ಶನಿವಾರ, ಏಪ್ರಿಲ್ 10, 2021
33 °C

ಕೆಲ ಅಧ್ಯಕ್ಷರು ಗೂಂಡಾಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೆಲ ಅಧ್ಯಕ್ಷರು ಗೂಂಡಾಗಳು

ಧಾರವಾಡ: `ಹುಬ್ಬಳ್ಳಿ ತಾಲ್ಲೂಕಿನ ಕೆಲ ಗ್ರಾ.ಪಂ. ಅಧ್ಯಕ್ಷರು ಗೂಂಡಾಗಳಂತೆ ವರ್ತಿಸುತ್ತಿದ್ದು, ಗ್ರಾಮ ಸಭೆಯನ್ನೇ ನಡೆಸಲು ಬಿಡುವುದಿಲ್ಲ~ ಎಂದು ಸಂಸದ ಪ್ರಹ್ಲಾದ ಜೋಶಿ ಆರೋಪಿಸಿದರು.ಜಿ.ಪಂ. ಸಭಾಂಗಣದಲ್ಲಿ ಶನಿವಾರ ನಡೆದ ಕೇಂದ್ರ ಪುರಸ್ಕೃತ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, `ಯಾವ ಗ್ರಾಮ ಎಂಬುದನ್ನು ಹೇಳುವುದಿಲ್ಲ. ಜಿ.ಪಂ. ಅಧಿಕಾರಿಗಳು ಅಂಥ ಗ್ರಾಮಸಭೆಗೆ ಹೋದರೆ ಮಾತ್ರ ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಹೇಳಲು ಧೈರ್ಯ ಬರುತ್ತದೆ. ಇಲ್ಲದಿದ್ದರೆ, ನಾವೆಲ್ಲ ಮಾಡುತ್ತೇವೆ ಎಂದು ಅಧ್ಯಕ್ಷರು ಸಮಜಾಯಿಷಿ ನೀಡಿ ಸಾಗ ಹಾಕುತ್ತಾರೆ~ ಎಂದರು.ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ವರನಾಗಲಾವಿ ಗ್ರಾಮದ ಸಂಪರ್ಕ ರಸ್ತೆಯಲ್ಲಿ 3.5 ಕಿ.ಮೀ. ರಸ್ತೆ ಅರಣ್ಯ ಪ್ರದೇಶದಲ್ಲಿ ಹಾದುಹೋಗಿದೆ. ಅದಕ್ಕೆ ಬೇಕಾದ ಅನುಮತಿ ದೊರಕಿಲ್ಲ. ಆದ್ದರಿಂದ ಆ ಕಾಮಗಾರಿ ರದ್ದುಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ಪೂರ್ವಾಪರ ಯೋಚನೆ ಮಾಡದೇ ಯೋಜನೆಗಳನ್ನು ಆರಂಭಿಸಿದರೆ ಸಮಸ್ಯೆ ಉಂಟಾಗುತ್ತದೆ. ಯೋಜನೆಗಳ ಬಗ್ಗೆ ನಾವು ಜನರಿಗೆ ತಿಳಿಸಿರುತ್ತೇವೆ. ಅದು ಕಾರ್ಯಗತವಾಗದಿದ್ದರೆ ಏನು ಉತ್ತರ ಕೊಡಬೇಕು? ಎಂದು ಪ್ರಶ್ನಿಸಿದರು.`ತಹಶೀಲ್ದಾರ್ ಕಚೇರಿಗಳಲ್ಲಿ ಸಾರ್ವಜನಿಕರಿಗೆ ಸೂಕ್ತ ರೀತಿ ಸ್ಪಂದನೆ ಸಿಗುತ್ತಿಲ್ಲ. ಅಂಗವಿಕಲರಿಗೆ ಮಾಸಾಶನ ರದ್ದುಗೊಳಿಸುವ ಅಮಾನವೀಯ ಘಟನೆ ನಡೆದಿರುವುದು ಯಾರಿಗೂ ಶೋಭಿಸದ ಸಂಗತಿ. ತಹಶೀಲ್ದಾರರು ಇಂತಹ ಪ್ರಕರಣಗಳ ಬಗ್ಗೆ ಸರಿಯಾಗಿ ಸ್ಪಂದಿಸಬೇಕು ಎಂದು ಜೋಶಿ ನಿರ್ದೇಶನ ನೀಡಿದರು.ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಮೇಘಣ್ಣವರ, `ಪ್ರತಿಯೊಂದು ಗ್ರಾ.ಪಂ. ತನ್ನ ವ್ಯಾಪ್ತಿಯ ಕುಟುಂಬಗಳು ಕಳೆದ 15 ವರ್ಷದಲ್ಲಿ ಪಡೆದ ವಿವಿಧ ಸೌಲಭ್ಯಗಳ ಬಗೆಗಿನ ದಾಖಲೆಯನ್ನು ಗಣಕೀಕರಣ ಮೂಲಕ ಸಂಗ್ರಹಿಸಲು ಹಾಗೂ ಗ್ರಾಮಸಭೆಯ ಠರಾವನ್ನು 15 ದಿನಗಳಲ್ಲಿ ಸಂಬಂಧಿಸಿದವರು ಸಹಿ ಮಾಡದಿದ್ದರೂ ಅಧಿಕೃತವೆಂದು ಪರಿಗಣಿಸಲು ಕ್ರಮ ಕೈಗೊಳ್ಳುತ್ತೇವೆ~ ಎಂದರು.ಉದ್ಯೋಗ ಖಾತರಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರಗಳನ್ನು ಸಾರ್ವಜನಿಕವಾಗಿ ಪ್ರದರ್ಶಿಸಬೇಕು. ಅವ್ಯವಹಾರ ಎಸಗಿದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಬೇಕು ಎಂದು ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರು ಸಲಹೆ ನೀಡಿದರು.ಶಾಸಕರಾದ ಚಂದ್ರಕಾಂತ ಬೆಲ್ಲದ, ಸೀಮಾ ಮಸೂತಿ, ಜಿ.ಪಂ.ಅಧ್ಯಕ್ಷ ಅಡಿವೆಪ್ಪ ಮನಮಿ, ಪ್ರೇಮಾ ಕೊಮಾರದೇಸಾಯಿ, ಉಪಕಾರ್ಯದರ್ಶಿ ಎಸ್. ಬಿ.ಮುಳ್ಳೊಳ್ಳಿ, ಜಾಗೃತ ಸಮಿತಿ ಸದಸ್ಯರಾದ ಮೌನೇಶ ಬಡಿಗೇರ, ಮನೋಹರ ಯಡವಣ್ಣವರ, ವೀಣಾ ಕುಲಕರ್ಣಿ ಭಾಗವಹಿಸಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.