ಭಾನುವಾರ, ಮೇ 16, 2021
23 °C

ಕಾರ ಹುಣ್ಣಿಮೆ ರಾಸುಗಳ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ ಹುಣ್ಣಿಮೆ ರಾಸುಗಳ ಸಂಭ್ರಮ

ಮುಂಗಾರಿನ ಮೊದಲ ಪಾದ ಶುರುವಾಗಿದೆ. ರೈತರ ಮೊಗದಲ್ಲಿ ಮಂದಹಾಸ. ಇದಕ್ಕೆ ಇಂಬು ಕೊಡುವಂತೆ ಸಕಾಲದಲ್ಲಿ ಒಂದೆರೆಡು ಬಾರಿ ಮಳೆ ಬಂದು ಇಳೆಗೆ ಹೊಸ ಕಳೆ ನೀಡಿವೆ. ಹೊಲಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಈ ಸುಸಮಯದಲ್ಲಿ ರೈತ ಬಿತ್ತನೆಗೆ ಕೈ ಹಾಕುವ ಮುನ್ನ ದೈವ ಸ್ಥಾನ ನೀಡುವ ಭೂ ತಾಯಿಗೆ, ಕೃಷಿಗೆ ಆಧಾರಸ್ಥಂಭವಾಗಿರುವ ರಾಸುಗಳಿಗೆ ಪೂಜಿಸುವುದು ಸನಾತನ ಸಂಪ್ರದಾಯ. ವರ್ಷದುದ್ದಕ್ಕೂ ತನ್ನ ಶ್ರಮದ ಬದುಕಿಗೆ ಹೆಗಲು ಕೊಟ್ಟ ಎತ್ತುಗಳ ಹಿರಿತನಕ್ಕೆ ಗೌರವ ಸೂಚಿಸುವುದು ಈ ಹಬ್ಬದ ವಿಶೇಷ.ಇದು ನಮ್ಮ ಸಂಸ್ಕೃತಿಯಲ್ಲಿ ಪ್ರತಿ ಆಚರಣೆ ಅಧ್ಯಾತ್ಮ, ಭಾವನಾತ್ಮಕವಾಗಿ ಬೆಸದುಕೊಂಡಿರುವುದಕ್ಕೆ ಸಾಕ್ಷಿ. ಈ ಹಬ್ಬವನ್ನು ಬಹುಮುಖ್ಯವಾಗಿ ಉತ್ತರ ಕರ್ನಾಟಕ, ಮಧ್ಯ ಕರ್ನಾಟಕದಲ್ಲಿ ಸಂಭ್ರಮದಿಂದ ಆಚರಿಸಲಾಗುತ್ತದೆ.ಸೃಷ್ಟಿಯ ಸೂಚನೆಯ ಮೇರೆಗೆ ಮುಂಗಾರು ಕಾರ ಹುಣ್ಣಿಮೆಯನ್ನು ಸಂಭ್ರಮದಿಂದಲೇ ಪರಿಚಯಿಸುತ್ತಿದೆ. ಕಾರು ಅಂದರೆ ಚೆಲ್ಲು, ಬೀಳು, ಸುರಿ- ಮಳೆ ಸುರಿಯುವ ಕಾಲ ಎಂದರ್ಥ. ವರ್ಷಪೂರ್ತಿ ರೈತನ ಸೂಚನೆ, ಆಜ್ಞೆಗಳನ್ನು ಪಾಲಿಸಿಕೊಂಡ ಎತ್ತುಗಳು ಈ ಹಬ್ಬದಲ್ಲಿ ರೈತನಿಗೆ ಆರಾಧ್ಯ ದೈವ!