ಸೋಮವಾರ, ಏಪ್ರಿಲ್ 12, 2021
25 °C
ರಣಜಿ ಟ್ರೋಫಿ: ಕೆಟ್ಟ ಕ್ಷೇತ್ರರಕ್ಷಣೆಯಲ್ಲಿಯೇ ಇದೆ ಸೋಲಿನ ಗುಟ್ಟು

ಕರ್ನಾಟಕದ ಮುಂದಿದೆ ಮುಳ್ಳಿನ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕದ ಮುಂದಿದೆ ಮುಳ್ಳಿನ ಹಾದಿ

ಬೆಂಗಳೂರು: ರಣಜಿ ಚಾಂಪಿಯನ್ ಆಗಬೇಕು ಎನ್ನುವ ಕನಸು ಹೊತ್ತು ಈ ಸಲ ಅಭಿಯಾನ ಆರಂಭಿಸಿದ್ದ ಕರ್ನಾಟಕ ತಂಡ ಆರಂಭದಲ್ಲಿಯೇ ಪೆಟ್ಟು ತಿಂದ ಮೊಲದಂತಾಗಿದೆ. ಈ ಪಂದ್ಯ, ಈ ಪಂದ್ಯ... ಎಂದು ಹೆಜ್ಜೆ ಹಾಕುತ್ತಾ ನಾಲ್ಕು ಪಂದ್ಯಗಳು ಉರುಳಿ ಹೋದವು. ಆದರೆ, ಗೆಲುವೆಂಬುದು ದೂರದ ಬೆಟ್ಟವಾಗಿದೆ. ಆದರೆ, ಮುಂದಿನ ಪಂದ್ಯಗಳಲ್ಲಿ ಮಾತ್ರ ಹೀಗೆ ಆಗುವಂತಿಲ್ಲ.

ಬರೋಡ, ತಮಿಳುನಾಡು, ಉತ್ತರಪ್ರದೇಶ ವಿರುದ್ಧ ಡ್ರಾ ಸಾಧಿಸಿ ಒಡಿಶಾ ಎದುರು ಸೋಲು ಕಂಡಿರುವ ವಿನಯ್ ಪಡೆಗೆ ಮುಂದಿರುವುದು ಮುಳ್ಳಿನ ಹಾದಿ. ಹಿಂದಿನ ಪಂದ್ಯಗಳಲ್ಲಿನ ನಿರಾಸೆಗೆ ಕೆಟ್ಟ ಕ್ಷೇತ್ರರಕ್ಷಣೆ ಮತ್ತು ಬ್ಯಾಟಿಂಗ್ ವೈಫಲ್ಯ ಪ್ರಮುಖ ಕಾರಣ ಎನ್ನುವುದು ಬಹಿರಂಗ ಸತ್ಯ. ಆದ್ದರಿಂದ ಈ ವಿಭಾಗಗಳಲ್ಲಿ ಸುಧಾರಣೆ ಕಂಡುಕೊಳ್ಳುವುದು ಅಗತ್ಯ. ಇಲ್ಲವಾದರೆ, ಲೀಗ್ ಹಂತದಲ್ಲಿಯೇ ಮನೆಯ ಹಾದಿ ಹಿಡಿಯಬೇಕಾಗತ್ತದೆ.

2011-12ರ ರಣಜಿ ಋತುವಿನಲ್ಲಿ ಕ್ವಾರ್ಟರ್ ಫೈನಲ್‌ವರೆಗೆ ಮುನ್ನಡೆದಿದ್ದ ಕರ್ನಾಟಕ ತಂಡದ ಸಾಧನೆಯ ಹಿಂದೆ ಬ್ಯಾಟ್ಸ್‌ಮನ್‌ಗಳ ಪಾತ್ರ ಪ್ರಮುಖವಾಗಿತ್ತು. ಆದರೆ, ಒಡಿಶಾ ವಿರುದ್ಧದ ಪಂದ್ಯದಲ್ಲಿ ಇದೇ ಬ್ಯಾಟ್ಸ್‌ಮನ್‌ಗಳು ವೈಫಲ್ಯ ಅನುಭವಿಸಿದರು. ಅದರ ಜೊತೆಗೆ ಪದೇ ಪದೇ ಕ್ಯಾಚ್‌ಗಳನ್ನು ಕೈಚೆಲ್ಲುವುದರಿಂದ ಎದುರಾಳಿ ತಂಡಕ್ಕೆ ಹೆಚ್ಚು ರನ್ ಗಳಿಸಲು ಅನುಕೂಲ ಮಾಡಿಕೊಟ್ಟರು.

