ಸೋಮವಾರ, ಮೇ 23, 2022
20 °C

ಕಾಶ್ಮೀರ ಪಂಡಿತರ ಜತೆ ಮಾತುಕತೆ: ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಗಳೂರು: ನಿರಾಶ್ರಿತರಾಗಿರುವ ಕಾಶ್ಮೀರಿ ಪಂಡಿತರ ಸಂಘಟನೆಗಳ ಜತೆ ಕೇಂದ್ರ ಸರ್ಕಾರ ಮಾತುಕತೆ ನಡೆಸಿ ಅವರ ಸಮಸ್ಯೆ ಬಗೆಹರಿಸಿ ಮೊದಲಿನಂತೆ ಕಣಿವೆಯಲ್ಲಿ ಪ್ರತ್ಯೇಕವಾಗಿ ನೆಲೆಸಲು ಅವಕಾಶ ಮಾಡಿಕೊಡಬೇಕು. ಅದಕ್ಕೆ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನ ನೀಡಬೇಕು ಎಂದು ಪನೂನ್ ಕಾಶ್ಮೀರ್ ಸಂಘಟನೆಯ ಅಧ್ಯಕ್ಷ ಅಶ್ವನಿ ಕುಮಾರ್ ಚ್ರುಂಗೊ ಒತ್ತಾಯಿಸಿದರು.ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಝೀಲಂ ನದಿಯ ಉತ್ತರ ಮತ್ತು ಪೂರ್ವ ಭಾಗದ ಮಧ್ಯೆಯಿರುವ ಪ್ರದೇಶದಲ್ಲಿ ನೆಲೆಸಲು ಅವಕಾಶ ಮಾಡಿಕೊಡಬೇಕು ಎಂದು ಆಗ್ರಹಿಸಿದರು.ಕಾಶ್ಮೀರ ಕಣಿವೆಯಲ್ಲಿ ಉಗ್ರರ ಮತ್ತು ಸ್ಥಳೀಯ ದಾಳಿಕೋರರಿಂದಾಗಿ ಕಾಶ್ಮೀರಿ ಪಂಡಿತರು ತಮ್ಮದೇ ನೆಲದಿಂದ ವಲಸೆ ಹೋಗಬೇಕಾಯಿತು. ಪ್ರತ್ಯೇಕತಾವಾದ ತೀವ್ರವಾದ ಬಳಿಕ 1989-90ರಿಂದೀಚೆಗೆ 4 ಲಕ್ಷ ಪಂಡಿತರು ಕಣಿವೆ ತೊರೆಯಬೇಕಾಯಿತು. ಈ ಅವಧಿಯಲ್ಲಿ ಒಂದು ಸಾವಿರ ಪಂಡಿತರನ್ನು ಕೊಲ್ಲಲಾಯಿತು.

 

30 ಸಾವಿರ ಮನೆಗಳನ್ನು ಸುಟ್ಟುಹಾಕಲಾಯಿತು. ಈಗ ಹೆಚ್ಚೆಂದರೆ 500 ಕುಟುಂಬಗಳ 2000 ಮಂದಿ ಪಂಡಿತರು ಉಳಿದಿರಬಹುದು ಎಂದು ಅವರು ಹೇಳಿದರು.ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ ಸುಧಾರಿಸಿಲ್ಲ. ಪಾಕ್ ಬೆಂಬಲಿತ ನುಸುಳುಕೋರರು ಮತ್ತು ಉಗ್ರರಿಂದಾಗಿ ಕಳೆದ ಎರಡು ತಿಂಗಳ ಅವಧಿಯಲ್ಲಿ 19 ಯೋಧರು ಹತರಾಗಬೇಕಾಯಿತು.ಕೇಂದ್ರ ಸರ್ಕಾರದ ನೀತಿ ಇದಕ್ಕೆ ಕಾರಣ. ಪ್ರಮುಖ ಪಕ್ಷಗಳಾದ ನ್ಯಾಷನಲ್ ಕಾನ್ಫರೆನ್ಸ್ ಮತ್ತು ಪಿಡಿಪಿ ರಾಜಕೀಯ ಲಾಭಕ್ಕೆ ಮುಂದಾಗುತ್ತಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಪನೂನ್ ಕಾಶ್ಮೀರ ಸಂಘಟನೆ, ದೇಶದಾದ್ಯಂತ ಕಾಶ್ಮೀರ ಹಾಗೂ ಅಲ್ಲಿನ ಮೂಲ ನಿವಾಸಿ ಪಂಡಿತರ ದುಃಸ್ಥಿತಿಯ ಕುರಿತು ಜಾಗೃತಿ ಉಂಟು ಮಾಡುತ್ತಿದೆ ಎಂದರು.ಶ್ರೀನಗರ ಹಾಗೂ ಇತರ ಪ್ರದೇಶಗಳಲ್ಲಿ ಯೋಧರು ದೌರ್ಜನ್ಯ ನಡೆಸುತ್ತಿದ್ದಾರೆ ಎಂಬ ಆರೋಪಗಳು ಸುಳ್ಳು. ಇಲ್ಲಿಯವರೆಗೆ ತನಿಖೆಯಾದ ಪ್ರಕರಣಗಳಲ್ಲಿ ಶೇ. 2ರಷ್ಟು ಕೂಡ ಸಾಬೀತು ಆಗಿಲ್ಲ ಎಂದು ಅಶ್ವನಿ ಕುಮಾರ್ ಹೇಳಿದರು.ಇಷ್ಟಿದ್ದರೂ, ರಾಜ್ಯದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ ಎಂದು ಒಪ್ಪಿಕೊಂಡ ಅವರು, ನ್ಯಾಯಯುತ ಮತ್ತು ಅಕ್ರಮ ಮಾರ್ಗದಲ್ಲಿ ಹರಿದುಬಂದ ಹಣದಿಂದ ಇದು ಸಾಧ್ಯವಾಗಿದೆ ಎಂದು ವಿಶ್ಲೇಷಿಸಿದರು.ದಕ್ಷಿಣ ಕನ್ನಡ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿಯ ರಮಾನಂದ ಗೌಡ, ಮಲ್ಲಿಕಾರ್ಜುನ ಜತೆಗೆ ಅನಂತ ಕಾಮತ್ ಹಾಗೂ ವೆಂಕಟೇಶ ಬಾಳಿಗಾ ಪತ್ರಿಕಾಗೋಷ್ಠಿಯಲ್ಲಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.