ಸೋಮವಾರ, ಮೇ 17, 2021
30 °C

ಕೆಂಭಾವಿ: ಕೆಟ್ಟು ನಿಲ್ಲುವ ಬಸ್, ತಳ್ಳುವ ಪ್ರಯಾಣಿಕರು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಂಭಾವಿ: ಗ್ರಾಮೀಣ ಪ್ರದೇಶಗಳ ಜನರಿಗೆ ಸಾರಿಗೆ ಸೌಲಭ್ಯ ಎನ್ನುವುದು ಗಗನ ಕುಸುಮವಾಗಿದೆ. ಇರುವ ಬಸ್‌ಗಳು ಸರಿಯಾದ ಸಮಯಕ್ಕೆ ಬರುತ್ತಿಲ್ಲ ಎಂಬ ಕೊರಗು ಒಂದೆಡೆಯಾದರೆ, ಬರುವ ಬಸ್‌ಗಳನ್ನು ತಳ್ಳುವ ಗೋಳು ಪ್ರಯಾಣಿಕರದ್ದಾಗಿದೆ.ದೊಡ್ಡ ನಗರಗಳಿಗೆ ಒಳ್ಳೆಯ ಬಸ್‌ಗಳನ್ನು ಓಡಿಸುವ ಸಾರಿಗೆ ಸಂಸ್ಥೆಯವರು, ಗ್ರಾಮೀಣ ಪ್ರದೇಶಕ್ಕೆ ದುರಸ್ತಿಗೆ ಬಂದಿರುವ ಬಸ್‌ಗಳನ್ನು ಓಡಿಸುತ್ತಾರೆ. ಮೊದಲೇ ಚಿಕಿತ್ಸೆಗೆ ಕಾದು ಕುಳಿತಿರುವ ಈ ಬಸ್‌ಗಳು, ಗ್ರಾಮೀಣ ಪ್ರದೇಶದಲ್ಲಿ ಕೆಟ್ಟ ರಸ್ತೆಗಳ ಮೇಲೆ ಸಂಚರಿಸಲು ಹರಸಾಹಸ ಮಾಡುತ್ತಿವೆ. ಕೆಲವೊಮ್ಮೆ ರಸ್ತೆ ಮಧ್ಯದಲ್ಲಿಯೇ ನಿಂತು ಬಿಡುತ್ತಿದ್ದು, ಬಸ್‌ನಲ್ಲಿ ಕುಳಿತವರು ಕೆಳಕ್ಕಿಳಿದು ತಳ್ಳುವ ಸ್ಥಿತಿ ನಿರ್ಮಾಣವಾಗುತ್ತಿದೆ.ಗ್ರಾಮೀಣ ಸಾರಿಗೆ ವ್ಯವಸ್ಥೆ ಸುಧಾರಣೆ ಆಗಲೆಂದು ರಾಜ್ಯ ಸರ್ಕಾರ ಸಾಕಷ್ಟು ವ್ಯವಸ್ಥೆ ಮಾಡಿದ್ದರೂ ಅದು ಜನರಿಗೆ ತಲುಪುತ್ತಿಲ್ಲ. ಸಾರಿಗೆ ವ್ಯವಸ್ಥೆ ಕಲ್ಪಿಸುವಲ್ಲಿ ಯಾದಗಿರಿ ವಿಭಾಗ ಸಂಪೂರ್ಣ ವಿಫಲವಾಗಿದ್ದು, ಉತ್ತಮ ಆದಾಯವಿರುವ ಕೆಂಭಾವಿ ಭಾಗದಲ್ಲಿ ಕೆಟ್ಟ ಬಸ್‌ಗಳನ್ನು ಓಡಿಸುತ್ತಿದ್ದು, ಅವು ಯಾವ ಸಂದರ್ಭದಲ್ಲಿ ನಿಂತು ಬಿಡುತ್ತವೆಯೇ ಎಂಬ ಆತಂಕ ಪ್ರಯಾಣಿಕರನ್ನು ಕಾಡುತ್ತಿದೆ ಎನ್ನುತ್ತಾರೆ. ಕರ್ನಾಟಕ ರಕ್ಷಣಾ ವೇದಿಕೆ ಗ್ರಾಮ ಘಟಕದ ಅಧ್ಯಕ್ಷ ಅಕ್ಬರ್ ನಾಲತ್ವಾಡ.ಪರೀಕ್ಷೆಗೆ ತೆರಳುವ ವಿದ್ಯಾರ್ಥಿಗಳಂತೂ ದೇವರಿಗೆ ಪೂಜೆ ಸಲ್ಲಿಸಿಯೇ ಈ ಬಸ್‌ಗಳನ್ನು ಹತ್ತಬೇಕಾಗಿದೆ. ಬಸ್‌ಗಳು ಕೆಟ್ಟಿದ್ದರಿಂದ ಹರಸಾಹಸ ಪಟ್ಟು ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾದ ಉದಾಹರಣೆಗಳು ಸಾಕಷ್ಟಿವೆ ಎಂದು ಹೇಳುತ್ತಾರೆ.