ಶುಕ್ರವಾರ, ಮೇ 20, 2022
27 °C

ಕಿತ್ತೂರು ಉತ್ಸವಕ್ಕೆ ಬಹಿಷ್ಕಾರವಿಲ್ಲ; ಹೋರಾಟ ಅಬಾಧಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚನ್ನಮ್ಮನ ಕಿತ್ತೂರು: ಇದೇ 23ರಿಂದ ಆರಂಭಗೊಳ್ಳಲಿರುವ ಐತಿಹಾಸಿಕ ಕಿತ್ತೂರು ಉತ್ಸವ ಆಚರಣೆಗೆ ಬಹಿಷ್ಕಾರ ಹಾಕುವ ನಿರ್ಧಾರವನ್ನು ಕಿತ್ತೂರು ಸ್ಮಾರಕ ಸಂರಕ್ಷಣಾ ಸಮಿತಿ ಪದಾಧಿಕಾರಿಗಳು ಕೈಬಿಟ್ಟಿದ್ದಾರೆ. ಆದರೆ  `ಅತಿಕ್ರಮಣ ತೆರವು ಹಾಗೂ ಸ್ಮಾರಕ ರಕ್ಷಣೆಗಾಗಿ ಹೋರಾಟ ಮುಂದುವರೆಸುವುದಾಗಿ~ ಹೇಳಿದ್ದಾರೆ.ಸಮಿತಿಯ ಗೌರವಾಧ್ಯಕ್ಷ ಹಾಗೂ ಶ್ರೀರಾಮಸೇನಾ ಸಂಸ್ಥಾಪಕ ಪ್ರಮೋದ ಮುತಾಲಿತ ಹಾಗೂ ಸ್ಥಳೀಯ ರಾಜಗುರು ಸಂಸ್ಥಾನ ಕಲ್ಮಠದ ಪೀಠಾಧೀಶ ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ ಜೊತೆ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಬಗ್ಗೆ ಸೋಮವಾರ ನಡೆದ ಚರ್ಚೆಯಲ್ಲಿ ಈ ವಿಷಯವನ್ನು ಮುತಾಲಿಕ ತಿಳಿಸಿದರು.`ಕಿತ್ತೂರು ಕೋಟೆಯ ಸುತ್ತಲಿನ ಅತಿಕ್ರಮಣ ತೆರವು, ರಾಣಿ ಚನ್ನಮ್ಮನ ಜನ್ಮಸ್ಥಳ ಕಾಕತಿ, ಬೈಲಹೊಂಗಲದಲ್ಲಿಯ ಸಮಾಧಿ ಸ್ಥಳ, ವೀರಯೋಧ ರಾಯಣ್ಣನ ಸಂಗೊಳ್ಳಿ, ಬಾಳಪ್ಪನ ಅಮಟೂರು, ನಂದಗಡದ ರಾಯಣ್ಣನ ಹುತಾತ್ಮ ಸ್ಥಳವನ್ನು ಯುವಪೀಳಿಗೆಗೆ ಪ್ರೇರಣೆ ನೀಡುವ ರೀತಿಯಲ್ಲಿ ಅಭಿವೃದ್ಧಿ ಪಡಿಸುವಂತೆ ಆಗ್ರಹಿಸಿ ಇದೇ 10ರಂದು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನಾ ಧರಣಿ ನಡೆಸಲಾಗುವುದು~ ಎಂದು ಘೋಷಿಸಿದರು.`ಸಂಸ್ಥಾನ ರಕ್ಷಣೆ, ಅದಕ್ಕೆ ಸಂಬಂಧಪಟ್ಟ ಯೋಧರ ವಿವಿಧ ಗ್ರಾಮಗಳ ಅಭಿವೃದ್ಧಿ, ಅತಿಕ್ರಮಣ ತೆರವಿನ ಬಗ್ಗೆ ತಾಳ್ಮೆಯಿಂದ ಕೇಳುವ ಸೌಜನ್ಯವೂ ಜಿಲ್ಲಾ ಉಸ್ತುವಾರಿ ಸಚಿವ ಉಮೇಶ ಕತ್ತಿ ಅವರಿಗಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಅವರು ಹಸಿಸುಳ್ಳುಗಳನ್ನು ಹೇಳುತ್ತಿದ್ದಾರೆ. ಇದು ಇಂದಿನ ರಾಜಕಾರಣಿಗಳ ವರ್ತನೆಯಾಗಿದೆ~ ಎಂದು ತರಾಟೆಗೆ ತೆಗೆದುಕೊಂಡರು.