ಸೋಮವಾರ, ಮೇ 17, 2021
21 °C

ಕಲ್ಲು ಗಣಿಗಾರಿಕೆಗೆ ನಲುಗಿದ `ಉಚ್ಚಂಗಿ ಕೋಟೆ'

ಪ್ರಜಾವಾಣಿ ವಾರ್ತೆ/ಮಲ್ಲೇಶ್ ನಾಯಕನಹಟ್ಟಿ Updated:

ಅಕ್ಷರ ಗಾತ್ರ : | |

ದಾವಣಗೆರೆ: ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದಾಗಿ ಜಿಲ್ಲೆಯ ಐತಿಹಾಸಿಕ ಸ್ಮಾರಕ `ಉಚ್ಚಂಗಿ ಕೋಟೆ' ಅಕ್ಷರಶಃ ನಲುಗಿ ಹೋಗಿದೆ. ಕಲ್ಲುಬಂಡೆಗಳನ್ನು ಒಡೆಯಲು ಹಾಡಹಗಲೇ ಜಿಲೆಟಿನ್ ಕಡ್ಡಿಗಳನ್ನು ಸ್ಫೋಟಿಸಲಾಗುತ್ತಿದೆ. ನೂತನ ಶಿಲಾಯುಗದ ಆದಿವಾಸಿಗಳ ಕುರುಹು ಇರುವ ರಾಜ್ಯದ ಏಕೈಕ ಐತಿಹಾಸಿಕ ಸ್ಮಾರಕ ಕರಡಿಗುಡ್ಡವೂ ಅವಸಾನದತ್ತ ಸಾಗಿದೆ.ಅಕ್ರಮ ಕಲ್ಲುಗಣಿಗಾರಿಕೆಯು ಕೋಟೆಯನ್ನಷ್ಟೇ ಅಲ್ಲ, ಸುತ್ತಲಿನ ಕಾಯ್ದಿಟ್ಟ ಅರಣ್ಯ ಪ್ರದೇಶವನ್ನೂ ಆಪೋಶನ ತೆಗೆದುಕೊಳ್ಳುತ್ತಿದೆ. ಕೋಟೆಯ ಬುಡದಲ್ಲಿ ಬೀಡುಬಿಟ್ಟಿರುವ 50ಕ್ಕೂ ಹೆಚ್ಚು ಜಲ್ಲಿ ಅರೆಯುವ ಕ್ರಷರ್‌ಗಳು ಮುಗಿಲೆತ್ತರಕ್ಕೆ ದೂಳೆಬ್ಬಿಸುತ್ತಿರುವುದರಿಂದ ಸುತ್ತಮುತ್ತಲಿನ ಗ್ರಾಮಗಳಲ್ಲಿನ ನಾಗರಿಕರ ಬದುಕು ಅಸಹನೀಯವಾಗಿದೆ.ವಿಜಯನಗರ ಅರಸರ ಅವನತಿಯ ನಂತರ ಅವರ ಸಾಮಂತರಾಗಿದ್ದ ಪಾಳೇಗಾರರು 16ನೇ ಶತಮಾನದಲ್ಲಿ `ಉಚ್ಚಂಗಿ ಕೋಟೆ' ವಶಪಡಿಸಿಕೊಂಡು ಆಳ್ವಿಕೆ ನಡೆಸಿದ್ದರು. ಅದಕ್ಕೂ ಮೊದಲು ಪಾಂಡ್ಯರು, ನೊಳಂಬರು, ಕದಂಬರು, ಹೊಯ್ಸಳರು ಇಲ್ಲಿ ಆಳ್ವಿಕೆ ನಡೆಸಿದ್ದರು ಎಂಬುದನ್ನು `ಹರಿಹರ' ಮತ್ತು `ಬಾಗಳಿ' ಮತ್ತು `ಕುಂಚೂರು' ಶಾಸನಗಳಿಂದ ತಿಳಿದು ಬರುತ್ತದೆ.