ಬುಧವಾರ, ಮಾರ್ಚ್ 3, 2021
31 °C

ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ

ಬೆಂಗಳೂರು: `ಎಲ್ಲ ಪುಸ್ತಕಗಳು ಆದರ್ಶವನ್ನು ಬಿತ್ತುತ್ತವೆ. ಅಂತಹ ಪುಸ್ತಕಗಳನ್ನು ಇಂದಿನ ರಾಜಕಾರಣಿಗಳು ಓದಬೇಕು~ ಎಂದು ಹಿರಿಯ ಸಾಹಿತಿ ದೇ.ಜವರೇಗೌಡ ಹೇಳಿದರು.ಸಿವಿಜಿ ಇಂಡಿಯಾ ಸಂಸ್ಥೆಯು ಮಂಗಳವಾರ ಗಾಂಧಿಭವನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕುವೆಂಪು 108 ನೆನಪು ಮಾಲಿಕೆಯ 108 ಕೃತಿಗಳ ಲೋಕಾರ್ಪಣೆ ಹಾಗೂ ಸಿವಿಜಿ ಇಂಡಿಯಾ ಪುಸ್ತಕ ಮಳಿಗೆ ಆರಂಭೋತ್ಸವದಲ್ಲಿ ಅವರು ಮಾತನಾಡಿದರು.`ಪುಸ್ತಕಗಳನ್ನು ಓದುವುದರಿಂದ ರಾಜಕೀಯದಲ್ಲಿರುವ ಕೆಟ್ಟ ರಾಜಕಾರಣ, ಅಧಿಕಾರ, ಹಣಕ್ಕಾಗಿ ಇರುವ ಆಮಿಷಗಳು ಕಡಿಮೆಯಾಗಬಹುದು. ಪುಸ್ತಕದಲ್ಲಿನ ಆದರ್ಶ ತತ್ವಗಳನ್ನು ರಾಜಕಾರಣಿಗಳು ಅಳವಡಿಸಿಕೊಳ್ಳಬೇಕು~ ಎಂದು ಸಲಹೆ ನೀಡಿದರು.`ಸಿವಿಜಿ ಇಂಡಿಯಾ ಸಂಸ್ಥೆಯು ಒಮ್ಮೆಗೆ 108 ಪುಸ್ತಕಗಳನ್ನು ಹೊರತಂದಿರುವ ಕಾರ್ಯ ವೈಖರಿ ಪ್ರಶಂಸನೀಯವಾಗಿದೆ~ ಎಂದು ಹೇಳಿದರು.ಸಾರಿಗೆ ಮತ್ತು ಗೃಹ ಸಚಿವ ಆರ್.ಅಶೋಕ ಮಾತನಾಡಿ, `ಬೇರೆ ಭಾಷಿಕರಲ್ಲಿಯೂ ಕನ್ನಡವೆಂಬುದು ಇದೆ. ಅವರನ್ನು ಬೇರೆಯವರೆಂದು ಭಾವಿಸದೆ, ಅವರಿಗೂ ಕನ್ನಡತನವನ್ನು ಕಲಿಸಬೇಕು~ ಎಂದರು. `ಎಲ್ಲ ಪುಸ್ತಕಗಳು ಜನರನ್ನು ತಲುಪಬೇಕು ಆಗಲೇ ಪುಸ್ತಕ ಸಂಸ್ಕೃತಿ ಉಳಿಯುತ್ತದೆ.

ಕನ್ನಡದ ಕಂಪು ಎಲ್ಲೆಡೆ ಪಸರಿಸಬೇಕು. ಅದಕ್ಕೆ ಎಲ್ಲರೂ ಶ್ರಮ ವಹಿಸಬೇಕು~ ಎಂದು ಹೇಳಿದರು.`ಹಳ್ಳಿಗಾಡಿನಲ್ಲಿರುವವರು ಕಲೆಯನ್ನು ಲಾಭದ ದೃಷ್ಟಿಯಿಂದ ಮಾಡುವುದಿಲ್ಲ ಬದಲಿಗೆ, ನಮ್ಮ ಸಂಸ್ಕೃತಿ ಉಳಿಯಬೇಕೆಂಬ ಆಸೆಯಿಂದ ಮಾಡುತ್ತಾರೆ. ಅಂತಹವರಿಗೆ ಪ್ರೋತ್ಸಾಹ ನೀಡುವ ಅವಶ್ಯಕತೆಯಿದೆ~ ಎಂದರು.

`ಬೆಂಗಳೂರಿನಲ್ಲಿ ಕನ್ನಡಿಗರೇ ಇಲ್ಲ ಎಂದು ಹೇಳಲಾಗುತ್ತಿತ್ತು. ಆದರೆ, ಸಾಹಿತ್ಯ ಸಮ್ಮೇಳನ ನಡೆದಾಗ ಸುಮಾರು 8 ಕೋಟಿ ರೂಪಾಯಿಯ ಪುಸ್ತಕಗಳು ಮಾರಾಟವಾದವು. ಇದು ನಮ್ಮ ಜನರಲ್ಲಿರುವ ಭಾಷಾ ಸಂಸ್ಕೃತಿ ಮತ್ತು ಪುಸ್ತಕ ಪ್ರೇಮವನ್ನು ಸಾರಿ ಹೇಳುತ್ತದೆ~ ಎಂದು ಹೇಳಿದರು.ಕೇಂದ್ರದ ಮಾಜಿ ಸಚಿವ ಎಂ.ಪಿ.ವೀರೇಂದ್ರಕುಮಾರ್ ಮಾತನಾಡಿ, `ಸಾಹಿತಿಗಳ ಬಗ್ಗೆ ಎಲ್ಲೆಲ್ಲೂ ಚರ್ಚೆಗಳಾಗುತ್ತವೆ. ಅವರ ಬಗ್ಗೆ ಎಲ್ಲರೂ ಮಾತನಾಡುತ್ತಾರೆ. ಆದರೆ, ದೇಶದ ಯಾವ ವಿಮಾನ ನಿಲ್ದಾಣಕ್ಕೂ ಸಾಹಿತಿಗಳ ಹೆಸರನ್ನು ಇಡುವ ಚಿಂತನೆ ಇನ್ನು ನಡೆದಿಲ್ಲ~ ಎಂದರು.ಕಾರ್ಯಕ್ರಮದಲ್ಲಿ ಕೇಂದ್ರ ಸಾಹಿತ್ಯ ಅಕಾಡೆಮಿ ಕಾರ್ಯದರ್ಶಿ ಅಗ್ರಹಾರ ಕೃಷ್ಣಮೂರ್ತಿ, ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ ಅಶ್ವತ್ಥನಾರಾಯಣ, ಕುವೆಂಪು ನೂರೆಂಟು ನೆನಪು ಮಾಲಿಕೆಯ ಸಂಪಾದಕ ಡಾ.ಬೈರಮಂಗಲ ರಾಮೇಗೌಡ, ಮಾಲಿಕೆಯ ಸಂಚಾಲಕ ಸಿವಿಜಿ ಚಂದ್ರ ಸಮಾರಂಭದಲ್ಲಲಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.