ಗುರುವಾರ , ಜನವರಿ 23, 2020
19 °C

ಕಳಪೆ ಗುಣಮಟ್ಟದ ಎಂಡೋಸಲ್ಫಾನ್‌ಉತ್ಪಾದನೆ- ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಪ್ಪಳ: ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿರುವ ಕೆಪಿಆರ್ ಫರ್ಟಿಲೈಜರ್ಸ್ ಎಂಬ ಕಂಪೆನಿ ಕಳಪೆ ದರ್ಜೆಯ ಎಂಡೋಸಲ್ಫಾನ್ ಉತ್ಪಾದಿಸುತ್ತಿದೆ ಎಂಬ ಹಿನ್ನೆಲೆಯಲ್ಲಿ ಇಲ್ಲಿನ ಜೆಎಂಎಫ್‌ಸಿ ನ್ಯಾಯಾಲಯ ಕಂಪೆನಿಯ ಅನುಪಾಲನಾ ಅಧಿಕಾರಿಗೆ ಒಂದು ವರ್ಷ ಜೈಲು ಶಿಕ್ಷೆ ಹಾಗೂ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.ಒಂದು ವೇಳೆ ದಂಡದ ಮೊತ್ತ 50 ಸಾವಿರ ರೂಪಾಯಿಗಳನ್ನು ಭರಿಸಲು ವಿಫಲವಾದಲ್ಲಿ ಮತ್ತೆ 3 ತಿಂಗಳು ಜೈಲು ಶಿಕ್ಷೆ ಅನುಭವಿಸುವಂತೆ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.ಕಂಪೆನಿ ತಯಾರಿಸುತ್ತಿದ್ದ ಎಂಡೋಸಲ್ಫಾನ್ ಇರುವ ಉತ್ಪನ್ನದಲ್ಲಿ ವಿವಿಧ ರಸಾಯನಿಕ ವಸ್ತುಗಳು ನಿಗದಿತ ಪ್ರಮಾಣಕ್ಕಿಂತ ಅಧಿಕವಾಗಿರುವುದನ್ನು ಬಳ್ಳಾರಿ ಹಾಗೂ ಫರಿದಾಬಾದ್‌ನಲ್ಲಿರುವ ಪ್ರಯೋಗಾಲಯಗಳ ವರದಿಗಳು ದೃಢಪಡಿಸಿದ್ದವು. ಇದರ  ಆಧಾರದ ಮೇಲೆ ಸಹಾಯಕ ಕೃಷಿ ನಿರ್ದೇಶಕಿ ಹಾಗೂ ಕೀಟನಾಶಕಗಳ ನಿರೀಕ್ಷಕಿಯೂ ಆಗಿರುವ ಮಂಜುಳಾ ಬಿ.ರೆಡ್ಡಿ ಇಲ್ಲಿನ ನ್ಯಾಯಾಲಯದಲ್ಲಿ ಕಂಪೆನಿ ವಿರುದ್ಧ 10.1.2011ರಂದು ಮೊಕದ್ದಮೆ ಹೂಡಿದ್ದರು.ಪ್ರಕರಣದ ವಿಚಾರಣೆ ನಡೆಸಿದ ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಲಕ್ಷೀನಾರಾಯಣ ಭಟ್, ಕಂಪೆನಿಯು ಕೀಟನಾಶಕಗಳ ಕಾಯ್ದೆ 1968ಅನ್ನು ಉಲ್ಲಂಘನೆ ಮಾಡಿರುವುದು ಸಾಬೀತಾಗಿದೆ ಎಂದು ಅಭಿಪ್ರಾಯಪಟ್ಟು, ಈ ಮೇಲಿನ ತೀರ್ಪು ನೀಡಿದರು. ಸರ್ಕಾರದ ಪರವಾಗಿ ಸಹಾಯಕ ಸರ್ಕಾರಿ ಅಭಿಯೋಜಕ ಬಿ.ಎಸ್.ಪಾಟೀಲ ವಾದ ಮಂಡಿಸಿದ್ದರು.

 

ಪ್ರತಿಕ್ರಿಯಿಸಿ (+)