ಶುಕ್ರವಾರ, ಮೇ 7, 2021
27 °C

ಕೆಪಿಟಿಸಿಎಲ್ ನೌಕರರಿಗೆ ಶಾಕ್: ತಿದ್ದುಪಡಿ ಊರ್ಜಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗೃಹ ಬಳಕೆಯ ವಿದ್ಯುತ್ತನ್ನು ಉಚಿತವಾಗಿ ಬಳಸುವ ಆಸೆಯಲ್ಲಿದ್ದ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದ (ಕೆಪಿಟಿಸಿಎಲ್) ನೌಕರರಿಗೆ ಹೈಕೋರ್ಟ್ ಸೋಮವಾರ `ಶಾಕ್~ ನೀಡಿದೆ.1997ರ ನಂತರ ಕೆಪಿಟಿಸಿಎಲ್‌ಗೆ ನೇಮಕಗೊಂಡಿರುವ ಸಿಬ್ಬಂದಿ ಉಚಿತವಾಗಿ ವಿದ್ಯುತ್ ಬಳಸುವುದಕ್ಕೆ ನಿರ್ಬಂಧ ಹೇರಿ ನಿಗಮದ ಕಾಯ್ದೆಗೆ ಮಾಡಿದ್ದ ತಿದ್ದುಪಡಿಯನ್ನು ನ್ಯಾಯಮೂರ್ತಿಗಳಾದ ಕೆ.ಶ್ರೀಧರರಾವ್ ಹಾಗೂ ಬಿ.ಎಸ್.ಇಂದ್ರಕಲಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಊರ್ಜಿತಗೊಳಿಸಿದೆ.1984ರ ಮೇ 8ರಿಂದ ಕೆಪಿಟಿಸಿಎಲ್‌ನ ಎಲ್ಲ ಸಿಬ್ಬಂದಿಗೆ ಉಚಿತವಾಗಿ ವಿದ್ಯುತ್ ಪೂರೈಕೆ ಮಾಡಲಾಗುತ್ತಿತ್ತು. ಆದರೆ ವಿದ್ಯುತ್ ಸರಬರಾಜು ಕಾಯ್ದೆಗೆ 1997ರ ಏ.17ರಂದು ತಿದ್ದುಪಡಿ ತರಲಾಯಿತು. ಈ ಅವಧಿಗಿಂತ ಮುಂಚಿತವಾಗಿ ಸೇರ್ಪಡೆಗೊಂಡಿರುವ ನೌಕರರಿಗೆ ಮಾತ್ರ ಉಚಿತವಾಗಿ ಗೃಹ ಬಳಕೆಯ ವಿದ್ಯುತ್ ಬಳಸಲು ಅನುಮತಿ ನೀಡಲಾಯಿತು. ಆದರೆ ಈ ಅವಧಿಯ ನಂತರ ನೇಮಕಗೊಂಡಿರುವ ನೌಕರರಿಗೆ ಈ ಅಧಿಕಾರ ಇಲ್ಲ ಎಂದು ಅದರಲ್ಲಿ ಉಲ್ಲೇಖಿಸಲಾಗಿತ್ತು. ಈ ರೀತಿ ತಿದ್ದುಪಡಿ ಮಾಡುವ ಅಧಿಕಾರ ಕೆಪಿಟಿಸಿಎಲ್‌ಗೆ ಇಲ್ಲ ಎನ್ನುವುದು ಅರ್ಜಿದಾರರ ವಾದವಾಗಿತ್ತು.