ಸುರ ಅಸುರರು ಅಮೃತಕ್ಕಾಗಿ ಮಂಥನಗೈಯುವಾಗ ಇತ್ತ ರಾಕ್ಷಸಿ ಜಗತ್ತನ್ನು ಪೀಡಿಸುತ್ತಿರುವಾಗ, ತಂದೆ ಈಶ್ವರನ ಅಪ್ಪಣೆಯಂತೆ ಹುಣ್ಣಿಮೆ ದಿನದಂದು ನಂದೀಶನು ಆಕೆಯನ್ನು ತನ್ನ ಚೂಪಾದ ಅಂಬುವಿನಿಂದ ತಿವಿದು ಕೊಂದು ಹಾಕಿದನಂತೆ. ಆಗ ಆತನ ಮೈಯೆಲ್ಲಾ ರಾಕ್ಷಸಿ ರಕ್ತ ಹತ್ತಿ ವೀರ ಕಳೆಯಿಂದ ಶೋಭಿಸುತ್ತಾ ಜಗತ್ತಿನ ಕಳಂಕ ತಪ್ಪಿಸಿದ ಠೀವಿಯಿಂದ ಬೀಗುತ್ತಾನೆ. ನಂದೀಶನ ರಾಕ್ಷಸ ಮರ್ದನದ ಸಂಕೇತ ಮತ್ತು ನರಕುಲದ ಹರ್ಷದ ಸಂಕೇತ ಈ ಕಾರಹುಣ್ಣಿಮೆ. ನಂದೀಶನ ವಿಜಯದ ಸಂಕೇತಕ್ಕಾಗಿ ನಂದಿಗಳನ್ನು ಸಿಂಗರಿಸಿ ಕೊಂಬು ಮತ್ತು ಮೈ ತುಂಬ ಜೀರಂಗಿ ಬಣ್ಣ ಹಚ್ಚಿ ಹಬ್ಬ ಆಚರಿಸಲಾಗುತ್ತದೆ.ವಿಶೇಷ ಪೂಜೆ

ಜೇಷ್ಠಮಾಸದ ಹುಣ್ಣಿಮೆಯ ಅನುರಾಧ ನಕ್ಷತ್ರದ ದಿನ ಈ ಹಬ್ಬಕ್ಕಾಗಿ ಎತ್ತುಗಳನ್ನು ಮೈತೊಳೆದು, ಬಣ್ಣ ಹಚ್ಚಿ ಸಿಂಗರಿಸುತ್ತಾರೆ. ರೈತರು ಮನೆಯ ದೇವರ ಕೋಣೆಯಲ್ಲಿ ರತ್ನ ಗಂಬಳಿಯ ಗದ್ದುಗೆ ಮೇಲೆ ಅಕ್ಕಿ ಅಥವಾ ಜೋಳದ ಸಾಸಿವೆಗಳ ಹಿಡಿಯಷ್ಟು ಗುಂಪು ಹಾಕಿದ ಮೇಲೆ ಅದರಲ್ಲಿ ಪೂರ್ವಾಭಿಮುಖವಾಗಿ ಜೋಡಿ ಎತ್ತುಗಳನ್ನು ನಿಲ್ಲಿಸುತ್ತಾರೆ.ಹೀಗೆ ನಿಲ್ಲಿಸಿದ ಎತ್ತುಗಳಿಗೆ ಮುತ್ತೈದೆಯರು ಪೂಜೆ ಸಲ್ಲಿಸಿ, ಹಬ್ಬಕ್ಕಾಗಿಯೇ ಹೋಳಿಗೆ ಸೇರಿದಂತೆ ಇತ್ಯಾದಿ ವಿಶೇಷ ಖಾದ್ಯಗಳನ್ನು ಎಡೆ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಎತ್ತುಗಳ ಮಾಲೀಕರು ಮುತ್ತೈದೆಯರಿಗೆ ಉಡಿ ತುಂಬಿ ಕೃತಜ್ಞತೆ ಸಲ್ಲಿಸುತ್ತಾರೆ.