ಬುಧವಾರ, ಮೇ 18, 2022
23 °C

ಕೂಡುಂಕುಳಂ ಯೋಜನೆ: ಚಳವಳಿಗಾರರೊಂದಿಗೆ ಮಾತುಕತೆಗೆ ಸಲಹೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚೆನ್ನೈ (ಪಿಟಿಐ): ಕೂಡುಂಕುಳಂ ಪರಮಾಣು ವಿದ್ಯುತ್ ಯೋಜನೆಯನ್ನು ವಿರೋಧಿಸಿ ಚಳವಳಿ ನಡೆಸುತ್ತಿರುವವರ ಜೊತೆ ಮಾತುಕತೆಗೆ ಮುಂದಾಗುವಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ `ಕೂಡುಂಕುಳಂ ಯೋಜನೆ ಬಗ್ಗೆ ಸಾರ್ವಜನಿಕ ವಿಚಾರಣೆ ಮತ್ತು ಸರ್ಕಾರದಿಂದ ಪ್ರಜಾಸತ್ತಾತ್ಮಕ ಹಕ್ಕುಗಳ ದಮನ~ ಕುರಿತ ಸಮಿತಿಯ ವರದಿಯು ಸಲಹೆ ನೀಡಿದೆ.

`ಚಳವಳಿಗಾರರನ್ನು ಗೋಳಾಡಿಸಬೇಡಿ, ಬಿಕ್ಕಟ್ಟನ್ನು ಸೌಹಾರ್ದವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿ~ ಎಂದಿರುವ ಈ ವರದಿಯನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಲಾಗಿದೆ.

`ವಾಕ್ ಸ್ವಾತಂತ್ರ್ಯ- ಸಂವಿಧಾನ ಬದ್ಧ ಹಕ್ಕು. ಅಣು ಸ್ಥಾವರ ಯೋಜನೆಯನ್ನು ವಿರೋಧಿಸುತ್ತಿರುವವರು ಇದರ ಚೌಕಟ್ಟಿನೊಳಗೆ ತಮ್ಮ ಚಳವಳಿ ನಡೆಸುತ್ತಿದ್ದಾರೆ. ಅವರು ಯಾವುದೇ ಗಂಭೀರ ತರಹದ ಅಪರಾಧ ಮಾಡಿಲ್ಲ. ಆದ್ದರಿಂದ ಚಳವಳಿಗಾರರ ಮೇಲೆ ದಾಖಲಾಗಿರುವ ಎಲ್ಲ ಪ್ರಕರಣಗಳನ್ನು ಸರ್ಕಾರ ಹಿಂಪಡೆಯಬೇಕು~ ಎಂದೂ ಶಿಫಾರಸು ಮಾಡಿದೆ.

ಕೂಡುಂಕುಳಂ ಯೋಜನೆ ವಿರೋಧಿಸಿ ಚಳವಳಿ ನಡೆಸುತ್ತಿರುವವರ ವಿರುದ್ಧ ಸರ್ಕಾರ ಕೈಗೊಂಡ ಕ್ರಮದ ಬಗ್ಗೆ ಮೇ 14ರಂದು ನಡೆಸಲಾದ ಸಾರ್ವಜನಿಕ ವಿಚಾರಣೆಯನ್ನು ಆಧರಿಸಿ ಈ ವರದಿ ಸಿದ್ಧಪಡಿಸಲಾಗಿದೆ. ಸಾರ್ವಜನಿಕ ವಿಚಾರಣೆಯನ್ನು ಚೆನ್ನೈನ `ಕೂಡುಂಕುಳಂ ಹೋರಾಟ ಬೆಂಬಲ ಸಮಿತಿ~ ಆಯೋಜಿಸಿತ್ತು. ದೆಹಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎ.ಪಿ. ಷಾ,  ವಕೀಲೆ ಗೀತಾ ರಾಮಶೇಷನ್ ಮತ್ತು ಇರುಲಾರ್ ಆದಿವಾಸಿಗಳ ಹಿತರಕ್ಷಣಾ ಅಸೋಸಿಯೇಷನ್‌ನ ಪ್ರಭಾ ಕಲ್ವಿಮಣಿ ಅವರನ್ನು ಒಳಗೊಂಡ  ವಿಚಾರಣಾ ಸಮಿತಿ ಈ ವರದಿ ನೀಡಿದೆ.

ಚಳವಳಿ ನಡೆಯುತ್ತಿರುವ ಪ್ರದೇಶದಲ್ಲಿ ನಿಷೇಧಾಜ್ಞೆ (ಸಿಆರ್‌ಪಿಸಿ 144ಕಲಂ) ಜಾರಿ ಮಾಡಿರುವುದಕ್ಕೆ ಆಕ್ಷೇಪಿಸಿರುವ ವರದಿಯು, ನಿಷೇಧಾಜ್ಞೆಯನ್ನು ತುರ್ತು ಸನ್ನಿವೇಶದಲ್ಲಿ ಮಾತ್ರ ಜಾರಿ ಮಾಡಬಹುದು. ಗ್ರಾಮೀಣ ಭಾಗದಲ್ಲಿ ದೀರ್ಘ ಕಾಲದವರೆಗೆ ನಿಷೇಧಾಜ್ಞೆ ಜಾರಿ ಮಾಡಿದರೆ  ಸ್ಥಳೀಯರಿಗೆ ಬಹಳ ಕಷ್ಟವಾಗುತ್ತದೆ. ಆದ್ದರಿಂದ ಇದನ್ನು ಕೂಡಲೇ ತೆರವುಗೊಳಿಸಬೇಕು ಮತ್ತು ಎಂದು ಶಿಫಾರಸು ಮಾಡಲಾಗಿದೆ.

ಪರಮಾಣು ವಿದ್ಯುತ್ ಯೋಜನೆ ಬಗ್ಗೆ ಕೇಂದ್ರ ಸುರಕ್ಷತೆ ವಿಚಾರವಾಗಿ ಸ್ಥಳೀಯರಿಗೆ ಸರಿಯಾದ ಮಾಹಿತಿಯನ್ನು ಕೂಡಲೇ ಒದಗಿಸಬೇಕು, ಭಾರತ- ರಷ್ಯ ಸರ್ಕಾರ ಮಧ್ಯೆ ಆಗಿರುವ ಯೋಜನೆಯ ಬಾಧ್ಯತಾ ಒಪ್ಪಂದದ ಮಾಹಿತಿಯನ್ನೂ ನೀಡಬೇಕು, ಸ್ಥಳೀಯರ ಕಳವಳ ದೂರಮಾಡಲು ಸಮಿತಿಯೊಂದನ್ನು ರಚಿಸಬೇಕು ಮುಂತಾದ ಸಲಹೆಗಳನ್ನು ವರದಿ ನೀಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.