ಬರೋಡ ವಿರುದ್ಧದ ಪಂದ್ಯದಲ್ಲಿ ಎರಡೂ ಇನಿಂಗ್ಸ್ ಸೇರಿ ನಾಲ್ಕು ಕ್ಯಾಚ್ ಕೈಚೆಲ್ಲಿದ್ದ ವಿನಯ್ ಪಡೆ, ಚೆನ್ನೈಯಲ್ಲೂ ಇದೇ ತಪ್ಪು ಮಾಡಿತ್ತು. ತಮಿಳುನಾಡು ವಿರುದ್ಧದ ಪಂದ್ಯದಲ್ಲಿ ಕೆಟ್ಟ ಕ್ಷೇತ್ರರಕ್ಷಣೆ ಮಾಡಿದ ಕಾರಣ, ಆ ತಂಡ ಮೊದಲ ಇನಿಂಗ್ಸ್‌ನಲ್ಲಿ ಸವಾಲಿನ ಮೊತ್ತವನ್ನು (538) ಗಳಿಸಿತ್ತು. ಈ ಪಂದ್ಯದಲ್ಲಿ ಕರ್ನಾಟಕ ಇನಿಂಗ್ಸ್ ಮುನ್ನಡೆ ಗಳಿಸಿತಾದರೂ ಬೌಲರ್‌ಗಳು ಬಿಗಿ ಹಿಡಿತ ಸಾಧಿಸುವಲ್ಲಿ ವಿಫಲರಾಗಿದ್ದರು.

`ಕ್ಷೇತ್ರರಕ್ಷಣೆ ವಿಭಾಗ ಉತ್ತಮವಾಗಿದ್ದರೆ ಶೇಕಡಾ 50ರಷ್ಟು ಪಂದ್ಯ ಗೆದ್ದಂತೆಯೇ. ಆದ್ದರಿಂದ  ಎಲ್ಲಾ ಆಟಗಾರರು ಈ ವಿಭಾಗದತ್ತ ಹೆಚ್ಚು ಗಮನ ನೀಡಬೇಕು. ಹಿಂದಿನ ಪಂದ್ಯಗಳಲ್ಲಿ ಕೆಟ್ಟ ಕ್ಷೇತ್ರರಕ್ಷಣೆ ಕರ್ನಾಟಕ ತಂಡದ ನಿರಾಸೆಗೆ ಕಾರಣ' ಎನ್ನುತ್ತಾರೆ ಕರ್ನಾಟಕ ತಂಡದ ಮಾಜಿ ಆಟಗಾರ ಆನಂದ್ ಕಟ್ಟಿ.