ಒಳ್ಳೆಯ ಬಸ್‌ಗಳು ಇಲ್ಲದೇ ಇರುವುದರಿಂದ ಜನರು ಖಾಸಗಿ ವಾಹನಗಳಲ್ಲಿ ಸಂಚರಿಸುವುದು ಅನಿವಾರ್ಯವಾಗಿದೆ. ಸುತ್ತಲಿನ ಕೆಲ ಗ್ರಾಮಗಳಿಗೆ ಇಂದಿಗೂ ಬಸ್ ಸೌಕರ್ಯ ನೀಡಿಲ್ಲ. ಅಲ್ಲಿಯ ಜನರಿಗೂ ಖಾಸಗಿ ವಾಹನಗಳೇ ಆಸರೆಯಾಗಿವೆ. ಖಾಸಗಿ ವಾಹನ ಮಾಲೀಕರು ತಮ್ಮ ಆದಾಯ ಹೆಚ್ಚಿಸಿಕೊಳ್ಳಲು, ಮೇಲೆ ಕೆಳಗೆ ತುಂಬಿ ವಾಹನಗಳನ್ನು ಓಡಿಸುತ್ತಾರೆ. ಆದರೆ ಪ್ರಯಾಣಿಕರ ಸುರಕ್ಷತೆಯ ಬಗ್ಗೆ ಯೋಚಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಾರೆ.ಈ ಭಾಗದಲ್ಲಿ ಸಂಚರಿಸುವ ಯಾದಗಿರಿ, ಶಹಾಪುರ, ಸುರಪುರ ಘಟಕದ ಬಸ್‌ಗಳಿಗೆ ಬ್ರೇಕ್, ಟಯರ್-ಟ್ಯೂಬ್, ಕಿಟಕಿ, ಆಸನಗಳ ವ್ಯವಸ್ಥೆ ಸರಿಯಿಲ್ಲ. ಮಳೆಗಾಲದಲ್ಲಿ ಛಾವಣಿ ಸೋರುತ್ತದೆ. ಹೊಲಸು ತುಂಬಿರುತ್ತದೆ. ಹೀಗೆಲ್ಲಾ ಇರುವ ಬಸ್‌ಗಳಿಗೆ ಆರ್‌ಟಿಓ ಪರವಾನಗಿ ನೀಡಿರುವುದು ಆಶ್ಚರ್ಯದ ಸಂಗತಿ ಎಂದು ಹೇಳುತ್ತಾರೆ.ಇಂಥ ಸನ್ನಿವೇಶದಲ್ಲಿ ಜನರಿಗೆ ಒಳ್ಳೆಯ ಸಾರಿಗೆ ವ್ಯವಸ್ಥೆ ಕಲ್ಪಿಸಲು ಹೇಗೆ ಸಾಧ್ಯ? ಗ್ರಾಮೀಣ ಪ್ರದೇಶದ ಜನರು ಉತ್ತಮ ಬಸ್‌ಗಳಲ್ಲಿ ಓಡಾಡುವುದು ಯಾವಾಗ? ರಸ್ತೆಗಳು ಸರಿಯಾಗಲಿ ಉತ್ತಮ ಬಸ್ ಓಡಿಸುತ್ತವೆ ಎನ್ನುವ ಅಧಿಕಾರಿಗಳು, ರಸ್ತೆ ದುರಸ್ತಿಯಾದರೂ ಹೊಸ ಬಸ್‌ಗಳನ್ನು ಓಡಿಸುತ್ತಿಲ್ಲ ಎಂದು ದೂರುತ್ತಾರೆ.ಗುಲ್ಬರ್ಗ, ಯಾದಗಿರಿ ಗ್ರಾಮೀಣ ಸಾರಿಗೆ ವ್ಯವಸ್ಥೆ ಸರಿಪಡಿಸಿ ಗ್ರಾಮೀಣ ಜನರಿಗೆ ಅನುಕೂಲ ಮಾಡಿಕೊಡಬೇಕು. ಉತ್ತಮ ಗುಣಮಟ್ಟದ ಹೊಸ ಬಸ್‌ಗಳನ್ನು ಓಡಿಸಬೇಕು ಎಂದು ಅವರು ಆಗ್ರಹಿಸುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.