ಸೋಮವಾರ, ಜೂನ್ 21, 2021
30 °C

ಕೊಳಚೆ ನೀರು ಶುದ್ಧೀಕರಣ ಘಟಕ ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೊಳಚೆ ನೀರು ಶುದ್ಧೀಕರಣ ಘಟಕ ಆರಂಭ

ಬೆಂಗಳೂರು:  ನಗರದ ಜೆ.ಪಿ. ಪಾರ್ಕ್ ಬಳಿ ಮೂರು ಕೋಟಿ ರೂಪಾಯಿ ವೆಚ್ಚದಲ್ಲಿ ಕೊಳಚೆ ನೀರಿನ ಶುದ್ಧೀಕರಣ ಘಟಕವನ್ನು ಇನ್ನೊಂದು ವರ್ಷದೊಳಗೆ ಆರಂಭಿಸಲಾಗುವುದು ಎಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ ಸೋಮವಾರ ಹೇಳಿದರು.ಬಿಬಿಎಂಪಿಯು ಜೆ.ಪಿ. ಉದ್ಯಾನವನ ವಾರ್ಡ್‌ನ ಚೌಡೇಶ್ವರಿ ನಿಲ್ದಾಣದ ಬಳಿ ಸುಮಾರು 2 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಚಿಕ್ಕಬಂಡಪ್ಪ ರಾಮಯ್ಯ ಕ್ರೀಡಾಂಗಣದ ಉದ್ಘಾಟನೆ ಹಾಗೂ ಫಲಾನುಭವಿಗಳಿಗೆ ವಿವಿಧ ಸವಲತ್ತುಗಳನ್ನು ವಿತರಿಸಿ ಅವರು ಮಾತನಾಡಿದರು.ಇಂಗ್ಲೆಂಡ್‌ನಲ್ಲಿ ಏಳು ಬಾರಿ ಕೊಳಚೆ ನೀರನ್ನು ಶುದ್ಧೀಕರಿಸಿದ ನಂತರವೂ ಕುಡಿಯುವುದಕ್ಕೆ ಉಪಯೋಗಿಸುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮಲ್ಲಿಯೂ ಅಂತಹ ಪರಿಸ್ಥಿತಿ ಉದ್ಭವಿಸಬಹುದು. ಜೆ.ಪಿ. ಪಾರ್ಕ್ ಬಳಿ ಶುದ್ಧೀಕರಿಸಿದ ನೀರನ್ನು ಸದ್ಬಳಕೆ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದರು.`ಬಿಬಿಎಂಪಿಯು ಕಳೆದ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳ ಸವಲತ್ತುಗಳನ್ನು ಹಂತ-ಹಂತವಾಗಿ ಫಲಾನುಭವಿಗಳಿಗೆ ತಲುಪಿಸಲಾಗುತ್ತಿದೆ. ಬಿಜೆಪಿ ಆಡಳಿತ ಬಜೆಟ್‌ನಲ್ಲಿ ಪ್ರಕಟಿಸಿದ ಯೋಜನೆಗಳನ್ನು ಪ್ರತಿಪಕ್ಷಗಳು ಬಂಡಲ್ ಎಂದು ಟೀಕಿಸಿದ್ದವು. ಆದರೆ, ನಾವು ಎಂದಿಗೂ ಅಂತಹ ಸುಳ್ಳು ಆಶ್ವಾಸನೆಗಳನ್ನು ಜನರಿಗೆ ಕೊಡುವುದಿಲ್ಲ~ ಎಂದರು.ಉಪ ಮೇಯರ್ ಎಸ್. ಹರೀಶ್, `ಬೆಂಗಳೂರಿನ ಜನರಿಗೆ ಬಿಬಿಎಂಪಿಯು ಅನೇಕ ಸವಲತ್ತುಗಳನ್ನು ನೀಡುತ್ತಿದೆ. ಅವುಗಳನ್ನು ಜನತೆ ಸದ್ಬಳಕೆ ಮಾಡಿಕೊಳ್ಳುವುದರ ಜತೆಗೆ, ಸಾರ್ವಜನಿಕ ಉದ್ಯಾನ, ಕ್ರೀಡಾಂಗಣ, ರಸ್ತೆ, ಪಾದಚಾರಿ ಮಾರ್ಗಗಳನ್ನು ಕೂಡ ತಮ್ಮದು ಎಂದು ಭಾವಿಸಿ ಸ್ವಚ್ಛತೆ ಕಾಪಾಡಲು ಮುಂದಾಗಬೇಕು~ ಎಂದು ಮನವಿ ಮಾಡಿದರು.ಇದೇ ಸಂದರ್ಭದಲ್ಲಿ ಸ್ವಾವಲಂಬನೆ, ಸ್ವ-ಉದ್ಯೋಗ ಯೋಜನೆಯಡಿ ಫಲಾನುಭವಿಗಳಿಗೆ ವಾಹನಗಳು, ಇಸ್ತ್ರಿ ಪೆಟ್ಟಿಗೆ, ತಳ್ಳುವ ಗಾಡಿ, ಬೈಸಿಕಲ್, ಹೊಲಿಗೆ ತರಬೇತಿ ಪಡೆದ ಮಹಿಳೆಯರಿಗೆ ಚೆಕ್ ಹಾಗೂ ವಾಜಪೇಯಿ ಆರೋಗ್ಯಶ್ರೀ ಕಾರ್ಡ್ ವಿತರಿಸಲಾಯಿತು.ಪಾಲಿಕೆಯ ಆರ್.ಆರ್.ನಗರ ವಲಯ ಜಂಟಿ ಆಯುಕ್ತ ರಾಮಚಂದ್ರ, ಉಪ ಆಯುಕ್ತ ಭೀಮಪ್ಪ, ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಬೆಹನ್‌ಜೀ, ಬಿಜೆಪಿ ವಾರ್ಡ್ ಘಟಕದ ಅಧ್ಯಕ್ಷ ಶ್ರೀಧರ್, ಜೆ.ಪಿ. ಪಾರ್ಕ್ ವೆಲ್‌ಫೇರ್ ಅಸೋಸಿಯೇಷನ್ ಅಧ್ಯಕ್ಷ ರಾಮಕೃಷ್ಣರಾಜು ಮತ್ತಿತರರು ಪಾಲ್ಗೊಂಡಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.