ನೈಜ ಆಟ: ಅಬ್ಬರದ ಬ್ಯಾಟಿಂಗ್ ಮೂಲಕವೇ ರಾಷ್ಟ್ರೀಯ ಮತ್ತು ಐಪಿಎಲ್ ತಂಡಗಳಲ್ಲಿ ಸ್ಥಾನ ಗಿಟ್ಟಿಸಿದ್ದ ರಾಬಿನ್ ಉತ್ತಪ್ಪ , ಮನೀಷ್ ಪಾಂಡೆ ಹಾಗೂ ಸ್ಟುವರ್ಟ್ ಬಿನ್ನಿ ಅವರಂತಹ ಬ್ಯಾಟ್ಸ್‌ಮನ್‌ಗಳು ತಮ್ಮ ಎಂದಿನ ನೈಜ ಆಟ ಪ್ರದರ್ಶಿಸುವಲ್ಲಿ ವಿಫಲರಾಗುತ್ತಿದ್ದಾರೆ. ಅನುಭವಿಗಳು ಪದೇ ಪದೇ ವೈಫಲ್ಯ ಅನುಭವಿಸಿದರೆ, ಆಯ್ಕೆ ಸಮಿತಿ ಯುವ ಆಟಗಾರರತ್ತ ಒಲವು ತೋರುವ ಸಾಧ್ಯತೆಯಿದೆ. ಆದ್ದರಿಂದ ಅನುಭವಿಗಳು ತಮ್ಮ ಸಾಮರ್ಥ್ಯ ತೋರಿಸುವ ಅನಿವಾರ್ಯತೆಯಿದೆ.

`ರಾಬಿನ್ ಉತ್ತಪ್ಪ ಅಬ್ಬರದ ಆಟದ ಮೂಲಕವೇ ಸಣ್ಣ ವಯಸ್ಸಿನಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದವರು. ಆದರೆ, ಅವರು ಮೊದಲಿನಂತೆ ಈಗ ಬ್ಯಾಟಿಂಗ್ ಮಾಡುತ್ತಿಲ್ಲ. ಆದ್ದರಿಂದ ಮುಂದಿನ ಪಂದ್ಯಗಳಲ್ಲಿ ನೈಜ ಆಟವಾಡಬೇಕು. ಹಿಂದೆಯೂ ಸಾಕಷ್ಟು ಸಲ ಈ ರೀತಿಯ ಸಂಕಷ್ಟದ ಸ್ಥಿತಿ ಎದುರಾಗಿತ್ತು. ಚೇತರಿಸಿಕೊಂಡ ಉದಾಹರಣೆಗಳೂ ನಮ್ಮ ಮುಂದಿವೆ. ಆದರೆ, ಮುಂದಿಡುವ ಪ್ರತಿ ಹೆಜ್ಜೆಯೂ ಎಚ್ಚರಿಕೆಯಿಂದ ಕೂಡಿರಬೇಕು' ಎನ್ನುವುದು ಆನಂದ್ ಆಭಿಪ್ರಾಯ. `ಬಿ' ಗುಂಪಿನಲ್ಲಿರುವ ತಂಡಗಳಲ್ಲಿ ದೆಹಲಿ ಕೂಡಾ ಬಲಿಷ್ಠವಾಗಿದೆ. ಮುಂದಿನ ಪಂದ್ಯದಲ್ಲಿ ಕರ್ನಾಟಕ ಈ ತಂಡದ ವಿರುದ್ಧವೇ ಸೆಣಸಲಿದೆ.

`ಕರ್ನಾಟಕ ಬಲಿಷ್ಠ ಬ್ಯಾಟ್ಸ್‌ಮನ್‌ಗಳನ್ನು ಹೊಂದಿದೆ ಎಂಬುದು ನಿಜ. ಆದರೆ, ಅವರು ತಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಆಡುತ್ತಿಲ್ಲ. ವೇಗಿ ವಿನಯ್ ಕುಮಾರ್ ತಂಡದಲ್ಲಿರುವುದು, ಯುವ ಪ್ರತಿಭೆ ಎಚ್.ಎಸ್. ಶರತ್ ಉತ್ತಮ ಆರಂಭ ಪಡೆದಿರುವುದು ಎಲ್ಲವೂ ಸಕಾರಾತ್ಮಕ ಅಂಶಗಳೇ. ಆದರೆ, ಮೊದಲು ಬ್ಯಾಟಿಂಗ್ ವೈಫಲ್ಯದಿಂದ ಹೊರಬರಬೇಕು. ಪಂದ್ಯ ಗೆಲ್ಲಿಸುವ ಆಟಗಾರರು  ಹೆಚ್ಚಾಗಬೇಕು' ಎಂದು ಆನಂದ್ ಹೇಳುತ್ತಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.