ಭಾನುವಾರ, ಜೂನ್ 13, 2021
26 °C

ಕೃಷಿಕರ ಕಷ್ಟಕ್ಕೆ ಸ್ಪಂದನೆ ಇಲ್ಲ-ಪುಟ್ಟಣ್ಣ ವಿಷಾದ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: `ರೈತರ ಸಮಸ್ಯೆಗಳ ಬಗ್ಗೆ ಇಂದು ಯಾರೂ ಯೋಚಿಸದಂತಹ ಸ್ಥಿತಿ ನಿರ್ಮಾಣವಾಗಿದೆ~ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಹೇಳಿದರು.ನಗರದ ಸರ್ಕಾರಿ ಕಲಾ ಕಾಲೇಜು ನಗರದಲ್ಲಿ ಮಂಗಳವಾರ ಏರ್ಪಡಿಸಿದ್ದ `ಭಾರತದ ಇತಿಹಾಸದಲ್ಲಿ ರೈತರು~ ವಿಷಯ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.ರೈತರ ಸ್ಥಿತಿ ನೆನಪಿಸಿಕೊಂಡರೆ ದುಃಖವಾಗುತ್ತದೆ. ಬೆಳೆಗೆ ಬೆಲೆ ಸಿಗುತ್ತಿಲ್ಲ ಮತ್ತು ಕೃಷಿ ಉಪಕರಣಗಳ ಬೆಲೆ ದುಬಾರಿಯಾಗಿದೆ. ಬೆಳೆ ಬೆಳೆದ ರೈತರಿಗೆ ಹತ್ತು ರೂಪಾಯಿ ಸಿಕ್ಕರೆ ಅದನ್ನು ಮಾರಾಟ ಮಾಡುವವ ಮೂವತ್ತು ರೂಪಾಯಿ ಗಳಿಸುತ್ತಿದ್ದಾನೆ. ಉಳ್ಳವರಿಗೆ ಎಲ್ಲ ಸವಲತ್ತುಗಳೂ ಸಿಗುತ್ತಿವೆ. ರೈತರು ಚಳವಳಿ ಮಾಡಿದರೂ ಏನನ್ನೂ ಪಡೆಯಲಾಗದಂತಹ ಸ್ಥಿತಿಯಲ್ಲಿದ್ದಾರೆ. ಆದರೆ ರೈತರಿಲ್ಲದೆ ಭಾರತದ ಆರ್ಥಿಕತೆಯನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದರು.ಬೇರೆ ಯಾರು ಮುಷ್ಕರ ಮಾಡಿದರೂ ಅವರ ಮೇಲೆ ಗುಂಡು ಹಾರಿಸುವುದಿಲ್ಲ. ಆದರೆ ಬೇಡಿಕೆಗಳ ಈಡೇರಿಕೆಗೆ ರೈತರು ಬೀದಿಗಿಳಿದರೆ ಅವರ ಮೇಲೆ ಗುಂಡು ಹಾರಿಸಲಾಗುತ್ತದೆ. ಹಾವೇರಿ ಗೋಲಿಬಾರ್ ಪ್ರಕರಣ ಇದಕ್ಕೆ ಉತ್ತಮ ಉದಾಹರಣೆ ಎಂದು ಪುಟ್ಟಣ್ಣ ಹೇಳಿದರು.`ಈ ದೇಶದ ಚರಿತ್ರೆ ರೈತರ ಚರಿತ್ರೆಯೇ ಆಗಿದೆ. ರಾಜಕೀಯ ಮತ್ತು ರೈತರ ಚರಿತ್ರೆಯನ್ನು ಬೇರೆಯಾಗಿ ನೋಡುವುದು ಸರಿಯಲ್ಲ. ಚರಿತ್ರೆ ಬರೆಯುವ ಮಾನದಂಡವನ್ನು ಮರು ವಿಶ್ಲೇಷಿಸಬೇಕಾಗಿದೆ. ರಾಜಕೀಯ ಕೇಂದ್ರಿತವಾಗಿ ಇತಿಹಾಸ ಬರೆಯುವುದನ್ನು ಬದಲಾಯಿಸಬೇಕಿದೆ~ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಡಾ.ಟಿ.ಪಿ.ವಿಜಯ್ ಪೂಣಚ್ಚ ಹೇಳಿದರು.ಡಾ.ಸಿ.ಚಂದ್ರಪ್ಪ ಅವರ `ರೈತ ಮತ್ತು ಆದಿವಾಸಿ ಚಳವಳಿ~, ಟಿ.ಎಸ್.ವೇಣುಗೋಪಾಲ್ ಮತ್ತು ಶೈಲಜಾ ಅವರ ಅನುವಾದಿತ ಕೃತಿ `ಪ್ರಾಚೀನ ಭಾರತದ ಸಂಸ್ಕೃತಿ ಮತ್ತು ನಾಗರಿಕತೆ ಚಾರಿತ್ರಿಕ ರೂಪುರೇಷೆ~, ಪ್ರದೀಪ್ ಬೆಳಗಲ್ ಹಾಗೂ ಎಚ್.ಎಸ್.ಜೈಕುಮಾರ್ ಅವರ ಅನುವಾದಿತ ಕೃತಿ `ಸಿಂಧೂ ನಾಗರಿಕತೆ~ ಪುಸ್ತಕಗಳನ್ನು ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.ಕಲಾ ಕಾಲೇಜಿನ ಪ್ರಾಚಾರ್ಯ ಪ್ರೊ.ಆರ್.ಶ್ರೀನಿವಾಸ್, ಪ್ರಾಧ್ಯಾಪಕರಾದ ಡಾ.ವೆಂಕಟಸ್ವಾಮಿರೆಡ್ಡಿ, ಡಾ.ನಾಗರತ್ನ, ಮಂಜುನಾಥ್‌ಗೌಡ, ಡಾ.ಉಷಾದೇವಿ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.