ಹಬ್ಬದ ತಯಾರಿ ಒಂದು ವಾರದಿಂದ ನಡೆದಿರುತ್ತದೆ. ಊರಿನ ಬುಡ್ಡೆಕಲ್ಲು ಬಳಿ ಆಚರಿಸುವ ವಿಶಿಷ್ಟ ಆಚರಣೆ. ಹಾಲುಮತ ಜನರು ಬುಡ್ಡೆಕಲ್ಲು ಬಳಿ ತೆಂಗಿನ ಗರಿಗಳಿಂದ ಚಪ್ಪರ ಹಾಕಿ ಸಿಂಗರಿಸುತ್ತಾರೆ. ಅಲ್ಲಿ ಇಡೀ ಊರಿನ ರೈತರು ತಮ್ಮ-ತಮ್ಮ ಓರಿಗಳನ್ನು ಸಿಂಗಾರಗೊಳಿಸಿ ಕರಿ ಹರಿಯಲಿಕ್ಕೆ ಎತ್ತುಗಳನ್ನು ಜೋಡಿ-ಜೋಡಿಯಾಗಿ ಸಾಲಾಗಿ ಬಿಡುತ್ತಾರೆ.ಇಲ್ಲಿ ಎರಡು ಗೂಟಗಳ ಸಿಂಗಾರಗೊಂಡ ಚಪ್ಪರಕ್ಕೆ ಜೋತು ಹಾಕಿರುವ ಸಿಪ್ಪೆ ತೆಂಗಿನಕಾಯಿ, ಹಪ್ಪಳ, ಗೇರು ಬೀಜ ಇತ್ಯಾದಿಗಳನ್ನು ಒಳಗೊಂಡ ಸರವನ್ನು ನೇತು ಹಾಕಿರುವುದನ್ನು ಯಾವ ಎತ್ತು ತನ್ನ ಕೊಂಬಿನಿಂದ ಛಿದ್ರಗೊಳಿಸುತ್ತದೆಯೋ ಆ ಎತ್ತು ವಿಜಯಶಾಲಿ. ಹೀಗೆ ವಿಜಯ ಸಾಧಿಸಿದ ಎತ್ತಿನ ಬಣ್ಣದ ಮಣ್ಣು, ಬೆಳೆ ಆ ವರ್ಷದಲ್ಲಿ ರೈತನಿಗೆ ವಿಶೇಷ ಫಲ ನೀಡುತ್ತದೆ ಎಂಬ ನಂಬಿಕೆ ಇದೆ. ಎತ್ತುಗಳ ಈ ಸ್ಪರ್ಧೆಯ ಓಟ ನೋಡುಗರನ್ನು ರೋಮಾಂಚನಗೊಳಿಸದೇ ಇರುವುದಿಲ್ಲ.ಸಾಕು ಪ್ರಾಣಿಗಳ ಹಬ್ಬವಿದು

ರಾಸುಗಳು ಮಾತ್ರವಲ್ಲದೇ ಬೆಕ್ಕು, ನಾಯಿ ಸೇರಿದಂತೆ ಇತರೆ ಸಾಕು ಪ್ರಾಣಿಗಳಿಗೂ ರೈತರು ನ್ಯಾಯ ಒದಗಿಸುತ್ತಾರೆ. ಮೂಕ ಪ್ರಾಣಿಗಳೇ ನಮಗೆ ಆಪತ್ಬಾಂಧವರು ಎಂಬ ಮಾನವೀಯ ಮಾತು ಅವರದ್ದು. ಈ ದಿನದಂದು ರೈತರು ಹೊಸದಾಗಿ ರಾಸುಗಳನ್ನು, ಕೃಷಿ ಪರಿಕರಗಳನ್ನು ಖರೀದಿಸುವ ಪರಿಪಾಠವಿದೆ. ಕೆಲವೆಡೆಗಳಲ್ಲಿ ಸ್ಥಳೀಯ ಆರಾಧ್ಯದೈವಗಳ ರಥೋತ್ಸವವನ್ನು ಮಾಡಲಾಗುತ್ತದೆ.