ಶನಿವಾರ, ಮೇ 21, 2022
25 °C

ಕೊಠಡಿ ಕೊರತೆ: ವಿದ್ಯಾರ್ಥಿಗಳ ಪರದಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಠಡಿ ಕೊರತೆ: ವಿದ್ಯಾರ್ಥಿಗಳ ಪರದಾಟ

ತುರುವೇಕೆರೆ: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸ ಕಟ್ಟಡಕ್ಕೆ ಸ್ಥಳಾಂತರಗೊಂಡು ಎರಡು ವರ್ಷ ಕಳೆದರೂ; ಸಮರ್ಪಕ ಕೊಠಡಿಗಳಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.ಪ್ರಥಮ ದರ್ಜೆ ಕಾಲೇಜಿನಲ್ಲಿ ಕಲಾ, ವಾಣಿಜ್ಯ ವಿಭಾಗಗಳ ಜತೆ ಕಳೆದ ವರ್ಷದಿಂದ ವಿಜ್ಞಾನ ವಿಭಾಗವೂ ಆರಂಭವಾಗಿದೆ. ಸುಮಾರು 800 ವಿದ್ಯಾರ್ಥಿಗಳಿರುವ ಕಾಲೇಜಿನಲ್ಲಿ ಬೋಧನೆಗೆ ಲಭ್ಯವಿರುವ ಕೊಠಡಿಗಳು ಕೇವಲ 6. ಮೂರೂ ವಿಭಾಗಗಳು, ಪ್ರಯೋಗಶಾಲೆಗಳನ್ನು ಸುಸೂತ್ರವಾಗಿ ನಡೆಸಲು ಕನಿಷ್ಠ 18 ಕೊಠಡಿಗಳ ಅಗತ್ಯವಿದೆ.ಕಳೆದ ವರ್ಷ ವಿದ್ಯಾರ್ಥಿಗಳು ಕೊಠಡಿ ನಿರ್ಮಿಸಿಕೊಡುವಂತೆ ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. ಸ್ಥಳಕ್ಕೆ ಆಗಮಿಸಿದ್ದ ಅಂದಿನ ಉನ್ನತ ಶಿಕ್ಷಣ ಇಲಾಖೆ ಆಯುಕ್ತ ತುಷಾರ್ ಗಿರಿನಾಥ್ ಕೂಡಲೇ ಐದು ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿದ್ದರು. ಆದರೆ ಆ ಭರವಸೆ ಭರವಸೆಯಾಗಿಯೇ ಉಳಿದಿದೆ.ಕೋಟಿಗಟ್ಟಲೆ ಹಣ ಬಿಡುಗಡೆ ಮಾಡಿಸುವುದಾಗಿ ಆಶ್ವಾಸನೆ ನೀಡಿದ್ದ ಜನಪ್ರತಿನಿಧಿಗಳೂ ಇತ್ತ ಗಮನ ಹರಿಸದೆ ಮೊದಲ ಅಂತಸ್ತಿನ ಕಟ್ಟಡ ಕಾಮಗಾರಿಗೆ ಚಾಲನೆ ಸಿಕ್ಕಿಲ್ಲ.ಈ ಮಧ್ಯೆ ತಾಲ್ಲೂಕು ಪಂಚಾಯಿತಿ ಕೋಟಿ ಯೋಜನೆಯಡಿ ಐದು ಕೊಠಡಿ ನಿರ್ಮಿಸಿಕೊಡುವ ಭರವಸೆ ನೀಡಿ ಕಳೆದ ವರ್ಷದ ಆರಂಭದಲ್ಲಿ ಕಾಮಗಾರಿ ಪ್ರಾರಂಭಿಸಿತು. ಈ ಪೈಕಿ ಎರಡು ಕೊಠಡಿಗಳು ಅರ್ಧಂಬರ್ಧ ನಿರ್ಮಾಣವಾಗಿದ್ದು, ಕಳಪೆ ಕಾಮಗಾರಿಯಿಂದ ಕೂಡಿದೆ.ಕೊಠಡಿ ಕೊರತೆ ಜತೆ ಉಪನ್ಯಾಸಕರ ಕೊರತೆ ಕಾರಣವೂ ಸೇರಿ ವಿದ್ಯಾರ್ಥಿಗಳು ಕಾಲೇಜಿಗೆ ಪ್ರವೇಶ ಪಡೆಯಲು ಹಿಂದೆ ಮುಂದೆ ನೋಡುವಂತಾಗಿದೆ.ಕಾಯಂ ಶಿಕ್ಷಕರ ನೇಮಕಾತಿ ಮಾಡಿ ಎಂದು ಹಲವು ಬಾರಿ ಮನವಿ ಮಾಡಿದ್ದೇವೆ. ಧರಣಿ ನಡೆಸಿದ್ದೇವೆ. ಆದರೆ ಏನೂ ಪ್ರಯೋಜನವಾಗಿಲ್ಲ ಎಂದು ಎಬಿವಿಪಿ ಮುಖಂಡ ಬಸವೇಶ್ ಬೇಸರ ವ್ಯಕ್ತಪಡಿಸುತ್ತಾರೆ.ಬಿಎಸ್ಸಿ ವಿಭಾಗದಲ್ಲಿ ಕಳೆದ ವರ್ಷ ಕೇವಲ ಐದು ವಿದ್ಯಾರ್ಥಿಗಳು ದಾಖಲಾಗಿದ್ದು, ಈ ಬಾರಿ ಈವರೆಗೆ ಇಬ್ಬರು ವಿದ್ಯಾರ್ಥಿಗಳು ಮಾತ್ರ ದಾಖಲಾಗಿದ್ದಾರೆ. ಕಾಯಂ ಶಿಕ್ಷಕರ ನೇಮಕಾತಿ, ಪ್ರಯೋಗಾಲಯ ಉಪಕರಣಗಳ ಸಮರ್ಪಕ ಬಳಕೆ, ವಿದ್ಯಾರ್ಥಿಗಳ ಮನವರಿಕೆ ಮೂಲಕ ವಿಜ್ಞಾನ ವಿಭಾಗ ಮುಚ್ಚಿ ಹೋಗದಂತೆ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.`ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವುದಾಗಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಹಲವು ಬಾರಿ ಹೇಳಿದ್ದಾರೆ. ಆದರೆ ಶಿಕ್ಷಣ ಸಂಸ್ಥೆಗಳ ಕಾಯಕಲ್ಪಕ್ಕೆ ಮಾತ್ರ ಗಮನ ಹರಿಸುತ್ತಿಲ್ಲ~ ಎಂದು ಪೋಷಕರು ವಿಷಾದಿಸುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.