ಬುಧವಾರ, ಮಾರ್ಚ್ 3, 2021
31 °C

ಕಲಕೇರಿಗೆ ನೀರು ಬರುವುದು ತಿಂಗಳಿಗೊಮ್ಮೆ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲಕೇರಿಗೆ ನೀರು ಬರುವುದು ತಿಂಗಳಿಗೊಮ್ಮೆ!

ಕಲಕೇರಿ (ತಾ.ಸಿಂದಗಿ): ಕಲಕೇರಿ ಒಂದು ಕಾಲದಲ್ಲಿ ಸಿಂದಗಿ ಮತಕ್ಷೇತ್ರದ ರಾಜಕೀಯ ಜಂಕ್ಷನ್ ಆಗಿತ್ತು. ಇಲ್ಲಿನ ಮತದಾರರೇ ನಿರ್ಣಾಯಕರಾಗಿದ್ದರು. ಆದರೆ, ಈಗ ಇದು ದೇವರ ಹಿಪ್ಪರಗಿ ಮತಕ್ಷೇತ್ರದ ಅತ್ಯಂತ ನಿರ್ಲಕ್ಷ್ಯಿತ ಪಟ್ಟಣ ಎಂಬುದು ಜನತೆಯ ನೋವು.ಇಲ್ಲಿನ ಜನಸಂಖ್ಯೆ 10 ಸಾವಿರ. ನಾಲ್ಕು ವಾರ್ಡ್‌ಗಳಿವೆ. ಕುಡಿಯುವ ನೀರಿಗಾಗಿ ತುಂಬಾ ಹಾಹಾಕಾರ ಇದೆ. ಕುಡಿಯುವ ನೀರು ತಿಂಗಳಿಗೊಮ್ಮೆ ಸರಬರಾಜು ಆಗುತ್ತಿದೆ. ಅಷ್ಟೇ ಯಾಕೆ? ಒಂದು ಕಿ.ಮೀ. ದೂರದ ಕಲಕೇರಿ ತಾಂಡಾಕ್ಕೆ `ಎರಡು ತಿಂಗಳ ನಂತರ ಇಂದು ನೀರು ಬಂತು ನೋಡಿ~  ಎಂದು ಪ್ರಜಾವಾಣಿ ಪ್ರತಿನಿಧಿ ಎದುರು ತಾಂಡಾ ನಿವಾಸಿಗಳು ಗೋಳು ತೋಡಿಕೊಂಡರು.`ಕಲಕೇರಿಗೆ ಒಟ್ಟು 75 ನೀರಿನ ಪಾಳಿಗಳಿವೆ. ಮೂರು ಕೊಳವೆ ಬಾವಿಗಳ ಮೂಲಕ ಟ್ಯಾಂಕರ್‌ಗೆ ನೀರು ತುಂಬಿಸಿ, ಅಲ್ಲಿಂದ ಒಂದೊಂದು ಪ್ರದೇಶಕ್ಕೆ ತಿಂಗಳಿಗೊಂದು ಪಾಳಿ ಬರುತ್ತದೆ~ ಎಂದು ಒಪ್ಪಿಕೊಳ್ಳುತ್ತಾರೆ ನೀರು ಸರಬರಾಜು ಮಾಡುವ ಸಿಬ್ಬಂದಿ ಮಲ್ಲು ಕೌದಿ.`ನೀರು ಸಂಗ್ರಹಣೆ ಮಾಡುವ 25 ಸಾವಿರ ಲೀಟರ್ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದೆ. ಜೊತೆಗೆ ಸಾಕಷ್ಟು ಪ್ರಮಾಣದ ನೀರು ಸೋರಿಕೆಯೂ ಆಗುತ್ತಿದೆ. ನೀರಿನ ನಿರ್ವಹಣೆಯೂ ಸಮರ್ಪಕವಾಗಿಲ್ಲ~ ಎಂಬುದು ವೈ.ಬಿ. ಕುಲಕರ್ಣಿ ದೂರು.`ಕಲಕೇರಿ ಸುತ್ತ-ಮುತ್ತ ನೀರಿನ ಮೂಲ ಅಷ್ಟಾಗಿ ಇಲ್ಲದ ಕಾರಣ 4 ಕಿ.ಮೀ. ದೂರದ ಕುದರಗೊಂಡ ಗ್ರಾಮದ ಬಳಿ ತೆರೆದ ಬಾವಿ ತೋಡಿಸಿ ಅಲ್ಲಿಂದ ಪೈಪ್ ಲೈನ್ ಮೂಲಕ ನೀರು ಸರಬರಾಜು ಮಾಡುವ ವ್ಯವಸ್ಥೆ ಇದೆ.