ಭಾನುವಾರ, ಏಪ್ರಿಲ್ 18, 2021
33 °C

ಕೆರೂರು: ವಿದ್ಯುತ್ ಮಗ್ಗ ನೇಕಾರರಿಂದ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆರೂರ : `ಶಬ್ದಮಾಲಿನ್ಯದ ನೆಪದಲ್ಲಿ ಬಡ ನೇಕಾರರ ಕುಟುಂಬಗಳ ಉಪ ಜೀವನಕ್ಕೆ ಮೂಲಾಧಾರ ಆಗಿರುವ ವಿದ್ಯುತ್ ಚಾಲಿತ ಮಗ್ಗಗಳ ನೇಕಾರಿಕೆ ವೃತ್ತಿಗೆ ಕುತ್ತು ತಂದರೆ ಸಹಿಸುವದಿಲ್ಲ, ಅಂಥ ಸಂದರ್ಭ ಬಂದರೆ ಇಡೀ ಜನಾಂಗವೇ ಬಂಡೇಳಬೇಕಾಗುತ್ತದೆ~ ಎಂದು ಸಾವಿರಾರು ನೇಕಾರರು, ಸ್ತ್ರೀಯರು ಪಟ್ಟ ಣದ ಪ್ರಮುಖ ಬೀದಿಗಳಲ್ಲಿ ಘೋಷಣೆಗಳ ಮೂಲಕ ಕೂಗಿ ಗುರುವಾರ ಇಲ್ಲಿ ಎಚ್ಚರಿಸಿದರು.ಸ್ಥಳೀಯ ಪ,ಪಂ ಸದಸ್ಯೆ ಹಾಗೂ ವ್ಯಕ್ತಿಯೊಬ್ಬರು, ಮಗ್ಗದ ಸದ್ದಿನಿಂದ ಶಬ್ದ ಮಾಲಿನ್ಯ ಉಂಟಾಗುತ್ತಿದೆ ಎಂದು ದೂರು ನೀಡಿದ್ದು, ವಿವಿಧ ಇಲಾಖೆ ಅಧಿಕಾರಿಗಳಿಂದ ಕಿರುಕಳಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಿಂದ ಬೇಸತ್ತ ವಿದ್ಯುತ್ ಚಾಲಿತ ಮಗ್ಗಗಳ ನೇಕಾರರು  ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಿ,ವೃತ್ತಿಗೆ ವಿರೋಧಿಸುವ ನಿಲುವನ್ನು ಖಂಡಿಸಿದರಲ್ಲದೇ ಅವರ ಪ್ರತಿಕೃತಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.ಇದಕ್ಕೂ ಮುನ್ನ ದೇವಾಂಗ ಪೇಟೆಯ ಬನಶಂಕರಿ ಗುಡಿ ಆವರಣದಲ್ಲಿ ಸಭೆ ಸೇರಿದ ಸಾವಿರಾರು ನೇಕಾರರು, ಮಹಿಳೆಯರು ಬಸರಿಗಿಡ ಪೇಟೆ, ನೆಹರುನಗರದಿಂದ ರಾ.ಹೆ.(218)ರ ಮೂಲಕ ಹಳಪೇಟೆ ಸೇರಿದಂತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು. ನಂತರ ಪಟ್ಟಣ ಪಂಚಾಯಿತಿ ಆವರಣದಲ್ಲಿ  ಧಿಕ್ಕಾರ ಕೂಗುತ್ತ ಧರಣಿ ನಡೆಸಿದರು. ಪ್ರತಿಭಟನೆ ಸ್ಥಳಕ್ಕಾಗಮಿಸಿದ ಶಾಸಕ ಎಂ ಕೆ ಪಟ್ಟಣಶೆಟ್ಟಿ ಅವರು, ನೇಕಾರರಿಗೆ ಅನ್ಯಾಯವಾದರೆ ನಾವು ಸಹಿಸುವುದಿಲ್ಲ.ಇತರರಿಗೆ ತೊಂದರೆ ಆಗದಂತೆ ಕಾನೂನು ಬದ್ಧವಾಗಿ ಉದ್ಯೋಗ ಮುಂದುವರೆಸಿ ಎಂದರಲ್ಲದೇ ಕೆಲವು ಅಡಚಣೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸುವದಾಗಿ ಭರವಸೆ ನೀಡಿದರು.