ಗುರುವಾರ , ಜೂನ್ 17, 2021
29 °C

ಕಾಲುವೆಗೆ ನೀರು ಹರಿಸಲು ಆಗ್ರಹಿಸಿ ಮುತ್ತಿಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ: ನಾರಾಯಣಪುರ ಬಲದಂಡೆ ನಾಲೆ ಮತ್ತು ರಾಂಪೂರ ಏತ ನೀರಾವರಿ ಯೋಜನೆ ವ್ಯಾಪ್ತಿ ನಾಲೆಗಳಿಗೆ ಮಾರ್ಚ್ 25ರ ವರೆಗೆ ನೀರು ಹರಿಸಲು ಸರ್ಕಾರದ ಮೇಲೆ ಒತ್ತಡ ತರುವಂತೆ ಆಗ್ರಹಿಸಿ ಶುಕ್ರವಾರ ಬಸವಸಾಗರ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಶಾಸಕ ಮಾನಪ್ಪ ವಜ್ಜಲ ಅವರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದ ಪ್ರಸಂಗ ಜರುಗಿತು.



ನಾರಾನಣಪುರ ಅಣೆಕಟ್ಟೆ ವ್ಯಾಪ್ತಿಯಲ್ಲಿ ನೀರು ಸಂಗ್ರಹಗೊಂಡಿದ್ದರು ಕೂಡ ಅಣೆಕಟ್ಟೆ ವಿಭಾಗದ ಅಧಿಕಾರಿಗಳು ಅನ್ಯ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಪತ್ರದ ನೆಪ ಹೇಳುತ್ತ ಈ ಭಾಗದ ರೈತರ ಜಮೀನಿಗೆ ನೀರು ಹರಿಸುವುದನ್ನು ಸ್ಥಗಿತಗೊಳಿಸಿದ್ದಾರೆ. ಶಾಸಕರಾದ ತಾವು ಈ ಪ್ರದೇಶದ ರೈತರ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು ನೀರು ಹರಿಸಲು ಸಹಕರಿಸುವಂತೆ ಒತ್ತಾಯಿಸಿದರು.



ಕೃಷಿ ಇಲಾಖೆ ಬಿತ್ತನೆ ಸಂದರ್ಭದಲ್ಲಿ ತಡವಾಗಿ ಶೇಂಗಾ ಬೀಜ ವಿತರಿಸಿದ್ದರ ಪರಿಣಾಮ ಶೇಂಗಾ ಬೆಳೆ ಒಣಗುತ್ತಿವೆ. ಕಡಿಮೆ ನೀರಿನ ಬೆಳೆಗಳಿಗೂ ಕೂಡ ಸಮರ್ಪಕ ನೀರು ನೀಡುವಲ್ಲಿ ಅಧಿಕಾರಿವರ್ಗ ವಿಫಲವಾಗಿದೆ. ಬೇಸಿಗೆ ಬಿಸಿಲು ದಿನದಿಂದ ದಿನಕ್ಕೆ ಏರುತ್ತಿದೆ. ಹಳ್ಳ, ಕೊಳ್ಳ, ನಾಲಾಗಳು ಬತ್ತಿದ್ದರಿಂದ ಜಾನುವಾರುಗಳಿಗೆ ಕುಡಿಯಲು ನೀರು ದೊರೆಯುತ್ತಿಲ್ಲ ಎಂದು ಗಮನ ಸೆಳೆದರು.



ಭರವಸೆ: ಪ್ರಸಕ್ತ ವರ್ಷ ಮಳೆಗಾಲದ ಅಭಾವದಿಂದ ಅಣೆಕಟ್ಟೆಗಳಲ್ಲಿ ನೀರು ಸಂಗ್ರಹಣೆ ಕೊರತೆ ಎದುರಾಗಿದೆ. ಈ ಕುರಿತಂತೆ ನೀರಾವರಿ ಸಚಿವರೊಂದಿಗೆ ಮಾತುಕತೆ ನಡೆಸಿ ಹೆಚ್ಚಿನ ಅವಧಿಗೆ ನೀರು ಹರಿಸಲಾಗಿತ್ತು. ಈಗ ಪುನಃ ರೈತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಸಂಬಂಧಿಸಿದವರೊಂದಿಗೆ ಮಾತುಕತೆ ನಡೆಸಿ ನೀರಿನ ಲಭ್ಯತೆ ಆಧರಿಸಿ ನೀರು ಹರಿಸಲು ಪ್ರಯತ್ನಿಸುವುದಾಗಿ ಶಾಸಕ ಮಾನಪ್ಪ ವಜ್ಜಲ ಭರವಸೆ ನೀಡಿದರು.



ಮುತ್ತಿಗೆ ನೇತೃತ್ವವನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಗೌರವಾಧ್ಯಕ್ಷ ಅಮರಣ್ಣ ಗುಡಿಹಾಳ, ತಾಲ್ಲೂಕು ಅಧ್ಯಕ್ಷ ಅಮರೇಶ ಮಾರಲದಿನ್ನಿ, ಮುಖಂಡರಾದ ಹನುಮಪ್ಪ ಯಡಹಳ್ಳಿ, ಸಂಗಣ್ಣ ಮುದಗಲ್ಲ, ಚಂದಾವಲಿ, ಕುಪ್ಪಣ್ಣ ಗೋನವಾಟ್ಲ, ಹನುಮಂತಪ್ಪ, ಶೇಖರಪ್ಪ ಹೂಗಾರ, ಶೇಖರಗೌಡ, ಬಸಪ್ಪ ಹಾಲಭಾವಿ, ಶಿವಣ್ಣ ಭೂಪುರ, ಗ್ಯಾನಪ್ಪ ಗುಡಿಹಾಳ, ಮಲ್ಲಿಕಾರ್ಜುನ, ಅಮರಯ್ಯಸ್ವಾಮಿ, ಆದಪ್ಪ, ಯಂಕಣ್ಣ ಮತ್ತಿತರರು ವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.