ಸೋಮವಾರ, ಮೇ 10, 2021
25 °C

ಕೊಳೆತ ತರಕಾರಿ: ಪ್ರಾಂಶುಪಾಲರಿಗೆ ತರಾಟೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಾಮರಾಜನಗರ: ಅವ್ಯವಸ್ಥೆ ಕುರಿತು ದೂರು ಬಂದ ಹಿನ್ನೆಲೆಯಲ್ಲಿ ತಾಲ್ಲೂಕಿನ ಹೊಂಡರಬಾಳು ಗ್ರಾಮದ ಜವಾಹರ್ ನವೋದಯ  ವಿದ್ಯಾಲಯಕ್ಕೆ ಸೋಮವಾರ ಪರಿಶೀಲನೆಗೆ ತೆರಳಿದ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಸದಸ್ಯ ಎಂ. ಶಿವಣ್ಣ ಅವರಿಗೆ ಕೊಳೆತ ತರಕಾರಿಯ ದರ್ಶನವಾಯಿತು!



ಕೊಳೆತ ಹೂಕೋಸ್ ಕಂಡು ಶಿವಣ್ಣ ಕೆಂಡಾಮಂಡಲವಾದರು. ಇಂಥ ಅವ್ಯವಸ್ಥೆಯಲ್ಲಿ ಮಕ್ಕಳು ಶಿಕ್ಷಣ ಕಲಿಯಬೇಕು? ಎಂದು ಪ್ರಾಂಶುಪಾಲರು ಹಾಗೂ ಶಿಕ್ಷಕರಿಗೆ ತರಾಟೆ ತೆಗೆದುಕೊಂಡರು. ಬೆಳಿಗ್ಗೆ ಮಕ್ಕಳಿಗೆ ಬಡಿಸಲು ಪುಳಿಯೊಗರೆ ಮಾಡಲಾಗಿತ್ತು. ಪ್ಲೇಟ್‌ಗೆ ಹಾಕಿಸಿಕೊಂಡು ರುಚಿ ನೋಡಲು ಮುಂದಾದರು. ಅವರಿಗೆ ಉಪಹಾರ ರುಚಿ ಕೊಡಲಿಲ್ಲ. ಮಧ್ಯಾಹ್ನದ ಊಟ ಕೂಡ ಪರಿಶೀಲಿಸುತ್ತೇನೆ ಎಂದರು ಶಿವಣ್ಣ.



ಈ ಮಧ್ಯೆ ಕೆಲವು ಪೋಷಕರು ಪ್ರಾಂಶುಪಾಲರ ವಿರುದ್ಧ ದೂರಿನ ಸುರಿಮಳೆ ಸುರಿಸಿದರು. ವಿದ್ಯಾರ್ಥಿಗಳಿಗೆ ಕ್ಷೌರದ ವ್ಯವಸ್ಥೆ ಸರಿಯಾಗಿಲ್ಲ. ಗುಣಮಟ್ಟದ ಊಟ, ತಿಂಡಿ ನೀಡುತ್ತಿಲ್ಲ. ಪ್ರಾಂಶುಪಾಲರನ್ನು ವರ್ಗಾವಣೆ ಮಾಡಿಸಬೇಕು ಎಂದು ಕೆಲವು ವಿದ್ಯಾರ್ಥಿಗಳು ಒತ್ತಾಯಿಸಿದರು.



ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಶಿವಣ್ಣ, `ವಿದ್ಯಾಲಯದಲ್ಲಿ ಅವ್ಯವಸ್ಥೆಯಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಆಯೋಗಕ್ಕೆ ಫ್ಯಾಕ್ಸ್ ಕಳುಹಿಸಿದ್ದರು. ಈ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ. ವಿದ್ಯಾರ್ಥಿಗಳು, ಪೋಷಕರು ಹಾಗೂ ಶಿಕ್ಷಕರ ಅಭಿಪ್ರಾಯ ಪಡೆದು ಸಂಬಂಧಪಟ್ಟವರಿಗೆ ವರದಿ ಸಲ್ಲಿಸಲಾಗುವುದು~ ಎಂದರು.



ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ಊಟದ ವ್ಯವಸ್ಥೆ ಕಲ್ಪಿಸಬೇಕು. ಶೈಕ್ಷಣಿಕ ಅಭಿವೃದ್ಧಿಗೆ ತೊಂದರೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಳಪೆ ತರಕಾರಿ ಬಳಸುತ್ತಿರುವುದು ಕಂಡುಬಂದಿದೆ. ತರಕಾರಿ ಮತ್ತು ಆಹಾರ ಪದಾರ್ಥ ಪೂರೈಸುವ ಏಜೆನ್ಸಿ ಬದಲಾಯಿಸಬೇಕು ಎಂದು ಸೂಚಿಸಿದರು.



ಪ್ರಾಂಶುಪಾಲರು ಮತ್ತು ಶಿಕ್ಷಕರ ನಡುವೆ ಹೊಂದಾಣಿಕೆಯ ಕೊರತೆಯಿದೆ. ಇದರ ಪರಿಣಾಮ ಸಮಸ್ಯೆಗಳು ಉದ್ಭವವಾಗಿವೆ. ಕೇಂದ್ರೀಯ ಮಾದರಿಯ ಶಿಕ್ಷಣ ಸಂಸ್ಥೆಯಲ್ಲಿ ಅವ್ಯವಸ್ಥೆ ತಲೆದೋರುವುದು ಸರಿಯಲ್ಲ. ಶಿಕ್ಷಣದ ಗುಣಮಟ್ಟ ಕಾಯ್ದುಕೊಳ್ಳುವ ವಾತಾವರಣ ಸೃಜಿಸಬೇಕಿದೆ. ಈ ನಿಟ್ಟಿನಲ್ಲಿ ಪ್ರಾಂಶುಪಾಲರು ಹಾಗೂ ಶಿಕ್ಷಕರು ಶ್ರಮಿಸಬೇಕು. ಪೋಷಕರು ಕೂಡ ಸಹಕಾರ ನೀಡಬೇಕು ಎಂದು ಸಲಹೆ ನೀಡಿದರು.



ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗದ ಬೆಂಗ ಳೂರು ಕಚೇರಿಯ ನಿರ್ದೇಶಕಿ ಚಿತ್ರಾ ಆರ‌್ಮುಗಂ, ಉಪ ನಿರ್ದೇಶಕಿ ಶೀಲಾ ನಾರಾಯಣ, ಜಿಲ್ಲಾ ಸಮಾಜ ಕಲ್ಯಾ ಣಾಧಿಕಾರಿ ಎಸ್. ಪ್ರತಿಭಾ ಇತರರು ಹಾಜರಿದ್ದರು.



ಹಣ ದುರ್ಬಳಕೆಯಾಗಿಲ್ಲ: ಪ್ರಾಂಶುಪಾಲರ ಸ್ಪಷ್ಟನೆ

`ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳಿಗೆ ಮಂಜೂರಾಗಿದ್ದ ವಿದ್ಯಾರ್ಥಿವೇತನ ದುರ್ಬಳಕೆ ಯಾಗಿಲ್ಲ. 12 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಮಂಜೂರಾಗಿತ್ತು. ಅದರಲ್ಲಿ 11 ವಿದ್ಯಾರ್ಥಿಗಳು ಸ್ವಇಚ್ಛೆಯಿಂದ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ವಿದ್ಯಾಲಯಕ್ಕೆ ಹಣ ನೀಡಿದ್ದಾರೆ~ ಎಂದು ಪ್ರಾಂಶುಪಾಲ ವೆಂಕಟೇಶ್ವರನ್ ತಿಳಿಸಿದರು.



ಒಬ್ಬ ವಿದ್ಯಾರ್ಥಿ ಮಾತ್ರ ಹಣ ಪಡೆದುಕೊಂಡಿಲ್ಲ. ಅದನ್ನು ಹಿಂದಿರುಗಿಸಲಾಗುವುದು. ಜಿಲ್ಲಾ ಅಭಿವೃದ್ಧಿ ಕಾರ್ಯ ಯೋಜನೆಯಡಿ 1 ಲಕ್ಷ ಹಣವನ್ನು ಜಿಲ್ಲಾಧಿಕಾರಿ ಖಾತೆಗೆ ಜಮಾ ಮಾಡಿದರೆ ಶಾಲಾ ಆವರಣದಲ್ಲಿ ಪೋಷಕರಿಗೆ 10 ಲಕ್ಷ ರೂ ವೆಚ್ಚದಡಿ ಶೆಡ್ ನಿರ್ಮಿಸಿ ಕೊಡುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದರು.