ಆದರೆ, ಅಲ್ಲಿ ಮೂರು ತೆರೆದ ಬಾವಿಗಳನ್ನು ತೋಡಿಸಲಾಗಿದ್ದು, ಒಂದು ಕೆರೂಟಗಿ, ಇನ್ನೊಂದು ತಿಳಗೂಳ ಮತ್ತೊಂದು ಕಲಕೇರಿಗೆ ನೀರು ಸರಬರಾಜು ಮಾಡುವ ಉದ್ದೇಶ ಹೊಂದಲಾಗಿದೆ. ಆದರೆ, ಮೂರು ಬಾವಿಗಳಲ್ಲಿ ಕಲಕೇರಿಗೆ ಸರಬರಾಜು ಮಾಡುವ ಬಾವಿಯಲ್ಲಿ ಮಾತ್ರ ನೀರು ಇದೆ. ಉಳಿದ ಗ್ರಾಮಗಳಿಗೂ ಒಂದೇ ಬಾವಿಯಿಂದ ನೀರು ಪೂರೈಕೆ ಮಾಡುತ್ತಿರುವ ಕಾರಣ ನೀರು ಪೂರೈಕೆ ತಿಂಗಳಿಗೊಮ್ಮೆ  ಅನಿವಾರ್ಯ~ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ರಾಜೂ ಝಳಕಿ, ಸದಸ್ಯ ರಜಾಕ ಬಳಗಾನೂರ.`ನನಗೆ ತಿಳಿವಳಿಕೆ ಬಂದ 35 ವರ್ಷಗಳ ಅವಧಿಯಲ್ಲಿ ಇಷ್ಟೊಂದು ನೀರಿನ ಕ್ಷಾಮ ಎಂದೂ ಕಂಡಿಲ್ಲ~ ಎಂದು ಆತಂಕದಿಂದ ನುಡಿಯುತ್ತಾರೆ ಪ್ರಾಧ್ಯಾಪಕ ಶಕೀಲ್‌ಸಾಬ ನಾಯ್ಕೋಡಿ.ಕಲಕೇರಿ ಬಳಿ ಇರುವ ತಾಂಡಾದಲ್ಲಿ ನೀರಿನ ಬವಣೆ ಹೇಳತೀರದಷ್ಟಿದೆ. ತಾಂಡಾದಲ್ಲಿ 125 ಮನೆ, ಎರಡು ಸಾವಿರ ಜನಸಂಖ್ಯೆ ಇದೆ.`ಎರಡು ತಿಂಗಳ ಹಿಂದೆ ಬಿಟ್ಟ ನೀರುಮತ್ತೆ ಈಗಲೇ ಬಿಟ್ಟಿದ್ದಾರೆ. ನಮಗೆ ಕೂಳ (ಊಟ) ಬ್ಯಾಡ್ರಿ, ಎಂಟ್ ದಿನಕ್ಕೊಮ್ಮೆ ನೀರು ಕೊಟ್ರ ಸಾಕು.  ಸುತ್ತ-ಮುತ್ತಲಿನ ತೋಟಗಳ ಬಾವಿ ಒಣಗಿ ಹೋಗಿವೆ. ಜನ-ಜಾನುವಾರಗಳು ತುಂಬಾ ತೊಂದರೆ ಅನುಭವಿಸುತ್ತಲಿವೆ. ನಮಗಂತೂ ಜೀವನವೇ ಸಾಕಾಗಿ ಹೋಗಿದೆ. ತಾಂಡಾದ ಬಗ್ಗೆ ಜನಪ್ರತಿನಿಧಿಗಳು ಸಂಪೂರ್ಣ ನಿರ್ಲಕ್ಷ್ಯ ಹೊಂದಿದ್ದಾರೆ~ ಎಂದು ಆಲೂ ರಾಠೋಡ, ಥಾವರೂ, ಮೇಘು, ಕಮಲಾಬಾಯಿ, ರುಕ್ಕುಬಾಯಿ, ಸುಶೀಲಬಾಯಿ ಆಕ್ರೋಶ ವ್ಯಕ್ತಪಡಿಸಿದರು.2ನೇ ವಾರ್ಡ್‌ನ ನಿವಾಸಿ ಅಪ್ಪಾಸಾಹೇಬ ದೇಸಾಯಿ, `ನಾವು ಉಳ್ಳವರು 300ರಿಂದ 500 ರೂಪಾಯಿ ವರೆಗೆ ಹಣ ಕೊಟ್ಟು ಟ್ಯಾಂಕರ್ ಮೂಲಕ ನೀರು ಹಾಕಿಸಿಕೊಳ್ಳುತ್ತೇವೆ, ಉಳಿದ ಬಡವರು ಏನು ಮಾಡಬೇಕು? ಪಟ್ಟಣದಲ್ಲಿ ಜನತೆ ತಿಂಗಳಿಗೊಮ್ಮೆ ಸ್ನಾನ ಮಾಡುವ ಕೆಟ್ಟ ಪರಿಸ್ಥಿತಿ ನಿರ್ಮಾಣವಾಗಿದೆ~ ವಸ್ತುಸ್ಥಿತಿಯನ್ನು ತೆರೆದಿಡುತ್ತಾರೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.