲೆ ಕಾಣಿಸಿಕೊಳ್ಳುವ ಮಮ್ಮುಟಿ, ಕಾದಂಬರಿಯೊಂದನ್ನು ಓದುತ್ತಾ ಅದರ ಪಾತ್ರದೊಳಗೆ ಒಂದಾಗುತ್ತಾರೆ. ಬಳಿಕ ಸ್ವಾತಂತ್ರ್ಯಪೂರ್ವದ ಚಿತ್ರಣ ತೆರೆದುಕೊಳ್ಳುತ್ತದೆ. ನಾಯಕ ಕಾದಂಬರಿಯಲ್ಲಿನ ನಾಯಕಿಯ ಪ್ರೀತಿಯನ್ನು ಹುಡುಕುತ್ತಾ ಹೋಗುತ್ತಾನೆ ಎಂದು ಅವರು ಕಥೆಯ ತಿರುಳನ್ನು ತೆರೆದಿಟ್ಟರು.

ತಮ್ಮ ನಟನೆಯನ್ನು ತಾವೇ ಪರೀಕ್ಷೆಗೊಳಪಡಿಸುವ ನಟ ಮಮ್ಮುಟಿ ಎಂದು ಬಣ್ಣಿಸಿದರು ನಟ ಅಚ್ಯುತರಾವ್.ಅವರು ಐಪಾಡ್‌ನಲ್ಲಿ ತಮ್ಮದೇ ಚಿತ್ರಗಳನ್ನು ನೋಡುತ್ತಿರುತ್ತಾರೆ. ತನ್ನ ನಟನೆ ಸರಿಯಾಗಿ ಮೂಡಿದೆಯೇ ಎಂಬುದನ್ನು ಒರೆಗೆ ಹಚ್ಚುತ್ತಾರೆ. ಇಂತಹ ಗುಣದಿಂದಲೇ ಅವರು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಸಾಧ್ಯವಾಗಿದ್ದು ಎಂಬ ಅಭಿಪ್ರಾಯ ಅವರದು.

ಚಿತ್ರಕ್ಕೆ ನೃತ್ಯ ಸಂಯೋಜನೆ ಮಾಡಿರುವವರು ಮದನ್-ಹರಿಣಿ. ಹರಿಕೃಷ್ಣ ಸಂಗೀತ ಚಿತ್ರಕ್ಕಿದೆ.ಈ ಚಿತ್ರವನ್ನು ತಾವೇ ಸ್ವತಃ ಹಂಚಿಕೆ ಮಾಡುತ್ತಿರುವುದಾಗಿ ಕೆ.ಮಂಜು ಪ್ರಕಟಿಸಿದರು. ಮಾರ್ಚ್ ಕೊನೆಯ ವಾರದಲ್ಲಿ ಸುಮಾರು 70 ಚಿತ್ರಮಂದಿರಗಳಲ್ಲಿ ಚಿತ್ರ ಬೆಳ್ಳಿತೆರೆಯ `ಶಿಕಾರಿ~ ಶುರು ಮಾಡಲು ಸಜ್ಜುಗೊಂಡಿದೆ.

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.