`ಉಚ್ಚಂಗಿ ಕೋಟೆ' ಸುಮಾರು 5 ಸಾವಿರ ಮೀಟರ್ ಉದ್ದಗಲದಲ್ಲಿ ಮೂಡಣದಿಂದ ಪಡುವಣ ದಿಕ್ಕಿನವರೆಗೆ ಹಬ್ಬಿ ನಿಂತಿದೆ. ಕರಡಿಗುಡ್ಡ-ಉಚ್ಚಂಗಿ ಪರ್ವತಗಳನ್ನು ದಕ್ಷಿಣೋತ್ತರವಾಗಿ ಬಳಸಿಕೊಂಡು ಪಾಳೆಗಾರರು ಕೋಟೆ ಅಭಿವೃದ್ಧಿಪಡಿಸ್ದ್ದಿದರು. ಇಲ್ಲಿ 120 ಬತೇರಿಗಳು, 30ಕ್ಕೂ ಹೆಚ್ಚು ಬುರುಜುಗಳಿವೆ. 6 ಹೆಬ್ಬಾಗಿಲು, ನೂರಾರು ದಿಡ್ಡಿ ಬಾಗಿಲು ಮತ್ತು ಸಾವಿರಾರು ಉಪ ಬಾಗಿಲುಗಳಿವೆ.ಬೆಟ್ಟದ `ಬಸವೇಶ್ವರ', `ಜೋಡಿ ದುರುಗಮ್ಮ', `ಅರಮನೆ', `ಕುಷ್ಟಮ್ಮ ದೇವಿ ದೇಗುಲ', `ವೀರಭದ್ರೇಶ್ವರ ದೇಗುಲ', `ತವರುಮನೆ ಕಟ್ಟೆ', `ಸಿಡಿಗಂಬ', `ಎಣ್ಣೆಕೊಳ', `ತುಪ್ಪದ ಕೊಳ', `ರಾಣಿ ಅರಮನೆ', `ಬಂಡೆ ಶಾಸನ', `ಬನ್ನಿಮಂಟಪದ ಏಕಶಿಲಾ ಜಲಪಾತ', `ಕರಡಿಗುಡ್ಡದಲ್ಲಿನ ಆಂಜನೇಯ ದೇಗುಲ', `ಚೌಡಮ್ಮದೇವಿ ದೇಗುಲ', `ತೊಟ್ಟಿಲ ಬಾವಿ', `ಬಟ್ಟಲು ಬಾವಿ', `ದೀಪಮಾಲೆಕಂಬ'... ನೂರಾರು ಐತಿಹಾಸಿಕ ಸ್ಮಾರಕಗಳು ಇಲ್ಲಿವೆ.`ಕರಡಿಗುಡ್ಡ- ಮಧ್ಯಕಾಲೀನ ಚರಿತ್ರೆಯ ಅಪರೂಪದ ಆಕರವಾಗಿದೆ. ಇಲ್ಲಿ ನೂತನ ಶಿಲಾಯುಗದ ಆದಿವಾಸಿಗಳು ನೆಲೆಸಿದ್ದರು ಎಂಬುದಕ್ಕೆ ಈಗಲೂ ಕಂಡುಬರುವ ಆದಿವಾಸಿಗಳ ಮನೆಗಳೇ ಸಾಕ್ಷಿ.ಆದಿವಾಸಿಗಳ ಕುರುಹು ಹೇಳುವ ಐತಿಹಾಸಿಕ ಸ್ಮಾರಕ ಎಲ್ಲೂ ಕಾಣಸಿಗುವುದಿಲ್ಲ. ಇಲ್ಲಿ ಉತ್ಖನನ ನಡೆದರೆ ಶಿಲಾಯುಗದ ಚರಿತ್ರೆಯೇ ತೆರೆದುಕೊಳ್ಳುತ್ತದೆ. ಇಂತಹ ಅಪೂರ್ವ ಸ್ಥಳವನ್ನು ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆ ಸಂರಕ್ಷಿಸುವಲ್ಲಿ ನಿರ್ಲಕ್ಷ್ಯವಹಿಸಿರುವುದು ಸರಿಯಲ್ಲ' ಎನ್ನುತ್ತಾರೆ ತುಮಕೂರು ವಿಶ್ವವಿದ್ಯಾಲಯದ ಪುರಾತತ್ವ ಮತ್ತು ಇತಿಹಾಸ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ.ಎಂ.ಕೊಟ್ರೇಶ್.

