ಭಾನುವಾರ, ಮೇ 22, 2022
21 °C
`ನಾಲ್ಕನೇ ಆಯಾಮ' ಸಂಪುಟ ಬಿಡುಗಡೆ: ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯ

ಕಾಲ ಬದಲಾದರೂ ರಾಜಕೀಯ ಬದಲಾಗದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಾಲ ಬದಲಾದರೂ ರಾಜಕೀಯ ಬದಲಾಗುವುದಿಲ್ಲ. ಪಾತ್ರಗಳು ಬದಲಾಗುತ್ತವೆ. ಆದರೆ, ರಾಜಕೀಯ ಹಾಗೆಯೇ ಇರುತ್ತದೆ ಎಂದು ಶಾಸಕ ವೈಎಸ್‌ವಿ ದತ್ತ ಅಭಿಪ್ರಾಯಪಟ್ಟರು.ವಸಂತ ಪ್ರಕಾಶನ ನಗರದಲ್ಲಿ ಶನಿವಾರ ಏರ್ಪಡಿಸಿದ್ದ `ಪ್ರಜಾವಾಣಿ' ಕಾರ್ಯನಿರ್ವಾಹಕ ಸಂಪಾದಕ ಪದ್ಮರಾಜ ದಂಡಾವತಿ ಅವರ `ನಾಲ್ಕನೇ ಆಯಾಮ' ಅಂಕಣ ಬರಹಗಳ ಐದು ಮತ್ತು ಆರನೇ ಸಂಪುಟಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು. ಹಿಂದಿನ ಸರ್ಕಾರದಲ್ಲಿ ನಡೆದ ಘಟನೆಗಳು ಈಗಿನ ಸರ್ಕಾರದಲ್ಲಿ ನಡೆಯುವುದಿಲ್ಲ ಎಂದು ಭಾವಿಸಲು ಆಗದು ಎಂದು ಹೇಳಿದರು.ರಾಜಕೀಯ ಸಂಪುಟದ ಪ್ರಸ್ತುತತೆ ಕುರಿತು ಮಾತನಾಡಿದ ಅವರು `ವಿಶ್ವೇಶ್ವರಯ್ಯನವರು 1909ರಲ್ಲಿ ಕನ್ನಂಬಾಡಿ ಕಟ್ಟುವಾಗ ಎದ್ದ ಹಣಕಾಸಿನ ಪ್ರಶ್ನೆ, 1985ರಲ್ಲಿ ಎಚ್.ಡಿ ದೇವೇಗೌಡರು ಕಾವೇರಿ-ಕೃಷ್ಣಾ ಯೋಜನೆ ಅನುಷ್ಠಾನಕ್ಕೆ ಮುಂದಾದಾಗಲೂ ಎದ್ದಿತ್ತು, ಎರಡೂ ಸಂದರ್ಭದಲ್ಲಿ ಹಣಕಾಸು ಇಲಾಖೆ ಹಣ ನೀಡಲು ತಕರಾರು ಎತ್ತಿತ್ತು; ಈಗ 2013ರಲ್ಲಿ ಪ್ರಧಾನಿ ಮನಮೋಹನ್ ಸಿಂಗ್ ಸಹ ಹಣ ಬಿಡುವ ಗಿಡ ಇಲ್ಲ, ಎಚ್ಚರಿಕೆಯಿಂದ ಖರ್ಚು ಮಾಡಬೇಕು ಎನ್ನುವ ಹೇಳಿಕೆ ನೀಡಿದ್ದಾರೆ. ವ್ಯಕ್ತಿಗಳು ಬದಲಾದರೂ ಮನಸ್ಥಿತಿ ಒಂದೇ ಆಗಿರುತ್ತದೆ' ಎಂದು ಅವರು ನೆನಪಿಸಿದರು.