ಈ ಹಿನ್ನೆಲೆಯಲ್ಲಿ ಪೋಷಕರು ಮತ್ತು ಶಿಕ್ಷಕರ ಸಭೆ ಕರೆದು ಚರ್ಚಿಸಲಾಗಿತ್ತು. ಹಣವನ್ನು ಜಮಾ ಮಾಡಲಾಗಿದೆ. ಅಭಿವೃದ್ಧಿ ಹೆಸರಿನಡಿ ಹಣ ಸಂಗ್ರಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.



ದೆಹಲಿಯ ನವೋದಯ ವಿದ್ಯಾಲಯ ಸಮಿತಿಯು ವಿದ್ಯಾರ್ಥಿಗಳಿಂದ ಹಣ ಪಡೆದು ಸಿಇಟಿ ಪ್ರಶಿಕ್ಷಣ ನೀಡದಂತೆ ಸೂಚಿಸಿದೆ. ಯಾವುದೇ, ಪ್ರಶಿಕ್ಷಣ ನೀಡಲು ಸಮಿತಿಯ ಅನುಮತಿ ಪಡೆಯಬೇಕಿದೆ. ಸ್ವಲ್ಪ ತಡವಾಗಿ ಸಮಿತಿಯ ಅನುಮತಿ ಪಡೆದು ಪೋಷಕರ ನೇತೃತ್ವದಡಿ ಸಿಇಟಿ ಪ್ರಶಿಕ್ಷಣ ಪ್ರಾರಂಭಿಸಲಾಗಿದೆ ಎಂದರು.



ಗುತ್ತಿಗೆ ಅವಧಿ ಪೂರ್ಣಗೊಂಡಿರುವ ಹಿನ್ನೆಲೆಯಲ್ಲಿ ದೇಶದ ಎಲ್ಲ ನವೋದಯ ವಿದ್ಯಾಲಯಗಳಲ್ಲಿ ವಿಸ್ಯಾಟ್ ಅಂತರ್ಜಾಲ ವ್ಯವಸ್ಥೆ ಸ್ಥಗಿತಗೊಂಡಿದೆ. ಪ್ರಸ್ತುತ ಬಿಎಸ್‌ಎನ್‌ಎಲ್‌ಗೆ ಗುತ್ತಿಗೆ ನೀಡಲಾಗಿದೆ. ಅಂತರ್ಜಾಲ ವ್ಯವಸ್ಥೆ ಕಲ್ಪಿಸುವವರೆಗೆ ಕಾಯಬೇಕಿದೆ ಎಂದು ಹೇಳಿದರು.



ಶಿಕ್ಷಕರ ನೇಮಕಕ್ಕೆ ನವೋದಯ ವಿದ್ಯಾಲಯ ಸಮಿತಿ ಕ್ರಮಕೈಗೊಳ್ಳಬೇಕಿದೆ. ಖಾಲಿ ಇರುವ ಶಿಕ್ಷಕರ ಹುದ್ದೆ ಭರ್ತಿಗೂ ಸಮಿತಿಗೆ ಮನವಿ ಸಲ್ಲಿಸಲಾಗಿದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಊಟ ನೀಡಲಾಗುತ್ತಿದೆ. ಆದರೆ, ಶಿಕ್ಷಕರೊಬ್ಬರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳಿಗೆ ಇಲ್ಲಸಲ್ಲದ ವಿಷಯ ಹೇಳಿ ವಿದ್ಯಾಲಯದ ವಾತಾವರಣವನ್ನು ಹದಗೆಡಿ ಸುತ್ತಿದ್ದಾರೆ ಎಂದು ದೂರಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.