ಗುರುವಾರ , ಮೇ 19, 2022
20 °C

ಕುರುಪ್‌ಗೆ ಜ್ಞಾನಪೀಠ ಪ್ರಶಸ್ತಿ ಪ್ರದಾನ.

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತಿರುವನಂತಪುರಂ (ಪಿಟಿಐ): ಪ್ರಧಾನಿ ಮನಮೋಹನ್ ಸಿಂಗ್ ಅವರು ಶುಕ್ರವಾರ ಇಲ್ಲಿ 2007ನೇ ಸಾಲಿಗಾಗಿ ಮಲಯಾಳಂನ ಪ್ರಖ್ಯಾತ ಕವಿ ಒ.ಎನ್.ವಿ. ಕುರುಪ್ ಅವರಿಗೆ 43ನೇ ಜ್ಞಾನಪೀಠ ಪ್ರಶಸ್ತಿಯನ್ನು ಪ್ರದಾನ ಮಾಡಿದರು.ಇಲ್ಲಿನ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ನಡೆದ ಸಮಾರಂಭದಲ್ಲಿ ನಂತರ ಮಾತನಾಡಿದ ಅವರು ಭಾರತೀಯ ಭಾಷೆಗಳಲ್ಲಿ ಸಾಹಿತ್ಯಕ್ಕೆ ಉತ್ತೇಜನ ನೀಡಬೇಕಿದೆ ಎಂದರು.‘ಭಾರತೀಯ ಭಾಷೆಗಳಲ್ಲಿ ಬಂದಿರುವ ಉತ್ತಮ ಕೃತಿಗಳು ಭಾಷಾಂತರದ ಮೂಲಕ ಎಲ್ಲರಿಗೆ ತಲುಪುವಂತೆ ಮಾಡಬೇಕು. ಇತ್ತೀಚಿನ ವರ್ಷಗಳಲ್ಲಿ ಇಂಗ್ಲಿಷ್‌ನಲ್ಲಿ ಬರೆಯುವ ಭಾರತೀಯ ಲೇಖಕರು ರಾಷ್ಟ್ರದಲ್ಲಿ ಮತ್ತು ವಿದೇಶಗಳಲ್ಲಿ ಹೆಸರು ಗಳಿಸಿದ್ದಾರೆ.ಇತರ ಭಾರತೀಯ ಭಾಷೆಗಳ ಸಾಹಿತ್ಯ ಪ್ರತಿಭೆಗಳು ಕೂಡ ಮಾನ್ಯತೆ ಪಡೆಯಬೇಕಿದೆ’ ಎಂದು ನುಡಿದರು.‘ಕುರುಪ್ ಅವರ ಕವಿತೆಗಳು ಬಂಗಾಳಿ ಅಥವಾ ಮರಾಠಿಯಲ್ಲಿ ಲಭಿಸುವಂತೆ ಆಗಬೇಕು. ಸಾಹಿತ್ಯ ಅಕಾಡೆಮಿಯು ಹೀಗೆ ವಿವಿಧ ಭಾಷೆಗಳ ಸಾಹಿತ್ಯಕ್ಕೆ ಭಾಷಾಂತರದ ಮೂಲಕ ಉತ್ತೇಜನ ನೀಡುತ್ತಿದೆ’ ಎಂದು ಹೇಳಿದರು.ಕಳೆದ ಐದು ದಶಕಗಳಲ್ಲಿ, ಜ್ಞಾನಪೀಠ ಪ್ರಶಸ್ತಿಯು ಭಾರತದ ವಿವಿಧ ಭಾಷೆಗಳಲ್ಲಿನ ಉತ್ತಮ ಸಾಹಿತ್ಯಕ ಪ್ರತಿಭೆಗಳನ್ನು ಗುರುತಿಸುವ ಮೂಲಕ ಪ್ರತಿಷ್ಠಿತ ಗೌರವಕ್ಕೆ ಪಾತ್ರವಾಗಿದೆ.ಕೇರಳದ ಕವಿ ಜಿ. ಸಂಕರ ಕುರುಪ್ ಅವರು 1965ರಲ್ಲಿ ಮೊದಲ ಜ್ಞಾನಪೀಠ ಪ್ರಶಸ್ತಿ ಪಡೆದಿದ್ದರು. ನಂತರದಲ್ಲಿ ಈ ಪ್ರಶಸ್ತಿ ಪಡೆದವರಲ್ಲಿ ತಾರಾ ಶಂಕರ್ ಬಂಡೋಪಾಧ್ಯಾಯ, ಉಮಾ ಶಂಕರ್ ಜೋಶಿ, ಕೆ.ವಿ. ಪುಟ್ಟಪ್ಪ, ಸುಮಿತ್ರಾನಂದನ್ ಪಂತ್ ಮತ್ತು ಫಿರಾಕ್ ಗೋರಖ್‌ಪುರಿ ಅವರಂತಹ ಖ್ಯಾತ ಬರಹಗಾರರು ಸೇರಿದ್ದಾರೆ ಎಂದು ಸಿಂಗ್ ಸ್ಮರಿಸಿದರು.