ಕೃತಿ ಬಿಡುಗಡೆ ಮಾಡಿದ ನಟ ರಮೇಶ್ ಅರವಿಂದ್, `ಆದರ್ಶ ಸಮಾಜ ಮತ್ತು ಮಾದರಿ ವ್ಯಕ್ತಿ ಹೇಗಿರಬೇಕು ಎನ್ನುವುದೇ ಈ ಸಂಪುಟಗಳ ಆಶಯವಾಗಿದೆ. ಬದುಕಿನ ಅನುಭವವನ್ನೇ ಬರಹ ರೂಪಕ್ಕೆ ಇಲ್ಲಿ ಇಳಿಸಲಾಗಿದ್ದು ಸಮಾಜದ ಮನಸ್ಸಾಕ್ಷಿಯನ್ನು ಓದುಗರ ಮುಂದೆ ಮಂಡಿಸಲಾಗಿದೆ' ಎಂದು ಹೇಳಿದರು.ಅಂಕಣದ ಸಾಂಸ್ಕೃತಿಕ ಬರಹಗಳ ಸಂಪುಟ ಕುರಿತು ಮಾತನಾಡಿದ ಕಥೆಗಾರ ವಿವೇಕ ಶಾನಭಾಗ್, `ಪತ್ರಕರ್ತರಿಗೆ ವೃತ್ತಿ ಕೌಶಲ ಮಾತ್ರ ಗೊತ್ತಿರುತ್ತದೆ. ಅದರ ಆಧಾರದ ಮೇಲೆ ಪ್ರತಿಯೊಂದನ್ನು ಗ್ರಹಿಸಿ ಬರೆಯುತ್ತಾರೆ. ಆದರೆ, `ನಾಲ್ಕನೇ ಆಯಾಮ'ದ ಬರಹಗಳಲ್ಲಿ ಆಳವಾದ ಜೀವನ ಪ್ರೀತಿ ಇದೆ. ವಸ್ತು ವಿಸ್ತಾರ ದೊಡ್ಡದಿದೆ' ಎಂದು ಅಭಿಪ್ರಾಯಪಟ್ಟರು.`ಸಾಂಸ್ಕೃತಿಕ ಜಗತ್ತಿನಲ್ಲಿ `ಪ್ರಜಾವಾಣಿ'ಗೆ ತನ್ನದೇ ಆದ ಬಲು ಮಹತ್ವದ ಸ್ಥಾನ ಇದೆ. ನಾಡಿನ ಸಾಂಸ್ಕೃತಿಕ ರಂಗದ ಬೆಳವಣಿಗೆಯಲ್ಲಿ ಪೋಷಕನಾಗಿ ನಿಂತಿದೆ ಪತ್ರಿಕೆ. ಅದರ ಅಸ್ಮಿತೆಯನ್ನು ಸರಿಯಾಗಿ ಗ್ರಹಿಸಿರುವ ಇಲ್ಲಿನ ಬರವಣಿಗೆ ಕೂಡ ಅಷ್ಟೇ ಎತ್ತರದಲ್ಲಿದೆ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. `ದೈನಂದಿನ ಮತ್ತು ನಿರಂತರ ಗುಣಗಳೆರಡೂ ಮೇಳೈಸಿರುವ ಅಂಕಣದಲ್ಲಿ ಯಾವುದನ್ನೂ ಹೇಳಲು ಹಿಂಜರಿಯದ ಧೈರ್ಯ ಇದೆ. ಆತ್ಮ ನಿರೀಕ್ಷೆಯೂ ಇದೆ' ಎಂದರು.`ರಾಜಕಾರಣಿಗಳು ವೈಯಕ್ತಿಕವಾಗಿ ಹಾಳಾದರೆ ಚಿಂತೆ ಇಲ್ಲ; ಆದರೆ ಅವರು ನಾಡನ್ನು ಹಾಳು ಮಾಡುವುದು ಬೇಡ ಎನ್ನುವುದಷ್ಟೇ ನನ್ನ ಬರಹದ ಉದ್ದೇಶ. ಜನರ ಭಾವನೆಗಳಿಗೆ ನಾನು ಧ್ವನಿಯಾಗಲು ಪ್ರಯತ್ನಿಸಿದ್ದೇನೆ ಅಷ್ಟೇ' ಎಂದು ಲೇಖಕ ಪದ್ಮರಾಜ ದಂಡಾವತಿ ಹೇಳಿದರು. ಡಿ.ವಿ.ಪ್ರಹ್ಲಾದ್ ಕಾರ್ಯಕ್ರಮ ನಿರೂಪಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.