ಆದರೆ ಈ ವಾದವನ್ನು ನ್ಯಾಯಮೂರ್ತಿಗಳು ತಳ್ಳಿ ಹಾಕಿದ್ದಾರೆ. `ವಿದ್ಯುತ್ ಸರಬರಾಜು ಕಾಯ್ದೆಯ 79(ಸಿ) ಅಡಿ ತಿದ್ದುಪಡಿ ಮಾಡುವ ಅಧಿಕಾರ ಕೆಪಿಟಿಸಿಎಲ್‌ಗೆ ಇದೆ. ಕೆಲವೊಂದು ಅಂಶಗಳನ್ನು ಗಮನದಲ್ಲಿ ಇಟ್ಟುಕೊಂಡೇ ನಿಗಮದ ಹಿತದೃಷ್ಟಿಯಿಂದ ಈ ತಿದ್ದುಪಡಿ ಮಾಡಲಾಗಿದೆ.1997ಕ್ಕೂ ಮೊದಲು ನೇಮಕಗೊಂಡ ನೌಕರರಿಗೆ ಸಿಗುತ್ತಿರುವ ಸೌಲಭ್ಯಗಳು ತಮಗೂ ಸಿಗಬೇಕು ಎಂದು ನೌಕರರು ವಾದ ಮಾಡುವುದರಲ್ಲಿ ಅರ್ಥವಿಲ್ಲ. ಆದುದರಿಂದ ನೌಕರರ ನಡುವೆ ಭೇದ ಭಾವ ಎಸಗಲಾಗುತ್ತಿದೆ ಎಂಬ ವಾದದಲ್ಲಿ ಯಾವುದೇ ಹುರುಳು ಇಲ್ಲ~ ಎಂದು ನ್ಯಾಯಮೂರ್ತಿಗಳು ತೀರ್ಪಿನಲ್ಲಿ ಉಲ್ಲೇಖಿಸಿದ್ದಾರೆ.ದ್ವಿಪತ್ನಿತ್ವ ಪ್ರಕರಣ: ಎಚ್‌ಡಿಕೆ ಸದ್ಯ ನಿರಾಳದ್ವಿಪತ್ನಿತ್ವದ ಆರೋಪ ಎದುರಿಸುತ್ತಿರುವ ಸಂಸದ ಎಚ್.ಡಿ.ಕುಮಾರಸ್ವಾಮಿ ಸದ್ಯ ನಿರಾಳ.

- ಕಾರಣ, ಹಿಂದು ವಿವಾಹ ಕಾಯ್ದೆಯನ್ನು ಉಲ್ಲಂಘಿಸಿ ಎರಡನೇ ಮದುವೆ ಆಗಿರುವ ಇವರನ್ನು ಸಂಸದ ಸ್ಥಾನದಿಂದ ವಜಾಗೊಳಿಸಲು ಆದೇಶಿಸುವಂತೆ ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಸೋಮವಾರ ವಜಾಗೊಳಿಸಿದೆ.ಶಶಿಧರ ಬೆಳಗುಂಬ ಎನ್ನುವವರು ಸಲ್ಲಿಸಿದ್ದ ಅರ್ಜಿ ಇದಾಗಿದೆ. ಅನಿತಾ ಅವರನ್ನು ವಿವಾಹವಾಗಿರುವಾಗಲೇ ಅವರಿಗೆ ವಿಚ್ಛೇದನ ನೀಡದೆ ಚಿತ್ರನಟಿ ರಾಧಿಕಾ ಅವರನ್ನೂ ವಿವಾಹವಾಗಿರುವುದು ಕಾನೂನು ಉಲ್ಲಂಘನೆ ಎನ್ನುವುದು ಅವರ ಆರೋಪವಾಗಿತ್ತು.ಅರ್ಜಿಯಲ್ಲಿ ಕೆಲವೊಂದು ತಾಂತ್ರಿಕ ದೋಷಗಳು ಇದ್ದ ಹಿನ್ನೆಲೆಯಲ್ಲಿ ಅವುಗಳನ್ನು ಸರಿಪಡಿಸುವಂತೆ ಹೈಕೋರ್ಟ್ ಈ ಹಿಂದೆ ಹಲವು ಬಾರಿ ಅರ್ಜಿದಾರರಿಗೆ ನಿರ್ದೇಶಿಸಿತ್ತು. ಆದರೂ ಅವರು ಅದನ್ನು ಪಾಲನೆ ಮಾಡಲಿಲ್ಲ. ಇದಕ್ಕೆ ಕಾರಣವನ್ನೂ ಅವರು ನೀಡಲಿಲ್ಲ. ಈ ಹಿನ್ನೆಲೆಯಲ್ಲಿ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠ ಅರ್ಜಿ ವಜಾಗೊಳಿಸಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.