ರಾಜಕೀಯ ಇಚ್ಛಾಶಕ್ತಿ ಕೊರತೆ

ಇಲ್ಲಿ ನಡೆಯುತ್ತಿರುವ ಕಲ್ಲುಗಣಿಗಾರಿಕೆ ದಂಧೆಗೆ ಕಡಿವಾಣ ಹಾಕುವಂತೆ ಎಲ್ಲಾ ಇಲಾಖೆಗಳಿಗೆ ಅರ್ಜಿ ಸಲ್ಲಿಸಿದ್ದಾಗಿದೆ. ಅಧಿಕಾರಿಗಳು,  ಜನಪ್ರತಿನಿಧಿಗಳ ಮುಂದೆ ಗೋಗರೆದಿದ್ದೇವೆ. ಜಿಲ್ಲಾಡಳಿತ ಕಚೇರಿ ಮುಂದೆ ಪ್ರತಿಭಟನೆ ನಡೆಸಿದ್ದೇವೆ. ಆದರೆ, ಯಾವುದೇ ಪ್ರಯೋಜನವಾಗಿಲ್ಲ. ನಿತ್ಯ ಈ ನರಕದಲ್ಲೇ ಬದುಕುವಂತಾಗಿದೆ.ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಜಾಣಕುರುಡು ಪ್ರದರ್ಶಿಸುತ್ತಿದೆ. ಪ್ರಮುಖವಾಗಿ ರಾಜಕೀಯ ಇಚ್ಛಾಶಕ್ತಿ ಕೊರತೆ ಇದೆ.

-ರಾಜಶೇಖರಗೌಡ,

ಅಧ್ಯಕ್ಷರು, ಉಚ್ಚಂಗಿ ಯಲ್ಲಮ್ಮ ದೇಗುಲ ಸಮಿತಿ, ಉಚ್ಚಂಗಿದುರ್ಗ.ಕ್ರಮ ಕೈಗೊಳ್ಳುತ್ತೇನೆ...

ಹೊಸದಾಗಿ ಬಂದಿದ್ದೇನೆ... ಪ್ರಾಚ್ಯವಸ್ತು ಇಲಾಖೆ ಸಲ್ಲಿಸಿರುವ ಅರ್ಜಿ ಮತ್ತು ಹಿಂದಿನ ಕಡತ ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳುತ್ತೇನೆ.

- ಚನ್ನಬಸಪ್ಪ, ತಹಶೀಲ್ದಾರ್, ಹರಪನಹಳ್ಳಿಅಧಿಕೃತ ಮಾಹಿತಿ ನೀಡಿ...

ಇದುವರೆಗೂ ಯಾವುದೇ ಮಾಹಿತಿ ಇಲ್ಲ. ಸರ್ವೇ ನಂಬರ್ ಸಹಿತ ಅಧಿಕೃತ ಮಾಹಿತಿ ನೀಡಿದರೆ ಸ್ಥಳ ಪರಿಶೀಲಿಸುವ ಮೂಲಕ ಅಂತಹವರ ಮೇಲೆ ಪ್ರಕರಣ ದಾಖಲಿಸುತ್ತೇನೆ.

- ಎಚ್.ಪಿ. ಮಲ್ಲೇಶ್, ಹಿರಿಯ ಭೂವಿಜ್ಞಾನಿ,ಗಣಿ ಮತ್ತು ಭೂವಿಜ್ಞಾನ ಇಲಾಖೆ, ದಾವಣಗೆರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.