ಕೇಂದ್ರ ಯೋಜನೆ ಜಾರಿ ವಿಳಂಬ: ಅಧಿಕಾರಿಗಳು ತರಾಟೆಗೆ
ಮಂಡ್ಯ: ಹಣವಿದ್ದರೂ ತ್ವರಿತಗತಿಯಲ್ಲಿ ಕಾರ್ಯಗತ ಗೊಳ್ಳದ ಯೋಜನೆಗಳು, ನಿಯಮಗಳ ಬಗೆಗೆ ಅಧಿಕಾರಿ ಗಳಿಗೆ ಇನ್ನೂ ಬಗೆಹರಿಯದ ಗೊಂದಲ, ಇಂದಿರಾ ಅವಾಸ್ ಸೇರಿದಂತೆ ವಸತಿ ಯೋಜನೆಗಳಲ್ಲಿ ನೀರಸ ಸಾಧನೆ, ಕೇವಲ 455 ಕುಟುಂಬಕ್ಕಷ್ಟೇ ನೂರು ದಿನದ ಉದ್ಯೋಗ ಖಾತರಿ. ಇದು, ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಪುರಸ್ಕೃತ ಯೋಜನೆಗಳ ಪ್ರಗತಿಯ ಚಿತ್ರಣದ ನೋಟ. ಶನಿವಾರ ಜಿಲ್ಲಾಪಂಚಾಯಿತಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆಯಲ್ಲಿ ಈ ಅಂಶಗಳು ಬೆಳಕಿಗೆ ಬಂದವು.
ಪ್ರಗತಿ ಪರಿಶೀಲನೆ ನಡೆಸಿದ ಸಂಸದ ಎನ್.ಚಲುವರಾಯಸ್ವಾಮಿ ಮತ್ತು ಜಿಲ್ಲಾಧಿಕಾರಿ, ಜಿಪಂ ಸಿಇಒ ಅವರು ಅಧಿಕಾರಿಗಳ ಕಾರ್ಯ ವೈಖರಿಯನ್ನು ತರಾಟೆಗೆ ತೆಗೆದುಕೊಂಡರು, ಬಾಕಿ ಇರುವ ಅವಧಿಯಲ್ಲಾದರು ತ್ವರಿತಗತಿಯಲ್ಲಿ ಕೆಲಸ ಮಾಡಲು ಒತ್ತು ನೀಡಿ ಎಂದು ತಾಕೀತು ಮಾಡಿದರು.ವಿವಿಧ ಇಲಾಖೆಗಳ ಪ್ರಮುಖ ಸ್ಥಾನಗಳಲ್ಲಿ ಆಸೀನರಾಗಿರುವ ಅಧಿಕಾರಿಗಳ ವಿಳಂಬ ಧೋರಣೆ, ಕಾರ್ಯವೈಖರಿಯ ಪರಿಣಾಮವಾಗಿಯೇ ವಿವಿಧ ಯೋಜನೆಗಳ ಅಮೆಗತಿಯಲ್ಲಿ ಜಾರಿಗೊಳ್ಳುತ್ತಿವೆ ಎಂಬುದು ಸಭೆಯಲ್ಲಿ ವ್ಯಕ್ತವಾಯಿತು.
ಒಂದು ಹಂತದಲ್ಲಿ ಉದ್ಯೋಗ ಖಾತರಿ ಯೋಜನೆಯ ನಿಯಮಗಳ ಬಗೆಗೆ ರೇಷ್ಮೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಸ್ಪಷ್ಟನೆ ಕೇಳಿದಾಗ, ‘ಯೋಜನೆ ಆರಂಭವಾಗಿಯೇ ಮೂರು ವರ್ಷ ಆಯಿತು. ಇನ್ನೂ ಸ್ಪಷ್ಟನೆ ಕೇಳುತ್ತಿದ್ದೀರಲ್ಲ? ಜಾರಿ ಮಾಡುವುದು ಯಾವಾಗ?’ ಎಂದು ಸಂಸದರು ವ್ಯಂಗ್ಯವಾಗಿ ಪ್ರಶ್ನಿಸಿದರು.
ಒಂದು ಹಂತದಲ್ಲಿ ಅಧಿಕಾರಿಯೊಬ್ಬರು ಅನಗತ್ಯ ವಿವರಣೆ ಕೊಡಲು ಬಂದಾಗ ಜಿಪಂ ಸಿಇಒ ಅವರು, ಅಧಿಕಾರಿಗಳು ಗಂಭೀರವಾಗಿ ನಡೆದುಕೊಳ್ಳಬೇಕು. ಇಲ್ಲಿ ನಿಮ್ಮ ಮನೆ ವಿಷಯ ಕೇಳಲು ಕರೆದಿಲ್ಲ. ಕೆಲಸದ ವಿಷಯ ದಲ್ಲಿ ಸ್ಪಷ್ಟತೆ ಇರಬೇಕು. ಸಡಿಲವಾಗಿ ಮಾತನಾಡುವುದನ್ನು ನಾನು ಸಹಿಸುವುದಿಲ್ಲ ಎಂದು ತರಾಟೆಗೆ ತೆಗೆದುಕೊಂಡರು.