ಜ್ಞಾನಪೀಠ ಆಯ್ಕೆ ಮಂಡಳಿಯ ಅಧ್ಯಕ್ಷ ಸೀತಾಕಾಂತ್ ಮಹಾಪಾತ್ರ ಅವರು, ಕುರುಪ್ ಅವರ ಕವಿತೆಗಳ ಬಗ್ಗೆ ವಿಶ್ಲೇಷಿಸಿ ಶ್ಲಾಘಿಸಿದರು.

 

ಈ ಸಂದರ್ಭದಲ್ಲಿ ಮಾತನಾಡಿದ 79 ವರ್ಷದ ಕುರುಪ್ ಅವರು, ‘ಯಾವುದೇ ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವ ಯಾರೇ ಆದರೂ ಅವರು ಭಾರತೀಯ ಕವಿ/ಸಾಹಿತಿಯೇ. ನನ್ನ ಭಾಷೆ ಈ ಪ್ರಶಸ್ತಿಯನ್ನು ಪಡೆದಿದೆ ಎಂಬುದಕ್ಕೆ ನನಗೆ ತುಂಬಾ ಸಂತೋಷವಾಗಿದೆ. ನನ್ನ ಮೂಲಕ ಇದು ಸಾಧ್ಯವಾಗಿರುವುದು ನನಗೆ ಸಂದ ಬಹುದೊಡ್ಡ ಗೌರವ’ ಎಂದರು.

ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್, ರಕ್ಷಣಾ ಸಚಿವ ಎ.ಕೆ. ಆಂಟನಿ,  ಸಚಿವ ವಯಲಾರ್ ರವಿ, ಸಂಸದ ಶಶಿ ತರೂರ್ ಇದ್ದರು.

ಕುರುಪ್‌ಗೆ ಕೆ.ಆರ್.ನಾರಾಯಣನ್ ಪ್ರಶಸ್ತಿ


ಕೊಟ್ಟಾಯಂ (ಪಿಟಿಐ): ಕವಿ ಒ.ಎನ್.ವಿ. ಕುರುಪ್ ಅವರು ಈ ವರ್ಷದ ಕೆ.ಆರ್. ನಾರಾಯಣನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮಾಜಿ ರಾಷ್ಟ್ರಪತಿ ಕೆ.ಆರ್. ನಾರಾಯಣನ್ ಅವರ ಸ್ಮರಣಾರ್ಥ ಈ ಪ್ರಶಸ್ತಿ ಸ್ಥಾಪಿಸಲಾಗಿದೆ. ಮಾಜಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಈ ತಿಂಗಳ 19ರಂದು ಪ್ರಶಸ್ತಿ ಪ್ರದಾನ ಮಾಡುವರು ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.