`ಕಲ್ತಾಗ ಕಾರಹುಣ್ಣಿಮೆ ಎಂಬ ಮಾತು ಗ್ರಾಮೀಣ ಭಾಗದಲ್ಲಿ ಪ್ರಚಲಿತದಲ್ಲಿದೆ. ಕಾರಹುಣ್ಣಿಮೆ ಹಬ್ಬವು 15 ದಿನಗಳವರೆಗೆ, ಅಂದರೆ ಅಮವಾಸ್ಯೆ ನಡುವಿನ ಅವಧಿಯಲ್ಲಿ ರೈತರು ತಮಗೆ ಸಮಯ ಸಿಕ್ಕಾಗ ಆಚರಿಸಬಹುದು. ಮುಖ್ಯವಾಗಿ ಗುರುವಾರ, ಸೋಮವಾರ ಕಾರಹುಣ್ಣಿಮೆ ಆಚರಿಸುವ ಪದ್ಧತಿ ಇದೆ. ಆಧುನಿಕ ಭರಾಟೆಯಲ್ಲಿ ರೈತರೂ ಕೂಡ ಸಾಂಸ್ಕೃತಿಕ ಹಬ್ಬ ಆಚರಣೆಗಳನ್ನು ಕ್ರಮಬದ್ಧವಾಗಿ ಆಚರಿಸುವುದು ತೀರ ದುರ್ಲಭವಾಗಿದೆ ಎಂಬ ಆತಂಕ ಹಿರಿಯ ಜೀವಗಳದ್ದು.ಮಣ್ಣೆತ್ತಿನ ಅಮವಾಸ್ಯೆ

ಕಾರಹುಣ್ಣಿಮೆ ಹಬ್ಬದ ಅವಧಿ ಮುಗಿದ ಮರು ದಿನವೇ ಮಣ್ಣೆತ್ತಿನ ಅಮವಾಸ್ಯೆ. ಅಂದು ಕುಂಬಾರರು ಮನೆಯಿಂದ ಮಣ್ಣು ಮತ್ತು ದವಸಗಳಿಂದ ಮಾಡಿದ ಜೋಡಿ ಎತ್ತುಗಳ ಮೂರ್ತಿಗಳನ್ನು ತಂದು ವಿಧಿವತ್ತಾಗಿ ಪ್ರತಿಷ್ಠಾಪಿಸುತ್ತಾರೆ. ಇದಕ್ಕೆ ವಿಶೇಷ ಖಾದ್ಯಗಳನ್ನು ತಯಾರಿಸಿ ಎಡೆ ಮಾಡುತ್ತಾರೆ. ಈ ವೇಳೆ ರೈತರು ಇಷ್ಟ ದೇವರು, ಮನೆ ದೇವರು, ರಾಸುಗಳನ್ನು ಪೂಜಿಸುತ್ತಾರೆ.ಜೋಡೆತ್ತಿಗೆ ಮಾಡಿದ ಎಡೆಯನ್ನು ನೀರಿನ ತಂಬಿಗೆಯಲ್ಲಿ ಹಾಕಿಕೊಂಡು ಹೊಲಗಳಿಗೆ ಪ್ರೋಕ್ಷಿಸುತ್ತಾರೆ. ಇದರಿಂದ ದುಷ್ಟ ಗ್ರಹಗಳ ಬಾಧೆ, ದುಷ್ಟ ಶಕ್ತಿಗಳ ದೃಷ್ಟಿ ರಾಸುಗಳ ಮೇಲೆ ಹಾಗೂ ಭೂಮಿ, ಬೆಳೆಗಳ ಮೇಲೆ ಬೀಳದಿರಲೆಂಬ ಆಶಯ ರೈತರದ್ದು. ಸಂಜೆ ಜೋಡೆತ್ತುಗಳನ್ನು ಸ್ಥಳೀಯ ಬಾವಿಯಲ್ಲಿ ವಿಧಿವತ್ತಾಗಿ ಹಾಕಿ ಮಣ್ಣೆತ್ತಿನ ಅಮವಾಸ್ಯೆಗೆ ಮಂಗಳ ಹಾಡುತ್ತಾರೆ. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.