ಪ್ರಮುಖ ವಿಷಯಗಳ ಫೈಲ್ಗಳನ್ನು ಕೆಳಹಂತದ ಸಿಬ್ಬಂದಿ ಮೂಲಕ ಕಳುಹಿಸುವ ಅಧಿಕಾರಿಗಳ ವರ್ತನೆ ಯನ್ನು ಟೀಕಿಸಿದ ಜಿಲ್ಲಾಧಿಕಾರಿ ಡಾ. ಪಿ.ಸಿ.ಜಾಫರ್ ಅವರು, ನೇರವಾಗಿ ಅಧಿಕಾರಿಗಳ ಜೊತೆಗೆ ಏಕೆ ಮಾತನಾಡುವುದಿಲ್ಲ. ಎಷ್ಟು ವಿಷಯಗಳು ನನ್ನ ಗಮನಕ್ಕೆ ಬರುವುದಿಲ್ಲ. ಇಂಥ ಸಭೆಯಲ್ಲಿಯೇ ಸ್ಪಷ್ಟನೆ ಕೇಳುತ್ತೀರಿ ಎಂದರು.
ಮೊದಲು ಅಧಿಕಾರಿಗಳ ಹಂತದಲ್ಲಿ ಮಾತನಾಡುವುದನ್ನು ಬೆಳೆಸಿಕೊಳ್ಳಿ. ಇಲ್ಲಿ ಸಭೆ ಕರೆದಿರುವುದು ಕೇವಲ ಕೇಂದ್ರ ಪುರಸ್ಕೃತ ಯೋಜನೆಗಳನ್ನು ಕುರಿತು ಚರ್ಚೆ ಮಾಡುವುದಕ್ಕೆ. ಆ ಅಂಶವನ್ನು ಸ್ಪಷ್ಟವಾಗಿ ಅರಿತುಕೊಳ್ಳಿ ಎಂದು ಸಲಹೆ ಮಾಡಿದರು.
ಕಥೆ ಹೇಳ್ತಿದಿರಾ?!: ಇಂದಿರಾ ಅವಾಸ್ ವಸತಿ ಯೋಜನೆ ಪ್ರಗತಿ ವಿವರ ನೀಡುತ್ತಿದ್ದ ಕೆ.ಆರ್.ಪೇಟೆ ತಾಲ್ಲೂಕು ಪಂಚಾಯಿತಿ ಇಒ, ಹಳೆಯ ವಿವರವನ್ನೇ ನೀಡಿದಾಗ, ‘ಅಷ್ಟು ವಯಸ್ಸಾಗಿದೆ. ಏನುಕಥೆ ಹೇಳ್ತಾ ಇದ್ದೀರಾ? ಹೋದ ಸಭೆಯಲ್ಲಿಯೂ ಇದನ್ನೇ ಹೇಳಿದ್ದೀರಿ. ಈಗಲೂ ಅದೇ’ ಎಂದು ಸಂಸದರು ಕಿಡಿಕಾರಿದರು.ಕೆ.ಆರ್.ಪೇಟೆಗೆ ಹೋಗಿ ವಾಸ್ತವ ಸ್ಥಿತಿ ಪರಿಶೀಲಿಸಿ. ವಾಸ್ತವ ಪ್ರಗತಿ ಏನೂ ಇಲ್ಲದಿದ್ದರೆ ಮುಲಾಜಿಲ್ಲದೇ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಿ ಎಂದು ಯೋಜನಾಧಿಕಾರಿ ಕೆಂಡಗಣ್ಣಸ್ವಾಮಿ ಅವರಿಗೆ ಸೂಚಿಸಿದರು.
‘ನೀವು ಕೂಡಾ ಬರೀ ಮಂಡ್ಯದಲ್ಲಿ ಕುಳಿತರಷ್ಟೇ ಸಾಲದು. ನಿಮ್ಮದೂ ಹೊಣೆಗಾರಿಕೆ ಇದೆ. ನೀವು ಈ ಬಗೆಗೆ ಗಮನಹರಿಸಿ ಪ್ರಗತಿ ಆಗುವಂತೆ ನೋಡಿಕೊಳ್ಳಬೇಕು. ಮುಂದಿನ ಸಭೆಯಲ್ಲಿ ನಿಮ್ಮನ್ನು ಹೊಣೆಗಾರರಾಗಿ ಮಾಡಲಾಗುತ್ತದೆ’ ಎಂದು ಕೆಂಡಗಣ್ಣಸ್ವಾಮಿ ಅವರಿಗೆ ಎಚ್ಚರಿಸಿದರು.
ಖಾತರಿ ಕುರಿತು ಅಧಿಕಾರಿಗಳು ಸ್ಪಷ್ಟನೆ ಬಯಸಿದಾಗ, ಸಂಸದ ಮತ್ತು ಜಿಪಂ ಸಿಇಒ ಕಿಡಿಕಾರಿದರು. ‘ಇನ್ನೂ ಸ್ಪಷ್ಟನೆ ಕೇಳುತ್ತೀರಲ್ಲ’ ಎಂದು ಸಂಸದರು ಪ್ರಶ್ನಿಸಿದರೆ, ಸಿಇಒ ಅವರು ಗ್ರಾಮ ಪಂಚಾಯಿತಿ ನೇರವಾಗಿ ಯೋಜನೆ ಜಾರಿಗೊಳಿಸಬಹುದು ಎಂದು ಸಲಹೆ ಮಾಡಿದರು.
ಸಭೆಯಲ್ಲಿ ಶಾಸಕರಾದ ಕಲ್ಪನಾ ಸಿದ್ದರಾಜು, ಎಂ.ಶ್ರೀನಿವಾಸ್, ಎ.ಬಿ.ರಮೇಶ್ಬಾಬು ಅವರು ಇದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.