ತುರ್ತು ವಿಶೇಷ ಸಭೆ : ಶಾಸಕರ ಸೂಚನೆಯಂತೆ ಪ,ಪಂ ಮುಖ್ಯಾಧಿಕಾರಿ ರಾಮಕೃಷ್ಣ ಸಿದ್ಧನಕೊಳ್ಳ ತುರ್ತು ವಿಶೇಷ ಸಭೆ ಕರೆದರು. ವಿದ್ಯುತ್ ಮಗ್ಗಗಳಿಗೆ ಈ ಹಿಂದೆ ನೀಡಿ ಮರಳಿ ವಾಪಸ್ ಪಡೆದಿದ್ದ ನಿರಾಕ್ಷೇಪಣಾ ಪತ್ರವನ್ನು ಏಕಪಕ್ಷೀಯವಾಗಿ ಪಡೆಯಲು ಕಾನೂನಿನಲ್ಲಿ ಅವಕಾಶ ಇಲ್ಲದ ಕಾರಣ,ದೂರುದಾರರ ಅಂಶ ಗಮನಿಸಿ ಶಬ್ದ ಮಾಲಿನ್ಯ ಕಡಿಮೆ ಮಾಡಿ ನಿರ್ದಿಷ್ಟ ಸಮಯ ನಿಗದಿಗೊಳಿಸುವಂತೆ ಸೂಚಿಸುವ ನಿರ್ಣಯ ಕೈಗೊಳ್ಳಲಾಯಿತು.ಅಧ್ಯಕ್ಷೆ ವೈ ವಿ. ಗ್ಯಾಟೀನ್, ಉಪಾಧ್ಯಕ್ಷ ಶಂಕರ ಕಡಕೋಳ,ಮಾಜಿ ಅಧ್ಯಕ್ಷ ಬಿ ಬಿ ಸೂಳಿಕೇರಿ ಹಾಗೂ ಸದಸ್ಯರ ಉಪಸ್ಥಿತಿ ಮತ್ತು ಶಾಸಕ ಪಟ್ಟಣಶೆಟ್ರ, ತಹಶೀಲ್ದಾರ ಮಹೇಶ ಕರ್ಜಗಿ ಸಮ್ಮುಖದಲ್ಲಿ, ನೇಕಾರರಿಗೆ ನಿರಾಕ್ಷೇಪಣಾ ಪತ್ರ ಮರಳಿ ನೀಡಲು ಸರ್ವಾನುಮತ ದಿಂದ ಠರಾವು ಪಾಸು ಮಾಡುವ ನಿರ್ಣಯ ಕೈಗೊಂಡ ಬಳಿಕ ನೇಕಾರರು ಪ್ರತಿಭಟನೆ ಕೊನೆಗೊಳಿಸಿದರು.ಪ್ರತಿಭಟನೆಯಲ್ಲಿ ಈರಣ್ಣ ಜವಳಿ,ಗೋಪಾಲಪ್ಪ ಮದಿ, ಲಾಖೋಪತಿ ಹೊಸಪೇಟೆ, ಗುಳೇದಗುಡ್ಡದ ಘನಶ್ಯಾಮ ಜಿ ರಾಠಿ, ರಂಗಪ್ಪ ಶೇಬಿನಕಟ್ಟಿ ಹಾಗು ಹೂವಪ್ಪ ಗೌಡ್ರ,ಜಿ ಬಿ ಗೌಡರ,ವಿಠ್ಠಲ ಗೌಡ್ರ,ಎಸ್ ಬಿ ಪಾಗಾದ, ಎಸ್ ಜಿ ಬೀಳಗಿ,ವಿ. ಎಸ್ ಬೋರಣ್ಣವರ, ವಿಷ್ಣು ಕೇಶಪ್ಪ ಅಂಕದ, ರಿಕ್ಕಪ್ಪ ಹುಲಮನಿ, ಗುರಪ್ಪ ಬಾಗೋಜಿ, ಪಿತಾಂಬ್ರೆಪ್ಪ ಹವೇಲಿ, ಶಿವಪ್ಪ ಹೆಬ್ಬಳ್ಳಿ, ಧರ್ಮಣ್ಣ ನರಗುಂದ, ವಿರೂಪಾಕ್ಷಿ ಕುದರಿ  ಅನೇಕ ನೇಕಾರ ಧುರೀಣರು, ನೂರಾರು ಸ್ತ್ರೀಯರು ಪಾಲ್ಗೊಂಡಿದ್ದರು.ಈ ನಡುವೆ ಆಕ್ರೋಶಿತ ನೇಕಾರರು ಹೆದ್ದಾರಿ ತಡೆ ನಡೆಸಲು ಮುಂದಾದರು,ಆದರೆ ಎಷ್ಟೇ ಪ್ರಯತ್ನಿಸಿದರೂ ಪೋಲಿಸರು ರಸ್ತೆ ತಡೆಗೆ ಅವಕಾಶ ನೀಡದೇ ಸಮಾಧಾನ ಪಡಿಸಿದರು.ಪಿಎಸ್ಸೈ ಡಿ ಬಿ ಪಾಟೀಲ, ಧೂಳಖೇಡ ನೇತೃತ್ವದಲ್ಲಿ ಪ್ರತಿಭಟೆಯ ವೇಳೆ  ಸೂಕ್ತ  ಬಂದೋಬಸ್ತ್ ಒದಗಿಸಲಾಗಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.