`ಕಂದಕ ಮುಚ್ಚಿ ವಾಣಿಜ್ಯ ಸಮುಚ್ಚಯ ಕಟ್ಟಲಾಗುತ್ತಿದೆ ಎಂದು ಪ್ರಾಚ್ಯವಸ್ತು ಇಲಾಖೆ ಇಲ್ಲಿಯ ವಿಶೇಷ ತಹಸೀಲ್ದಾರ್‌ಗೆ ತಿಳಿಸಿದ್ದರೂ ಗಮನ ಹರಿಸಲಿಲ್ಲ. ಜಿಲ್ಲಾಧಿಕಾರಿಗಳೂ ಕಿವಿಯ ಮೇಲೆ ಹಾಕಿಕೊಳ್ಳಲಿಲ್ಲ. ಹೀಗಾಗಿ ಮುಖ್ಯಮಂತ್ರಿವರೆಗೂ ಈ ವಿಷಯವನ್ನು ಕೊಂಡೊಯ್ಯಬೇಕಾಗಿ ಬಂತು~ ಎಂದು ವಿವರಿಸಿದರು.`ಮುಖ್ಯಮಂತ್ರಿ ಸದಾನಂದಗೌಡರು ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ವಿವರಣೆ ಪಡೆದು ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಅತಿಕ್ರಮಣ ಹಾಗೂ ಸಂಸ್ಥಾನ ರಕ್ಷಣೆಯ ವಿಷಯವನ್ನು ಸಂಶೋಧಕ ಚಿದಾನಂದಮೂರ್ತಿ, ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆಯಾದ ಚಂದ್ರಶೇಖರ ಕಂಬಾರ ಅವರು ಮುಂದೆಯೂ ಚರ್ಚಿಸಲಾಗಿದೆ~ ಎಂದು ಮಾಹಿತಿ ನೀಡಿದರು.`ಉತ್ಸವಕ್ಕೆ ಚಾಲನೆ ನೀಡಲು ಕಂಬಾರ ಅವರೇ ಆಗಮಿಸುವ ನಿರೀಕ್ಷೆಯಿದ್ದು, ಇವೆಲ್ಲ ಬೇಡಿಕೆಗಳನ್ನು ಈಡೇರಿಸುವ ಭರವಸೆ ಸಂಬಂಧಿಸಿದವರಿಂದ ಸಿಕ್ಕರೆ ಮಾತ್ರ ಅವರು ಇಲ್ಲಿಗೆ ಆಗಮಿಸಬೇಕು~ ಎಂದು ಮನವಿ ಮಾಡಿದರು.

`ಸ್ಮಾರಕದಿಂದ ನೂರು ಮೀಟರ್ ನಿಷೇಧಿತ ಮತ್ತು ಎರಡು ನೂರು ಮೀಟರ್ ನಿರ್ಬಂಧಿತ ಪ್ರದೇಶ ಅಳತೆ ಮಾಡುವಾಗ ಸಮಿತಿ ಸದಸ್ಯರಿಗೂ ತಿಳಿಸಬೇಕು. ಎಲ್ಲಿಂದಲೊ ಅಳೆದು ನೂರು ಮೀಟರ್ ತೋರಿಸುವ ಇಲಾಖೆಯ ಕ್ರಮವನ್ನು ಯಾರೂ ಒಪ್ಪವುದಿಲ್ಲ~ ಎಂದು ಹೇಳಿದರು.ರಾಜಗುರು ಮಡಿವಾಳ ರಾಜಯೋಗೀಂದ್ರ ಸ್ವಾಮೀಜಿ, `ಸ್ಮಾರಕಗಳ ರಕ್ಷಣೆ ಮತ್ತು ಬಿಡುಗಡೆ ಮಾಡುವ ಸಹಾಯಧನದ ಸದ್ಬಳಕೆ ಆಗಬೇಕು ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ,  ಮೊದಲು ಪ್ರಾಚ್ಯವಸ್ತು ಇಲಾಖೆ ಸ್ಮಾರಕದ ಅಂಚನ್ನು ನಿಗದಿಪಡಿಸಬೇಕು~ ಎಂದು ಅಭಿಪ್ರಾಯಪಟ್ಟರು.ರಾಜ ವಂಶಸ್ಥರಾದ ಉದಯಕುಮಾರ ದೇಸಾಯಿ, ಸೋಮಶೇಖರ ದೇಸಾಯಿ, ಸಮಿತಿ ಪದಾಧಿಕಾರಿಗಳಾದ ಜಿ. ಪಂ. ಮಾಜಿ ಸದಸ್ಯ ಶಿವನಸಿಂಗ್ ಮೊಕಾಶಿ, ಬಸನಗೌಡ ಪಾಟೀಲ, ಮಲ್ಲಿಕಾರ್ಜುನ ಕೊಡೊಳ್ಳಿ, ಚನ್ನಪಗೌಡ್ರ ಕಾದ್ರೊಳ್ಳಿ, ಮೋಹನ ದಡ್ಡಿ ಸೇರಿದಂತೆ ಇತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.