ಮಂಗಳವಾರ, ಜೂನ್ 22, 2021
29 °C

ಕಸಾಬ್ ಬೇಕು, ಪತ್ರಕರ್ತರು ಬೇಡ್ವಾ? - ಡಾ.ಜಿ. ಪರಮೇಶ್ವರ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಪತ್ರಕರ್ತರಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾದ ಮಂಡಿಸಬಾರದು ಎಂಬ ವಕೀಲರ ಸಂಘದ ನಿರ್ಧಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್, `ಭಯೋತ್ಪಾದಕ ಕಸಾಬ್ ಪರವಾಗಿಯೂ ವಾದ ಮಾಡುವ ವಕೀಲರಿಗೆ ಮಾಧ್ಯಮ ಪ್ರತಿನಿಧಿಗಳ ಪರ ವಾದ ಮಂಡಿಸಲು ಸಾಧ್ಯವಿಲ್ಲವೇ~ ಎಂದು ಪ್ರಶ್ನಿಸಿದರು.`ಕೆಲವು ವಕೀಲರು ನಡೆಸಿದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪರವಾಗಿ ಬೀದಿಗಿಳಿದು ಪ್ರತಿಭಟಿಸಲೂ ಸಿದ್ಧರಿದ್ದೇವೆ. ವಿಧಾನ ಮಂಡಲದ ಅಧಿವೇಶನದಲ್ಲೂ ವಿಷಯ ಪ್ರಸ್ತಾಪಿಸುತ್ತೇವೆ~ ಎಂದು ಹೇಳಿದ ಅವರು, ಪ್ರಕರಣದ ನಿರ್ವಹಣೆಯಲ್ಲಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರು ವಿಫಲರಾಗಿದ್ದಾರೆ.

ಇದರ ನೈತಿಕ ಹೊಣೆ ಹೊತ್ತು ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಬೇಕು ಎಂದು ಆಗ್ರಹಿಸಿದರು.ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಉಪಚುನಾವಣೆ ನಂತರ ರಾಜ್ಯಪಾಲರನ್ನು ಭೇಟಿ ಮಾಡಿ ಮಾಧ್ಯಮದವರ ಮೇಲಿನ ಹಲ್ಲೆ ವಿರೋಧಿಸಿ ಮನವಿ ಸಲ್ಲಿಸುತ್ತೇವೆ. ಬಹಿಷ್ಕಾರ ಕರೆಗೆ ಸ್ಪಂದಿಸದಿರುವಂತೆ ಕೆಪಿಸಿಸಿ ಕಾನೂನು ಘಟಕವನ್ನು ಕೋರಲಾಗುವುದು ಎಂದು ತಿಳಿಸಿದರು.ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, `ಇದೊಂದು ಅತಿಸೂಕ್ಷ್ಮ ಸನ್ನಿವೇಶ. ಇಂಥ ಸಂದರ್ಭದಲ್ಲಿ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳು, ನಾಡಿನ ಹಿರಿಯ ವಕೀಲರು ಮತ್ತು ಮಾಧ್ಯಮದ ಹಿರಿಯರು ಸಭೆ ಸೇರಿ ಪರಸ್ಪರ ಸಮನ್ವಯ ಸಾಧಿಸುವ ಕುರಿತು ಚರ್ಚಿಸಬೇಕು~ ಎಂದು ಮನವಿ ಮಾಡಿದರು.ನಗರ ಸಿವಿಲ್ ನ್ಯಾಯಾಲಯಗಳ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಘಟನೆಯ ಹಿಂದೆ ರಾಜಕಾರಣಿಗಳ ಕೈವಾಡ ಇದೆ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಲ್ಲದೆ, ಮಾಧ್ಯಮದವರ ಮೇಲೆ ವಕೀಲರು ಹಲ್ಲೆ ನಡೆಸಿದ ಆರಂಭದಲ್ಲಿ ಪೊಲೀಸರು ಮೂಕಪ್ರೇಕ್ಷಕರಾಗಿದ್ದರು. ವಕೀಲರ ಮೇಲೆ ಯಾವುದೇ ಕ್ರಮ ತೆಗೆದುಕೊಳ್ಳದಂತೆ ಮುಖ್ಯಮಂತ್ರಿಗಳೇ ಸಲಹೆ ಮಾಡಿದ್ದರು ಎಂದೂ ಆರೋಪ ಕೇಳಿಬಂದಿದೆ.ಈ ಹಿನ್ನೆಲೆಯಲ್ಲಿ ಘಟನೆ ಕುರಿತು ಸಿಬಿಐ ತನಿಖೆ ಸೂಕ್ತ. ನ್ಯಾಯಾಂಗ ತನಿಖೆಯೇ ಆಗಬೇಕು ಎಂಬುದು ಸರ್ಕಾರದ ಖಚಿತ ನಿಲುವಾದರೆ, ತನಿಖಾ ಆಯೋಗಕ್ಕೆ ಕಾಲಮಿತಿ ನಿಗದಿ ಮಾಡಲಿ ಎಂದು ಹೇಳಿದರು.

ಘಟನೆಯನ್ನು ತಡೆಗಟ್ಟುವಲ್ಲಿ ಸರ್ಕಾರ, ಬೇಹುಗಾರಿಕೆ ದಳ ಸಂಪೂರ್ಣವಾಗಿ ವಿಫಲವಾಗಿವೆ. ಮಾಜಿ ಸಚಿವ ಜಿ. ಜನಾರ್ದನ ರೆಡ್ಡಿ ಅವರನ್ನು ನಗರಕ್ಕೆ ವಿಚಾರಣೆಗೆ ಕರೆತರುತ್ತಾರೆ ಎಂಬುದು ಮೊದಲೇ ಗೊತ್ತಿದ್ದರಿಂದ, ಸರ್ಕಾರ ಸೂಕ್ತ ಭದ್ರತಾ ವ್ಯವಸ್ಥೆ ಕಲ್ಪಿಸಬೇಕಿತ್ತು ಎಂದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.